ನೆಲ್ಯಾಡಿ: ಇಲ್ಲಿನ ಮಾದೇರಿಯಲ್ಲಿ ನಡೆದ ಯುವಕನ ಕೊಲೆ ಪ್ರಕರಣದ ಆರೋಪಿ ನೆಲ್ಯಾಡಿ ಗ್ರಾಮದ ಮಾದೇರಿ ನಿವಾಸಿ ಹರಿಪ್ರಸಾದ್ನನ್ನು ಉಪ್ಪಿನಂಗಡಿ ಪೊಲೀಸರು ಮೇ.11ರಂದು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.
ಆರೋಪಿ ಹರಿಪ್ರಸಾದ್ ಮೇ 9ರಂದು ರಾತ್ರಿ ತಮ್ಮ ಮನೆ ಸಮೀಪದಲ್ಲೇ ವಾಸ್ತವ್ಯವಿದ್ದ ತನ್ನ ದೊಡ್ಡಪ್ಪ ಗಂಗಪ್ಪ ಗೌಡರ ಪುತ್ರ ಶರತ್ಕುಮಾರ್ (34ವ.)ರವರ ತಲೆಗೆ ದೊಣ್ಣೆಯಿಂದ ಹೊಡೆದು ಕೊಲೆ ಮಾಡಿದ್ದ. ಈ ಬಗ್ಗೆ ಮೃತ ಶರತ್ಕುಮಾರ್ ಅವರ ಸಹೋದರ ಚರಣ್ಕುಮಾರ್ ನೀಡಿದ್ದ ದೂರಿನಂತೆ ಉಪ್ಪಿನಂಗಡಿ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದರು. ಮೇ 11ರಂದು ಪ್ರಕರಣದ ಆರೋಪಿ, ಮೃತ ಯುವಕ ಶರತ್ಕುಮಾರ್ ಅವರ ಚಿಕ್ಕಪ್ಪ ದಿ.ಜನಾರ್ದನ ಗೌಡರ ಪುತ್ರ ಹರಿಪ್ರಸಾದ್ರನ್ನು ಉಪ್ಪಿನಂಗಡಿ ಪೊಲೀಸರು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.
ಪ್ರಕರಣದ ಸಾರಾಂಶ:
ಮೃತ ಶರತ್ ಕುಮಾರ್ ತಂದೆ ಗಂಗಪ್ಪ ಗೌಡ ಹಾಗೂ ಆರೋಪಿ ಹರಿಪ್ರಸಾದ್ ತಂದೆ ದಿ.ಜನಾರ್ದನ ಗೌಡರವರು ಸಹೋದರರಾಗಿದ್ದು ನೆಲ್ಯಾಡಿ ಮಾದೇರಿಯಲ್ಲಿ ಅಕ್ಕಪಕ್ಕವೇ ವಾಸವಾಗಿದ್ದಾರೆ. ಕೆಲ ವರ್ಷದಿಂದ ಗಂಗಪ್ಪ ಗೌಡ ದಂಪತಿ ತಮ್ಮ ಹಿರಿಯ ಪುತ್ರನ ಜೊತೆ ಉಪ್ಪಿನಂಗಡಿಯಲ್ಲಿ ಬಾಡಿಗೆ ಮನೆಯಲ್ಲಿ ವಾಸವಾಗಿದ್ದರು. ಮಾದೇರಿಯ ಮನೆಯಲ್ಲಿ ಶರತ್ಕುಮಾರ್ ಮಾತ್ರ ಇದ್ದು ಶರತ್ ಕುಮಾರ್ ಹಾಗೂ ಅವರ ಚಿಕ್ಕಪ್ಪ ದಿ.ಜನಾರ್ದನ ಗೌಡರ ಮಕ್ಕಳ ಮಧ್ಯೆ ಕೆಲವು ದಿನಗಳಿಂದ ಕ್ಷುಲ್ಲಕ ಕಾರಣಕ್ಕೆ ಪರಸ್ಪರ ಗಲಾಟೆ ನಡೆಯುತಿತ್ತು. ಮೇ.8 ರಂದು ಶರತ್ಕುಮಾರ್ ಅವರ ಜಾಗದಲ್ಲಿ ಹಾಕಿದ್ದ ಕಟ್ಟಿಗೆಯನ್ನು ಜನಾರ್ದನ ಗೌಡರವರು ಅವರ ಮನೆಗೆ ಕೊಂಡು ಹೋಗುತ್ತಿದ್ದಾಗ ಕಟ್ಟಿಗೆಯನ್ನು ಕೊಂಡು ಹೋಗದಂತೆ ಶರತ್ಕುಮಾರ್ ತಿಳಿಸಿದ್ದು ಈ ವೇಳೆ ಜನಾರ್ದನ ಗೌಡರವರ ಮನೆಯವರಿಗೂ ಶರತ್ಕುಮಾರ್ ನಡುವೆ ಗಲಾಟೆ ನಡೆದಿದೆ. ಇದೇ ವಿಚಾರದಲ್ಲಿ ಮೇ.9ರಂದು ರಾತ್ರಿ 8 ಗಂಟೆಯಿಂದ 8.30ರ ಅವಧಿಯಲ್ಲಿ ಶರತ್ಕುಮಾರ್ ಚಿಕ್ಕಪ್ಪನ ಮನೆಗೆ ಹೋಗಿ ಅಂಗಳದಲ್ಲಿ ನಿಂತು ಚಿಕ್ಕಪ್ಪನ ಮಗ ಸತೀಶನಿಗೆ ಬೈಯುತ್ತಿದ್ದಾಗ ತೋಟಕ್ಕೆ ಹೋಗಿದ್ದ ಹರಿಪ್ರಸಾದ್ನು ಬಂದು ಆತನ ಕೈಯಲ್ಲಿದ್ದ ಮರದ ದೊಣ್ಣೆಯಿಂದ ಶರತ್ಕುಮಾರ್ನ ತಲೆಗೆ ಹೊಡೆದಿದ್ದಾರೆ. ಇದರಿಂದ ಗಂಭೀರ ಗಾಯಗೊಂಡಿದ್ದ ಶರತ್ಕುಮಾರ್ ಅಂಗಳದಲ್ಲಿ ಕುಸಿದು ಬಿದ್ದಾಗ ಹರಿಪ್ರಸಾದ್ನು ಮತ್ತೆ ತಲೆಗೆ ಬಲವಾಗಿ ಹೊಡೆದಿರುವುದರಿಂದ ಶರತ್ಕುಮಾರ್ ಸ್ಥಳದಲ್ಲೇ ಸಾವನ್ನಪ್ಪಿದ್ದರು. ಈ ಬಗ್ಗೆ ಮೃತ ಯುವಕನ ಸಹೋದರ ಚರಣ್ಕುಮಾರ್ ನೀಡಿದ ದೂರಿನಂತೆ ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.