





ಮಾ.23: ಸಪ್ತಪರ್ಣೋತ್ಸವ, ವಿದ್ಯಾರ್ಥಿ ಸಂಘದ ದಿನಾಚರಣೆ
ಮಾ.24: ಕಾಲೇಜು ವಾರ್ಷಿಕೋತ್ಸವ


ಪುತ್ತೂರು: ವಿವೇಕಾನಂದ ಕಲಾ ವಿಜ್ಞಾನ ಮತ್ತು ವಾಣಿಜ್ಯ ಮಹಾವಿದ್ಯಾಲಯ (ಸ್ವಾಯತ್ತ) ಇದರ ಸ್ನಾತಕೋತರ ವಿಭಾಗದ ದಶಮಾನೋತ್ಸವ ಮತ್ತು ಪದವಿ ಕಾಲೇಜಿನ 60ನೇ ವರ್ಷದ ಸಂಭ್ರಮಾಚರಣೆ ಮಾ.22ರಂದು ನಡೆಯಲಿದೆ. ಮಾ.23ಕ್ಕೆ ಸಪ್ತಪರ್ಣೋತ್ಸವ, ವಿದ್ಯಾರ್ಥಿ ಸಂಘದ ದಿನಾಚರಣೆ ಹಾಗು ಮಾ.24ಕ್ಕೆ ಕಾಲೇಜು ವಾರ್ಷಿಕೋತ್ಸವ ವಿವೇಕಾನಂದ ಸ್ವಾಯತ್ತ ಮಹಾವಿದ್ಯಾಲಯದ ಆವರಣದಲ್ಲಿ ಜರುಗಲಿದೆ ಎಂದು ವಿವೇಕಾನಂದ ಕಲಾ, ವಿಜ್ಞಾನ ಮತ್ತು ವಾಣಿಜ್ಯ ಮಹಾವಿದ್ಯಾಲಯ (ಸ್ವಾಯತ್ತ) ಇದರ ಸಂಚಾಲಕ ನ್ಯಾಯವಾದಿ ಮುರಳಿಕೃಷ್ಣ ಕೆ ಎನ್ ಅವರು ಪತ್ರಿಕಾಗೋಷ್ಟಿಯಲ್ಲಿ ಹೇಳಿದ್ದಾರೆ.






ಸ್ನಾತಕೋತ್ತರ ವಿಭಾಗದ ದಶಮಾನೋತ್ಸವ ಕಾರ್ಯಕ್ರಮದ ಉದ್ಘಾಟನೆಯನ್ನು ರಾಜ್ಯ ಖಾತೆಯ ಕೇಂದ್ರ ಶಿಕ್ಷಣ ಸಚಿವ ಡಾ. ಸುಕಾಂತ ಮಜುಂದಾರ್ ಅವರು ಉದ್ಘಾಟಿಸಲಿದ್ದಾರೆ. ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಡಾ. ಪ್ರಭಾಕರ ಭಟ್ ಕಲ್ಲಡ್ಕ ಅವರು ಅಧ್ಯಕ್ಷತೆ ವಹಿಸಲಿದ್ದಾರೆ. ಸಂಸದ ಕ್ಯಾ| ಬ್ರಿಜೇಶ್ ಚೌಟ ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದಾರೆ. ವಿವೇವಕಾನಂದ ವಿದ್ಯಾವರ್ಧಕ ಸಂಘದ ಕಾರ್ಯದರ್ಶಿ ಡಾ.ಕೆ.ಎಂ ಕೃಷ್ಣ ಭಟ್, ವಿವೇಕಾನಂದ ಪದವಿ ಕಾಲೇಜಿನ ಆಡಳಿತ ಮಂಡಳಿಯ ಅಧ್ಯಕ್ಷ ಡಾ. ಶ್ರೀಪತಿ ಕಲ್ಲೂರಾಯ ಅವರು ಗಣ ಉಪಸ್ಥಿತಿಯಲ್ಲಿರುತ್ತಾರೆ ಎಂದವರು ಹೇಳಿದರು.
ಸಾಧಕರಿಗೆ ಸನ್ಮಾನ:
ವೈದ್ಯಕೀಯ ಮತ್ತು ಸಮಾಜ ಸೇವೆಯಲ್ಲಿ ಡಾ. ಗೌರಿ ಪೈ, ಕಾನೂನು ವಿಭಾಗದಲ್ಲಿ ಹಿರಿಯ ನ್ಯಾಯವಾದಿ ಎಂ ರಾಮಮೋಹನ್ ರಾವ್, ಸಾಮಾಜಿಕ ಹೋರಾಟ ವಿಭಾಗದಲ್ಲಿ ಡಾ. ಮೋಹನ್ ಕುಮಾರ್ ವೈ, ಶಿಕ್ಷಣ ಕ್ಷೇತ್ರದಲ್ಲಿ ಸುಳ್ಯದ ಸ್ನೇಹ ಶಿಕ್ಷಣ ಸಂಸ್ಥೆ, ಉದ್ಯಮ ಮತ್ತು ವ್ಯವಹಾರದಲ್ಲಿ ಶಂಕರ್ ಗ್ರೂಪ್ಸ್‌ನ ಸತ್ಯಶಂಕರ್, ಧಾರ್ಮಿಕ ಮತ್ತು ಸಮಾಜ ಸೇವೆಯಲ್ಲಿ ವೇ ಮೂ ಕಶೆಕೋಡಿ ಸೂರ್ಯನಾರಾಯಣ ಭಟ್, ಜನಪದ ವಿಭಾಗದಲ್ಲಿ ಡಾ. ರವೀಶ್ ಪಡುಮಲೆ, ಕೃಷಿ ವಿಭಾಗದಲ್ಲಿ ದೇವಿಪ್ರಸಾದ್ ಕಡಮಜೆ, ಮಳೆ ದಾಖಲೀಕರಣದಲ್ಲಿ ಪಿ.ಜಿ.ಎಸ್.ಎನ್ ಪ್ರಸಾದ್, ಯಕ್ಷಗಾನದಲ್ಲಿ ಗೋವಿಂದ ನಾಯಕ್ ಪಾಲೆಚ್ಚಾರು ಅವರನ್ನು ಸನ್ಮಾನಿಸಲಾಗುವುದು ಎಂದು ಮುರಳಿಕೃಷ್ಣ ಕೆ.ಎನ್ ತಿಳಿಸಿದ್ದಾರೆ.
ವಿಚಾರಗೋಷ್ಠಿ:
ಸಭಾ ಕಾರ್ಯಕ್ರಮದ ಬಳಿಕ ಮಧ್ಯಾಹ್ನ ಗಂಟೆ 12 ರಿಂದ ಭಾರತೀಯ ಶ್ರೀಮಂತ ಜ್ಞಾನ ಸಂಪತ್ತಿನ ಅನಾವರಣ ಕಾರ್ಯಕ್ರಮದಲ್ಲಿ ಶಿಕ್ಷಣದ ಕುರಿತು ಹೊಸ ದೃಷ್ಟಿಕೋನ ಎನ್ನುವ ವಿಚಾರವನ್ನು ಆಧರಿಸಿ ವಿಚಾರಗೋಷ್ಟಿ ನಡೆಯಲಿದೆ. ವಿವೇಕಾನಂದ ಆಸ್ಪತ್ರೆ ಮೈಸೂರು ಇಲ್ಲಿನ ಮೂಳೆ ಶಸ್ತ್ರ ಚಿಕಿತ್ಸಾ ತಜ್ಞ ಮತ್ತು ಸ್ವಾಮಿ ವಿವೇಕಾನಂದ ಯುವಜನ ವಿಭಾಗದ ಮಾರ್ಗದರ್ಶಕ ಡಾ. ಸೀತಾರಾಮ್ ಎಂ.ಆರ್ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಲಿದ್ದಾರೆ ಎಂದು ಮುರಳಿಕೃಷ್ಣ ಕೆ ಎನ್ ಹೇಳಿದರು.
ಸಮಾರೋಪ ಸಮಾರಂಭದಲ್ಲಿ ಹಿರಿಯ ವಿದ್ಯಾರ್ಥಿಗಳಿಗೆ ಅಭಿನಂದನೆ:
ಸಂಜೆ ನಡೆಯುವ ಸಮಾರೋಪದಲ್ಲಿ ಎಡನೀರು ಮಠದ ಶ್ರೀ ಸಚ್ಚಿದಾನಂದ ಭಾರತಿ ಸ್ವಾಮೀಜಿಯವರು ಆಶೀರ್ವಚನ ನೀಡಲಿದ್ದಾರೆ. ಮಂಗಳೂರು ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ. ಪಿ.ಎಲ್ ಧರ್ಮ ಮತ್ತು ಹಿರಿಯ ವಿದ್ಯಾರ್ಥಿ ಡಿಆರ್‌ಡಿಒ ವಿಜ್ಞಾನಿ ಡಾ. ಮಹಾದೇವ ಭಟ್ ಕಾನತ್ತಿಲ ಭಾಗವಹಿಸಲಿದ್ದಾರೆ. ಕಾಲೇಜಿನ ಸ್ನಾತಕೋತ್ತರ ವಿಭಾಗಗಳಲ್ಲಿ ಕಳೆದ 10 ವರ್ಷಗಳಲ್ಲಿ ವ್ಯಾಸಂಗ ಮಾಡಿ ರ‍್ಯಾಂಕುಗಳನ್ನು ಗಳಿಸಿದ ವಿವಿಧ ವಿಭಾಗದ ವಿದ್ಯಾರ್ಥಿಗಳಿಗೆ ಸನ್ಮಾನ ಕಾರ್ಯಕ್ರಮ ನಡೆಯಲಿದೆ. ಸಾಧಕ ಹಿರಿಯ ವಿದ್ಯಾರ್ಥಿಗಳಿಗೆ ಸನ್ಮಾನ ಕಾರ್ಯಕ್ರಮ ನಡೆಯಲಿದೆ ಎಂದು ಹೇಳಿದ ಮುರಳಿಕೃಷ್ಣ ಕೆ ಎನ್ ಅವರು ಸಂಜೆ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಶ್ರೀ ಮೂಕಾಂಬಿಕಾ ಕಲ್ಚರಲ್ ಅಕಾಡೆಮಿ ಪ್ರಸ್ತುತ ಪಡಿಸುವ ತುಳುಭಾಷೆಯ ವಿಶೇಷವಾದ ನೃತ್ಯರೂಪಕ ’ಗೆಜ್ಜೆಗಿರಿತ ಬೊಲ್ಪು’ ಪ್ರದರ್ಶನಗೊಳ್ಳಲಿದೆ ಎಂದು ಹೇಳಿದರು.
ಮಾ.23ಕ್ಕೆ ಸಪ್ತಪರ್ಣೋತ್ಸವ
ಮಾ.23ಕ್ಕೆ ವಿದ್ಯಾರ್ಥಿ ಸಂಘದ ದಿನಾಚರಣೆಯಾಗಿ ಸಪ್ತಪರ್ಣೋತ್ಸವ ಕಾರ್ಯಕ್ರಮ ನಡೆಯಲಿದೆ. ವಿಧಾನ ಪರಿಷತ್ ಸದಸ್ಯ ಕಿಶೋರ್ ಕುಮಾರ್ ಬೊಟ್ಯಾಡಿ ಮತ್ತು ಕನ್ನಡ ಉಪನ್ಯಾಸಕಿ ಕು ಅರ್ಚನಾ ಆರ್ಯ ಅವರು ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಮದ್ಯಾಹ್ನ ಗಂಟೆ 12.30 ರಿಂದ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ ಎಂದು ಮುರಳಿಕೃಷ್ಣ ಕೆ.ಎನ್ ತಿಳಿಸಿದ್ದಾರೆ.
ಮಾ.24ಕ್ಕೆ ಕಾಲೇಜು ವಾರ್ಷಿಕೋತ್ಸವ:
ಮಾ.24ರಂದು ಕಾಲೇಜಿನ ವಾರ್ಷಿಕೋತ್ಸವ ನಡೆಯಲಿದ್ದು, ಬೆಳಿಗ್ಗೆ ಗಂಟೆ 10ಕ್ಕೆ ಸಭಾ ಕಾರ್ಯಕ್ರಮದಲ್ಲಿ ಹಿರಿಯ ವಿದ್ಯಾರ್ಥಿಯಾಗಿರುವ ವಿಧಾನ ಪರಿಷತ್ ಸದಸ್ಯ ಬೋಜೇಗೌಡ, ಮಣಿಪಾಲ ಎಂಬಿಟಿ ಇದರ ಸಹ ನಿರ್ದೇಶಕ ಡಾ. ರವಿಪ್ರಕಾಶ್ ರೈ ಅವರು ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದಾರೆ. ವಿವೇಕಾನಂದ ವಿದ್ಯಾವರ್ಧಕ ಸಂಘದ ಪೂರ್ವಾಧ್ಯಕ್ಷ ಎಸ್.ಆರ್.ರಂಗಮೂರ್ತಿ ಅವರು ಅಧ್ಯಕ್ಷತೆ ವಹಿಸಲಿದ್ದಾರೆ. ಮಧ್ಯಾಹ್ನ ಗಂಟೆ 12.30ರಿಂದ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ ಎಂದು ಮುರಳಿಕೃಷ್ಣ ಕೆ.ಎನ್ ತಿಳಿಸಿದ್ದಾರೆ. ಪತ್ರಿಕಾಗೋಷ್ಟಿಯಲ್ಲಿ ಕಾಲೇಜಿನ ಪ್ರಾಂಶುಪಾಲ ಪ್ರೊ ವಿಷ್ಣುಗಣಪತಿ ಭಟ್, ಸ್ನಾತಕೋತ್ತರ ಅಧ್ಯಯನ ಕೇಂದ್ರದ ಡೀನ್ ಡಾ ವಿಜಯ ಸರಸ್ವತಿ, ಉಪಪ್ರಾಂಶುಪಾಲ ಪ್ರೊ. ಶಿವಪ್ರಸಾದ್,ಪತ್ರಿಕೋದ್ಯಮ ವಿಭಾಗದ ಉಪನ್ಯಾಸಕಿ ಹವ್ಯ ಮತ್ತು ಅಕ್ಷತಾ ಉಪಸ್ಥಿತರಿದ್ದರು.
ದಶಮಾನೋತ್ಸವದ ನೆನಪಿನಲ್ಲಿ ವಿವೇಕ ಸ್ಮೃತಿ ಪೂರ್ಣ
ದಶಮಾನೋತ್ಸವದ ನೆನಪಿಗಾಗಿ ಪ್ರಸಕ್ತ ವರ್ಷದ ಪ್ರಾರಂಭದಲ್ಲಿ ವಿವೇಕ ಸ್ಮೃತಿ ಎನ್ನುವ ವಿಶೇಷ ಕಾರ್ಯಕ್ರಮ ಪ್ರತಿ ತಿಂಗಳು ಕಾಲೇಜು ಆಯೋಜಿಸಿಕೊಂಡು ಬಂದಿದೆ. ’ಎನ್ವೋ-ಟೆಕ್- 2024 ನಳೆಯ ಒಳಿತಿಗಾಗಿ ಸುಸ್ಥಿರ ಪರಿಹಾರ ಅನ್ನುವ ಧ್ಯೇಯದೊಂದಿಗೆ ರಾಜ್ಯ ಮಟ್ಟದ ವಿಚಾರ ಸಂಕಿರಣ ನಡೆಸಲಾಗಿದೆ. ರಾಜ್ಯಮಟ್ಟದ ವಿಚಾರ ಸಂಕಿರಣ, ಪ್ರಬಂಧ ಮಂಡನೆ ಹಾಗು ಭಿತ್ತಿ ಪತ್ರ ವಿನ್ಯಾಸ ಸ್ಪರ್ಧೆಯನ್ನು ಪದವಿ ಹಾಗು ಸ್ನಾತಕೋತ್ತರ ವಿಭಾಗದ ವಿದ್ಯಾರ್ಥಿಗಳಿಗೆ ಆಯೋಜಿಸಿದೆ. ಇದರೊಂದಿಗೆ 1965 ರಲ್ಲಿ ಆರಂಭಗೊಂಡ ಪದವಿ ಕಾಲೇಜು ಇಂದು ಮಂಗಳೂರು ವಿಶ್ವವಿದ್ಯಾನಿಲಯದ ಸ್ವಾಯತ್ತ ಕಾಲೇಜಾಗಿ ನಿಂತು ಈ ವರ್ಷ ತನ್ನ ಷಷ್ಟ್ಯಬ್ದವನ್ನೂ ಕೂಡಾ ಆಚರಿಸಿಕೊಳ್ಳುತ್ತಿದೆ
ಮುರಳಿಕೃಷ್ಣ ಕೆ.ಎನ್ ಸಂಚಾಲಕರು







