ಉಪ್ಪಿನಂಗಡಿ: ಸೇನಾನಿ ಚಂದಪ್ಪ ಮೂಲ್ಯರಿಗೆ ‘ಸೇನಾ ಸಿಂಧೂರ’ ಪ್ರಶಸ್ತಿ

0

ಉಪ್ಪಿನಂಗಡಿ: ಮಂಗಳೂರಿನ ಪುರಭವನದಲ್ಲಿ ಜ.4ರಂದು ನಡೆಯುವ ‘ಕುಂಭ ಕಲಾವಳಿ ಕುಲಾಲ ಕಲಾ ಸೇವಾಂಜಲಿ’ ಕಾರ್ಯಕ್ರಮದಲ್ಲಿ ಬಿಎಸ್ಸೆಫ್‌ನ ನಿವೃತ ಡೆಪ್ಯುಟಿ ಕಮಾಡೆಂಟ್ ಉಪ್ಪಿನಂಗಡಿಯ ಚಂದಪ್ಪ ಮೂಲ್ಯ ಅವರಿಗೆ ‘ಸೇನಾ ಸಿಂಧೂರ’ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗುತ್ತದೆ.


ಬಿಎಸ್‌ಎಫ್‌ನಲ್ಲಿ 37 ವರ್ಷಗಳ ಸುದೀರ್ಘ ಸೇವೆ ಸಲ್ಲಿಸಿ ನಿವೃತ್ತರಾಗಿರುವ ಚಂದಪ್ಪ ಮೂಲ್ಯರಿಗೆ 1971ರ ಭಾರತ- ಪಾಕಿಸ್ತಾನ ಯುದ್ಧದಲ್ಲಿ ಭಾಗವಹಿಸಿ ಉತ್ತಮ ನೇತೃತ್ವ ನೀಡಿರುವುದಕ್ಕಾಗಿ ಭಾರತ ಸರಕಾರವು ‘ಸಂಗ್ರಾಮ ಮೆಡಲ್’, ‘ಪಶ್ಚಿಮ ಸ್ಟಾರ್’, ‘ಸೇನಾ ಮೆಡಲ್’ ನೀಡಿ ಗೌರವಿಸಿದೆ. ಪಂಜಾಬಿನಲ್ಲಿ ಉಗ್ರವಾದಿಗಳ ವಿರುದ್ಧ ಹೋರಾಟ, ಅಮೃತಸರ್ ಗೋಲ್ಡನ್ ಟೆಂಪಲ್ ಬ್ಲೂ ಸ್ಟಾರ್ ಅಪರೇಷನ್‌ಗಳಲ್ಲಿ ಭಾಗವಹಿಸಿ ಗಣನೀಯ ಸೇವೆ ಸಲ್ಲಿಸಿರುವುದಕ್ಕೆ ‘ಗರಾಜ್ ಮೆಡಲ್’, ‘ವಿಶಿಷ್ಟ ಸೇವಾ ಮೆಡಲ್’, ಏಳು ವರ್ಷಗಳವರೆಗೆ ಪ್ರಧಾನ ಮಂತ್ರಿಗಳು ಮತ್ತು ವಿವಿಧ ಗಣ್ಯರಿಗೆ ಸುರಕ್ಷಾ ಕವಚವಾಗಿರುವ ಬ್ಲಾಕ್ ಕ್ಯಾಟ್ ಕಮಾಂಡೋದಲ್ಲಿ ಅತ್ಯುತ್ತಮ ಕಾರ್ಯ ನಿರ್ವಹಿಸಿದ್ದಕ್ಕೆ ರಾಷ್ಟ್ರಪತಿ ಪ್ರಶಸ್ತಿ ಸೇರಿದಂತೆ ಅವರ ಕಾರ್ಯನಿರ್ವಹಣೆಯ ಕಾರ್ಯದಕ್ಷತೆಯನ್ನು ಗುರುತಿಸಿ ರಾಷ್ಟ್ರಪತಿ, ಪ್ರಶಸ್ತಿ ಸೇರಿ ಭಾರತ ಸರಕಾರವು ಅವರಿಗೆ 54 ಪ್ರಶಸ್ತಿಗಳನ್ನು ನೀಡಿ ಗೌರವಿಸಿದೆ. ಅಲ್ಲದೇ, ಅವರ ಸಮಾಜ ಸೇವೆಯನ್ನು ಗುರುತಿಸಿ ‘ಕುಲಾಲ ಸಮಾಜ ರತ್ನ’ ಪ್ರಶಸ್ತಿ, ‘ಕುಲಾಲ ಕಿರೀಟ’ ಪ್ರಶಸ್ತಿಯನ್ನೂ ನೀಡಿ ಅವರನ್ನು ಗೌರವಿಸಲಾಗಿದೆ.


ಚಂದಪ್ಪ ಮೂಲ್ಯ ಅವರು, ಪ್ರಸಕ್ತ ಉಪ್ಪಿನಂಗಡಿಯಲ್ಲಿರುವ ಅಮೂಲ್ಯ ಗ್ಯಾಸ್ ಏಜೆನ್ಸಿಯ ಮಾಲಕರಾಗಿದ್ದು, ಕರ್ನಾಟಕ ರಾಜ್ಯದ ಕೇಂದ್ರೀಯ ಸಶಸ್ತ್ರ ಪಡೆ- ನಿವೃತ್ತ ಯೋಧರ ಕ್ಷೇಮಾಭಿವೃದ್ಧಿ ಸಂಘದ ಗೌರವಾಧ್ಯಕ್ಷರಾಗಿದ್ದು, ಕರಾವಳಿ ಕರ್ನಾಟಕ ನಿವೃತ್ತ ಯೋಧರ ಕ್ಷೇಮಾಭಿವೃದ್ಧಿ ಸಂಘ ಮಂಗಳೂರು ಇದರ ಅಧ್ಯಕ್ಷರಾಗಿದ್ದಾರೆ. ಇದರೊಂದಿಗೆ ಸಾಮಾಜಿಕ, ಧಾರ್ಮಿಕ, ಶೈಕ್ಷಣಿಕ ಕಾರ್ಯಗಳಲ್ಲಿ ತನ್ನನ್ನು ತೊಡಗಿಸಿಕೊಂಡಿದ್ದಲ್ಲದೆ, ಮನೆ ಮನೆಯಲ್ಲಿಯೂ ಭಗವದ್ಗೀತೆ ಅಭಿಯಾನದಲ್ಲಿ ಸುಮಾರು 3,500ಕ್ಕೂ ಅಧಿಕ ಭಗವದ್ಗೀತೆ ಪುಸ್ತಕವನ್ನು ಉಚಿತವಾಗಿ ಹಂಚಿದ್ದಾರೆ.

LEAVE A REPLY

Please enter your comment!
Please enter your name here