ಅಧರ್ಮಿಗಳ ಸಹವಾಸದಿಂದ ತೊಂದರೆ ತಪ್ಪಿದ್ದಲ್ಲ: ಮನೋಹರ ಅರುವರಗುತ್ತು
ಪುತ್ತೂರು: ಧರ್ಮ ಎಂದರೆ ನಮ್ಮ ಜೀವನ ಪದ್ಧತಿಯೇ ಆಗಿದೆ. ಯಾರಿಗೂ ತೊಂದರೆ ಕೊಡದೆ ಸರಿಯಾದ ರೀತಿಯಲ್ಲಿ ಜೀವನ ನಡೆಸುವುದೇ ಧರ್ಮದಿಂದ ನಡೆದುಕೊಳ್ಳುವುದು ಆಗಿದೆ. ಇನ್ನೊಬ್ಬರಿಗೆ ಕೆಟ್ಟದ್ದನ್ನು ಬಯಸುವುದು ಅಧರ್ಮ ಆದ್ದರಿಂದ ಯಾರಿಗೂ ತೊಂದರೆ ಕೊಡದೆ ಜೀವನ ನಡೆಸಿದರೆ ನಮಗೂ ಯಾರಿಂದಲೂ ತೊಂದರೆಯಾಗಲು ಸಾಧ್ಯವಿಲ್ಲ ಹಾಗಂತ ಅಧರ್ಮಿಯರ ಸಹವಾಸ ಮಾಡುವುದರಿಂದ ನಮಗೆ ತೊಂದರೆ ತಪ್ಪಿದ್ದಲ್ಲ ಇದನ್ನು ನಾವು ಗಮನದಲ್ಲಿಟ್ಟುಕೊಳ್ಳಬೇಕು ಎಂದು ವಕೀಲರಾದ ಮನೋಹರ ಎ.ಅರುವರಗುತ್ತುರವರು ಹೇಳಿದರು.
ಅವರು ಕುಂಬ್ರ ಶ್ರೀ ರಾಮ ಭಜನಾ ಮಂದಿರದ 44 ನೇ ಸಾರ್ವಜನಿಕ ಶ್ರೀ ಗಣೇಶೋತ್ಸವದ ಮೂರನೇ ದಿನವಾದ ಆ.29 ರಂದು ನಡೆದ ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ‘ಮೂಲ ನಂಬಿಕೆ ಮತ್ತು ಧರ್ಮ ಜಾಗೃತಿ’ಎಂಬ ವಿಷಯದಲ್ಲಿ ಉಪನ್ಯಾಸ ನೀಡಿದರು.
ಕಾರ್ಯಕ್ರಮವನ್ನು ಪಾಪೆಮಜಲು ಸರಕಾರಿ ಹಿ.ಪ್ರಾ.ಶಾಲಾ ಮುಖ್ಯಗುರು ಶಶಿಕಲಾ ಎಂ.ಕುಂಬ್ರರವರು ದೀಪ ಬೆಳಗಿಸಿ ಉದ್ಘಾಟಿಸಿ, ಕುಂಬ್ರ ಇದೊಂದು ಪುಣ್ಯದ ಮಣ್ಣಾಗಿದೆ. ಇಂತಹ ಪುಣ್ಯದ ಮಣ್ಣಿನಿಂದಲೇ ನನ್ನ ಸರಕಾರಿ ಉದ್ಯೋಗ ಆರಂಭವಾಗಿದೆ. ಇಲ್ಲಿ ನಡೆಯುವ ಎಲ್ಲಾ ಕಾರ್ಯಕ್ರಮಗಳು ಸಮಾಜಕ್ಕೆ ಮಾದರಿ ಕಾರ್ಯಕ್ರಮಗಳಾಗಿವೆ ಎಂದು ಹೇಳಿ ಶುಭ ಹಾರೈಸಿದರು. ಸಭಾಧ್ಯಕ್ಷತೆ ವಹಿಸಿದ್ದ ಕುರಿಯ ಉಳ್ಳಾಲ ಶ್ರೀ ಮಹಾವಿಷ್ಣು ದೇವಸ್ಥಾನದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಜಯರಾಮ ರೈ ಅಡೈತ್ತಿಮಾರ್ರವರು ಮಾತನಾಡಿ, ಮುಂದಿನ ಗಣೇಶೋತ್ಸವಕ್ಕೆ ಇಲ್ಲೊಂದು ಭವ್ಯವಾದ ಶ್ರೀರಾಮ ಮಂದಿರದ ನಿರ್ಮಾಣವಾಗಲಿ ಈ ಕಾರ್ಯಕ್ಕೆ ಮಹಾಗಣೇಶನ ಸಂಪೂರ್ಣ ಅನುಗ್ರಹ ಪ್ರಾಪ್ತಿಯಾಗಲಿ ಎಂದು ಹೇಳಿ ಶುಭ ಹಾರೈಸಿದರು.ಪಡುಮಲೆ ಶ್ರೀ ಕೂವೆಶಾಸ್ತಾರ ವಿಷ್ಣುಮೂರ್ತಿ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಸತೀಶ್ ರೈ ಕಟ್ಟಾವು ಮಾತನಾಡಿ, ತುಳುನಾಡು ಸತ್ಯಧರ್ಮಗಳ ನೆಲೆವೀಡು ಇಂತಹ ಪುಣ್ಯ ಮಣ್ಣಲ್ಲಿ ಹುಟ್ಟಿದ ನಾವೆಲ್ಲರೂ ಧನ್ಯರು ಎಂದು ಹೇಳಿದರು. ಶ್ರೀರಾಮ ಭಜನಾ ಮಂದಿರದ ಮಾಜಿ ಅಧ್ಯಕ್ಷ ಕುಂಬ್ರ ದುರ್ಗಾಪ್ರಸಾದ್ ರೈ ಸಂದರ್ಭೋಚಿತವಾಗಿ ಮಾತನಾಡಿ ಶುಭ ಹಾರೈಸಿದರು.
ವೇದಿಕೆಯಲ್ಲಿ ಶ್ರೀರಾಮ ಭಜನಾ ಮಂದಿರದ ಮಾಜಿ ಅಧ್ಯಕ್ಷ ಪದ್ಮನಾಭ ರೈ ಅರೆಪ್ಪಾಡಿ, ಅಧ್ಯಕ್ಷ ಮೋನಪ್ಪ ಪೂಜಾರಿ ಬಡೆಕ್ಕೋಡಿ, ಶ್ರೀ ಗಣೇಶೋತ್ಸವ ಸಮಿತಿ ಸಂಚಾಲಕ ರಾಜೇಶ್ ರೈ ಪರ್ಪುಂಜ ಉಪಸ್ಥಿತರಿದ್ದರು. ಸಮಿತಿಯ ಉಪಾಧ್ಯಕ್ಷ ದಿನೇಶ್ ಗೌಡ ಪಂಜಿಗುಡ್ಡೆ ಪ್ರಾರ್ಥಿಸಿದರು. ಉಪಾಧ್ಯಕ್ಷ ರತನ್ ರೈ ಕುಂಬ್ರ ಪ್ರಾಸ್ತಾವಿಕ ಮಾತುಗಳೊಂದಿಗೆ ಸ್ವಾಗತಿಸಿದರು. ಉಷಾ ನಾರಾಯಣ್, ರಾಜ್ಮೋಹನ್ ರೈ,ನೇಮಿರಾಜ್ ರೈ, ನಾರಾಯಣ ಪೂಜಾರಿ ಕುರಿಕ್ಕಾರ, ಆದರ್ಶ ರೈ, ಬಾಲಕೃಷ್ಣ ರೈರವರುಗಳು ಅತಿಥಿಗಳಿಗೆ ಶಾಲು ಹಾಕಿ ಸ್ವಾಗತಿಸಿದರು. ಪ್ರಧಾನ ಕಾರ್ಯದರ್ಶಿ ಹರೀಶ್ ರೈ ಮುಗೇರು ವಂದಿಸಿದರು.ದೇವಿಪ್ರಸಾದ್ ರೈ ಕಾರ್ಯಕ್ರಮ ನಿರೂಪಿಸಿದರು. ಬೆಳಿಗ್ಗೆ ಗಣಪತಿ ಹೋಮ ನಡೆಯಿತು. ಸಾಂಸ್ಕೃತಿಕ ಕಾರ್ಯಕ್ರಮದಂಗವಾಗಿ ನಾಟ್ಯರಂಗ ಕಲಾ ಕೇಂದ್ರ ಪೆರ್ಲಂಪಾಡಿ ಪ್ರಸ್ತುತ ಪಡಿಸುವ ನೃತ್ಯ ನಿನಾದ ಮನರಂಜಿಸಿತು. ಮಧ್ಯಾಹ್ನ ಮಹಾಪೂಜೆ, ಪ್ರಸಾದ ವಿತರಣೆ ಬಳಿಕ ಸಾರ್ವಜನಿಕ ಅನ್ನಸಂತರ್ಪಣೆ ನಡೆಯಿತು. ಅಪರಾಹ್ನ ಬೃಂದಾವನ ನಾಟ್ಯಾಲಯ ಕುಂಬ್ರ ಬಗಳದವರಿಂದ ಕಾರ್ಯಕ್ರಮ ವೈವಿಧ್ಯ ನಡೆಯಿತು.
ಗಣ್ಯರಿಂದ ಶ್ರೀ ಗಣೇಶನ ದರ್ಶನ
ವಿಶೇಷವಾಗಿ ಮಾಜಿ ಶಾಸಕ ಸಂಜೀವ ಮಠಂದೂರು, ಬಿಜೆಪಿ ಗ್ರಾಮಾಂತರ ಮಂಡಲ ಅಧ್ಯಕ್ಷ ದಯಾನಂದ ಶೆಟ್ಟಿ ಉಜಿರುಮಾರು, ಪುತ್ತೂರು ವಿಜಯ ಸಾಮ್ರಾಟ್ ಸಂಘಟನೆಯ ಸಂಸ್ಥಾಪಕ ಸಹಜ್ ರೈ ಬಳಜ್ಜ, ಮುಂಡೂರು ವ್ಯವಸಾಯ ಸೇವಾ ಸಹಕಾರಿ ಸಂಘದ ಅಧ್ಯಕ್ಷ ಸುರೇಶ್ ಕುಮಾರ್ ಸೊರಕೆ, ಒಳಮೊಗ್ರು ಗ್ರಾಮ ಪಂಚಾಯತ್ ಅಧ್ಯಕ್ಷೆ ತ್ರಿವೇಣಿ ಪಲ್ಲತ್ತಾರು, ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಹಸ್ತಾ ಶೆಟ್ಟಿ ಮುಡಾಲ ಸಹಿತ ಹಲವು ಗಣ್ಯರು ಆಗಮಿಸಿ ಶ್ರೀ ಗಣೇಶನ ದರ್ಶನ ಪಡೆದರು. ಸಮಿತಿ ವತಿಯಿಂದ ಗಣ್ಯರಿಗೆ ಪ್ರಸಾದ ನೀಡಿ ಸತ್ಕರಿಸಲಾಯಿತು.