ಉಪ್ಪಿನಂಗಡಿ: ಮದರಸದಿಂದ ಮನೆಗೆ ಮರಳುತ್ತಿದ್ದ ಮಕ್ಕಳ ಮೇಲೆ ಹೋಳಿ ಬಣ್ಣ ಹಚ್ಚಿ ಅಸಭ್ಯವಾಗಿ ವರ್ತಿಸಿದ್ದಾರೆಂಬ ಆರೋಪದಡಿ 34 ನೆಕ್ಕಿಲಾಡಿಯಲ್ಲಿ ಬಿಹಾರ ಮೂಲದ ಕಾರ್ಮಿಕರ ಮೇಲೆ ಹಲ್ಲೆ ನಡೆದ ಘಟನೆಯ ಬಳಿಕ ಪರಿಸರದಲ್ಲಿದ್ದ ಬಹುತೇಕ ಉತ್ತರ ಭಾರತೀಯ ಕಾರ್ಮಿಕರು ಊರು ತೊರೆಯುತ್ತಿರುವ ಬಗ್ಗೆ ವರದಿಯಾಗಿದೆ.
ಹೋಳಿ ಹಬ್ಬದ ದಿನ ಮದ್ಯಪಾನ ಮಾಡಿದ್ದ ಕೆಲ ಬಿಹಾರದ ಕಾರ್ಮಿಕರು ಮದರಸದಿಂದ ಬರುತ್ತಿದ್ದ ಮಕ್ಕಳ ಮೇಲೆ ಬಣ್ಣ ಹಚ್ಚಿದ್ದರಲ್ಲದೆ, ಅಸಭ್ಯವಾಗಿ ವರ್ತಿಸಿದ್ದರು. ವಿಷಯ ತಿಳಿದು ಆ ಸಂದರ್ಭ ಅದನ್ನು ಕೇಳಲು ಹೋದ ಸ್ಥಳೀಯರಿಬ್ಬರ ಮೇಲೆ ಕಾರ್ಮಿಕರ ಗುಂಪು ಕೈಯಲ್ಲಿ ಕಲ್ಲುಗಳನ್ನು ಹಿಡಿದುಕೊಂಡು ಹಲ್ಲೆಗೆ ಕೂಡಾ ಯತ್ನಿಸಿತ್ತು. ಬಳಿಕದ ಬೆಳವಣಿಗೆಯಲ್ಲಿ ಸ್ಥಳೀಯರ ಗುಂಪು ಅವರಿದ್ದ ವಸತಿಗೆ ನುಗ್ಗಿ ಅವರಿಗೆ ಹಲ್ಲೆ ನಡೆಸಿತ್ತು ಎನ್ನಲಾಗಿದೆ. ಆ ಬಳಿಕ ಆ ವಸತಿಯಲ್ಲಿದ್ದ ಕಾರ್ಮಿಕರು ಅಲ್ಲಿಂದ ಪಲಾಯನಗೈದಿದ್ದರು. ಈಗ ಈ ಪರಿಸರದಲ್ಲಿದ್ದ ಕಾರ್ಮಿಕರೂ ಕೂಡಾ ಊರು ತೊರೆಯುತ್ತಿದ್ದಾರೆಂದು ವರದಿಯಾಗಿದೆ.
ಚೇತರಿಸಿಕೊಂಡ ಉದ್ಯಮ-ಲಂಗು ಲಗಾಮಿಲ್ಲದ ಜೀವನ:
ಈ ಕಾರ್ಮಿಕರಿಂದಾಗಿ ಇಲ್ಲಿನ ಉದ್ಯಮಗಳೆಲ್ಲವೂ ಚೇತರಿಸಿಕೊಂಡಿತ್ತು. ಯಾವುದೇ ಹೆಚ್ಚಿನ ಮೂಲಭೂತ ಸೌಕರ್ಯಗಳಿಲ್ಲದಿದ್ದರೂ, ಸಣ್ಣ ವಸತಿ ಇರುವವರು ಅದನ್ನು ಅವರಿಗೆ ದಿನದ ಬಾಡಿಗೆಗೆ ಕೊಟ್ಟು ದಿನಕ್ಕೆ 700ರಿಂದ 800 ರೂ. ಗಳಿಸುತ್ತಿದ್ದರು. ಮುಂಜಾನೆಯಾಯಿತೆಂದರೆ ಹಿಂಡು ಹಿಂಡಾಗಿ ಕೆಲಸಕಾರ್ಯಗಳಿಗೆ ಹೋಗುತ್ತಿದ್ದ ಉತ್ತರ ಭಾರತೀಯ ಕಾರ್ಮಿಕರು, ಸಾಯಂಕಾಲವಾಗುತ್ತಿದ್ದಂತೆಯೇ ಅಂಗಡಿ ಮುಂಗಟ್ಟುಗಳಲ್ಲಿ ದಿನವಹಿ ವಸ್ತುಗಳಿಗಾಗಿ ಗ್ರಾಹಕರಾಗುವ ಮೂಲಕ ಸ್ಥಳೀಯ ವ್ಯವಹಾರಗಳಿಗೆ ಚೇತರಿಕೆ ನೀಡುತ್ತಿದ್ದರು. ಕಾಂಕ್ರೀಟ್ , ಕಟ್ಟಡ ನಿರ್ಮಾಣ , ಸಹಿತ ಶ್ರಮದಾಯಕ ಕಾರ್ಯಗಳಿಗೆ ಸ್ಥಳೀಯ ಕಾರ್ಮಿಕರಿಗಿಂತ ಕಡಿಮೆ ವೇತನಕ್ಕೆ ದುಡಿಯುತ್ತಿದ್ದ ಇವರು ಕಾರ್ಮಿಕರ ಕೊರತೆ ನೀಗಿಸುತ್ತಿದ್ದರು. ಇವರನ್ನು ಅವಲಂಭಿಸಿ ನಿರ್ಮಾಣ ಕಾಮಗಾರಿ ನಡೆಸುತ್ತಿದ್ದ ಹಲವರಿಗೆ ಇವರು ಲಾಭದಾಯಕವಾಗಿದ್ದರು. ಇವೆಲ್ಲಾ ಧನಾತ್ಮಕ ಅಂಶಗಳಾಗಿದ್ದರೂ, ಇವರಿಂದಾಗಿ ಸ್ಥಳೀಯ ಹಲವು ಕಾರ್ಮಿಕರು ಕೆಲಸವಿಲ್ಲದಂತಾಗಿದ್ದರು. ನಾಲ್ಕೈದು ಮಂದಿ ಗುಂಪಾಗಿ ಕುಡಿದು ತೂರಾಡುತ್ತಾ ಹಾದಿ ಬೀದಿಯಲ್ಲಿ ಬೊಬ್ಬೆ ಹಾಕಿಕೊಂಡು ಹೋಗುವುದು. ಅರೆ ನಗ್ನಾವಸ್ಥೆಯಲ್ಲಿಯೇ ಸಾರ್ವಜನಿಕರೆದು ಬರುವುದು. ಇವರು ವಾಸ್ತವ್ಯವಿದ್ದ ಪರಿಸರದಲ್ಲಿ ಮದ್ಯಪಾನ ಮಾಡಿ ರಾತ್ರಿಯಿಡೀ ಬೊಬ್ಬೆ, ಅವರವರೇ ಜಗಳ ಮಾಡಿಕೊಂಡಿರುವುದು ಹೀಗೆ ಲಂಗು ಲಗಾಮಿಲ್ಲದ ಇವರ ಜೀವನ ಪದ್ಧತಿಯಿಂದಾಗಿ ಸ್ಥಳೀಯರನೇಕರು ರೋಸಿ ಹೋಗಿದ್ದರು. ಇವರು ಊರು ಬಿಡುತ್ತಿರುವುದು ಇವರನ್ನು ಅವಲಂಬಿಸಿ ವ್ಯವಹಾರ ಮಾಡುತ್ತಿರುವವರಿಗೆ ನಷ್ಟವಾಗಿದ್ದರೆ, ಇವರಿಂದ ರೋಸಿ ಹೋದ ಕೆಲವರು ನೆಮ್ಮದಿಯ ನಿಟ್ಟಿಸಿರು ಬಿಡುತ್ತಿದ್ದಾರೆ.