






ವಿಟ್ಲ: ಇಲ್ಲಿನ ಮಂಗಳೂರು ರಸ್ತೆಯಲ್ಲಿರುವ ಎಲೆಕ್ಟ್ರಾನಿಕ್ಸ್ ಅಂಗಡಿ, ಡ್ರೈವಿಂಗ್ ಸ್ಕೂಲ್, ಪಕ್ಕದ ಅಂಗಡಿಗಳು ಬೆಂಕಿಗಾಹುತಿಯಾದ ಘಟನೆ ಡಿ.31ರಂದು ರಾತ್ರಿ ನಡೆದಿದೆ.


ವಿಟ್ಲ ಪೇಟೆಯಲ್ಲಿ ಮಂಗಳೂರು ರಸ್ತೆಯಲ್ಲಿರುವ ಸಂತೋಷ್ ಕುಮಾರ್ ಕೊಡಂಗೆ ಮಾಲಕತ್ವದ ಎಲೆಕ್ಟ್ರಾನಿಕ್ಸ್ ಅಂಗಡಿಯಲ್ಲಿ ಏಕಾಏಕಿ ಬೆಂಕಿ ಕಾಣಿಸಿಕೊಂಡು ನಿಯಂತ್ರಣಕ್ಕೆ ಬಾರದ ಸ್ಥಿತಿಗೆ ತಲುಪಿತ್ತು. ಆ ಬಳಿಕ ಪಕ್ಕದ ಡ್ರೈವಿಂಗ್ ಸ್ಕೂಲ್, ಹೊಟೇಲ್ ಗೂ ಬೆಂಕಿ ಹಬ್ಬಿದೆ. ಘಟನೆಗೆ ಶಾರ್ಟ್ ಸರ್ಕ್ಯೂಟ್ ಕಾರಣವೆಂದು ಹೇಳಲಾಗುತ್ತಿದ್ದರೂ, ನಿಖರ ಕಾರಣ ತಿಳಿದು ಬಂದಿಲ್ಲ.




ಘಟನೆ ಬಗ್ಗೆ ಮಾಹಿತಿ ಅರಿತ ಸ್ಥಳೀಯರು ಬೆಂಕಿನಂದಿಸಲು ಹರಸಾಹಸ ಪಟ್ಟರು. ಆದರೂ ಬೆಂಕಿಯ ಕೆನ್ನಾಲಗೆ ಪಕ್ಕದ ಅಂಗಡಿಗಳಿಗೂ ವ್ಯಾಪಿಸಿತ್ತು. ವಿಟ್ಲ ಠಾಣಾ ಪೊಲೀಸರು ಸ್ಥಳಕ್ಕೆ ಆಗಮಿಸಿ ಭದ್ರತೆ ಒದಗಿಸಿದರು. ಘಟನೆಯ ಹಿನ್ನೆಲೆಯಲ್ಲಿ ವಿಟ್ಲ-ಮಂಗಳೂರು ರಸ್ತೆ ಸಂಪೂರ್ಣವಾಗಿ ಬಂದ್ ಮಾಡಲಾಗಿತ್ತು, ಬಂಟ್ವಾಳದಿಂದ ಆಗಮಿಸಿದ ಅಗ್ನಿಶಾಮಕ ದಳದ ಸಿಬ್ಬಂದಿಗಳು ಬೆಂಕಿ ನಂದಿಸುವ ಕಾರ್ಯ ನಡೆಸಿದರು. ಸಾರ್ವಜನಿಕರು ಬೆಂಕಿ ನಂದಿಸುವ ಕಾರ್ಯಕ್ಕೆ ಸಂಪೂರ್ಣ ಸಹಕಾರ ನೀಡಿದರು.
ಬೆಂಕಿ ಅವಘಡದಲ್ಲಿ ಮಂಗಳೂರು ರಸ್ತೆಯಲ್ಲಿರುವ ಶ್ರೀ ಎಲೆಕ್ಟೋನಿಕ್ಸ್ ಅಂಗಡಿ, ಪಕ್ಕದಲ್ಲಿರುವ ಟೈಲರ್ ಶಾಪ್, ಫಾಸ್ಟ್ ಫುಡ್ ಹೊಟೇಲ್ ಹಾಗೂ ಫೈವ್ ಸ್ಟಾರ್ ವೈನ್ಸ್ ಅಂಗಡಿಗಳೂ ಸಂಪೂರ್ಣವಾಗಿ ಭಸ್ಮಗೊಂಡಿವೆ. ನಷ್ಟದ ಪ್ರಮಾಣ ಇನ್ನಷ್ಟೆ ತಿಳಿದುಬರಬೇಕಿದೆ.










