ಅಕ್ಷಯ ಕಾಲೇಜಿನಲ್ಲಿ ‘ಅಕ್ಷಯ ವೈಭವ’ ಫ್ಯಾಶನ್ ಶೋ

0

ವಿದ್ಯಾರ್ಥಿಗಳಲ್ಲಿ ಉದ್ಯೋಗದ ಹೊಸತನ ಮೂಡಿಸುತ್ತಿದೆ ಅಕ್ಷಯ ಕಾಲೇಜು-ಬಲರಾಂ ಆಚಾರ್ಯ

ಪುತ್ತೂರು: ಪ್ರಸಕ್ತ ಸನ್ನಿವೇಶದಲ್ಲಿ ‘ನಿರುದ್ಯೋಗ’ದ ಸಮಸ್ಯೆಯನ್ನು ಎದುರಿಸುತ್ತಿರುವ ಈ ಸಂದರ್ಭದಲ್ಲಿ ವಿದ್ಯಾರ್ಥಿಗಳ ಮನಸ್ಸಿನಲ್ಲಿ ‘ಉದ್ಯೋಗ’ ಎಂಬ ಭರವಸೆಯ ಕಲ್ಪನೆಯನ್ನು ಮೂಡಿಸುತ್ತಿರುವ ಅಕ್ಷಯ ಕಾಲೇಜು ನಿಜಕ್ಕೂ ವಿದ್ಯಾರ್ಥಿಗಳ ಬದುಕಿನಲ್ಲಿ ಹೊಸತನವನ್ನು ಧಾರೆ ಎರೆಯುತ್ತಿರುವುದು ಶ್ಲಾಘನೀಯ ಎಂದು ಪುತ್ತೂರು ಜಿ.ಎಲ್ ಆಚಾರ್ಯ ಸಮೂಹ ಸಂಸ್ಥೆಗಳ ಮಾಲಕ ಬಲರಾಮ ಆಚಾರ್ಯರವರು ಹೇಳಿದರು.


ಸಂಪ್ಯದಲ್ಲಿ ಅಕ್ಷಯ ಎಜ್ಯುಕೇಶನಲ್ ಆಂಡ್ ಚಾರಿಟೇಬಲ್ ಟ್ರಸ್ಟ್‌ನಡಿಯಲ್ಲಿ ಕಾರ್ಯಾಚರಿಸುತ್ತಿರುವ ಅಕ್ಷಯ ಕಾಲೇಜಿನಲ್ಲಿ ಎರಡು ದಿನಗಳ ‘ಅಕ್ಷಯ ವೈಭವ’ ಕಾರ್ಯಕ್ರಮ ಜರಗಲಿದ್ದು, ಎ.9 ರಂದು ‘ಡಿ-ವಾಕ್’ ಹೆಸರಿನಲ್ಲಿ ಜರಗಿದ ಫ್ಯಾಶನ್ ಶೋ ಕಾರ್ಯಕ್ರಮದಲ್ಲಿ ಅವರು ಕಾರ್ಯಕ್ರಮವನ್ನು ದೀಪ ಬೆಳಗಿಸಿ ಉದ್ಘಾಟಿಸಿ ಮಾತನಾಡಿದರು.

ಗ್ರಾಮೀಣ ಪ್ರದೇಶದಲ್ಲಿ ಉದ್ಯಮಿ ಜಯಂತ್ ನಡುಬೈಲುರವರು ಸದ್ದಿಲ್ಲದೆ ಕಾಲೇಜು ಆರಂಭಿಸುವ ಮೂಲಕ ಶಿಕ್ಷಣದ ಕ್ರಾಂತಿಯನ್ನು ಜಿಲ್ಲೆಯಾದ್ಯಂತ ಅಕ್ಷಯ ಕಾಲೇಜನ್ನು ಗುರುತಿಸುವ ಕಾರ್ಯ ಮಾಡಿದ್ದಾರೆ. ಫ್ಯಾಶನ್ ಎಂಬುದು ಪಾಶ್ಚಿಮಾತ್ಯ ಸಂಸ್ಕೃತಿಯಾದರೂ ಅಕ್ಷಯ ಕಾಲೇಜು ಇದನ್ನು ಭಿನ್ನ ರೀತಿಯಲ್ಲಿ ಪ್ರಸ್ತುತಪಡಿಸುತ್ತಿದೆ. ಸಂಸ್ಥೆಯ ಬೆಳವಣಿಗೆಯಲ್ಲಿ ಯಾವುದೇ ರಾಜಿ ಮಾಡಿಕೊಳ್ಳದೆ ಗುಣಮಟ್ಟದ ಶಿಕ್ಷಣವನ್ನು ಪೂರೈಸುವುದು ಇಂದಿನ ಅಗತ್ಯತೆಯಾಗಿದೆ. ಪ್ರಸಕ್ತ ಸಂಸ್ಥೆಯಲ್ಲಿ 500 ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದು ಇದು ಮುಂದಿನ ದಿನಗಳಲ್ಲಿ 5 ಸಾವಿರ ವಿದ್ಯಾರ್ಥಿಗಳವರೆಗೆ ಮುಂದುವರೆಯಲಿ ಎಂದರು.


ವಿದ್ಯಾರ್ಥಿಗಳಿಗೆ ಓದಿನ ಜೊತೆಗೆ ಸಾಂಸ್ಕೃತಿಕದ ಗೀಳನ್ನು ಹೊರಗಿನ ಪ್ರಪಂಚಕ್ಕೆ ಪರಿಚಯಿಸುತ್ತಿದೆ-ಜಯಂತ್ ನಡುಬೈಲು:
ಅಕ್ಷಯ ಕಾಲೇಜು ಚೇರ್‌ಮ್ಯಾನ್ ಜಯಂತ್ ನಡುಬೈಲು ಮಾತನಾಡಿ, ಪುತ್ತೂರಿನ ಮುತ್ತು ಎನಿಸಿದ ಉದ್ಯಮಿ ಬಲರಾಂ ಆಚಾರ್ಯರವರು ಅಕ್ಷಯ ಕಾಲೇಜು ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿರುವುದು ನಮಗೆ ಮತ್ತಷ್ಟು ಬಲ ತಂದಿದೆ. ಅಕ್ಷಯ ಕಾಲೇಜು ವಿದ್ಯಾರ್ಥಿಗಳ ಪ್ರತಿಭೆಯನ್ನು ಪ್ರದರ್ಶಿಸಲು ವೇದಿಕೆಯನ್ನು ನಿರ್ಮಿಸಿ ಕೊಡುತ್ತಿದೆ. ಕೇವಲ ಓದು ಮಾತ್ರವಲ್ಲ, ವಿದ್ಯಾರ್ಥಿಗಳಿಗೆ ಓದಿನ ಜೊತೆಗೆ ಸಾಂಸ್ಕೃತಿಕದ ಗೀಳನ್ನು ಹೊರಗಿನ ಪ್ರಪಂಚಕ್ಕೆ ಪರಿಚಯಿಸುತ್ತಿದೆ. ದೇವಸ್ಥಾನದ ಜಾತ್ರೆಯಲ್ಲಿ, ಬ್ರಹ್ಮಕಲಶ ಸಂದರ್ಭದಲ್ಲಿ ನಮ್ಮ ವಿದ್ಯಾರ್ಥಿಗಳು ಕರಸೇವೆಯ ಮೂಲಕ ಸೇವೆಯನ್ನು ನೀಡುತ್ತಿದ್ದಾರೆ. ಅಕ್ಷಯ ಕಾಲೇಜು ಶಿಕ್ಷಣಕ್ಕೆ ಒತ್ತು ನೀಡುತ್ತಿದ್ದು ಈ ಸಂಸ್ಥೆಯಲ್ಲಿ ಶೇ.45 ಪಡೆದ ವಿದ್ಯಾರ್ಥಿಗಳನ್ನು ಶೇ.90ಕ್ಕೆ ಏರಿಸುವ ಜವಾಬ್ದಾರಿಯನ್ನು ಹೊಂದಿದೆ ಎಂದರು.


ಉಸಿರಿರುವರೆಗೆ ಹೆಸರು ಇರಬೇಕಾದರೆ ಬದುಕಿನಲ್ಲಿ ಸಾಧನೆ ಮುಖ್ಯ-|ಭವ್ಯ ಪೂಜಾರಿ:
ವಿಶೇಷ ಆಹ್ವಾನಿತರಾಗಿ ಆಗಮಿಸಿದ ‘ದಸ್ಕತ್’ ತುಳು ಚಿತ್ರದ ನಟಿ ಭವ್ಯ ಪೂಜಾರಿ ಮಾತನಾಡಿ, ಗ್ರಾಮಾಂತರ ಪ್ರದೇಶದಲ್ಲಿ ವಿಶ್ವದರ್ಜೆಯ ಶಿಕ್ಷಣವನ್ನು ವಿದ್ಯಾರ್ಥಿಗಳಿಗೆ ಧಾರೆ ಎರೆಯುತ್ತಿರುವ ಈ ಅಕ್ಷಯ ಕಾಲೇಜಿನ ಕಾಳಜಿಯನ್ನು ಮೆಚ್ಚಬೇಕಾದ್ದೇ. ಅಕ್ಷಯ ಕಾಲೇಜಿನಲ್ಲಿ ಶಿಕ್ಷಣ ಪಡೆದ ವಿದ್ಯಾರ್ಥಿಗಳು ಇಂದು ಉದ್ಯೋಗದಲ್ಲಿರುವುದು ಪ್ರಶಂಸನೀಯ. ತಾನೋರ್ವ ಕಲಾವಿದೆಯಾಗಿದ್ದು ಕಲಾವಿದರ ಹಿಂದೆ ಫ್ಯಾಶನ್ ಡಿಸೈನರ್‌ರವರ ಪಾತ್ರ ಬಹಳಷ್ಟು ಇದೆ. ನಮ್ಮ ಜೀವನದಲ್ಲಿ ಉಸಿರಿರುವರೆಗೆ ಹೆಸರು ಇರಬೇಕಾದರೆ ಬದುಕಿನ ಹಾದಿಯಲ್ಲಿ ಸಾಧನೆ ಎಂಬುದು ಬಹಳ ಮುಖ್ಯವಾಗಿರುತ್ತದೆ. ವಿದ್ಯಾರ್ಥಿಗಳ ಪಾಲಿಗೆ ಅಕ್ಷಯ ಪಾತ್ರೆಯಾಗಿರುವ ಈ ಅಕ್ಷಯ ಕಾಲೇಜಿನ ಹೆಸರು ಎಲ್ಲೆಡೆ ಪಸರಿಸಲಿ ಎಂದು ಹೇಳಿ ಶುಭ ಹಾರೈಸಿದರು.

ಅಧ್ಯಕ್ಷತೆಯನ್ನು ಅಕ್ಷಯ ಕಾಲೇಜು ವ್ಯವಸ್ಥಾಪಕ ನಿರ್ದೇಶಕರಾದ ಶ್ರೀಮತಿ ಕಲಾವತಿ ಜಯಂತ್‌ರವರು ವಹಿಸಿದ್ದರು. ಮಿಸ್ಟರ್ ಕರ್ನಾಟಕ 2024 ವಿನ್ನರ್ ಪ್ರಣೀತ್ ಸುವರ್ಣ, .ಕಾಲೇಜು ಆಡಳಿತಾಧಿಕಾರಿ ಅರ್ಪಿತ್ ಟಿ.ಎ, ಉಪ ಪ್ರಾಂಶುಪಾಲ ರಕ್ಷಣ ಟಿ.ಆರ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಕಾಲೇಜು ವಿದ್ಯಾರ್ಥಿನಿಯರು ಪ್ರಾರ್ಥಿಸಿದರು. ಪ್ರಾಂಶುಪಾಲ ಸಂಪತ್ ಕೆ.ಪಕ್ಕಳ ಸ್ವಾಗತಿಸಿ, ಫ್ಯಾಶನ್ ಡಿಸೈನ್ ವಿಭಾಗದ ಉಪನ್ಯಾಸಕ ಕಿಶನ್ ಎನ್.ರಾವ್ ವಂದಿಸಿದರು. ಫ್ಯಾಶನ್ ಡಿಸೈನ್ ವಿಭಾಗದ ಉಪನ್ಯಾಶಕಿ ಅನನ್ಯ ಭಟ್, ಜನಿತ, ಧನ್ಯಶ್ರೀರವರು ಅತಿಥಿಗಳನ್ನು ಸಭೆಗೆ ಪರಿಚಯಿಸಿದರು. ಆಂಗ್ಲ ವಿಭಾಗದ ಮುಖ್ಯಸ್ಥೆ ರಶ್ಮಿ ಕೆ ಕಾರ್ಯಕ್ರಮ ನಿರೂಪಿಸಿದರು.

177+18 ವಿದ್ಯಾರ್ಥಿಗಳಿಂದ ರ‍್ಯಾಂಪ್ ವಾಕ್..
ಕಾರ್ಯಕ್ರಮದಲ್ಲಿ ಕಾಲೇಜಿನ ಫ್ಯಾಶನ್ ಡಿಸೈನ್ ವಿಭಾಗದ ವಿದ್ಯಾರ್ಥಿಗಳೊಂದಿಗೆ ಇತರ ವಿಭಾಗದ ಕೋರ್ಸ್‌ಗಳಲ್ಲಿನ 177 ಮಂದಿ ವಿದ್ಯಾರ್ಥಿ ಮೋಡೆಲ್ಸ್ ಅಲ್ಲದೆ ಕಾಲೇಜು ಇತ್ತೀಚೆಗೆ ಪುಟ್ಟ ಮಕ್ಕಳಿಂದ ಹಿಡಿದು ವಯಸ್ಸು 18ರ ವರೆಗೆ ಮೂರು ವಿಭಾಗದಲ್ಲಿ ಏರ್ಪಡಿಸಿದ ಪ್ರಿನ್ಸ್ ಆಂಡ್ ಪ್ರಿನ್ಸೆಸ್ ಸ್ಪರ್ಧೆಯಲ್ಲಿ ವಿಜೇತರಾದ ವಿನ್ನರ‍್ಸ್ ಹಾಗೂ ರನ್ನರ್ಸ್ 18 ಮಂದಿ ಸ್ಪರ್ಧಿಗಳು ಆಕರ್ಷಕ ವಸ್ತ್ರ ವಿನ್ಯಾಸದೊಂದಿಗೆ ರ‍್ಯಾಂಪ್ ವಾಕ್ ನೆರವೇರಲ್ಪಟ್ಟಿತು. ಕಾಲೇಜಿನ ಅಂತಿಮ ಫ್ಯಾಶನ್ ಡಿಸೈನ್ ವಿಭಾಗದ 26 ಮಂದಿ ವಿದ್ಯಾರ್ಥಿಗಳು ಡಿಸೈನರ್‌ಗಳಾಗಿ ಕರ್ತವ್ಯ ನಿರ್ವಹಿಸಿದ್ದರು.

ಚಿತ್ರ: ನವೀನ್ ಪಂಜಳ

ಇಂದು ಕಾಲೇಜಿನಲ್ಲಿ..
ಎ.10 ರಂದು ಕಾಲೇಜಿನಲ್ಲಿ ಸಂಜೆ ಕಾಲೇಜು ವಾರ್ಷಿಕೋತ್ಸವ ಸಮಾರಂಭ ಜರಗಲಿದ್ದು, ಪುತ್ತೂರು ಶಾಸಕ ಅಶೋಕ್ ಕುಮಾರ್ ರೈರವರು ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದಾರೆ. ಅಧ್ಯಕ್ಷತೆಯನ್ನು ಅಕ್ಷಯ ಕಾಲೇಜು ಸಂಚಾಲಕರಾದ ಜಯಂತ್ ನಡುಬೈಲುರವರು ವಹಿಸಿಕೊಳ್ಳಲಿದ್ದಾರೆ. ಮುಖ್ಯ ಅತಿಥಿಗಳಾಗಿ ಮಂಗಳೂರು ಕ್ಷೇತ್ರದ ಸಂಸದ ಕ್ಯಾ.ಬ್ರಿಜೇಶ್ ಚೌಟ, ಬೆಂಗಳೂರು ನಗರಾಭಿವೃದ್ಧಿ ಪ್ರಾಧಿಕಾರದ ಜೊತೆ ಕಾರ್ಯದರ್ಶಿ ಕೃಷ್ಣಮೂರ್ತಿ, ಮಂಗಳೂರು ಜನಪ್ರಿಯ ಸಮೂಹ ಸಂಸ್ಥೆಗಳ ಅಧ್ಯಕ್ಷ ಡಾ.ಬ್ದುಲ್ ಬಶೀರ್ ವಿ.ಕೆ, ಮಂಗಳೂರು ಆತ್ಮಶಕ್ತಿ ವಿವಿಧೋದ್ದೇಶ ಸಹಕಾರಿ ಸಂಘದ ಅಧ್ಯಕ್ಷ ಚಿತ್ತರಂಜನ್ ಬೋಳಾರ್, ವಿಶೇಷ ಆಹ್ವಾನಿತರಾಗಿ ಬಹುಭಾಷಾ ಚಲನಚಿತ್ರ ನಟ ಯಶ್ ಶೆಟ್ಟಿ ಭಾಗವಹಿಸಲಿದ್ದಾರೆ.

LEAVE A REPLY

Please enter your comment!
Please enter your name here