ಸವಣೂರು ಗ್ರಾ.ಪಂ ನಲ್ಲಿ ಗ್ರಾಮ ಸಮೃದ್ಧಿ ಸ್ಥಿತಿ ಸ್ಥಾಪಕತ್ವ ಯೋಜನೆಯ ಸಮಾಲೋಚನಾ ಸಭೆ

0

ಸವಣೂರು : ಸವಣೂರು ಗ್ರಾಮ ಪಂಚಾಯತ್,  ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ , ಕೌಶಲ್ಯ ಅಭಿವೃದ್ಧಿ ಮತ್ತು ಜೀವನೋಪಾಯ ಇಲಾಖೆ, ದೀನ್ ದಯಾಳ್ ಅಂತ್ಯೋದಯ ಯೋಜನೆ , ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಅಭಿಯಾನ  ಮತ್ತು ಶ್ರೀರಾಮ ಸಂಜೀವಿನಿ ಗ್ರಾಮ ಪಂಚಾಯತ್ ಮಟ್ಟದ ಒಕ್ಕೂಟ ಇದರ ವತಿಯಿಂದ ಸವಣೂರು ಪಂಚಾಯತ್‌ನ ಕುಮಾರಧಾರ ಸಭಾಂಗಣದಲ್ಲಿ “ಗ್ರಾಮ ಸಮೃದ್ಧಿ ಸ್ಥಿತಿ ಸ್ಥಾಪಕತ್ವ ಯೋಜನೆ  (VPRP) ಪರಿಕಲ್ಪನೆ ಮೂಡಿಸುವ ಸಮಾಲೋಚನ  ಸಭೆ ನಡೆಯಿತು.

ಸಭೆಯ ಅಧ್ಯಕ್ಷತೆಯನ್ನು ಸವಣೂರು ಗ್ರಾ.ಪಂ.ಉಪಾಧ್ಯಕ್ಷೆ ಜಯಶ್ರೀ ಅವರು ವಹಿಸಿದ್ದರು.

 ತಾಲೂಕು ಪಂಚಾಯತ್ ಸಂಪನ್ಮೂಲ ವ್ಯಕ್ತಿ ಧನ್ಯಾ ಶ್ರೀ ಅವರು , ಸಮುದಾಯದ ಅಗತ್ಯತೆಗಳನ್ನು ಗುರುತಿಸಿ ಬಡತನವನ್ನು ಕಡಿಮೆ ಮಾಡುವ ನಿಟ್ಟಿನಲ್ಲಿ ಗ್ರಾಮದ ಎಲ್ಲರ ಬೇಡಿಕೆಗಳನ್ನು ಗುರುತಿಸಿ ವಿವಿಧ ಇಲಾಖೆಗಳ ಮೂಲಕ ಬೇಡಿಕೆಯನ್ನು ಈಡೇರಿಸುವ ನಿಟ್ಟಿನಲ್ಲಿ ಸ್ಥಾಪಕತ್ವ ಯೋಜನೆ ಮಹತ್ವ ಪಡೆದಿದೆ ಎಂದರು.

ಸ್ವಸ್ಥ ನಾರಿ ಸಶಕ್ತ ಪರಿವಾರ ಅಭಿಯಾನ
ಸಮುದಾಯ ಆರೋಗ್ಯ ಸುರಕ್ಷಾಧಿಕಾರಿ  ಸುಶ್ಮಿತಾ ಅವರು, ಸ್ವಸ್ಥ ನಾರಿ ಸಶಕ್ತ ಪರಿವಾರ ಅಭಿಯಾನದ ಅಂಗವಾಗಿ ಆರೋಗ್ಯವಂತ ಮಹಿಳೆಯರ ಸಬಲ ಜೀವನ,ಮಹಿಳೆಯರ ಆರೋಗ್ಯ ತಪಾಸಣೆಗಳ ಕುರಿತು ಮಾಹಿತಿ ನೀಡಿದರು. ವಾರದ ಪ್ರತೀ ಶನಿವಾರ ಪಾಲ್ತಾಡಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಲ್ಯಾಬ್ ಟೆಕ್ನಿಶಿಯನ್ ಲಭ್ಯರಿದ್ದು, ರಕ್ತ ತಪಾಸಣೆ ಹಾಗೂ ವರ್ಗೀಕರಣ ,ಇಸಿಜಿ ,ಡೆಂಗ್ಯೂ ಪರೀಕ್ಷೆ, ಹಿಮೋಗ್ಲೋಬಿನ್ ಪರೀಕ್ಷೆ, ಮಲೇರಿಯಾ ಪರೀಕ್ಷೆ ಗರ್ಭಿಣಿ ಮಹಿಳೆಯರ ತಪಾಸಣೆ ಮಾಡಲಾಗುತ್ತದೆ ಎಂದರು.

ಗ್ರಾ.ಪಂ.ಸದಸ್ಯ ಸತೀಶ್ ಅಂಗಡಿಮೂಲೆ ಮಾತನಾಡಿ, ವಾರದಲ್ಲಿ ಒಂದು ದಿನ ಮಾತ್ರ ಲ್ಯಾಬ್ ಟೆಕ್ನಿಶಿಯನ್ ಆರೋಗ್ಯ ಕೇಂದ್ರದಲ್ಲಿ ಲಭ್ಯ ಇರುವುದಲ್ಲ.ಯಾವಾಗಲೂ ಇರಬೇಕು.ಈ ಕುರಿತು ಆರೋಗ್ಯಾಧಿಕಾರಿಗೆ ಪತ್ರ ಬರೆಯಬೇಕು ಎಂದರು.

ಕೂಸಿನ ಮನೆ ಆರಂಭ- ಸಲಹೆ 
ಪುಣ್ಚಪ್ಪಾಡಿ ಗ್ರಾಮದ ನಡುಮನೆಯಲ್ಲಿರುವ ಕೂಸಿನ ಮನೆಯನ್ನು ಆರಂಭಿಸುವ ನಿಟ್ಟಿನಲ್ಲಿ ಕಾರ್ಯೊಕನ್ಮುಖವಾಗುವ ನಿಟ್ಟಿನಲ್ಲಿ ಚರ್ಚಿಸಲಾಯಿತು.

ಗ್ರಾ.ಪಂ.ನ‌ ಕಾವಲು ಸಮಿತಿ ಸಭೆ
ಇದೇ ಸಂದರ್ಭದಲ್ಲಿ ಗ್ರಾ.ಪಂ.ನ‌ ಕಾವಲು ಸಮಿತಿ ಸಭೆಯನ್ನು ನಡೆಸಲಾಯಿತು.ಬಾಲ್ಯ ವಿವಾಹ,ಬಾಲ ಕಾರ್ಮಿಕರು,ಮಹಿಳೆ ಮತ್ತು ಮಕ್ಕಳ ಅಕ್ರಮ ಸಾಗಾಟದಂತಹ ಪ್ರಕರಣಗಳು ಗಮನಕ್ಕೆ ಬಂದರೆ ಗ್ರಾ.ಪಂ.ಗೆ ಮಾಹಿತಿ ನೀಡುವಂತೆ ಗ್ರಾ.ಪಂ.ಅಭಿವೃದ್ಧಿ ಅಧಿಕಾರಿ ವಸಂತ ಶೆಟ್ಟಿ ಅವರು ಸಭೆಗೆ ತಿಳಿಸಿದರು.

ಸಭೆಯಲ್ಲಿ ಗ್ರಾ.ಪಂ.ಸದಸ್ಯರಾದ ಗಿರಿಶಂಕರ ಸುಲಾಯ, ತಾರಾನಾಥ ಬೊಳಿಯಾಲ, ಇಂದಿರಾ ಬೇರಿಕೆ,ಭರತ್ ರೈ ,ಯಶೋಧಾ,ಚೇತನಾ ಪಾಲ್ತಾಡಿ, ಸತೀಶ್ ಅಂಗಡಿಮೂಲೆ,ಶ್ರೀರಾಮ ಸಂಜೀವಿನಿ ಒಕ್ಕೂಟದ ಅಧ್ಯಕ್ಷೆ  ವಿಜಯ ಈಶ್ವರ ಗೌಡ,ಉಪಾಧ್ಯಕ್ಷೆ ದಮಯಂತಿ ಬಸ್ತಿ,ಗ್ರಾ.ಪಂ.ಸಿಬಂದಿಗಳಾದ ಪ್ರಮೋದ್ ಕುಮಾರ್ ,ದಯಾನಂದ ಮಾಲೆತ್ತಾರು,ಜಯಶ್ರೀ,ಜಯಾ,ಶಾರದಾ,ಯತೀಶ್ ,ದೀಪಿಕಾ ಹಾಗೂ ಗ್ರಾ.ಪಂ.ವ್ಯಾಪ್ತಿಯ ಅಂಗನವಾಡಿ ಕಾರ್ಯಕರ್ತೆಯರು, ಆಶಾ ಕಾರ್ಯಕರ್ತೆಯರು,ಸಂಜೀವಿನಿ ಒಕ್ಕೂಟದ ಪ್ರತಿನಿಧಿಗಳು,ಸಾರ್ವಜನಿಕರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here