ರಾಮಕುಂಜ: ಮಳೆಯ ನೀರು ರಸ್ತೆ ಮೇಲೆ ಹರಿದರೆ ಸಾವರಿಸಿಕೊಂಡು ಹೋಗಬಹುದು. ಆದರೆ ಕೊಳಚೆ ನೀರು ರಸ್ತೆಯ ಮೇಲೆ ಹರಿದಾಡಿದರೆ ನಡೆಯುವುದಾದರೂ ಹೇಗೆ..? ಎಂಬುವುದು ಜನರ ಪ್ರಶ್ನೆಯಾಗಿದೆ.
ಹೌದು ಇಂತಹ ಒಂದು ಸನ್ನಿವೇಶ ಆಲಂಕಾರು ಗ್ರಾಮದ ನೆಕ್ಕರೆ ಎಂಬಲ್ಲಿಂದ ಮಡೆಂಜಿಮಾರಿಗೆ ಹೋಗುವ ರಸ್ತೆಯಲ್ಲಿ ಕಾಣಸಿಗುತ್ತದೆ. ಇಲ್ಲಿ ಒಳಚರಂಡಿ ವ್ಯವಸ್ಥೆ ಇಲ್ಲದೆ ಕೊಳಚೆ ನೀರು ರಸ್ತೆಯನ್ನು ಸೇರುತ್ತಿದೆ. ಈ ರಸ್ತೆಯಲ್ಲಿ ದಿನಂಪ್ರತಿ ಜನ ಓಡಾಟ ನಡೆಸುತ್ತಿರುತ್ತಾರೆ. ಇಲ್ಲಿ ಓಡಾಟ ನಡೆಸುವ ಸಾರ್ವಜನಿಕರು, ವಿದ್ಯಾರ್ಥಿಗಳು ಮೂಗು ಮುಚ್ಚಿಕೊಂಡೆ ಕೊಳಚೆ ನೀರಿನಲ್ಲಿ ನಡೆದುಕೊಂಡು ಹೋಗಬೇಕಾಗಿದೆ. ಇಂತಹ ಕೆಟ್ಟ ವಾತಾವರಣ ಇಲ್ಲಿದ್ದರೂ ಡೆಂಗ್ಯೂ, ಮಲೇರಿಯಾದಿಂದ ದೂರವಿರಬೇಕು, ಸ್ವಚ್ಛತೆಯನ್ನು ಕಾಪಾಡಬೇಕು ಎನ್ನುವವರು ಈ ಬಗ್ಗೆ ಜಾಗೃತಿ ಮೂಡಿಸಲಿಲ್ಲವೇ ಅಥವಾ ಅಧಿಕಾರಿ ವರ್ಗದವರು ಗಮನಿಸಿಯೂ ಮೌನವಾಗಿದ್ದಾರೆಯೇ ? ಎಂಬ ಪ್ರಶ್ನೆ ಕಾಡುತ್ತಿದೆ. ಯಾವುದೇ ಒಳಚರಂಡಿ ವ್ಯವಸ್ಥೆಯನ್ನು ಮಾಡುವುದು ಎಷ್ಟು ಮುಖ್ಯವೋ, ಅದು ಹರಿದು ಹೋಗಲು ಸಮರ್ಪಕ ವ್ಯವಸ್ಥೆಯನ್ನು ಕಲ್ಪಿಸಿಕೊಡುವುದು ಕೂಡ ಅಷ್ಟೇ ಮುಖ್ಯವಾಗಿದೆ. ಈ ಬಗ್ಗೆ ಸಂಬಂಧಪಟ್ಟ ಜನಪ್ರತಿನಿಧಿಗಳು ತಕ್ಷಣ ಗಮನಹರಿಸಿ ಗ್ರಾಮಸ್ಥರ ನೋವಿಗೆ ಸ್ಪಂದಿಸಬೇಕಾಗಿದೆ. ಜನರ ಆರೋಗ್ಯ ಕಾಪಾಡಬೇಕಾಗಿದೆ ಎಂಬ ಒತ್ತಾಯ ಕೇಳಿಬಂದಿದೆ.