ಸ್ಕೂಲ್ ಲೀಡರ್’ ಬರುತ್ತಿದ್ದಾನೆ ದಾರಿ ಬಿಡಿ… ಪೆನ್ಸಿಲ್ ಬಾಕ್ಸ್ ನಿರ್ದೇಶಕ ರಝಾಕ್ ಪುತ್ತೂರುರವರಿಂದ ಮತ್ತೊಂದು ವಿಭಿನ್ನ ಚಿತ್ರ

0

ಪುತ್ತೂರು: ಸನ್ ಮ್ಯಾಟ್ರಿಕ್ಸ್ ಬ್ಯಾನರಿನಲ್ಲಿ ತಯಾರಾದ ಕೆ.ಸತ್ಯೇಂದ್ರ ಪೈ ನಿರ್ಮಾಣದಸ್ಕೂಲ್ ಲೀಡರ್’ ಕನ್ನಡ ಸಿನಿಮಾ ಬಿಡುಗಡೆಗೆ ಸಿದ್ಧವಾಗಿದ್ದು ಮೇ.30ಕ್ಕೆ ಕರಾವಳಿಯಾದ್ಯಂತ ಬೆಳ್ಳಿ ತರೆಯ ಮೇಲೆ ರಾರಾಜಿಸಲಿದೆ. ನಿರ್ಮಾಪಕರಾದ ಕೆ ಸತ್ಯೇಂದ್ರ ಪೈ ಇವರು ಈ ಹಿಂದೆ ಗಂಧದ ಕುಡಿ ಎಂಬ ಚಿತ್ರವನ್ನು ನಿರ್ಮಿಸಿದ್ದು ಆ ಚಿತ್ರವು ದೇಶ ವಿದೇಶಗಳಲ್ಲಿ 22 ಅಂತರಾಷ್ಟ್ರೀಯ ಪ್ರಶಸ್ತಿಗಳನ್ನು ಪಡೆದುಕೊಂಡಿತ್ತು. ಈ ಹಿಂದೆ ಬಿಡುಗಡೆಗೊಂಡು ಯಶಸ್ವಿಯಾದ ಪೆನ್ಸಿಲ್ ಬಾಕ್ಸ್ ಎಂಬ ಚಿತ್ರದ ನಿರ್ದೇಶಕರಾದ ರಝಾಕ್ ಪತ್ತೂರು ಇವರು ಸ್ಕೂಲ್ ಲೀಡರ್ ಚಿತ್ರವನ್ನು ಕತೆ,ಚಿತ್ರಕಥೆ, ಸಂಭಾಷಣೆ ಜೊತೆಗೆ ಹಾಡುಗಳನ್ನು ಬರೆದು ನಿರ್ದೇಶನ ಮಾಡಿದ್ದಾರೆ. ಪೆನ್ಸಿಲ್ ಬಾಕ್ಸ್ ಚಿತ್ರದ ಗೀತೆ ರಚನೆಗಾಗಿ ರಝಾಕ್ ಪುತ್ತೂರು ಇವರು 2019ನೇ ಸಾಲಿನ ಅತ್ಯುತ್ತಮ ಗೀತೆ ರಚನೆಕಾರ ರಾಜ್ಯ ಪ್ರಶಸ್ತಿಗೆ ಆಯ್ಕೆಯಾಗಿರುವುದನ್ನು ಇಲ್ಲಿ ಸ್ಮರಿಸಬಹುದು. ಸ್ಕೂಲ್ ಲೀಡರ್ ಸಿನಿಮಾ ಹೈಸ್ಕೂಲ್ ಮಕ್ಕಳ ಮನೋ ವಿಕಾಸ,ಶೈಕ್ಷಣಿಕ ಬದುಕು ಮತ್ತು ಮಕ್ಕಳಲ್ಲಿ ನಾಯಕತ್ವ ಗುಣವನ್ನು ಮೈಗೂಡಿಸಿಕೊಳ್ಳುವ ಕಥಾವಸ್ತುವನ್ನು ಹೊಂದಿದೆ. ಇದು ಶಾಲಾ ಚುನಾವಣೆಯನ್ನು ಆಧರಿಸಿದ ಕತೆಯಾದುದರಿಂದ ಇಡೀ ಸಿನಿಮಾವನ್ನು ಕಟಪಾಡಿಯ ಒಂದೇ ಶಾಲೆಯಲ್ಲಿ ಚಿತ್ರೀಕರಿಸಲಾಗಿದೆ. ಸುಮಾರು 25 ಶಾಲೆಯ 120ಕ್ಕೂ ಹೆಚ್ಚು ವಿದ್ಯಾರ್ಥಿಗಳು ಈ ಚಿತ್ರದಲ್ಲಿ ಅಭಿನಯಿಸಿರುವುದು ವಿಶೇಷ.


ತುಳು ಚಿತ್ರ ರಂಗದ ದಿಗ್ಗಜರಾದ ಅರವಿಂದ್ ಬೋಳಾರ್, ಬೋಜರಾಜ್ ವಾಮಂಜೂರು, ದೀಪಕ್ ರೈ ಪಾಣಾಜೆ ಮತ್ತು ಕನ್ನಡದ ಹಿರಿಯ ನಟ ರಮೇಶ್ ಭಟ್ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಚಿತ್ರದ ಓಟು ಓಟು ಎಂಬ ಹಾಡು ಈಗಾಗಲೇ ಬಿಡುಗಡೆಗೊಂಡಿದ್ದು ಈ ಹಾಡಿನ ತುಣುಕು ಇನ್ಸ್ಟಾಗ್ರಾಮ್ ನಲ್ಲಿ ಲಕ್ಷಕ್ಕೂ ಅಧಿಕ ವೀಕ್ಷಕರನ್ನು ತಲುಪಿದೆ. ಚಿತ್ರದ ಛಾಯಾಗ್ರಾಹಕರಾಗಿ ಮೋಹನ್ ಪಡ್ರೆ, ಜಯಕಾರ್ತಿಯವರ ಸಂಗೀತ, ಸಚಿನ್ ರಾಮ್ ಸಂಕಲನ, ಆಶಿಶ್ ಅಂಚನ್ ನೃತ್ಯ ನಿರ್ದೇಶನ ಮತ್ತು ಅಕ್ಷತ್ ವಿಟ್ಲ ಸಹ ನಿರ್ದೇಶಕರಾಗಿದ್ದು ಸುದರ್ಶನ್ ಶಂಕರ್ ಹಾಗೂ ಎಂ ಎಂ ವಿಮಲ್ ಸಹ ನಿರ್ಮಾಪಕರಾಗಿ ಕಾರ್ಯನಿರ್ವಹಿಸಿದ್ದಾರೆ. ಚಿತ್ರ ನಿರ್ಮಾಣದ ಮೇಲ್ವಿಚಾರಣೆಯನ್ನು ಮೂರು ಮುತ್ತು ನಾಟಕ ಖ್ಯಾತಿಯ ನಾಗೇಶ್ ಕಾಮತ್ ಕಟಪಾಡಿ ನಿರ್ವಹಿಸುವುದರ ಜೊತೆಗೆ ವಿಶೇಷ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಹಾಸ್ಯದ ಜೊತೆಗೆ ಅತ್ಯುತ್ತಮ ಸಂದೇಶವನ್ನು ನೀಡುವ ಈ ಸಿನಿಮಾ ಎಲ್ಲಾ ವಯೋಮಾನದ ಸಿನಿಪ್ರಿಯರ ಮನ ತಲುಪಲಿದೆ ಎಂಬುದು ಚಿತ್ರ ತಂಡದ ಅನಿಸಿಕೆಯಾಗಿದೆ.

LEAVE A REPLY

Please enter your comment!
Please enter your name here