ಶೀಂಟೂರು ಸನ್ಮಾನ, ಶಿಷ್ಯವೇತನ ವಿತರಣೆ- ಸೀತಾರಾಮ ರೈ
ಪುತ್ತೂರು: ಸವಣೂರು ವಿದ್ಯಾರಶ್ಮಿ ಸಮೂಹ ಶಿಕ್ಷಣ ಸಂಸ್ಥೆಗಳ ಆಶ್ರಯದಲ್ಲಿ ಸವಣೂರಿನ ವಿದ್ಯಾರಶ್ಮಿ ಸಮೂಹ ಶಿಕ್ಷಣ ಸಂಸ್ಥೆಗಳ ಸ್ಥಾಪಕರ ದಿನಾಚರಣೆ ‘ಶೀಂಟೂರು ಸ್ಮೃತಿ” ಕಾರ್‍ಯಕ್ರಮ ಆ.14 ರಂದು ಸವಣೂರು ವಿದ್ಯಾರಶ್ಮಿ ವಿದ್ಯಾಲಯದ ವಿದ್ಯಾಚೇತನ ಸಭಾಂಗಣದಲ್ಲಿ ಶೀಂಟೂರು ಸನ್ಮಾನ ಪ್ರಧಾನ ಮತ್ತು ಶಿಷ್ಯವೇತನ ವಿತರಣೆ ಕಾರ್ಯಕ್ರಮಗಳು ನಡೆಯಲಿದೆ ಎಂದು ಸವಣೂರು ವಿದ್ಯಾರಶ್ಮಿ ಸಮೂಹ ಶಿಕ್ಷಣ ಸಂಸ್ಥೆಗಳ ಸಂಚಾಲಕರಾದ “ಸಹಕಾರರತ್ನ” ಸವಣೂರು ಕೆ.ಸೀತಾರಾಮ ರೈ ತಿಳಿಸಿದ್ದಾರೆ.
ಆ.5 ರಂದು ಪುತ್ತೂರಿನ ಪ್ರೆಸ್‌ಕ್ಲಬ್‌ನಲ್ಲಿ ಜರಗಿದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ವಿದ್ಯಾರಶ್ಮಿ ಶಿಕ್ಷಣ ಸಂಸ್ಥೆಗಳ ಸಂಸ್ಥಾಪಕರಾದ ನನ್ನ ತಂದೆಯವರಾದ ದಿವಂಗತ ಶೀಂಟೂರು ನಾರಾಯಣ ರೈ ಅವರು 2ನೇ ಮಹಾಯುದ್ಧದಲ್ಲಿ ಭಾರತೀಯ ಸೇನಾನಿಯಾಗಿ ಬರ್ಮದಲ್ಲಿ ಕರ್ತವ್ಯ ನಿರ್ವಹಿಸಿದ್ದರು. ಸೇನಾ ನಿವೃತ್ತಿ ಬಳಿಕ ಶಿಕ್ಷಕರಾಗಿದ್ದು, ಸಹಕಾರಿ ಮತ್ತು ಕೃಷಿಕರಾಗಿದ್ದು ಹೆಸರು ಮಾಡಿದವರು. ಅವರ ಪ್ರೇರಣೆಯಿಂದ ಸವಣೂರು ವಿದ್ಯಾಗಂಗೋತ್ರಿಯಲ್ಲಿ 2001ರಲ್ಲಿ ವಿದ್ಯಾರಶ್ಮಿ ಸಮೂಹ ಶಿಕ್ಷಣ ಸಂಸ್ಥೆಯನ್ನು ಸ್ಥಾಪಿಸಿದ್ದೇನೆ ಎಂದು ಸೀತಾರಾಮ ರೈ ಹೇಳಿದರು.
ಇಂದು ಸಂಸ್ಥೆಯು ನಿರಂತರವಾಗಿ ಉತ್ತಮ ಫಲಿತಾಂಶ ಮತ್ತು ಸರ್ವತೋಮುಖ ಸಾಧನೆಗಳೊಂದಿಗೆ ಮುಂದುವರಿಯುತ್ತಿದೆ. ಸಂಸ್ಥೆಯ ದಶಮಾನೋತ್ಸವದ ಆಚರಣೆಯ ಸಂದರ್ಭದಲ್ಲಿ ನಿಟ್ಟೆ ವಿಶ್ವವಿದ್ಯಾಲಯದ ಕುಲಪತಿಯಾಗಿದ್ದ ವಿನಯ ಹೆಗ್ಡೆಯವರು ಪ್ರಸ್ತಾಪಿಸಿ ಮುಂದಿಟ್ಟ ಯೋಜನೆಯೇ “ಶೀಂಟೂರು ನಾರಾಯಣ ರೈ ಶಿಕ್ಷಣ ಪ್ರತಿಸ್ಥಾನ ಸವಣೂರು ಆಗಿದ್ದು ಆ ಸಂದರ್ಭದಲ್ಲಿ ಎ ಜೆ ಆಸ್ಪತ್ರೆಯ ಸಂಸ್ಥಾಪಕರು ಡಾ ಎ ಜೆ ಶೆಟ್ಟಿಯವರು ಸುಮಾರು 10ಲಕ್ಷ ರೂಪಾಯಿಯನ್ನು ನೀಡಿದರು. ಆದಾದ ಬಳಿಕ ಕುಲಪತಿಯಾಗಿದ್ದ ವಿನಯ ಹೆಗ್ಡೆ 2 ಲಕ್ಷ ರೂಪಾಯಿಯನ್ನು ನೀಡಿದ್ದಾರೆ, ಇದರಿಂದ ಬರುವ ಬಡ್ಡಿ ಹಣವನ್ನು ಪ್ರತಿಭಾವಂತ ಮತ್ತು ಆರ್ಥಿಕ ಸಂಕಷ್ಟದಲ್ಲಿ ಇರುವ ವಿದ್ಯಾರ್ಥಿಗಳಿಗೆ ಶಿಷ್ಯವೇತನವನ್ನು ನೀಡಬೇಕೆಂದು ನಿರ್ಧರಿಸಲಾಯಿತು. ಇದರಿಂದ ಪ್ರೇರಿತರಾಗಿ ಮುಂದೆ ಹಲವು ಮಂದಿ ಸಹೃದಯಿ ದಾನಿಗಳು ಸ್ವಯಂ ಇಚ್ಚೆಯಿಂದ ಉತ್ತಮ ಮೊತ್ತವನ್ನು ನೀಡುತ್ತಾ ಬಂದಿದ್ದಾರೆ. ಅದರಂತೆ ಪ್ರತಿ ವರ್ಷ ‘ಶೀಂಟೂರು ಸ್ಮೃತಿ’ ಕಾರ್ಯಕ್ರಮದಲ್ಲಿ ನಮ್ಮ ಸಂಸ್ಥೆಯ ವಿವಿಧ ತರಗತಿಗಳ ಹತ್ತು ಮಂದಿ ಅರ್ಹ ವಿದ್ಯಾರ್ಥಿಗಳನ್ನು ಗುರುತಿಸಿ ಶಿಷ್ಯವೇತನ ನೀಡಲಾಗುತ್ತದೆ. ಪ್ರತಿ ವರ್ಷ ಅವರ ನೆನಪಿನಲ್ಲಿ ಆಚರಿಸಿಕೊಂಡು ಬರುತ್ತಿರುವ ಶೀಂಟೂರು ಸ್ಮೃತಿ ಕಾರ್ಯಕ್ರಮದಲ್ಲಿ ಒಂದು ವರ್ಷ ಒಬ್ಬ ಸೇನಾನಿ ಮತ್ತು ಇನ್ನೊಂದು ವರ್ಷದಲ್ಲಿ ಶಿಕ್ಷಕರನ್ನು ಗುರುತಿಸಿ ಅವರನ್ನು ಸನ್ಮಾನಿಸಲಾಗುತ್ತದೆ. ಆ.14 ರಂದು 10 ಗಂಟೆಗೆ ‘ಶೀಂಟೂರು ಸ್ಮೃತಿ” ಕಾರ್‍ಯಕ್ರಮದ ಉದ್ಘಾಟನೆಯನ್ನು ಪುತ್ತೂರು ಕ್ಷೇತ್ರ ಶಿಕ್ಷಣಾಧಿಕಾರಿ ಲೋಕೇಶ್ ಎಸ್ ಆರ್ ನೆರವೇರಿಸಲಿದ್ದಾರೆ. ವಿದ್ಯಾರಶ್ಮಿ ಸಮೂಹ ಶಿಕ್ಷಣ ಸಂಸ್ಥೆಗಳ ಆಡಳಿತಾಧಿಕಾರಿ ಆಶ್ವಿನ್ ಎಲ್ ಶೆಟ್ಟಿ ಅಧ್ಯಕ್ಷತೆ ವಹಿಸಲಿದ್ದಾರೆ. ಶೀಂಟೂರು ಸನ್ಮಾನ ಪುರಸ್ಕೃತರಾದ ನಿವೃತ್ತ ಕರ್ನಲ್ ರಾಜೇಶ್ ಹೊಳ್ಳ ಎಸ್ ಎಮ್ ಇವರನ್ನು ಜಿ ಎಲ್ ಆಚಾರ್ಯ ಜುವೆಲ್ಲರ್ಸ್ ಸಂಸ್ಥೆಯ ಮೇನೇಜಿಂಗ್ ಡೈರೆಕ್ಟರ್ ಬಲರಾಮ ಆಚಾರ್ಯರವರು ಸನ್ಮಾನಿಸಲಿದ್ದಾರೆ.
ಸಿಂಡಿಕೇಟ್ ಬ್ಯಾಂಕಿನ ನಿವೃತ್ತ ಮೇನೇಜರ್ ಸೂಂತೋಡು ಹೂವಯ್ಯರವರು ಶೀಂಟೂರು ಸಂಸ್ಕರಣೆ ಉಪನ್ಯಾಸ ಮಾಡಲಿದ್ದಾರೆ. ಎನ್ ಸುಂದರ ರೈ ಟ್ರಸ್ಟಿ ಎಸ್ ಎನ್ ಆರ್ ರೂರಲ್ ಎಜುಕೇಶನ್ ಟ್ರಸ್ಟ್ ಇವರು ಅತಿಥಿಯಾಗಿ ಭಾಗವಹಿಸಲಿದ್ದಾರೆ ಎಂದು ಸವಣೂರು ಕೆ. ಸೀತಾರಾಮ ರೈ ಅವರು ತಿಳಿಸಿದರು. ಪತ್ರಿಕಾಗೋಷ್ಠಿಯಲ್ಲಿ ವಿದ್ಯಾರಶ್ಮಿ ಸಮೂಹ ಶಿಕ್ಷಣ ಸಂಸ್ಥೆಗಳ ಆಡಳಿತಾಧಿಕಾರಿ ಆಶ್ವಿನ್ ಎಲ್ ಶೆಟ್ಟಿ, ಟ್ರಸ್ಟಿಗಳಾದ ಎನ್.ಸುಂದರ ರೈ ಸವಣೂರು, ರಶ್ಮಿ ಆಶ್ವಿನ್ ಶೆಟ್ಟಿ ಹಾಗೂ ವಿದ್ಯಾರಶ್ಮಿ ವಿದ್ಯಾಲಯದ ಪ್ರಾಂಶುಪಾಲೆ ಶಶಿಕಲಾ ಎಸ್ ಆಳ್ವ ಉಪಸ್ಥಿತರಿದ್ದರು.