ವಿಟ್ಲ: ಸರ್ಕಾರಿ ಜಮೀನಿನಲ್ಲಿ ಅಕ್ರಮವಾಗಿ ಶೆಡ್ ನಿರ್ಮಿಸಿ ತಾತ್ಕಾಲಿಕ ನೆಲೆಯಲ್ಲಿ ವಿದ್ಯುತ್ ಸಂಪರ್ಕ ಪಡೆದು ಅಕ್ರಮವಾಗಿ ನಡೆಯುತ್ತಿದ್ದ ಹೋಲೋ ಬ್ಲಾಕ್ ಕಂಪನಿ ಮೇಲೆ ಕಂದಾಯ, ಮೆಸ್ಕಾಂ ಮತ್ತು ಗ್ರಾಮ ಪಂಚಾಯತ್ ಅಧಿಕಾರಿಗಳು ದಿಢೀರ್ ದಾಳಿ ನಡೆಸಿದ ಘಟನೆ ಕೊಳ್ನಾಡು ಗ್ರಾಮದ ಸಾಲೆತ್ತೂರು ಬಳಿಯ ಅಗರಿ ಎಂಬಲ್ಲಿ ನಡೆದಿದೆ.


ಮಂಗಳೂರು ಸಹಾಯಕ ಆಯುಕ್ತರ ನಿರ್ದೇಶನದ ಮೇಲೆ ಕಂದಾಯ, ಪಂಚಾಯತ್ ಅಧಿಕಾರಿಗಳ ತಂಡ ಜಂಟಿ ದಾಳಿ ನಡೆಸಿದೆ. ಕಳೆದ ಎಂಟು ವರ್ಷಗಳಿಂದ ಬಂಟ್ವಾಳ ತಾಲೂಕು ಕೊಳ್ನಾಡು ಗ್ರಾಮದ ಸಾಲೆತ್ತೂರು ಅಗರಿ ಎಂಬಲ್ಲಿನ 512/6 ರ ಸರ್ಕಾರಿ ಜಮೀನಿನಲ್ಲಿ ಕರಾಯಿ ನಿವಾಸಿ ಅಬ್ದುಲ್ ಕರೀಂ ಎಂಬವರು ಅಕ್ರಮವಾಗಿ ಶೆಡ್ ನಿರ್ಮಿಸಿ ಹೋಲೋ ಬ್ಲಾಕ್ ಕಂಪನಿ ನಡೆಸಿದ್ದಾರೆ. ಜಮೀನಿಗೆ ಯಾವುದೇ ದಾಖಲೆಗಳಿಲ್ಲದಿದ್ದರೂ ಮೆಸ್ಕಾಂ ಇಲಾಖೆಯ ಅಧಿಕಾರಿಗಳು ತಾತ್ಕಾಲಿಕ ನೆಲೆಯಲ್ಲಿ ವಿದ್ಯುತ್ ನೀಡಿದ್ದಾರೆ. ಈ ಬಗ್ಗೆ ಕರಾಯಿ ಖಾಲಿದ್ ಎಂಬವರು ನೀಡಿದ ದೂರಿನನ್ವಯ ಅಧಿಕಾರಿಗಳ ತಂಡ ದಾಳಿ ನಡೆದಿದೆ.
ವಿಟ್ಲ ಹೋಬಳಿ ಕಂದಾಯ ನಿರೀಕ್ಷಕ ರವಿ.ಎಂ.ಎನ್, ಕೊಳ್ನಾಡು ಗ್ರಾಮ ಆಡಳಿತಾಧಿಕಾರಿ ಕರಿ ಬಸಪ್ಪ, ಪಿ.ಡಿ.ಒ.ಲಾವಣ್ಯ ಮತ್ತು ಸಿಬ್ಬಂದಿಗಳು ದಾಳಿ ನಡೆಸಿ ಪರಿಶೀಲನೆ ನಡೆಸಿದ್ದಾರೆ.