





ರಾಮಕುಂಜ: ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಮತ್ತು ಕ್ಷೇತ್ರ ಸಂಪನ್ಮೂಲ ಕೇಂದ್ರ ಪುತ್ತೂರು ಹಾಗೂ ಶ್ರೀ ರಾಮಕುಂಜೇಶ್ವರ ಆಂಗ್ಲ ಮಾಧ್ಯಮ ಪ್ರೌಢಶಾಲೆಯ ಆಶ್ರಯದಲ್ಲಿ ಕಡಬ ವಲಯ ಮಟ್ಟದ ಪ್ರೌಢಶಾಲಾ ವಿಭಾಗದ ಪ್ರತಿಭಾ ಕಾರಂಜಿ ಸ್ಪರ್ಧೆಯು ನ.24ರಂದು ಶ್ರೀ ರಾಮಕುಂಜೇಶ್ವರ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಜರುಗಿತು.


ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಶ್ರೀ ರಾಮಕುಂಜೇಶ್ವರ ಆಂಗ್ಲ ಮಾಧ್ಯಮ ಶಾಲೆಯ ಕಾರ್ಯದರ್ಶಿ ಕೆ.ಸೇಸಪ್ಪ ರೈಯವರು ಮಾತನಾಡಿ, ಮಕ್ಕಳ ಸರ್ವತೋಮುಖ ಬೆಳವಣಿಗೆಗೆ ಇಂತಹ ಕಾರ್ಯಕ್ರಮ ಅತೀ ಅಗತ್ಯ. ಮಕ್ಕಳಲ್ಲಿ ಅಡಕವಾಗಿರುವ ಸುಪ್ತ ಪ್ರತಿಭೆಯನ್ನು ಹೊರತೆಗೆಯುವಲ್ಲಿ ಪ್ರತಿಭಾ ಕಾರಂಜಿ ಕಾರ್ಯಕ್ರಮ ಮಾದರಿಯಾಗಿದೆ ಎಂದರು. ರಾಮಕುಂಜ ಗ್ರಾ.ಪಂ. ಅಧ್ಯಕ್ಷೆ ಸುಚೇತಾ ಬಿ. ಉದ್ಘಾಟಿಸಿದರು. ಮುಖ್ಯ ಅತಿಥಿಗಳಾಗಿದ್ದ ಪುತ್ತೂರು ತಾಲೂಕು ಶಿಕ್ಷಣ ಸಂಯೋಜಕ ಹರಿಪ್ರಸಾದ್, ದೈಹಿಕ ಶಿಕ್ಷಣ ಪರಿವೀಕ್ಷಣಾಧಿಕಾರಿ ಚಕ್ರಪಾಣಿ ಎ.ಬಿ. ಶುಭ ಹಾರೈಸಿದರು. ವೇದಿಕೆಯಲ್ಲಿ ಪ್ರೌಢಶಾಲಾ ವಿಭಾಗದ ಬಿಆರ್ಪಿ ಕವಿತಾ, ರಾಮಕುಂಜ ಗ್ರಾ.ಪಂ.ಸದಸ್ಯ ಸೂರಪ್ಪ ಕುಲಾಲ್, ಆಲಂಕಾರು ಕ್ಲಸ್ಟರ್ ಸಿ.ಆರ್.ಪಿ ಪ್ರಕಾಶ್ ಬಾಕಿಲ ಉಪಸ್ಥಿತರಿದ್ದರು.





ಸನ್ಮಾನ
ಶ್ರೀ ರಾಮಕುಂಜೇಶ್ವರ ಆಂಗ್ಲಮಾಧ್ಯಮ ಶಾಲೆಯ ಕಾರ್ಯದರ್ಶಿ ಕೆ.ಸೇಸಪ್ಪ ರೈ ಹಾಗೂ ಉತ್ತಮ ಶಿಕ್ಷಕ ರಾಜ್ಯ ಪ್ರಶಸ್ತಿ ಪುರಸ್ಕೃತ ಶ್ರೀ ರಾಮಕುಂಜೇಶ್ವರ ಕನ್ನಡ ಮಾಧ್ಯಮ ಪ್ರೌಢಶಾಲೆಯ ಮುಖ್ಯಗುರು ಸತೀಶ್ ಭಟ್ ಅವರನ್ನು ಇಲಾಖಾ ವತಿಯಿಂದ ಗೌರವಿಸಲಾಯಿತು. ಕಡಬ ತಾಲೂಕು ಸಹ ಶಿಕ್ಷಕರ ಸಂಘದ ಅಧ್ಯಕ್ಷ ಶಾಂತರಾಮ ಓಡ್ಲ ಸನ್ಮಾನಿತರನ್ನು ಪರಿಚಯಿಸಿದರು.
ನೂಜಿಬಾಳ್ತಿಲ ಕ್ಲಸ್ಟರ್ ಸಿ.ಆರ್.ಪಿ. ಗಣೇಶ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಶ್ರೀ ರಾಮಕುಂಜೇಶ್ವರ ಆಂಗ್ಲ ಮಾಧ್ಯಮ ಪ್ರೌಢಶಾಲೆಯ ಮುಖ್ಯೋಪಾಧ್ಯಾಯಿನಿ ಗಾಯತ್ರಿ ಯು.ಎನ್. ಸ್ವಾಗತಿಸಿ, ರಾಮಕುಂಜ ಕ್ಲಸ್ಟರ್ ಸಿಆರ್ಪಿ ಮಹೇಶ ಎಂ.ವಂದಿಸಿದರು. ಸಹಶಿಕ್ಷಕ ಹರೀಶ ಆಚಾರ್ಯ ಎಂ. ಕಾರ್ಯಕ್ರಮ ನಿರೂಪಿಸಿದರು. ಶಿಕ್ಷಕರು ಸಹಕರಿಸಿದರು.










