ಭೂಸ್ವಾಧೀನ ಪರಿಹಾರ ಮೊತ್ತ ಪಾವತಿಸದ ಹಿನ್ನೆಲೆ : ಎಸಿ ಕಚೇರಿಯ ಚರ ಸ್ವತ್ತುಗಳು, ವಾಹನ ಜಪ್ತಿಗೆ ಕೋರ್ಟ್ ಆದೇಶ

0

ಪುತ್ತೂರು: 2012ನೇ ಸಾಲಿನಲ್ಲಿ ಮಾಣಿ ಮೈಸೂರು ರಾಜ್ಯ ಹೆದ್ದಾರಿ 88ರ ರಸ್ತೆ ಅಗಲೀಕರಣಕ್ಕಾಗಿ ಕಬಕ ಪೇಟೆಯಲ್ಲಿ ಕರ್ನಾಟಕ ಸರ್ಕಾರವು ಭೂಸ್ವಾಧೀನ ಪಡಿಸಿಕೊಂಡಿದ್ದ ಭೂಮಿಗೆ ಸೂಕ್ತ ಪರಿಹಾರ ಪಾವತಿಸುವಂತೆ ಪುತ್ತೂರಿನ ಹೆಚ್ಚುವರಿ ಸೀನಿಯರ್ ಸಿವಿಲ್ ಜಡ್ಜ್ ಮತ್ತು ಜೆ.ಎಂ.ಎಫ್.ಸಿ.ನ್ಯಾಯಾಲಯವು ಮಾಡಿದ್ದ ಆದೇಶವನ್ನು ಪಾಲಿಸದ ಕಾರಣಕ್ಕಾಗಿ ಭೂಸ್ವಾಧೀನ ಅಧಿಕಾರಿಯಾಗಿರುವ ಸಹಾಯಕ ಕಮಿಷನ‌ರ್ ಕಚೇರಿಯ ಚರ ಸ್ವತ್ತುಗಳು ಮತ್ತು ವಾಹನ ಜಪ್ತಿಗೆ ಆದೇಶ ನೀಡಿದೆ.

ರಸ್ತೆಗಾಗಿ ಸ್ವಾಧೀನಪಡಿಸಿಕೊಂಡ ಭೂಮಿಗೆ ಸಂಬಂಧಿಸಿ ಜಾಗದ ಮಾಲಕ ಪರ್ಲಡ್ಕ ನಿವಾಸಿ ಶಿವಶಂಕರ ಭಟ್ ರವರಿಗೆ ಭೂಸ್ವಾಧೀನಾಧಿಕಾರಿಯವರು ನ್ಯಾಯಾಲಯದ ಆದೇಶದಂತೆ ರೂ.14,93,438.00 ಪಾವತಿಸಬೇಕಾಗಿತ್ತು. ಆದರೆ ಅದನ್ನು ಪಾವತಿಸದ ಕಾರಣ ಸದ್ರಿ ಭೂಮಾಲಕರು ಪುತ್ತೂರಿನ ಹೆಚ್ಚುವರಿ ಸೀನಿಯರ್ ಸಿವಿಲ್ ಜಡ್ಜ್ ಮತ್ತು ಜೆ.ಎಂ.ಎಫ್.ಸಿ. ನ್ಯಾಯಾಲಯದಲ್ಲಿ ಅಮಲ್ದಾರಿ ಸಂಖ್ಯೆ 6/2024ರಂತೆ ಅರ್ಜಿ ಸಲ್ಲಿಸಿದ್ದರು.

ಭೂಸ್ವಾಧೀನ ಪ್ರಾಧಿಕಾರವಾದ ಸಹಾಯಕ ಆಯುಕ್ತರು ಪುತ್ತೂರುರವರಿಗೆ ಸಾಕಷ್ಟು ಸಮಯಾವಕಾಶ ನೀಡಿದರೂ ಪರಿಹಾರ ಮೊತ್ತ ಪಾವತಿಸದ ಕಾರಣ ಪುತ್ತೂರಿನ ಹೆಚ್ಚುವರಿ ಸೀನಿಯರ್ ಸಿವಿಲ್ ಜಡ್ಜ್ ಮತ್ತು ಜೆ.ಎಂ.ಎಫ್.ಸಿ.ನ್ಯಾಯಾಲಯವು ಸಹಾಯಕ ಆಯುಕ್ತರ ಕಚೇರಿಯ ಚರ ಸ್ವತ್ತುಗಳಾದ ಕಂಪ್ಯೂಟರ್ ಗಳು, ಟೇಬಲ್, ಕುರ್ಚಿಗಳು ಹಾಗೂ ಸಹಾಯಕ ಆಯುಕ್ತರ ವಾಹನವನ್ನು ಜಪ್ತಿ ಮಾಡಲು ಆದೇಶ ಹೊರಡಿಸಿದೆ.ಅದರಂತೆ ನ್ಯಾಯಾಲಯದ ಅಮೀನರಾಗಿರುವ ಗಣೇಶ್ ಹಾಗೂ ಸಂಜೀದರವರು ನ್ಯಾಯಾಲಯದ ಆದೇಶದಂತೆ ಸದ್ರಿ ಸೊತ್ತುಗಳ ಜಪ್ತಿಗೆ ಕ್ರಮವಹಿಸಿ, ಜು.30ರಂದು ಸಹಾಯಕ ಕಮಿಷನರ್ ಅವರ ಕಚೇರಿಗೆ ಬಂದಾಗ ಸಹಾಯಕ ಕಮಿಷನರ್ ಅವರು ಧರ್ಮಸ್ಥಳಕ್ಕೆ ತೆರಳಿದ್ದ ಹಿನ್ನೆಲೆಯಲ್ಲಿ ಜಪ್ತಿ ಆದೇಶ ಜಾರಿ ಮಾಡದೆ ಜು.31ಕ್ಕೆ ಮುಂದುವರಿಸಲಿದ್ದಾರೆ ಎಂದು ತಿಳಿದು ಬಂದಿದೆ.ಈ ಪ್ರಕರಣದಲ್ಲಿ ಭೂಮಾಲಕರ ಪರವಾಗಿ ನ್ಯಾಯವಾದಿಗಳಾದ ಶಿವಪ್ರಸಾದ್ ಇ ಹಾಗೂ ಗೌರೀಶ್ ಕಂಪ ವಾದ ಮಂಡಿಸಿದ್ದಾರೆ.

LEAVE A REPLY

Please enter your comment!
Please enter your name here