4.30 ಲಕ್ಷ ರೂ.ನಿವ್ವಳ ಲಾಭ | ಶೇ.10 ಡಿವಿಡೆಂಡ್, ಲೀ.ಹಾಲಿಗೆ 42 ಪೈಸೆ ಬೋನಸ್ ಘೋಷಣೆ
ನೆಲ್ಯಾಡಿ: ಕಡಬ ತಾಲೂಕಿನ ನೆಲ್ಯಾಡಿ ಹಾಲು ಉತ್ಪಾದಕರ ಸಹಕಾರಿ ಸಂಘದ 2024-25ನೇ ಸಾಲಿನ ಸರ್ವಸದಸ್ಯರ ವಾರ್ಷಿಕ ಸಾಮಾನ್ಯ ಸಭೆ ಸೆ.18 ರಂದು ಸಂಘದ ಸಭಾಂಗಣದಲ್ಲಿ ನಡೆಯಿತು.

ಸಭೆಯ ಅಧ್ಯಕ್ಷತೆ ವಹಿಸಿದ್ದ ಸಂಘದ ಅಧ್ಯಕ್ಷ ಗುರುಪ್ರಸಾದ್ ಕೆ.ಮಾತನಾಡಿ, ಸಂಘದಲ್ಲಿ ಪ್ರಸ್ತುತ 308 ಸದಸ್ಯರಿದ್ದು 62,100 ಪಾಲು ಬಂಡವಾಳವಿದೆ. ಪ್ರಸ್ತುತ 175 ಸದಸ್ಯರು ಹಾಲು ಪೂರೈಸುತ್ತಿದ್ದು ಸರಾಸರಿ ದಿನಕ್ಕೆ 1475 ಲೀ.ಹಾಲು ಸಂಗ್ರಹವಾಗುತ್ತಿದೆ. ವರದಿ ಸಾಲಿನಲ್ಲಿ 4,13,004.3 ಲೀ.ಹಾಲು ಸಂಗ್ರಹಿಸಿ ಡೈರಿಗೆ 3,86,605.3 ಲೀ.ಹಾಲು ಮಾರಾಟ ಮಾಡಿದ್ದು, ಸ್ಥಳೀಯವಾಗಿ 26,399 ಲೀ.ಹಾಲು ಮಾರಾಟವಾಗಿದೆ. ಒಕ್ಕೂಟದಿಂದ 1469 ಚೀಲ ನಂದಿನಿ ಸಮತೋಲನ ಪಶು ಆಹಾರ ಮತ್ತು ಕರುಗಳ ಪಶು ಆಹಾರ ಖರೀದಿಸಿ 1319 ಚೀಲ ಮಾರಾಟ ಮಾಡಲಾಗಿದೆ. ವರದಿ ಸಾಲಿನಲ್ಲಿ ಹಾಲು, ಪಶು ಆಹಾರ ಹಾಗೂ ಇತರ ಆದಾಯಗಳಿಂದ ಸಂಘವು ರೂ.22,20,791.32 ಲಾಭ ಬಂದಿದ್ದು ಎಲ್ಲಾ ಖರ್ಚು ವೆಚ್ಚಗಳನ್ನು ಕಳೆದು ರೂ. 4,30,337.80 ನಿವ್ವಳ ಲಾಭ ಬಂದಿದೆ. ಲಾಭಾಂಶವನ್ನು ನಿಬಂಧನೆಯಂತೆ ವಿಂಗಡಣೆ ಮಾಡಿದ್ದು ಸದಸ್ಯರಿಗೆ ಶೇ.10 ಡಿವಿಡೆಂಡ್ ಹಾಗೂ ಹಾಲು ಉತ್ಪಾದಕರಿಗೆ ಪ್ರತಿ ಲೀಟರ್ ಹಾಲಿಗೆ 42 ಪೈಸೆ ಬೋನಸ್ ನೀಡಲಾಗುವುದು ಎಂದು ಹೇಳಿದರು.

ಸಂಘದ ಸದಸ್ಯರ ಅನುಕೂಲಕ್ಕಾಗಿ ಹೊಸಮಜಲು ಮತ್ತು ಪಡುಬೆಟ್ಟುವಿನಲ್ಲಿ ಹಾಲು ಖರೀದಿ ಕೇಂದ್ರ ಕಾರ್ಯನಿರ್ವಹಿಸುತ್ತಿದೆ. ಕೌಕ್ರಾಡಿ ಗ್ರಾಮದ ಪರಂತಮೂಲೆ ಮತ್ತು ಕಟ್ಟೆಮಜಲು ಎಂಬಲ್ಲಿ ಒಕ್ಕೂಟದಿಂದ ಉಚಿತವಾಗಿ ನೀಡಿದ ಇ-ಗೂಡ್ಸ್ ವಾಹನದಲ್ಲಿ ಸಂಚಾರಿ ಹಾಲು ಸಂಗ್ರಹ ಮಾಡಲಾಗುತ್ತಿದ್ದು ಹಾಲು ಸಂಗ್ರಹದಲ್ಲಿ ಹೆಚ್ಚಳವಾಗಿದೆ. ಒಕ್ಕೂಟದ ಸಹಕಾರದಿಂದ ರಾಸುಗಳ ಕಾಲುಬಾಯಿ ಜ್ವರ ನಿವಾರಣಾ ಲಸಿಕಾ ಶಿಬಿರ ಮಾಡಲಾಗುತ್ತಿದೆ. ಜಾನುವಾರುಗಳ ಕೃತಕ ಗರ್ಭಧಾರಣಾ ಸೌಲಭ್ಯ, ಜಂತುಹುಳ ನಿವಾರಣೆಗೆ ಮಾತ್ರೆ ಸಹಾಯಧನ ರೂಪದಲ್ಲಿ ಲಭ್ಯವಿದೆ. ಜಾನುವಾರುಗಳ ವಿಮಾ ಯೋಜನೆ, ಹಾಲು ಕರೆಯುವ ಯಂತ್ರ, ಹಸಿರು ಮೇವಿನ ತಾಕಿ, ರಬ್ಬರ್ ಮ್ಯಾಟ್, ಕರುಸಾಕಣೆ ಯೋಜನೆ ಇದ್ದು ಸದಸ್ಯರು ಪ್ರಯೋಜನ ಪಡೆದುಕೊಳ್ಳುವಂತೆ ಅಧ್ಯಕ್ಷ ಗುರುಪ್ರಸಾದ್ ಕೆ. ಹೇಳಿದರು.

2 ಹೊಸ ಯೋಜನೆ;
ಒಕ್ಕೂಟದಿಂದ ನೀಡಿದ ಇ-ಗೂಡ್ಸ್ ವಾಹನ ಸಂಚಾರಿ ಹಾಲು ಸಂಗ್ರಹಕ್ಕೆ ಬಳಕೆಯಾಗುತ್ತಿದೆ. ಮುಂದೆ ದಿನದಲ್ಲಿ ಏರಿಯಾವೊಂದಕ್ಕೆ ಕನಿಷ್ಠ ಬಾಡಿಗೆ ದರದಲ್ಲಿ ಪಶು ಆಹಾರ ಚೀಲವನ್ನು ಸದಸ್ಯರ ಮನೆ ಬಾಗಿಲಿಗೆ ತಲುಪಿಸುವ ಯೋಜನೆ ಹಾಕಿಕೊಂಡಿದ್ದೇವೆ. ಅದೇ ರೀತಿ ಈ ಹಿಂದೆ ನಡೆಸಿದಂತೆ ರಾಸುಗಳಿಗೆ ನುರಿತ ಪಶುವೈದ್ಯರ ಸಹಾಯದಲ್ಲಿ ಸ್ಕ್ಯಾನಿಂಗ್ ಯಂತ್ರದ ಮೂಲಕ ಪರೀಕ್ಷಿಸಿ ಔಷಧ ನೀಡುವ ಯೋಜನೆ ಆರಂಭಿಸಲಿದ್ದೇವೆ. ಇದಕ್ಕೆ ಸದಸ್ಯರು ಸಹಕಾರ ನೀಡಬೇಕು ಎಂದು ಅಧ್ಯಕ್ಷ ಗುರುಪ್ರಸಾದ್ ಕೆ.ಹೇಳಿದ್ದಾರೆ.
ಹಾಲು ಗುಣಮಟ್ಟವಿರಲಿ;
ಹಿರಿಯ ನಿರ್ದೇಶಕ ಡಿ.ಮಹಾಬಲ ಶೆಟ್ಟಿ ಮಾತನಾಡಿ, ಒಕ್ಕೂಟದಿಂದ ಉಚಿತವಾಗಿ ನೀಡಿದ ಇ-ಗೂಡ್ಸ್ ಸಂಚಾರಿ ವಾಹನದ ಮೂಲಕ ಸದಸ್ಯರ ಮನೆ ಬಾಗಿಲಿಗೆ ಬಂದು ಹಾಲು ಸಂಗ್ರಹ ಮಾಡಲಾಗುತ್ತಿದೆ. ಆದರೆ ಈ ಯೋಜನೆ ದುರುಪಯೋಗ ಆಗಬಾರದು. ಕಟ್ಟೆಮಜಲು, ಪಡುಬೆಟ್ಟು ಭಾಗದಲ್ಲಿ ಸಂಗ್ರಹ ಆಗುತ್ತಿರುವ ಹಾಲು ಗುಣಮಟ್ಟದಿಂದ ಕೂಡಿರುವುದಿಲ್ಲ. ಸರಿಯಾದ ರೀತಿಯಲ್ಲಿ ಹಾಲು ಪೂರೈಕೆ ಮಾಡಬೇಕು. ಹಸು ಕರು ಹಾಕಿ 10 ದಿನ ಆದ ಬಳಿಕವೇ ಸಂಘಕ್ಕೆ ಹಾಲು ತರಬೇಕು. ಸದಸ್ಯರು ಸರಿಯಾದ ರೀತಿಯಲ್ಲಿ ಗುಣಮಟ್ಟದ ಹಾಲನ್ನೇ ಸಂಘಕ್ಕೆ ಪೂರೈಸುವ ಮೂಲಕ ಸಂಘಕ್ಕೆ ನಷ್ಟ ಆಗದಂತೆ ನೋಡಿಕೊಳ್ಳಬೇಕೆಂದು ಹೇಳಿದರು.
ಸಂಘದಿಂದಲೇ ಪಶುಆಹಾರ ಖರೀದಿಸಿ;
ಅತಿಥಿಯಾಗಿದ್ದ ಸಂಘದ ವಿಸ್ತರಣಾಧಿಕಾರಿ ರಾಜೇಶ್ ಕಾಮತ್ ಮಾತನಾಡಿ, ಒಕ್ಕೂಟದಿಂದ ಹೈನುಗಾರರಿಗೆ ಸುಮಾರು 23 ಯೋಜನೆಗಳಿವೆ. ಇದರ ಸದುಪಯೋಗ ಪಡೆದುಕೊಳ್ಳಬೇಕು. ಈ ಎಲ್ಲಾ ಯೋಜನೆಗೆ ಒಕ್ಕೂಟದಿಂದಲೇ ಪಶು ಆಹಾರ ಖರೀದಿಸಬೇಕೆಂಬ ಮಾನದಂಡವೂ ಇದೆ. ಆದ್ದರಿಂದ ಸದಸ್ಯರು ನಂದಿನಿ ಪಶು ಆಹಾರವನ್ನೇ ಬಳಕೆ ಮಾಡಬೇಕೆಂದು ಹೇಳಿದರು. ಹಾಲು ಉತ್ಪಾದನೆ ಹೆಚ್ಚಿಸುವ ನಿಟ್ಟಿನಲ್ಲಿ ಕಳೆದ ಎಪ್ರಿಲ್ ತಿಂಗಳಿನಿಂದ ಈರೋಡ್ನಿಂದ ಹಸು ತರಿಸುವ ಯೋಜನೆ ಹಾಕಿಕೊಳ್ಳಲಾಗಿದೆ. ಈಗಾಗಲೇ ಈರೋಡ್ನಿಂದ 4೦೦ಕ್ಕಿಂತ ಹೆಚ್ಚು ಹಸು ದ.ಕ.ಜಿಲ್ಲೆಗೆ ತರಲಾಗಿದ್ದು ಇಲ್ಲಿನ ಹವಾಮಾನಕ್ಕೆ ಹೊಂದಿಕೊಳ್ಳುತ್ತಿವೆ. ಹಾಲೂ ಹೆಚ್ಚು ನೀಡುತ್ತಿವೆ. ಈರೋಡ್ನಿಂದ ರಾಸು ಖರೀದಿಗೆ ಒಕ್ಕೂಟದಿಂದ ಪ್ರಯಾಣ ಭತ್ಯೆ, ಸಾಗಾಣಿಕೆ ವೆಚ್ಚ, ವಿಮೆ, ಸಾಗಾಟ ವಿಮೆ ಮಾಡಿಕೊಡಲಾಗುತ್ತಿದೆ. ಇದರ ಸದುಪಯೋಗವನ್ನೂ ಪಡೆದುಕೊಳ್ಳುವಂತೆ ವಿಸ್ತರಣಾಧಿಕಾರಿ ರಾಜೇಶ್ ಕಾಮತ್ ಹೇಳಿದರು.
ಸಂಘದ ಸದಸ್ಯರಾದ ಬಾಲಕೃಷ್ಣ ಬಾಣಜಾಲು, ಆನಂದ ಪಿ.ಹೆಗ್ಡೆ, ಹರಿಪ್ರಸಾದ್, ಪುಷ್ಪರಾಜ್ ಶೆಟ್ಟಿ, ಶಿವಣ್ಣ ಪಿ.ಹೆಗ್ಡೆ, ರವಿಚಂದ್ರ ಹೊಸವಕ್ಲು, ಸತೀಶ್ ಶೆಟ್ಟಿ ಮತ್ತಿತರರು ಸಲಹೆ ಸೂಚನೆ ನೀಡಿದರು. ಸಂಘದ ಉಪಾಧ್ಯಕ್ಷ ಹೊನ್ನಪ್ಪ ಗೌಡ, ನಿರ್ದೇಶಕರಾದ ಡಿ.ಮಹಾಬಲ ಶೆಟ್ಟಿ, ವೆಂಕಪ್ಪ ನಾಯ್ಕ, ಕಾಂತಪ್ಪ ಗೌಡ, ಜಯರಾಮ ಬಿ., ದಯಾನಂದ ಹೆಚ್., ಉಮೇಶ್ ಪಿ., ಸೇಸಮ್ಮ, ವಾರಿಜ, ಗಿರಿಜ, ಹೇಮಾವತಿ, ಪ್ರೇಮಾವತಿ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಮುಖ್ಯ ಕಾರ್ಯನಿರ್ವಹಣಾಧಿಕಾರಿ ಅನುರಾಧ ಹೆಚ್.ವರದಿ ವಾಚಿಸಿದರು. ಹೊನ್ನಪ್ಪ ಗೌಡ ಸ್ವಾಗತಿಸಿ, ಮಹಾಬಲ ಶೆಟ್ಟಿ ವಂದಿಸಿದರು. ಹಾಲು ಪರೀಕ್ಷಕಿ ನಳಿನಾಕ್ಷಿ ಪ್ರಾರ್ಥಿಸಿದರು. ಸಹಾಯಕಿ ಗಿರಿಜ, ಬಿಎಂಸಿ ನಿರ್ವಾಹಕ ಪರಮೇಶ್ವರ, ಕೃ.ಗ.ಕಾರ್ಯಕರ್ತ ಜಯರಾಮ, ಬ್ರಾಂಚ್ ಸಹಾಯಕಿಯರಾದ ವಿಜಯ, ಜಯಂತಿ ಸಹಕರಿಸಿದರು.
ಅತೀ ಹೆಚ್ಚು ಹಾಲು ಪೂರೈಕೆದಾರರಿಗೆ ಸನ್ಮಾನ;
2024-25ನೇ ಸಾಲಿನಲ್ಲಿ ಸಂಘಕ್ಕೆ ಅತೀ ಹೆಚ್ಚು ಹಾಲು ಪೂರೈಸಿದ ಸದಸ್ಯರಿಗೆ ಬಹುಮಾನ ನೀಡಿ, ಸನ್ಮಾನಿಸಿ ಗೌರವಿಸಲಾಯಿತು. 4,59,627 ರೂ.ಮೌಲ್ಯದ 12,691.59 ಲೀ.ಹಾಲು ಪೂರೈಸಿದ ಶ್ಯಾಮಲಾ ಯಸ್.(ಪ್ರಥಮ), 2,65,190 ರೂ.ಮೌಲ್ಯದ 7286.79 ಲೀ.ಹಾಲು ಪೂರೈಸಿದ ಪುಷ್ಪರಾಜ ಶೆಟ್ಟಿ(ದ್ವಿತೀಯ) ಹಾಗೂ 2,58,615 ರೂ.ಮೌಲ್ಯದ 7,187.70 ಲೀ.ಹಾಲು ಪೂರೈಸಿದ ಪ್ರಮೀಳಾ ಡಿ.ಸೋಜ (ತೃತೀಯ) ಅವರನ್ನು ಸನ್ಮಾನಿಸಿ ಗೌರವಿಸಲಾಯಿತು. ವಾರ್ಷಿಕ ರೂ.1 ಲಕ್ಷಕ್ಕಿಂತ ಹೆಚ್ಚು ಮೌಲ್ಯದ ಹಾಲು ಪೂರೈಸಿದ ಸದಸ್ಯರಿಗೆ ವಿಶೇಷ ಬಹುಮಾನ ಹಾಗೂ ಹಾಲು ಉತ್ಪಾದಕರಿಗೆ ಪ್ರೋತ್ಸಾಹಕ ಬಹುಮಾನ ನೀಡಿ ಗೌರವಿಸಲಾಯಿತು.
ವಿದ್ಯಾರ್ಥಿಗಳಿಗೆ ಗೌರವಾರ್ಪಣೆ;
ಎಸ್ಎಸ್ಎಲ್ಸಿಯಲ್ಲಿ ಅತೀ ಹೆಚ್ಚು ಅಂಕ ಪಡೆದ ಸಂಘದ ಸದಸ್ಯರ ಮಕ್ಕಳಾದ ಸಮನ್ವಿತ, ನಿಶಾಂತ್, ಧನಂಜಯ, ಸುಶಾಂತ್, ಚಿಂತನ್, ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಯಲ್ಲಿ ಅತೀ ಹೆಚ್ಚು ಅಂಕ ಪಡೆದ ಸಂಘದ ಸದಸ್ಯರ ಮಕ್ಕಳಾದ ಮನ್ವಿತ್ (ವಿಜ್ಞಾನ ವಿಭಾಗ), ಭವ್ಯ, ಮೋಕ್ಷ(ವಾಣಿಜ್ಯ ವಿಭಾಗ)ಹಾಗೂ ಗೌರವ್ (ಕಲಾವಿಭಾಗ) ಅವರನ್ನು ಗೌರವಿಸಲಾಯಿತು.