ಪುತ್ತೂರು: ವಿದ್ಯಾಭಾರತಿ ಅಖಿಲ ಭಾರತೀಯ ಶಿಕ್ಷಾ ಸಂಸ್ಥಾನ ಸಂಬಂಧಿತ ವಿದ್ಯಾಭಾರತಿ ಕರ್ನಾಟಕ ಇದರ ದಕ್ಷಿಣಕನ್ನಡ ಜಿಲ್ಲಾ ಘಟಕ ಮತ್ತು ವಿವೇಕಾನಂದ ವಿದ್ಯಾವರ್ಧಕ ಸಂಘ ಪುತ್ತೂರು (ರಿ) ಸಹಯೋಗದಲ್ಲಿ ಪುತ್ತೂರಿನ ವಿವೇಕಾನಂದ ಪಾಲಿಟೆಕ್ನಿಕ್ ಸಭಾಂಗಣದಲ್ಲಿ ಸಪ್ತಶಕ್ತಿ ಸಂಗಮದ ಬಗ್ಗೆ ಒಂದು ದಿನದ ಪ್ರಶಿಕ್ಷಣ ವರ್ಗ ಜರುಗಿತು.

ಸಂಪನ್ಮೂಲ ವ್ಯಕ್ತಿ ಬೆಂಗಳೂರಿನ ಪರಿಮಳಾ ವೆಂಕಟೇಶ ಮೂರ್ತಿ ದಕ್ಷಿಣ ಕನ್ನಡ ಜಿಲ್ಲೆಯ ವಿದ್ಯಾಭಾರತಿ ಸಂಯೋಜಿತ ಸಂಸ್ಥೆಗಳ ಶಿಕ್ಷಕಿಯರು, ಮಾತೆಯರಿಗೆ ತರಬೇತಿ ನೀಡಿದರು.
ವಿದ್ಯಾಭಾರತಿ ಕರ್ನಾಟಕ ಪ್ರಾಂತ ಕಾರ್ಯದರ್ಶಿ ಶ್ರೀಪತಿ ಎ, ಪ್ರಾಂತ ಕೋಶಾಧಿಕಾರಿಗಳು ಹಾಗೂ ಸಪ್ತಶಕ್ತಿ ಸಂಗಮದ ಪ್ರಾಂತ ಸಂಯೋಜಕ ರಾಮಕೃಷ್ಣ ಮಾರ್ಗದರ್ಶನ ನೀಡಿದರು.
ವಿದ್ಯಾಭಾರತಿ ಪ್ರಾಂತ ಉಪಾಧ್ಯಕ್ಷ ವಸಂತ ಮಾಧವ ಉಪಸ್ಥಿತರಿದ್ದು ಸಭಾಧ್ಯಕ್ಷತೆ ವಹಿಸಿದ್ದರು. ವಿದ್ಯಾಭಾರತಿ ಮಂಗಳೂರು ವಿಭಾಗ ಪ್ರಮುಖರಾದ ವೆಂಕಟರಮಣ ರಾವ್ ಮಂಕುಡೆ ಪ್ರಾಸ್ತಾವಿಕ ಮಾತುಗಳೊಂದಿಗೆ ಸ್ವಾಗತಿಸಿದರು. ಉಪ್ಪಿನಂಗಡಿ ಶ್ರೀರಾಮ ಶಾಲಾ ಮುಖ್ಯೋಪಾಧ್ಯಾಯ ರಘುರಾಮ ಭಟ್ ಸಿ ಕಾರ್ಯಕ್ರಮವನ್ನು ನಿರೂಪಿಸಿ, ನೆಲ್ಯಾಡಿ ಶ್ರೀರಾಮ ಶಾಲಾ ಮುಖ್ಯೋಪಾಧ್ಯಾಯ ಗಣೇಶ್ ವಾಗ್ಲೆ ವಂದನಾರ್ಪಣೆಗೈದರು.

ಈ ಪ್ರಶಿಕ್ಷಣ ವರ್ಗದಲ್ಲಿ ದಕ್ಷಿಣಕನ್ನಡ ಜಿಲ್ಲೆಯ ವಿದ್ಯಾಭಾರತಿ ಸಂಯೋಜಿತ ವಿದ್ಯಾಸಂಸ್ಥೆಗಳ ಬೋಧಕ ವೃಂದ, ಮಾತೃಭಾರತಿ ಮತ್ತು ಪೋಷಕ ಸಂಘ ಹಾಗೂ ಆಡಳಿತ ಮಂಡಳಿಯ 200ಕ್ಕೂ ಅಧಿಕ ಪ್ರತಿನಿಧಿಗಳು ಪಾಲ್ಗೊಂಡಿದ್ದರು. ಸಪ್ತಶಕ್ತಿ ಸಂಗಮ ಕಾರ್ಯಕ್ರಮದ ಮೂಲಕ ಜಿಲ್ಲೆಯಲ್ಲಿ 150 ಕಾರ್ಯಕ್ರಮಗಳನ್ನು ಆಯೋಜಿಸಿ 25,000 ತಾಯಂದಿರನ್ನು ತಲುಪುವ ಯೋಜನೆ ಮಾಡಲಾಗಿದೆ.