ಪುತ್ತೂರು: ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಮರಳು, ಕೆಂಪು ಕಲ್ಲು ಅಭಾವವಿದೆ. ಕರ್ನಾಟಕ ಕಾಂಗ್ರೆಸ್ ಸರಕಾರ ಅಭಿವೃದ್ಧಿಯಲ್ಲಿ ಜನ ವಿರೋಧಿ ನೀತಿ ಮಾಡುತ್ತಿದೆ ಎಂದು ಆರೋಪಿಸಿ ಜು.14 ರಂದು ಪುತ್ತೂರು ಬಿಜೆಪಿಯಿಂದ ಪುತ್ತೂರಿನ ಕಿಲ್ಲೆ ಮೈದಾನದ ಆವರಣದ ಅಮರ್ ಜವಾನ್ ಸ್ಮಾರಕದ ಎದುರು ಬೃಹತ್ ಪ್ರತಿಭಟನೆ ನಡೆಯಲಿದೆ ಎಂದು ಬಿಜೆಪಿ ಗ್ರಾಮಾಂತರ ಮಂಡಲದ ಅಧ್ಯಕ್ಷ ದಯಾನಂದ ಶೆಟ್ಟಿ ಅವರು ಪತ್ರಿಕಾಗೋಷ್ಟಿಯಲ್ಲಿ ತಿಳಿಸಿದ್ದಾರೆ.
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕರ್ನಾಟಕ ಕಾಂಗ್ರೆಸ್ ಸರಕಾರದ ಅಭಿವೃದ್ಧಿ ಜನ ವಿರೋಧಿ ನೀತಿಗಳಿಂದಾಗಿ ವಿಶೇಷವಾಗಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕಳೆದ ಎರಡು ತಿಂಗಳಿಂದ ಪ್ರಾಕೃತಿಕವಾಗಿ ಸಿಗುವ ಮರಳು ಹಾಗೂ ಕೆಂಪು ಕಲ್ಲಿನ ಅಭಾವದಿಂದ ಕಾರ್ಮಿಕ ಇಂದು ಜೀವನ ನಿರ್ವಹಣೆ ಮಾಡುವುದೇ ಕಷ್ಟ ಸಾಧ್ಯವಾಗಿದೆ. ಇದರಿಂದ ಕಟ್ಟಡ ಕಾರ್ಮಿಕರು, ಕಲ್ಲು ಕೋರೆ ಕಾರ್ಮಿಕರು, ಮರಳು ತೆಗೆಯುವ ಕಾರ್ಮಿಕರು, ಸಣ್ಣ ಸಣ್ಣ ಗುತ್ತಿಗೆದಾರರು, ಟೆಂಪೋ, ಲಾರಿ, ಜೆಸಿಬಿ ಇದರ ಚಾಲಕ ವರ್ಗ ಹಾಗೂ ಹಳ್ಳಿಯ ಮನೆ ನಿರ್ಮಾಣ ಮಾಡುವ ಬಡವರ್ಗ ಇವತ್ತು ಅಮಾಯಕರಾಗಿ ಒಪ್ಪೊತ್ತಿನ ಊಟಕ್ಕೆ ಸಮಸ್ಯೆಯಾಗಿ ಅವರ ಕುಟುಂಬ ಬೀದಿ ಪಾಲಾಗುವ ಮಟ್ಟಕ್ಕೆ ತಲುಪಿದೆ.
ಕಳೆದ ಎರಡು ವರುಷದಿಂದ ಬಡವರಿಗೆ ವಸತಿ ಯೋಜನೆಯಲ್ಲಿ ನಿವೇಶನ ಹಾಗೂ ಮನೆ ಮಂಜೂರಾತಿ ಆಗದ ಬಡ ವರ್ಗ ಸರಕಾರದ ಯೋಜನೆಯಿಂದ ವಂಚಿತರಾಗಿದ್ದಾರೆ. ಅದೇ ರೀತಿ 9/11 ಸಮಸ್ಯೆ, ರೇಷನ್ ಕಾರ್ಡ್ ಸಮಸ್ಯೆಯಾಗಿ ಎಲ್ಲಾ ರೀತಿಯಲ್ಲೂ ಜನರಿಗೆ ಸಮಸ್ಯೆಯಾಗಿರುವುದರಿಂದ ಕೂಡಲೇ ಜಿಲ್ಲಾಡಳಿತ ಎಚ್ಚೆತ್ತುಕೊಂಡು ಪರಿಹಾರ ಮಾಡಿಕೊಡಬೇಕಾಗಿ ಭಾರತೀಯ ಜನತಾ ಪಾರ್ಟಿ ಪುತ್ತೂರು ವಿಧಾನಸಭಾ ಕ್ಷೇತ್ರದ ವತಿಯಿಂದ ಪಾದಯಾತ್ರೆಯ ಮೂಲಕ ಪ್ರತಿಭಟನೆ ಮಾಡಲಿದ್ದೇವೆ. ಪ್ರತಿಭಟನೆಯು ಬೆಳಿಗ್ಗೆ ನೆಲ್ಲಿಕಟ್ಟೆ ಖಾಸ್ ಬಸ್ ನಿಲ್ದಾಣದ ಬಳಿಯಿಂದ ಪಾದಯಾತ್ರೆ ಕಿಲ್ಲೆ ಮೈದಾನದ ತನಕ ನಡೆಯಲಿದೆ ಎಂದು ಅವರು ಹೇಳಿದರು.
ಪತ್ರಿಕಾಗೋಷ್ಟಿಯಲ್ಲಿ ಬಿಜೆಪಿ ನಗರ ಮಂಡಲದ ಅಧ್ಯಕ್ಷ ಶಿವಕುಮಾರ್ ಪಿ ಬಿ, ಪ್ರಧಾನ ಕಾರ್ಯದರ್ಶಿಗಳಾದ ಉಮೇಶ್ ಶೆಟ್ಟಿ, ಅನಿಲ್ ತೆಂಕಿಲ, ಜಿಲ್ಲಾ ಉಪಾಧ್ಯಕ್ಷ ಪ್ರಸನ್ನ ಮಾರ್ತ ಉಪಸ್ಥಿತರಿದ್ದರು.