ಶತಮಾನೋತ್ಸವ ಸಂಭ್ರಮದಲ್ಲಿ ಹಳೆನೇರೆಂಕಿ ಶಾಲೆ

0

60 ಲಕ್ಷ ರೂ.ಕಾಮಗಾರಿಗೆ ಚಾಲನೆ | ಡಿಸೆಂಬರ್‌ನಲ್ಲಿ ಲೋಕಾರ್ಪಣೆ

ವರದಿ: ಹರೀಶ್ ಬಾರಿಂಜ

ರಾಮಕುಂಜ: ಕ್ರೀಡೆ ಮೂಲಕ ಜಿಲ್ಲೆ, ವಿಭಾಗ, ರಾಜ್ಯ ಮಟ್ಟದಲ್ಲಿ ಹೆಸರುಗಳಿಸಿರುವ ಕಡಬ ತಾಲೂಕಿನ ಹಳೆನೇರೆಂಕಿ ಸರಕಾರಿ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆ ಶತಮಾನೋತ್ಸವ ಸಂಭ್ರಮದಲ್ಲಿದೆ. ಶಾಲೆ ಆರಂಭಗೊಂಡು 2023ಕ್ಕೆ 100 ವರ್ಷ ಪೂರ್ಣಗೊಂಡಿದೆ. ಈ ವರ್ಷದ ಕೊನೆಗೆ ಅದ್ದೂರಿಯಾಗಿ ಶತಮಾನೋತ್ಸವ ಆಚರಿಸಲು ಶತಮಾನೋತ್ಸವ ಸಮಿತಿ, ಹಿರಿಯ ವಿದ್ಯಾರ್ಥಿ ಸಂಘ, ಎಸ್‌ಡಿಎಂಸಿ, ಶಿಕ್ಷಕ ವೃಂದ ಸಿದ್ಧತೆ ಮಾಡಿಕೊಂಡಿದ್ದು ಈ ನಿಟ್ಟಿನಲ್ಲಿ ಸುಮಾರು 60 ಲಕ್ಷ ರೂ.ವೆಚ್ಚದ ವಿವಿಧ ಕಾಮಗಾರಿ ಕೈಗೆತ್ತಿಕೊಂಡಿದೆ.

ಹಳೆನೇರೆಂಕಿ ಗ್ರಾಮವು ಪ್ರಪಂಚಕ್ಕೆ ಮಾನವ ತತ್ವ ಸಾರಿದ ದಾರ್ಶನಿಕ ಶ್ರೀ ವಿಶ್ವೇಶತೀರ್ಥ ಶ್ರೀಪಾದರು ಜನಿಸಿದ, ಅವರು ಓಡಾಡಿದ ಊರು ಆಗಿದೆ. ಹಳೆನೇರೆಂಕಿ ಗ್ರಾಮದ ಜನತೆಯ ಶಿಕ್ಷಣದ ಅವಶ್ಯಕತೆ ಮನಗಂಡು 1923ರಲ್ಲಿ ನೇರೆಂಕಿ ಗುತ್ತಿನ ಮನೆತನದಿಂದ ಹಳೆನೇರೆಂಕಿಯಲ್ಲಿ ಸಣ್ಣ ಕಟ್ಟಡವೊಂದರಲ್ಲಿ ಶಾಲೆ ಪ್ರಾರಂಭಿಸಲಾಗಿತ್ತು. 1925ರಲ್ಲಿ ಶಾಲೆ ತಾಲೂಕು ಬೋರ್ಡಿಗೆ ಹಸ್ತಾಂತರಗೊಂಡಿತು. 1962ರಲ್ಲಿ ಹಿರಿಯ ಪ್ರಾಥಮಿಕ ಶಾಲೆಯಾಗಿ, 2007ರಲ್ಲಿ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆಯಾಗಿ ಮೇಲ್ದರ್ಜೆಗೇರಿತು. ಒಂದು ಹಂತದಲ್ಲಿ ಈ ಶಾಲೆಯಲ್ಲಿ 410 ಮಕ್ಕಳು ವ್ಯಾಸಂಗ ಮಾಡುತ್ತಿದ್ದರು. ಪ್ರಸ್ತುತ ಸುತ್ತಮುತ್ತಲೂ ಖಾಸಗಿ ಹಾಗೂ ಆಂಗ್ಲಮಾಧ್ಯಮ ಶಾಲೆಗಳ ಪೈಪೋಟಿ ಇದ್ದರೂ 110 ಮಕ್ಕಳು ವ್ಯಾಸಂಗ ಮಾಡುತ್ತಿದ್ದಾರೆ. ಗುಣಮಟ್ಟದ ಶಿಕ್ಷಣದ ಜೊತೆಗೆ 1ರಿಂದ 8ನೇ ತರಗತಿ ತನಕ ನುರಿತ ಶಿಕ್ಷಕ ವರ್ಗದಿಂದ ಪಾಠ ಪ್ರವಚನ ನಡೆಸಿಕೊಂಡು ಬರುತ್ತಿದೆ. ಮುಖ್ಯಶಿಕ್ಷಕರು ಸೇರಿ ಆರು ಶಿಕ್ಷಕರು ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಎಸ್‌ಡಿಎಂಸಿ ಹಾಗೂ ಪೋಷಕರ ಸಹಕಾರದಿಂದ ಗೌರವ ಶಿಕ್ಷಕರೂ ಸೇವೆ ಸಲ್ಲಿಸುತ್ತಿದ್ದಾರೆ.

ಸೌಕರ್ಯಗಳು:
ಹಳೆನೇರೆಂಕಿ ಸರಕಾರಿ ಶಾಲೆಯು ಖಾಸಗಿ ಶಾಲೆಗಳಿಗೆ ಕಡಿಮೆ ಇಲ್ಲದಂತೆ ಬೆಳೆಯುತ್ತಿದೆ. ಶಾಲೆಗೆ ನೇರೆಂಕಿಗುತ್ತು ಮನೆತನದವರಿಂದ ದಾನವಾಗಿ ಬಂದ 21 ಸೆಂಟ್ಸ್ ಸೇರಿ ಒಟ್ಟು 1.91 ಎಕ್ರೆ ಜಾಗ ಇದೆ. ಸುಸಜ್ಜಿತ ಆಟದ ಮೈದಾನ, ಕಂಪ್ಯೂಟರ್ ಕೊಠಡಿ, ಶಾಲಾ ಗ್ರಂಥಾಲಯ, ಶುದ್ಧ ಕುಡಿಯುವ ನೀರಿನ ವ್ಯವಸ್ಥೆ, ಸುಸಜ್ಜಿತ ನಲಿಕಲಿ ಕೊಠಡಿ, ಸಭಾಭವನ ಇದೆ. 5 ಲಕ್ಷ ರೂ.ವೆಚ್ಚದಲ್ಲಿ ರಂಗಮಂದಿರ, 2 ಲಕ್ಷ ರೂ.ವೆಚ್ಚದಲ್ಲಿ ಶಿಕ್ಷಕರ ಕೊಠಡಿ ನವೀಕರಣ ನಡೆದಿದೆ. ಪ್ರತಿ ಮಕ್ಕಳಿಗೆ ಕಂಪ್ಯೂಟರ್ ಶಿಕ್ಷಣ, ಗ್ರಂಥಾಲಯ ಬಳಕೆಗೆ ಅವಕಾಶ ನೀಡಲಾಗಿದೆ. ದತ್ತಿನಿಧಿ ಸೌಲಭ್ಯವೂ ಇದೆ. ಎರಡು ವರ್ಷಕ್ಕೊಮ್ಮೆ ಶಾಲಾ ವಾರ್ಷಿಕೋತ್ಸವ, ಶೈಕ್ಷಣಿಕ ಪ್ರವಾಸ ಹಮ್ಮಿಕೊಳ್ಳಲಾಗುತ್ತಿದೆ. ಒಟ್ಟಿನಲ್ಲಿ ಶಾಲೆಯಲ್ಲಿ ವಿದ್ಯಾರ್ಥಿಗಳ ಕಲಿಕೆ ಹಾಗೂ ಪ್ರಗತಿಗೆ ಬೇಕಾದ ಎಲ್ಲಾ ಸೌಕರ್ಯವನ್ನು ಹೊಂದಿದೆ.

ಸಂಘ ಸಂಸ್ಥೆಗಳಿಂದ ನೆರವು:
ಶಾಲೆಯ ಬೆಳವಣಿಗೆ ಕಂಡು ಹಲವು ಸಂಘ ಸಂಸ್ಥೆಗಳು ನೆರವು ನೀಡಿವೆ. ಎಂಆರ್‌ಪಿಎಲ್ ಸಿಎಸ್‌ಆರ್ ಫಂಡ್‌ನ 25 ಲಕ್ಷ ರೂ.ಅನುದಾನದಲ್ಲಿ ಎರಡು ಕೊಠಡಿಗಳ ನಿರ್ಮಾಣ ಕಾಮಗಾರಿ ನಡೆಯುತ್ತಿದೆ. ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ಸಭಾಭವನಕ್ಕೆ 1 ಲಕ್ಷ ರೂ. ಧನಸಹಾಯ, 10 ಸೆಟ್ ಡೆಸ್ಕು ಹಾಗೂ ಬೆಂಚು ನೀಡಲಾಗಿದೆ. ಬೆಂಗಳೂರಿನ ಶೆರವಿನ್ ವಿಲಿಯಮ್ಸ್ ಕಂಪನಿ ಹಾಗೂ ಬೆಂಗಳೂರು ಜೆಪಿನಗರ ರೋಟರಿ ಕ್ಲಬ್‌ನವರು ಅಂದಾಜು 8 ಲಕ್ಷ ರೂ.ವೆಚ್ಚದಲ್ಲಿ 5 ಕಂಪ್ಯೂಟರ್, ಕಂಪ್ಯೂಟರ್ ಟೇಬಲ್, ನಲಿಕಲಿ ತರಗತಿಗೆ 8 ರೌಂಡ್ ಟೇಬಲ್, 50 ಮಿನಿ ಚಯರ್, ಗ್ರಂಥಾಲಯಕ್ಕೆ 10 ಕಪಾಟು, 50 ಲೀ.ಸಾಮರ್ಥ್ಯದ ವಾಟರ್ ಫಿಲ್ಟರ್, 20 ಸೆಟ್ ಬೆಂಚು ಹಾಗೂ ಡೆಸ್ಕುಗಳನ್ನು ಕೊಡುಗೆಯಾಗಿ ನೀಡಿದ್ದಾರೆ.

ಸುಸಜ್ಜಿತ ಆಟದ ಮೈದಾನ:
ಕ್ರೀಡೆಯಲ್ಲಿ ಹೆಸರು ಪಡೆದುಕೊಂಡಿರುವ ಹಳೆನೇರೆಂಕಿ ಶಾಲೆಯಲ್ಲಿ ಸುಸಜ್ಜಿತ ಆಟದ ಮೈದಾನವಿದೆ. ರಾಮಕುಂಜ ಗ್ರಾಮ ಪಂಚಾಯತ್‌ನ ಉದ್ಯೋಗ ಖಾತ್ರಿ ಯೋಜನೆಯಡಿ ಸುಸಜ್ಜಿತ ಆಟದ ಮೈದಾನ ನಿರ್ಮಾಣಗೊಂಡಿದೆ. ಗ್ರಾಮ ಪಂಚಾಯತ್ ಅನುದಾನದಲ್ಲಿ ಶೌಚಾಲಯವು ನಿರ್ಮಾಣ ಹಂತದಲ್ಲಿದೆ. ಕಳೆದ ವರ್ಷ ತಾಲೂಕು ಮಟ್ಟದ ಖೋ ಖೋ ಪಂದ್ಯಾಟವನ್ನು ಈ ಶಾಲೆಯಲ್ಲಿ ಏರ್ಪಡಿಸಲಾಗಿದೆ. ಅಲ್ಲದೇ ಪ್ರತಿವರ್ಷವೂ ಇಲಾಖೆಯ ಕ್ರೀಡೆಯನ್ನು ಇಲ್ಲಿ ಯಶಸ್ವಿಯಾಗಿ ಸಂಘಟಿಸಲಾಗುತ್ತಿದೆ.

ಕಲಿಕೆ/ಕ್ರೀಡೆಯಲ್ಲೂ ಸಾಧನೆ:
ಈ ಶಾಲೆಯ ವಿದ್ಯಾರ್ಥಿಗಳು ಕಲಿಕೆ ಹಾಗೂ ಕ್ರೀಡೆಯಲ್ಲೂ ಸಾಧಕರಾಗುತ್ತಿದ್ದಾರೆ. ಕಳೆದ ಶೈಕ್ಷಣಿಕ ಸಾಲಿನಲ್ಲಿ ಶಾಲೆಯ 8ನೇ ತರಗತಿಯ ಮೂವರು ವಿದ್ಯಾರ್ಥಿನಿಯರು ಎನ್‌ಎನ್‌ಎಂಎಸ್ ಪರೀಕ್ಷೆಯಲ್ಲಿ ಉತ್ತೀರ್ಣರಾಗಿ ವಿದ್ಯಾರ್ಥಿ ವೇತನ ಪಡೆಯಲು ಅರ್ಹತೆ ಪಡೆದುಕೊಂಡಿದ್ದಾರೆ. ಕ್ರೀಡೆಯಲ್ಲಿ ವಲಯ, ತಾಲೂಕು ಮಟ್ಟದಲ್ಲಿ ಸಮಗ್ರ ಪ್ರಶಸ್ತಿ ಪಡೆದುಕೊಂಡಿದೆ. ಖೋ ಖೋ ತಂಡ ಸತತ 5ನೇ ಬಾರಿ ವಿಭಾಗ ಮಟ್ಟವನ್ನು ಪ್ರತಿನಿಧಿಸಿದೆ. ಕಳೆದ ವರ್ಷ ಇಲ್ಲಿನ ವಿದ್ಯಾರ್ಥಿಗಳಾದ ಲಿಖಿತ್ ಪರಕ್ಕಾಲು, ಅಕ್ಷಯ ಗೌಡ ಅವರು ಖೋ ಖೋ ರಾಜ್ಯ ತಂಡಕ್ಕೆ ಆಯ್ಕೆಗೊಂಡಿದ್ದರು. 400 ಮೀ., 600ಮೀ.ಓಟದಲ್ಲಿ ಜಯೇಶ್ 2ನೇ ಬಾರಿಗೆ ಹಾಗೂ ಲಾಂಗ್‌ಜಂಪ್‌ನಲ್ಲಿ ತನ್ವಿ 2ನೇ ಬಾರಿ ರಾಜ್ಯಮಟ್ಟಕ್ಕೆ ಆಯ್ಕೆಗೊಂಡಿದ್ದರು. ಪ್ರತಿಭಾ ಕಾರಂಜಿಯಲ್ಲೂ ಇಲ್ಲಿನ ವಿದ್ಯಾರ್ಥಿಗಳ ಸಾಧನೆ ಮಾಡಿದ್ದಾರೆ.

ಶತಮಾನೋತ್ಸವದ ಯೋಜನೆಗಳು:
ಶಾಲೆಗೆ ಹೊಸ ಚೈತನ್ಯ ನೀಡುವ ನಿಟ್ಟಿನಲ್ಲಿ ಶತಮಾನೋತ್ಸವ ಸಮಿತಿ ಮುಂದಡಿಯಿಟ್ಟಿದ್ದು ಸುಮಾರು 60 ಲಕ್ಷ ರೂ.ವೆಚ್ಚದಲ್ಲಿ ಶಾಲೆಗೆ ಅಗತ್ಯವಾದ ಹಲವು ಯೋಜನೆ ಹಾಕಿಕೊಂಡಿದೆ. ಇದರಲ್ಲಿ ಈಗಾಗಲೇ ಕೆಲವು ಕಾಮಗಾರಿ ಪೂರ್ಣಗೊಂಡಿದ್ದು ಇನ್ನಷ್ಟೂ ಕೆಲಸಗಳು ಪ್ರಗತಿಯಲ್ಲಿವೆ. 25 ಲಕ್ಷ ರೂ.ವೆಚ್ಚದಲ್ಲಿ ಶಾಲಾ ಸಭಾಭವನ, 10 ಲಕ್ಷ ರೂ.ವೆಚ್ಚದಲ್ಲಿ ವ್ಯವಸ್ಥಿತ ಕಂಪ್ಯೂಟರ್ ಕೊಠಡಿ, 3 ಲಕ್ಷ ರೂ.ವೆಚ್ಚದಲ್ಲಿ ಮಕ್ಕಳಿಗೆ ಕೈ ತೊಳೆಯುವ ವ್ಯವಸ್ಥೆ, 10 ಲಕ್ಷ ರೂ.ವೆಚ್ಚದಲ್ಲಿ ವ್ಯವಸ್ಥಿತ ವಾಚನಾಲಯ ಕೊಠಡಿ ಹಾಗೂ 5 ಲಕ್ಷ ರೂ.ವೆಚ್ಚದಲ್ಲಿ ಇತರೇ ಮೂಲಭೂತ ಅವಶ್ಯಕತೆಗಳನ್ನು ಪೂರೈಸುವ ನಿಟ್ಟಿನಲ್ಲಿ ಶತಮಾನೋತ್ಸವ ಸಮಿತಿ, ಹಿರಿಯ ವಿದ್ಯಾರ್ಥಿ ಸಂಘ, ಎಸ್‌ಡಿಎಂಸಿ, ಶಿಕ್ಷಕವೃಂದ, ಪೋಷಕ ವೃಂದ ಕಾರ್ಯೋನ್ಮುಖವಾಗಿದೆ. ಈ ನಿಟ್ಟಿನಲ್ಲಿ ದಾನಿಗಳ ನೆರವಿನ ನಿರೀಕ್ಷೆಯಲ್ಲಿದೆ.

ಮಾದರಿ ಶಾಲೆಯಾಗಬೇಕೆಂಬ ಆಶಯ;
ಈ ಶಾಲೆ ಹಳೆನೇರೆಂಕಿ ಗ್ರಾಮದ ಏಕೈಕ ಸರಕಾರಿ ಶಾಲೆ. ದೈವ ಸಾನಿಧ್ಯವಿರುವ ಭೂಮಿಯಲ್ಲಿ ಶಾಲೆ ಇದೆ. ಇಲ್ಲಿ ಕಲಿತ ಹಲವು ವಿದ್ಯಾರ್ಥಿಗಳು ಕಲಿಕೆ,ಆಟೋಟದಲ್ಲಿ ಸಾಧನೆ ಮಾಡಿರುವುದು ಸಂತಸ ತಂದಿದೆ. ಶಾಲೆಗೆ ಈಗ 102 ವರ್ಷ. ಈ ವರ್ಷ ಶತಮಾನೋತ್ಸವ ಆಚರಿಸಲು ನಿರ್ಧರಿಸಿದ್ದೇವೆ. ಶತಮಾನೋತ್ಸವದ ಸವಿನೆನಪಿಗಾಗಿ ಹಲವು ಯೋಜನೆ ಹಾಕಿಕೊಂಡಿದ್ದೇವೆ. ಮಾದರಿ ಶಾಲೆಯಾಗಿ ರೂಪುಗೊಳ್ಳಬೇಕೆಂಬುದು ನಮ್ಮ ಆಶಯ.

ವೈ.ಸಾಂತಪ್ಪ ಗೌಡ, ಮುಖ್ಯಶಿಕ್ಷಕರು

ಅಭಿವೃದ್ಧಿಗೆ ಪೂರಕ ವ್ಯವಸ್ಥೆ;
ಹಳೆನೇರೆಂಕಿ ಶಾಲೆಯು ಮೌಲ್ಯಾಧಾರಿತ ಶಿಕ್ಷಣ ನೀಡಿ ಶತಮಾನ ಆಚರಿಸುತ್ತಿರುವುದು ಊರಿನವರಾದ ನಮ್ಮೆಲ್ಲರ ಸೌಭಾಗ್ಯ. ಈ ಶಾಲೆಯಲ್ಲಿ ಈ ತನಕ ವ್ಯಾಸಂಗ ಮಾಡಿದ ಊರಿನ ಮತ್ತು ಪರವೂರಿನ ಎಲ್ಲಾ ಹಿರಿಯ ವಿದ್ಯಾರ್ಥಿಗಳು ಹಾಗೂ ವಿದ್ಯಾಭಿಮಾನಿಗಳನ್ನು ಸೇರಿಸಿ ಶತಮಾನೋತ್ಸವವನ್ನು ಸಂಭ್ರಮದಿಂದ ಆಚರಿಸುವುದರೊಂದಿಗೆ ಶಾಲೆಗೆ ಬೇಕಾಗಿರುವ ಮೂಲಭೂತ ಸೌಲಭ್ಯಗಳನ್ನು ಒದಗಿಸಿ ವಿದ್ಯಾರ್ಥಿಗಳ ಸರ್ವತೋಮುಖ ಅಭಿವೃದ್ಧಿಗೆ ಪೂರಕ ವ್ಯವಸ್ಥೆಯನ್ನು ಕಲ್ಪಿಸುವ ಉದ್ದೇಶವನ್ನು ಹೊಂದಿದ್ದೇವೆ.

-ರಮೇಶ್ ರೈ ರಾಮಜಾಲು
ಅಧ್ಯಕ್ಷರು, ಶಾಲಾ ಶತಮಾನೋತ್ಸವ ಸಮಿತಿ

ಖಾಸಗಿ ಶಾಲೆಗಳಿಗಿಂತ ಕಡಿಮೆ ಇಲ್ಲ;
ಹಳೆನೇರೆಂಕಿ ಶಾಲೆ ಅಸುಪಾಸಿನ ಶಾಲೆಗಳಿಗೆ ಮಾದರಿ ಶಾಲೆ. ಇಲ್ಲಿ ಕಲಿತ ಅನೇಕ ವಿದ್ಯಾರ್ಥಿಗಳು ಒಳ್ಳೆಯ ಹುದ್ದೆಯಲ್ಲಿದ್ದಾರೆ. ಆಟೋಟದಲ್ಲಿ ಜಿಲ್ಲೆ,ರಾಜ್ಯ,ರಾಷ್ಟ್ರಮಟ್ಟದ ಸಾಧನೆ ಮಾಡಿದ್ದಾರೆ. ಈ ಶಾಲೆಗೆ 100 ವರ್ಷ ಆಗಿರುವ ಹಿಂದೆ ಊರಿನ ಅನೇಕ ಮಹನೀಯರ ತ್ಯಾಗ ಇದೆ. ಒಳ್ಳೆಯ ರಕ್ಷಕರ ತಂಡವೂ ಇದೆ. ಖಾಸಗಿ ಶಾಲೆಗೆ ಕಡಿಮೆ ಇಲ್ಲ ಎನ್ನುವ ರೀತಿಯಲ್ಲಿ ಶಿಕ್ಷಣ ಸಿಗುತ್ತಿದೆ. 100 ವರ್ಷದ ಸಂಭ್ರಮದ ವೆಳೆ ಎಸ್‌ಡಿಎಂಸಿ ಅಧ್ಯಕ್ಷನಾಗಿರುವುದು ನನ್ನ ಪುಣ್ಯ.

-ವೀರೇಂದ್ರ ಪಾಲೆತಡ್ಡ
ಅಧ್ಯಕ್ಷರು, ಎಸ್‌ಡಿಎಂಸಿ

LEAVE A REPLY

Please enter your comment!
Please enter your name here