ಪ್ರತೀಯೊಬ್ಬ ಪ್ರತಿಭಾವಂತರೂ ಪುತ್ತೂರಿನ ಆಸ್ತಿಯಾಗಿದ್ದಾರೆ; ಶಾಸಕ ಅಶೋಕ್ ರೈ
ಪುತ್ತೂರು: ಯಾರಲ್ಲಿ ಯಾವ ಪ್ರತಿಭೆ ಇದೆ ಎಂದು ಯಾರಿಗೂ ಹೇಳಲು ಸಾಧ್ಯವಿಲ್ಲ, ಪ್ರತೀಯೊಬ್ಬರಲ್ಲೂ ಒಂದೊಂದು ಪ್ರತಿಭೆಗಳಿದ್ದು ಅದಕ್ಕೆ ಪ್ರೋತ್ಸಾಹ ನೀಡುವ ಮೂಲಕ ಅದನ್ನು ಬೆಳೆಸುವ ಜವಾಬ್ದಾರಿ ಪೋಷಕರು ಹಾಗೂ ನಮ್ಮೆಲ್ಲರ ಮೇಲಿದೆ ಎಂದು ಪುತ್ತೂರು ಶಾಸಕ ಅಶೋಕ್ ರೈ ಹೇಳಿದರು.
ಅವರು ತಮ್ಮ ಕಚೇರಿಯಲ್ಲಿ ಸಿ ಎ ಪರೀಕ್ಷೆಯಲ್ಲಿ ಉತ್ತೀರ್ಣರಾದ ಪುತ್ತೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಪ್ರತಿಭಾನ್ವಿತ ವಿದ್ಯಾರ್ಥಿಗಳನ್ನು ಸನ್ಮಾನಿಸಿ ಮಾತನಾಡಿದರು.
ಪುತ್ತೂರಿನಲ್ಲಿ ಎಸ್‌ಎಸ್‌ಎಲ್‌ಸಿ, ಪಿಯುಸಿ ಪರೀಕ್ಷೆಯಲ್ಲಿ ಅತ್ಯುತ್ತಮ ಅಂಕ ಪಡೆದ ವಿದ್ಯಾರ್ಥಿಗಳು ನಮ್ಮಲ್ಲಿದ್ದಾರೆ, ಇದೀಗ ಸಿ ಎ ಅತ್ಯಂತ ಕಠಿಣ ಪರೀಕ್ಷೆಯಲ್ಲೂ ಉತ್ತೀರ್ಣರಾಗುವ ಮೂಲಕ ಪುತ್ತೂರಿನ ಕೀರ್ತಿಯನ್ನು ಹೆಚ್ಚಿಸಿದ್ದಾರೆ ಇವರೆಲ್ಲಾ ಪುತ್ತೂರಿನ ಆಸ್ತಿಯಾಗಿದ್ದಾರೆ ಎಂದು ಹೇಳಿದರು. ಕಠಿಣ ಪರಿಶ್ರಮ ಇದ್ದಲ್ಲಿ ಏನನ್ನು ಬೇಕಾದರೂ ಸಾಧಿಸಬಹುದು ಎಂಬುದಕ್ಕೆ ಸಿ ಎ ಪರೀಕ್ಷೆಯಲ್ಲಿ ಉತ್ತೀರ್ಣರಾದ ವಿದ್ಯಾರ್ಥಿಗಳೇ ಸಾಕ್ಷಿಯಾಗಿದ್ದಾರೆ ಎಂದು ಹೇಳಿದರು.
ಅತ್ಯಂತ ಸಂತಸದ ದಿನ
ಇವತ್ತು ನನಗೆ ಅತ್ಯಂತ ಸಂತಸದ ದಿನವಾಗಿದೆ. ನನ್ನ ಕ್ಷೇತ್ರದ 5 ಮಂದಿ ವಿದ್ಯಾರ್ಥಿಗಳು ಸಿ ಎ ಪರೀಕ್ಷೆಯಲ್ಲಿ ಉತ್ತೀರ್ಣರಾಗಿದ್ದು ನಮಗೆ ಹೆಮ್ಮೆ ತಂದಿದ್ದು ಈ ದಿನವನ್ನು ನಾವೆಲ್ಲರೂ ಸಂಭ್ರಮಿಸುವಂತಾಗಬೇಕು ಎಂದು ಹೇಳಿದರು. ಪ್ರತಿಭಾವಂತ ವಿದ್ಯಾರ್ಥಿಗಳನ್ನು ಗೌರವಿಸಿ ಸನ್ಮಾನಿಸುವುದು ನಮ್ಮ ಕರ್ತವ್ಯ ಎಂದು ನಾನು ನಂಬಿದ್ದೇನೆ. ಶಾಸಕನಾದವರು ಕೇವಲ ರಸ್ತೆ, ಚರಂಡಿ, ಇನ್ನಿತರ ಅಭಿವೃದ್ದಿ ಕೆಲಸವನ್ನು ಮಾತ್ರ ಮಾಡುವುದಲ್ಲ ಕ್ಷೇತ್ರದಲ್ಲಿ ಸಾಧನೆ ಮಾಡಿದವರನ್ನು ಗೌರವಿಸಬೇಕಾಗಿದೆ ಎಂದು ಶಾಸಕರು ಹೇಳಿದರು.
ವಿದ್ಯಾರ್ಥಿಗಳಾದ ಅಂಕಿತ್ ಎನ್ ಕೆ, ಕುರಿಯ, ಮಹಮ್ಮದ್ ಇಯಾಝ್, ನಿಶ್ಚಲ್ ರೈಗೆ ಸನ್ಮಾನ ಮಾಡಲಾಯಿತು. ಪ್ರತೀಯೊಬ್ಬ ತಂದೆ ತಾಯಿಯೂ ತಮ್ಮ ಮಕ್ಕಳು ವಿದ್ಯಾವಂತರಾಗಬೇಕು ಎಂಬ ಕನಸು ಹೊಂದಿರುತ್ತಾರೆ ಎಂದು ಹೇಳಿದ ಶಾಸಕರು, ಮಕ್ಕಳು ದಾರಿತಪ್ಪದಂತೆ ತಡೆಯುವ ನಿಟ್ಟಿನಲ್ಲಿ ಪೋಷಕರ ಜವಾಬ್ದಾರಿಯೂ ಇದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಪುತ್ತೂರು ತಾಲೂಕು ಗ್ಯಾರಂಟಿ ಸಮಿತಿ ಅಧ್ಯಕ್ಷ ಉಮಾನಾಥ ಶೆಟ್ಟಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೃಷ್ಣಪ್ರಸಾದ್ ಆಳ್ವ, ಕೋಡಿಂಬಾಡಿ ಗ್ರಾಪಂ ಉಪಾಧ್ಯಕ್ಷ ಜಯಪ್ರಕಾಶ್ ಬದಿನಾರ್, ಪುಡಾ ಸದಸ್ಯರದ ನಿಹಾಲ್ ಪಿ ಶೆಟ್ಟಿ, ಜಿಲ್ಲಾ ಕಾಂಗ್ರೆಸ್ ಕಾರ್ಯದರ್ಶಿ ಮುರಳೀಧರ್ ರೈ ಮಠಂತಬೆಟ್ಟು ಉಪಸ್ಥಿತರಿದ್ದರು. ಅಕ್ರಮ ಸಕ್ರಮ ಸಮಿತಿ ಸದಸ್ಯರಾದ ರಾಮಣ್ಣ ಪಿಲಿಂಜ ಸ್ವಾಗತಿಸಿದರು. ಟ್ರಸ್ಟ್ ಸದಸ್ಯರಾದ ಯೋಗೀಶ್ ಸಾಮಾನಿ ಕಾರ್ಯಕ್ರಮ ನಿರೂಪಿಸಿದರು. ಶಾಸಕರ ಕಚೇರಿ ಸಿಬಂದಿ ರಚನಾ ಹಾಗೂ ಪ್ರವೀಣ್, ಶಾಸಕರ ಆಪ್ತ ಸಹಾಯಕ ರಂಜಿತ್ ಸುವರ್ಣ ಸಹಕರಿಸಿದರು.