ದೇಶ ಮೊದಲು ಸಿದ್ಧಾಂತದಡಿ ಆರ್.ಎಸ್.ಎಸ್ ಬಗ್ಗೆ ಕಾಂಗ್ರೆಸಿಗರ ಹೇಳಿಕೆ ಖಂಡನೀಯ-ಸತೀಶ್ ಕುಂಪಲ

0

ಪುತ್ತೂರು: ದೇಶ ಮೊದಲು ಎಂಬ ಸಿದ್ಧಾಂತದಡಿಯಲ್ಲಿ ನೂರು ವರುಷದಿಂದ ಸೇವೆಗೈಯುತ್ತಿರುವ ಆರ್.ಎಸ್.ಎಸ್ ಬಗ್ಗೆ ಕಾಂಗ್ರೆಸಿಗರ ಹೇಳಿಕೆ ಖಂಡನೀಯ ಎಂದು ಬಿಜೆಪಿ ದಕ್ಷಿಣ ಕನ್ನಡ ಜಿಲ್ಲಾಧ್ಯಕ್ಷ ಸತೀಶ್ ಕುಂಪಲ ತಿಳಿಸಿದ್ದಾರೆ.

ದೇಶಕ್ಕೆ ಆಪತ್ತು ಬಂದಾಗ, ಪ್ರಾಕೃತಿಕ ವಿಕೋಪ ಸಂಭವಿಸಿದಾಗ ಯಾರ ಆದೇಶಕ್ಕೆ ಕಾಯದೆ ಮುಂಚೂಣಿಯಲ್ಲಿ ನಿಂತು ಸಂತ್ರಸ್ತರ ಪರವಾಗಿ ಕಾರ್ಯ ನಿರ್ವಹಿಸುತ್ತಿರುವ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ವಿಚಾರದಲ್ಲಿ ಸಚಿವ ಪ್ರಿಯಾಂಕ‌ ಖರ್ಗೆಯವರು, ಕೇಂದ್ರದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಆರ್.ಎಸ್.ಎಸ್ ಅನ್ನು ನಿಷೇಧಿಸುತ್ತೇವೆ ಎನ್ನುವ ಉದ್ಧಟತನದ ಮಾತನಾಡಿದ್ದಾರೆ‌. ಇದನ್ನು ಸಮರ್ಥಿಸಿ ಮಂಜುನಾಥ ಭಂಡಾರಿ ಹೇಳಿಕೆಯನ್ನು ನೀಡಿದ್ದಾರೆ. ನೂರು ವರುಷದ ಇತಿಹಾಸವುಳ್ಳ ಸಂಘವು ವ್ಯಕ್ತಿ ಪ್ರತಿಷ್ಠೆಗಾಗಿ, ಅಧಿಕಾರದ ಲಾಲಸೆಗಾಗಿ ಯಾವುದೇ ಕಾರ್ಯ ನಡೆಸಿಲ್ಲ. ಹಿಂದು ಸಮಾಜದ ಸಂಘಟನೆಯ ಜತೆಯಲ್ಲಿ ರಾಷ್ಟ್ರ ಚಿಂತನೆ ಈ ಮೂಲಕ ವಿಶ್ವಗುರು ಭಾರತ ನಿರ್ಮಾಣದ ಪರಿಕಲ್ಪನೆ ಯಲ್ಲಿ ಮುನ್ನಡೆಯುತ್ತಿದೆ.‌ ಅಲ್ಪಸಂಖ್ಯಾತರೇ ಅಧಿಕವಿರುವ ಕಾಶ್ಮೀರದಲ್ಲಿ ಪ್ರವಾಹ ಬಂದ ಸಂಧರ್ಭದಲ್ಲಿಯೂ ಸಂಘದ ಸ್ವಯಂ ಸೇವಕರು ಪ್ರಾಣದ ಹಂಗು ತೊರೆದು ಸಂತ್ರಸ್ತರ ರಕ್ಷಣೆಗೆ ದಾವಿಸಿದ್ದರು ಎನ್ನುವುದನ್ನು ಖರ್ಗೆ ನೆನಪಿಸಲಿ ಎಂದು ಕುಂಪಲ ಹೇಳಿದರು.

ಡಾ.ಬಿ.ಆರ್.ಅಂಬೇಡ್ಕರ್ ರವರು ರಚಿಸಿರುವ ಭಾರತದ ಸಂವಿಧಾನವನ್ನು ಗೌರವಿಸುವ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಬಗ್ಗೆ ಮಾತನಾಡುವ ಮುಂಚಿತವಾಗಿ ಸಂವಿಧಾನದ ಆಶಯಗಳಿಗೆ ವಿರುದ್ದವಾಗಿ ನಡೆದಿರುವ, ಅಧಿಕಾರದ ಉಳಿವಿಗಾಗಿ ಸಂವಿಧಾನಕ್ಕೆ ವ್ಯಾಪಕ ತಿದ್ಧುಪಡಿ ಮಾಡಿ ವಿರೂಪಗೊಳಿಸಿರುವ, ದೇಶದ ಪ್ರಜಾಪ್ರಭುತ್ವ ವ್ಯವಸ್ಥೆಯ ಮೇಲೆ ಘನಘೋರ ಹತ್ಯೆ ಮಾಡಿ ತುರ್ತು ಪರಿಸ್ಥಿತಿ ಘೋಷಿಸಿದ ದಿವಂಗತ ಇಂದಿರಾ ಗಾಂಧಿಯ ಸರ್ವಾಧಿಕಾರದ ಬಗ್ಗೆ ಪ್ರಿಯಾಂಕಾ ಖರ್ಗೆ ಮಾತನಾಡಲಿ. ಅಂಬೇಡ್ಕರ್ ರವರನ್ನು ಚುನಾವಣೆಯಲ್ಲಿ ಸೋಲಿಸಲು ಪಣತೊಟ್ಟು ಕೆಲಸ ಮಾಡಿದ ಮತ್ತು ಅವರ ನಿಧನ ಬಳಿಕ ಅಂತ್ಯ ಸಂಸ್ಕಾರಕ್ಕೂ ದೆಹಲಿಯಲ್ಲಿ ಅವಕಾಶ ನೀಡದ ನೆಹರೂ ಬಗ್ಗೆ ಜನಸಾಮಾನ್ಯರಿಗೆ ಹೇಳಲಿ ಎಂದು ಸತೀಶ್ ಕುಂಪಲ ರವರು ಹೇಳಿಕೆಯಲ್ಲಿ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here