ಆರೋಪಿಯನ್ನು ವಶಕ್ಕೆ ಪಡೆದ ಪೊಲೀಸರು ; ಅಸ್ವಸ್ಥ ಲೋಕಯ್ಯ ಗೌಡ ಆಸ್ಪತ್ರೆಗೆ ದಾಖಲು
ಪುತ್ತೂರು: ಕೆದಿಲ ಗ್ರಾಮದ ಕಾಂತುಕೋಡಿ ತೋಡಿನಲ್ಲಿ ಮಹಿಳೆಯ ಮೃತದೇಹ ಪತ್ತೆಯಾದ ದಿನದಿಂದ ನಾಪತ್ತೆಯಾಗಿದ್ದ, ಆಕೆಯ ಕೊಲೆ ಪ್ರಕರಣದ ಆರೋಪಿಯಾಗಿರುವ ಬಾವ ಆ.10ರಂದು ಬೆಳಗ್ಗೆ ಮನೆಯಂಗಳದಲ್ಲಿ ದಿಢೀರ್ ಪ್ರತ್ಯಕ್ಷಗೊಂಡಿದ್ದು ಪೊಲೀಸರು ಆರೋಪಿಯನ್ನು ವಶಕ್ಕೆ ಪಡೆದುಕೊಂಡು ಕರೆದೊಯ್ದ ಘಟನೆ ನಡೆದಿದೆ.
ಕೆದಿಲ ಗ್ರಾಮದ ವಳಕುಮೇರಿ ನಿವಾಸಿ ಗಣಪತಿ ಯಾನೆ ರಾಮಣ್ಣ ಗೌಡ ಅವರ ಪತ್ನಿ ಮಮತಾ ಅವರ ಮೃತದೇಹ ಆ.6ರಂದು ಕೆದಿಲ ಗ್ರಾಮದ ಕಾಂತುಕೋಡಿ ಎಂಬಲ್ಲಿ ಮಳೆ ನೀರು ಹರಿಯುವ ತೋಡಿನಲ್ಲಿ ಪತ್ತೆಯಾಗಿತ್ತು. ಇದೊಂದು ಕೊಲೆ ಪ್ರಕರಣವೆಂಬ ಶಂಕೆ ಮೂಡಿತ್ತು. ಮಮತಾ ಅವರ ಮೃತದೇಹ ಪತ್ತೆಯಾದ ದಿನವೇ ರಾಮಣ್ಣ ಗೌಡ ಅವರ ಅಣ್ಣ ಸುಂದರ ಯಾನೆ ಲೋಕಯ್ಯ ಗೌಡ ನಾಪತ್ತೆಯಾಗಿದ್ದರು. ತನ್ನ ಪತ್ನಿ ಮಮತಾಳನ್ನು ಸಹೋದರ ಲೋಕಯ್ಯ ಯಾನೆ ಸುಂದರ ಕೊಲೆ ಮಾಡಿರುವುದಾಗಿ ಆರೋಪಿಸಿ ಮಮತಾ ಅವರ ಪತಿ ಗಣಪತಿ ಯಾನೆ ರಾಮಣ್ಣ ಗೌಡ ಅವರು ಪೊಲೀಸರಿಗೆ ದೂರು ನೀಡಿದ್ದರು. ಪೊಲೀಸರು ಪ್ರಕರಣ ದಾಖಲಿಸಿಕೊಂಡು, ನಾಪತ್ತೆಯಾಗಿದ್ದ ಆರೋಪಿಗಾಗಿ ಹುಡುಕಾಟ ಆರಂಭಿಸಿದ್ದರು.
ಕೊಟ್ಟಿಗೆಯಲ್ಲಿ ನಸುಕಿನ ಜಾವ ಶಬ್ದ
ಮನೆಯ ಕೊಟ್ಟಿಗೆಯಲ್ಲಿ ನಸುಕಿನ ಜಾವ ಶಬ್ದ ಕೇಳಿದ್ದು ಮನೆ ಮಂದಿ ಅಲ್ಲಿಗೆ ಹೋಗಲು ಭಯಪಟ್ಟು ಬೆಳಗ್ಗೆ ಮನೆಗೆ ಸಂಬಂಧಿಕರು ಬಂದ ಬಳಿಕ ಕೊಟ್ಟಿಗೆ ಬಳಿ ಹೋಗಿ ನೋಡುವಾಗ ಲೋಕಯ್ಯ ಗೌಡ ಅಲ್ಲಿ ಇರುವುದು ಕಂಡು ಬಂದಿದೆ. ತಕ್ಷಣ ಆತನನ್ನು ಹಿಡಿದುಕೊಂಡು ಮನೆಯೊಳಗೆ ಕರೆದೊಯ್ಯಲಾಯಿತು. ಮೈಯಲ್ಲಿ ಉಡುಪಿಲ್ಲದೆ ಕೇವಲ ಚಡ್ಡಿಯಲ್ಲಿ ಬಂದಿದ್ದ ಆತನನ್ನು ನೋಡಿ ಮನೆ ಮಂದಿ ಹಿಡಿದಿಟ್ಟುಕೊಂಡು ಮಮತಾ ಅವರ ಕೊಲೆ ಕುರಿತು ವಿಚಾರಿಸಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಆಗಮಿಸಿದ ಪೊಲೀಸರು ಆರೋಪಿಯನ್ನು ವಶಕ್ಕೆ ಪಡೆದುಕೊಂಡಿದ್ದಾರೆ.ಆ.6ರಿಂದ ನಾಪತ್ತೆಯಾಗಿದ್ದ ಸುಂದರ ಯಾನೆ ಲೋಕಯ್ಯ ಗೌಡ ಮೂರು ದಿನ ಕಾಡಿನಲ್ಲೇ ಸುತ್ತಾಡಿ, ತಿನ್ನಲು ಏನೂ ಸಿಗದೆ ಹಸಿವಿನಿಂದ ಮನೆಗೆ ಬಂದಿದ್ದು ಹಸಿವಿನಿಂದ ಅಸ್ವಸ್ಥಗೊಂಡಿದ್ದ ಹಿನ್ನೆಲೆಯಲ್ಲಿ ಆಸ್ಪತ್ರೆಗೆ ಸೇರಿಸಲಾಗಿದೆ.
ಆರಂಭದಲ್ಲಿ ಯುಡಿಆರ್ ಪ್ರಕರಣ
ಪತ್ನಿ ಮಮತಾ ಮನೆಯಿಂದ ಬಟ್ಟೆ ತೊಳೆಯಲು ಹೋದಾಕೆ ಮರಣ ಹೊಂದಿದ್ದು ಆಕೆಯ ಮರಣದ ಬಗ್ಗೆ ಅಣ್ಣ ಲೋಕಯ್ಯ ಯಾನೆ ಸುಂದರ ಎಂಬಾತನ ಮೇಲೆ ಸಂಶಯ ಇರುವುದಾಗಿ ಗಣಪತಿ ಯಾನೆ ರಾಮಣ್ಣ ಗೌಡರು ಆರಂಭದಲ್ಲಿ ಪೊಲೀಸರಿಗೆ ದೂರು ನೀಡಿದ್ದರು.ಈ ದೂರಿನ ಆಧಾರದಲ್ಲಿ ಪೊಲೀಸರು ಕಲಂ 194 (3)(q) DWÉR 2023(q) DWÉR 2023ರಂತೆ ಯುಡಿಆರ್(ನಂ24/2025) ಪ್ರಕರಣ ದಾಖಲಿಸಿಕೊಂಡಿದ್ದರು.
ಮಮತಾರವರು ತೋಡಿನ ಬಳಿ ತಲೆ ತಿರುಗಿ ಬಿದ್ದಿದ್ದಾಗಿ ಹೇಳಿದ್ದ ಆರೋಪಿ
ಆ.6ರಂದು ಬೆಳಿಗ್ಗೆ 10 ಗಂಟೆಗೆ ಗಣಪತಿ ಯಾನೆ ರಾಮಣ್ಣ ಗೌಡರ ಚಿಕ್ಕಪ್ಪ ಕಾಂತಪ್ಪ ಎಂಬವವರಿಗೆ ಕರೆ ಮಾಡಿದ್ದ ಆರೋಪಿ ಲೋಕಯ್ಯ ಯಾನೆ ಸುಂದರ, ತಮ್ಮನ ಪತ್ನಿ ಮಮತಾರವರು ಮನೆಯ ಸಮೀಪದ ಹರಿಯುವ ನೀರಿನ ತೋಡಿನ ಬಳಿ ತಲೆ ತಿರುಗಿ ಬಿದ್ದಿರುವುದಾಗಿ ತಿಳಿಸಿದ್ದನ್ನು ಕಾಂತಪ್ಪ ಅವರು ಗಣಪತಿ ಯಾನೆ ರಾಮಣ್ಣ ಗೌಡರಿಗೆ ತಿಳಿಸಿದ್ದರು. ಪತ್ನಿ ಮಮತಾಳನ್ನು ಕೊಲೆ ಮಾಡುವ ಉದ್ದೇಶದಿಂದ ಸಹೋದರ ಲೋಕಯ್ಯ ಯಾನೆ ಸುಂದರ, ಕೈಯಿಂದ ಮುಖಕ್ಕೆ ಹೊಡೆದು ಆಕೆ ಪ್ರಜ್ಞೆ ತಪ್ಪಿದ ನಂತರ ಹರಿಯುವ ನೀರಿಗೆ ದೂಡಿ ಹಾಕಿರುವುದರಿಂದ ಮಮತಾ ರವರು ಮೃತಪಟ್ಟಿರುವುದಾಗಿದೆ. ಆರೋಪಿ ಲೋಕಯ್ಯ ಯಾನೆ ಸುಂದರನಿಗೆ ಎರಡನೇ ಮದುವೆಯಾಗಿ ಅವರ ದಾಂಪತ್ಯ ಜೀವನದಲ್ಲಿ ಬಿರುಕು ಉಂಟಾಗಿ ವಿವಾಹ ವಿಚ್ಚೇದನೆಯ ಬಗ್ಗೆ ಕೇಸು ದಾಖಲಿಸಿ ವಿಚ್ಛೇದನದ ಪರಿಹಾರ ಹಣವಾಗಿ ರೂ.3 ಲಕ್ಷ ಹಣವನ್ನು ತಾನು ಮತ್ತು ಅಣ್ಣ ಗಣೇಶ ಸೇರಿ ಆರೋಪಿ ಅಣ್ಣ ಲೋಕಯ್ಯ ಯಾನೆ ಸುಂದರನ ಪತ್ನಿಗೆ ನೀಡಲು ನಿರ್ಧರಿಸಿದ್ದು ಇದಕ್ಕೆ ನನ್ನ ಪತ್ನಿ ಮಮತಾ ಆಕ್ಷೇಪ ವ್ಯಕ್ತಪಡಿಸಿರುವುದರಿಂದ ಆಕೆಯ ಮೇಲೆ ಕೋಪಗೊಂಡು ಆರೋಪಿಯು ಮಮತಾಳ ಮುಖಕ್ಕೆ ಕೈಯಿಂದ ಹೊಡೆದು ಆಕೆ ಪ್ರe ತಪ್ಪಿದ ನಂತರ ಹರಿಯುವ ನೀರಿಗೆ ದೂಡಿ ಹಾಕಿ ಕೊಲೆ ಮಾಡಿ,ಚಿಕ್ಕಪ್ಪ ಕಾಂತಪ್ಪರವರಿಗೆ ಫೋನ್ ಮಾಡಿ, ಮಮತಾರವರು ಪ್ರಜ್ಞೆ ತಪ್ಪಿ ಬಿದ್ದಿರುವುದಾಗಿ ತಿಳಿಸಿ ನಂತರ ಮೊಬೈಲ್ ಸ್ವಿಚ್ ಆಫ್ ಮಾಡಿ ಪರಾರಿಯಾಗಿದ್ದಾನೆ’ ಎಂದು ಆರೋಪಿಸಿ ಮಮತಾರವರ ಪತಿ ಗಣಪತಿ ಯಾನೆ ರಾಮಣ್ಣ ಗೌಡರು ಎರಡನೇ ಬಾರಿ ನೀಡಿದ್ದ ದೂರಿನಲ್ಲಿ ತಿಳಿಸಿದ್ದರು.
ಈ ದೂರಿನ ಆಧಾರದಲ್ಲಿ ಪುತ್ತೂರು ನಗರ ಪೊಲೀಸ್ ಠಾಣೆಯಲ್ಲಿ ಕಲಂ 115(2),103(1)ಬಿಎನ್ಎಸ್2023ಯಂತೆ ಪ್ರಕರಣ(ಅ.ಕ್ರ.69/2025)ದಾಖಲಾಗಿದೆ.
ಆಸ್ಪತ್ರೆಯಿಂದ ಬಿಡುಗಡೆ ಬಳಿಕ ವಿಚಾರಣೆ
ಸುಂದರ ಯಾನೆ ಲೋಕಯ್ಯ ಗೌಡ ತೀರಾ ಅಸ್ವಸ್ಥಗೊಂಡ ಹಿನ್ನೆಲೆಯಲ್ಲಿ ಆರೋಗ್ಯ ಸುಧಾರಿಸಿಕೊಳ್ಳಲೆಂದು ಪುತ್ತೂರು ಸರಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಆಸ್ಪತ್ರೆಯಲ್ಲಿ ಆತನ ಕೊಠಡಿಗೆ ಪೊಲೀಸ್ ಪಹರೆ ಹಾಕಲಾಗಿದೆ.ಆರೋಪಿಯ ಆರೋಗ್ಯ ಸುಧಾರಿಸಿ ಆಸ್ಪತ್ರೆಯಿಂದ ಬಿಡುಗಡೆಯಾದ ಬಳಿಕ ಆತನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುವುದು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.