ಬೆಟ್ಟಂಪಾಡಿ, ನವೋದಯ ಪ್ರೌಢಶಾಲಾ ವಾರ್ಷಿಕೋತ್ಸವ, ಪ್ರತಿಭಾ ಪುರಸ್ಕಾರ

0

ಬಿಲ್ವಗಿರಿಯ ಮಣ್ಣಿನ ಕಂಪು ನನ್ನನ್ನು ಎತ್ತರಕ್ಕೆ‌ ಏರಿಸಿದೆ – ಕಡಮಜಲು ಸುಭಾಸ್ ರೈ

ಬೆಟ್ಟಂಪಾಡಿ: ಬೆಟ್ಟಂಪಾಡಿಯ ನವೋದಯ ಪ್ರೌಢ ಶಾಲೆಯ ವಾರ್ಷಿಕೋತ್ಸವ ಮತ್ತು ಪ್ರತಿಭಾ ಪುರಸ್ಕಾರ ಸಮಾರಂಭ ದ. 24 ರಂದು ಜರಗಿತು.
ಪೂರ್ವಾಹ್ನ ಶಿಕ್ಷಕ – ರಕ್ಷಕ ಸಂಘದ ಅಧ್ಯಕ್ಷ ಗಣೇಶ್ ರೈ ಧ್ವಜಾರೋಹಣ ನೆರವೇರಿಸುವುದರ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಶುಭ ಹಾರೈಸಿದರು.
ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿದ್ದ ಹಿರಿಯ ವಿದ್ಯಾರ್ಥಿ ನಿವೃತ್ತ ಪೋಲಿಸ್ ಉಪನಿರೀಕ್ಷಕ ದಿವಾಕರ ರೈ ಮೊಡಪ್ಪಾಡಿ ಮಾತನಾಡುತ್ತಾ ‘ಶಾಲೆಯಲ್ಲಿ ಕಲಿತ ಬಾಲ್ಯದ ನೆನಪುಗಳನ್ನು ಮೆಲುಕು ಹಾಕಿ, ಇಂದಿನ ವಿದ್ಯಾರ್ಥಿಗಳು ದುಶ್ಚಟಗಳ ದಾಸರಾಗದೆ ಉತ್ತಮ ಭವಿಷ್ಯವನ್ನು ರೂಪಿಸಿಕೊಳ್ಳಬೇಕು’ ಎಂದು ಹೇಳಿ ಪ್ರೋತ್ಸಾಹ ನಿಧಿಗೆ ರೂ. 10,000 ಧನಸಹಾಯ ನೀಡಿದರು.


ಮುಖ್ಯ ಅತಿಥಿಗಳಾಗಿ ಆಗಮಿಸಿದ ಆಕಾಂಕ್ಷಾ ಚಾರಿಟೇಬಲ್ ಟ್ರಸ್ಟ್ ನ ಡಾ|| ಶ್ರೀಶ ಭಟ್ ಕಾರ್ಯಕ್ರಮವನ್ನು ದೀಪ ಬೆಳಗುವುದರೊಂದಿಗೆ ಉದ್ಘಾಟಿಸಿ, ‘ಜೀವನದಲ್ಲಿ ಸಾಧನೆಯನ್ನು ಮಾಡಬೇಕಾದರೆ ಸಾಮಾಜಿಕ ಮಾಧ್ಯಮಗಳಿಂದ ದೂರವಿರಬೇಕು ಎಂದು ಅಭಿಪ್ರಾಯ ವ್ಯಕ್ತಪಡಿಸಿದರು. ಪ್ರಸಕ್ತ ಸಾಲಿನ ನವೋದಯ ಹಸ್ತ ಪತ್ರಿಕೆಯನ್ನು ಅವರು ಬಿಡುಗಡೆಗೊಳಿಸಿ, ರಚಿಸಿದ ವಿದ್ಯಾರ್ಥಿಗಳನ್ನು ಹಾಗೂ ಸಂಪಾದಕಿ ಶ್ರೀಮತಿ ಶೋಭಾ ಬಿ ಇವರ ಕಾರ್ಯ ಚಟುವಟಿಕೆಯನ್ನು ಶ್ಲಾಘಿಸಿದರು.


ಸಂಸ್ಥೆಯ ಇನ್ನೋರ್ವ ಹಿರಿಯ ವಿದ್ಯಾರ್ಥಿ , ವಿದ್ಯಾ ಪ್ರೋತ್ಸಾಹ ನಿಧಿಗೆ ಪ್ರತಿ ತಿಂಗಳು 1,000ರೂ ದೇಣಿಗೆ ನೀಡುತ್ತಿರುವ ಅಂಚೆ ಇಲಾಖೆಯ ನಿವೃತ್ತ ಮುಖ್ಯ ಅಧಿಕಾರಿ ಅನಂತ ಶಯನ ಭಟ್ ಅಡ್ಯೆತ್ತಿಮಾರು ಮಾತನಾಡಿ ‘ತಮಗೆ ಕಲಿಸಿದ ಸಂಸ್ಥೆಯ ಹಿರಿಯ ಅಧ್ಯಾಪಕರನ್ನು ಸ್ಮರಿಸಿಕೊಳ್ಳುತ್ತಾ ‘ನವೋದಯ ಪ್ರೌಢ ಶಾಲೆಯು ಅಭಿವೃದ್ಧಿಯ ಪಥದಲ್ಲಿ ಮುನ್ನಡೆಯಲಿ’ ಎಂದು ಶುಭ ಹಾರೈಸಿದರು.

ಸಂಸ್ಥೆಯಲ್ಲಿ ವಿದ್ಯಾಭ್ಯಾಸ ಮಾಡಿ, ಸಾಧನೆ ಮಾಡಿದ ಹಿರಿಯ ವಿದ್ಯಾರ್ಥಿಗಳಾದ, ರಾಷ್ಟ್ರೀಯ ಕೃಷಿ ಪ್ರಶಸ್ತಿ ಪುರಸ್ಕೃತ, ಚಿನ್ನದ ಪದಕ ವಿಜೇತ ಕೃಷಿಕರಾದ ಕಡಮಜಲು ಸುಭಾಸ್ ರೈ, ವಂಶಪಾರಂಪರ್ಯ ನಾಟಿ ವೈದ್ಯರಾದ ಬೈಲಾಡಿ ಮನೆತನದ ದೇವಿ ಪ್ರಸಾದ್ ಇರ್ದೆ ಬೀಡು, ಇರ್ದೆ-ಬೆಟ್ಟಂಪಾಡಿ ಗ್ರಾಮ ಪಂಚಾಯತ್ ಸದಸ್ಯ ಪ್ರಕಾಶ್ ರೈ ಬೈಲಾಡಿ, ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಲಿಟ್ಲ್ ಫ್ಲವರ್ ಹಿರಿಯ ಪ್ರಾಥಮಿಕ ಶಾಲೆ ಪುತ್ತೂರು ಇಲ್ಲಿನ ಸಹ ಶಿಕ್ಷಕ ಬಾಲಕೃಷ್ಣಪೊರ್ದಾಲ್, ರಾಷ್ಟ್ರಮಟ್ಟದ ಕ್ರೀಡಾಪಟು ಬೆಂಗಳೂರಿನಲ್ಲಿ ಇಂಜಿನಿಯರಾಗಿರುವ ಕೀರ್ತಿರಾಜ್ ಕೆ.ಎಸ್, ಶ್ರೀ ಸರಸ್ವತಿ ನಾರಾಯಣಿ ದೇವಸ್ಥಾನ ಬಾರ್ಕೂರು ಉಡುಪಿ ಇದರ ಪ್ರಧಾನ ಕಾರ್ಯದರ್ಶಿಯಾದ ಸುಧೀರ್ ಕೆ. ಇವರನ್ನು ಅಭಿನಂದಿಸಲಾಯಿತು.


ಬಿಲ್ವಗಿರಿಯ ಮಣ್ಣಿನ ಕಂಪು ಎತ್ತರಕ್ಕೆ‌ ಏರಿಸಿದೆ – ಕಡಮಜಲು ಸುಭಾಸ್ ರೈ
ಅಭಿನಂದಿತರ ಪರವಾಗಿ ಸುಭಾಸ್ ರೈ ಕಡಮಜಲು ಮಾತನಾಡಿ ‘ ಬಿಲ್ವಗಿರಿಯ ಮಣ್ಣಿನ ಕಂಪು ಜೀವನದಲ್ಲಿ ನನ್ನನ್ನು ಎತ್ತರಕ್ಕೇರಿಸಿದೆ ’ ನನ್ನ ಸಾಧನೆಗೆ ಈ ಪ್ರೌಢಶಾಲಾ ವಿದ್ಯಾಭ್ಯಾಸವೇ ಪ್ರಮುಖ ಕಾರಣ ಎಂದು ನವೋದಯದಲ್ಲಿ ಕಲಿತ ಬಾಲ್ಯದ ದಿನಗಳನ್ನು,ಅವರಿಗೆ ಕಲಿಸಿದ ಎಲ್ಲಾ ಗುರುವೃಂದದವರನ್ನು ಸ್ಮರಿಸಿಕೊಳ್ಳುತ್ತಾ ರೂ. 25,000 ದೇಣಿಗೆ ನೀಡಿದರು. ಅಭಿನಂದನೆ ಸ್ವೀಕರಿಸಿದ ಹಿರಿಯ ವಿದ್ಯಾರ್ಥಿಗಳು ವಿದ್ಯಾ ಪ್ರೋತ್ಸಾಹ ನಿಧಿಗೆ ಸಹಾಯಧನವನ್ನು ನೀಡಿ ಸಹಕರಿಸಿದರು. ದಿವಂಗತ ಎಡಕ್ಕಾನ ವಿಷ್ಣು ಭಟ್ ಇವರ ಸ್ಮರಣಾರ್ಥ, ಅವರ ಮಗ ಶಿವರಾಮ ಇ.ವಿ ರೂ. 15,000 ದತ್ತಿ ನಿಧಿ ಯನ್ನು, SSLC ವಿಜ್ಞಾನ ವಿಷಯದಲ್ಲಿ ಅತ್ಯಧಿಕ ಅಂಕಗಳಿಸಿದ ಓರ್ವ ವಿದ್ಯಾರ್ಥಿಗೆ ಬಹುಮಾನ ನೀಡಲು ಸ್ಥಾಪಿಸಿದರು.


ಸಾಧಕ ವಿದ್ಯಾರ್ಥಿಗಳಿಗೆ ಅಭಿನಂದನೆ
2024-2025ನೇ ಶೈಕ್ಷಣಿಕ ವರ್ಷದ SSLC ವಾರ್ಷಿಕ ಪರೀಕ್ಷೆಯಲ್ಲಿ A ಗ್ರೇಡ್ ನೊಂದಿಗೆ 100% ಫಲಿತಾಂಶ ಪಡೆದ ಎಲ್ಲಾ ವಿದ್ಯಾರ್ಥಿಗಳನ್ನು ಶಾಲಾ ವತಿಯಿಂದ ವಿಶೇಷ ಪುರಸ್ಕಾರ ನೀಡಿ ಗೌರವಿಸಲಾಯಿತು. ಶೈಕ್ಷಣಿಕ ಸಾಧಕರ ಪಟ್ಟಿಯನ್ನು ಶಿಕ್ಷಕಿ ಭುವನೇಶ್ವರಿ ಎಂ. ವಾಚಿಸಿದರು.ವಿಶಿಷ್ಟ ಶ್ರೇಣಿಯಲ್ಲಿ ಉತ್ತೀರ್ಣರಾದ ವಿದ್ಯಾರ್ಥಿಗಳಾದ ಯತೀನ್ ಯಂ 593 (94.88%)A+ ಶ್ರೇಣಿ ಶಾಲಾ ಪ್ರಥಮ, ಜ್ಯೋತ್ಸ್ನಾ588(94.08%) A+ ದ್ವಿತೀಯ,ಮಹಮ್ಮದ್ ನವಾಜ್573 (91.68%)A+ ತೃತೀಯ, ನವ್ಯಶ್ರೀ 553(88.5%) , ತನ್ವಿತ್552(88.32%),ಭವಿತಾ547( 87.52%),ಬೀಬಿ ಮೈಮುನಾ 541(86.56%), ಇವರನ್ನು ಶಾಲು,ಸ್ಮರಣಿಕೆ, ವಿಶೇಷ ಪುರಸ್ಕಾರ ಹಾಗೂ ವಿದ್ಯಾಭಿಮಾನಿಗಳು ಸ್ಥಾಪಿಸಿದ ದತ್ತಿನಿಧಿಯ ನಗದು ಪುರಸ್ಕಾರ,ಹಾಗೂ ಎಲ್ಲಾ ವಿಷಯ ಶಿಕ್ಷಕರ ವಿಶೇಷ ಪುರಸ್ಕಾರಗಳೊಂದಿಗೆ ಗೌರವಿಸಲಾಯಿತು.


NMMS ವಿದ್ಯಾರ್ಥಿ ವೇತನ: 2024-25 ನೇ ಸಾಲಿನ ರಾಷ್ಟ್ರೀಯ ಪ್ರತಿಭಾನ್ವೇಷಣಾ ಪರೀಕ್ಷೆಯಲ್ಲಿ 8ನೇ ತರಗತಿಯ ವಾಸಿಲ್ ಮುಬಾರಕ್ ತಾಲೂಕಿನಲ್ಲಿ18ನೇ ಸ್ಥಾನ ಹಾಗೂ ಶ್ರಾವ್ಯಾ ಬಿ 22ನೇ ಸ್ಥಾನ ಪಡೆದ ಇವರು ವರ್ಷಕ್ಕೆ 12,000/ ರೂಪಾಯಿಯಂತೆ 4 ವರ್ಷಗಳ ಕಾಲ 48,000 ₹ ವಿದ್ಯಾರ್ಥಿ ವೇತನಕ್ಕೆ ಆಯ್ಕೆಯಾದ ಇವರನ್ನು ಶಾಲು, ಸ್ಮರಣಿಕೆಯೊಂದಿಗೆ ವಿಶೇಷವಾಗಿ ಅಭಿನಂದಿಸಲಾಯಿತು.


ಆಕಾಂಕ್ಷಾ ಚಾರಿಟೇಬಲ್ ಟ್ರಸ್ಟ್ ಇದರ ವತಿಯಿಂದ ನಡೆದ ಜಿಲ್ಲಾ ಮಟ್ಟದ ಕೋಡ್ ಕ್ರಾಫ್ಟ್ ವಿಜ್ಞಾನ ಮಾದರಿ ಸ್ಪರ್ಧೆಯಲ್ಲಿ ಭಾಗವಹಿಸಿ ಪ್ರೋತ್ಸಾಹಕ ಬಹುಮಾನ ಪಡೆದ 10ನೇ ತರಗತಿಯ ತರಣ್ ಪಿ ಎಂ ಮತ್ತು ಧನ್ವಿತ್ ಡಿ ಹಾಗೂ ಭಾಗವಹಿಸಿ ಪ್ರಶಸ್ತಿ ಪಡೆದ 9ನೇ ತರಗತಿಯ ಯತನ್ ಮತ್ತು ಕಾರ್ತಿಕ್, 8ನೇ ತರಗತಿಯ ಧನುಷ್ ಮತ್ತು ಮುಬಶಿಲ್ ಇವರನ್ನು ಈ ಸಂದರ್ಭದಲ್ಲಿ ವಿಶೇಷವಾಗಿ ಗೌರವಿಸಲಾಯಿತು.


ಕ್ರೀಡಾ ಸಾಧಕರಿಗೆ ಸನ್ಮಾನ: ಗ್ರಾಮಾಂತರ ವಲಯ ಮಟ್ಟದಲ್ಲಿ ಆಯ್ಕೆಯಾಗಿ ತಾಲೂಕು ಮಟ್ಟದಲ್ಲಿ ಭಾಗವಹಿಸಿದ 10ನೇ ತರಗತಿಯ ವಿದ್ಯಾರ್ಥಿಗಳಾದ ರವಿತೇಜ (ವರ್ಷದ ಉತ್ತಮ ಕ್ರೀಡಾಪಟು), ರಾಕೇಶ್, ತರುಣ್ 8ನೇ ತರಗತಿಯ ವಿದ್ಯಾರ್ಥಿಗಳಾದ ದೀಶಾ, ಮಿಥುನ್ ಕುಮಾರ್, ಧನುಷ್, ಮಹಮ್ಮದ್ ಶಮ್ಮಾಝ್ ಹಾಗೂ ಶಾಲಾ ಮಟ್ಟದಲ್ಲಿ ವೈಯಕ್ತಿಕ ಚಾಂಪಿಯನ್ ಪಡೆದ 8ನೇ ತರಗತಿಯ ವಿದ್ಯಾರ್ಥಿಗಳಾದ ದೀಶಾ, ಮಹಮ್ಮದ್ ಉಫೈಪ್, 9ನೇ ತರಗತಿಯ ಧನ್ವಿ, 10ನೇ ತರಗತಿಯ ರಾಕೇಶ್ ಹಾಗೂ ಮಹಮ್ಮದ್ ರಾಫಿಹ್ ಇವರನ್ನು ಶಾಲು, ಸ್ಮರಣಿಕೆ,ನಗದು ಪುರಸ್ಕಾರಗಳೊಂದಿಗೆ,ತಂಡ ಚಾಂಪಿಯನ್ ಮತ್ತು ರನ್ನರ್ ಗಳನ್ನು ಗುರುತಿಸಿ ಗೌರವಿಸಲಾಯಿತು. ದೈಹಿಕ ಶಿಕ್ಷಣ ಶಿಕ್ಷಕರಾದ ಬಾಲಕೃಷ್ಣ.ಪಿ ಕ್ರೀಡಾ ಸಾಧಕರ ಪಟ್ಟಿಯನ್ನು ವಾಚಿಸಿದರು.


ಸಾಂಸ್ಕೃತಿಕ ಸ್ಪರ್ಧೆಯಲ್ಲಿ ಭಾಗವಹಿಸಿದ ಸಾಧಕರು: ತಾಲೂಕು ಮಟ್ಟದಲ್ಲಿ ಆಯ್ಕೆಯಾಗಿ ಜಿಲ್ಲಾ ಮಟ್ಟದಲ್ಲಿ ವಿವಿಧ ಸ್ಪರ್ಧೆಗಳಲ್ಲಿ ಭಾಗವಹಿಸಿದ ವಿದ್ಯಾರ್ಥಿಗಳ ಪಟ್ಟಿಯನ್ನು ಶಿಕ್ಷಕಿ ಸುಮಂಗಲಾ ಕೆ ಇವರು ವಾಚಿಸಿದರು. 10ನೇ ತರಗತಿಯ ವಿದ್ಯಾರ್ಥಿಗಳಾದ ಆಯಿಷತ್ ಶಮ್ನಾ (ವರ್ಷದ ಉತ್ತಮ ವಿದ್ಯಾರ್ಥಿನಿ) ಧನ್ಯಶ್ರೀ.ಕೆ (ವರ್ಷದ ಉತ್ತಮ ಚಿತ್ರ ಕಲಾವಿದೆ) 10ನೇ ತರಗತಿಯ ವಿಭಾಶ್ರೀ, ಮಧುಶ್ರೀ, 9ನೇ ತರಗತಿ ಧನ್ವಿ.8ನೇ ತರಗತಿ ದೀಶಾ ಇವರನ್ನು ಅಭಿನಂದಿಸಲಾಯಿತು.


ವಿದ್ಯಾರ್ಥಿನಿಯರಾದ ತೃಷಾ, ಫಾತಿಮತ್ ತುಪೈಲಾ, ಧನ್ಯಶ್ರೀ, ಮಧುಶ್ರೀ ಮತ್ತು ತೃಪ್ತಿ ಪ್ರಾರ್ಥಿಸಿದರು. ನವೋದಯ ಎಜುಕೇಶನಲ್ ಸೊಸೈಟಿಯ ಕಾರ್ಯದರ್ಶಿ ಚಂದ್ರಹಾಸ ಮುರೂರು ಸ್ವಾಗತಿಸಿದರು. ನವೋದಯ ಎಜುಕೇಶನಲ್ ಸೊಸೈಟಿಯ ಅಧ್ಯಕ್ಷ ಬಾಲಕೃಷ್ಣ ಭಟ್ ಘಾಟೆ ವಂದಿಸಿದರು. ಮುಖ್ಯಗುರು ಪುಷ್ಪಾವತಿ ಎಸ್. ಪ್ರಸಕ್ತ ವರ್ಷದ ಶೈಕ್ಷಣಿಕ ವರದಿಯನ್ನು ವಾಚಿಸಿದರು. ಆಂಗ್ಲ ಭಾಷಾ ಶಿಕ್ಷಕ ರಾಧಾಕೃಷ್ಣ ಕೋಡಿ ಕಾರ್ಯಕ್ರಮ ನಿರೂಪಿಸಿದರು. ಗಣಿತ ಅಧ್ಯಾಪಿಕೆ ಗೌತಮಿ ಎಂ. ಬಿ. ಅಭಿನಂದನಾ ಪತ್ರ ವಾಚಿಸಿದರು. ವೇದಿಕೆಯಲ್ಲಿ ಶಾಲಾ ಸಂಚಾಲಕ ಪುಷ್ಪರಾಜ ಶೆಟ್ಟಿ ಹಾಗೂ ಶಾಲಾ ನಾಯಕನಾದ ಅಶ್ವಿತ್ ಇವರು ಉಪಸ್ಥಿತರಿದ್ದರು. ಬೋಧಕೇತರ ಸಿಬ್ಬಂದಿ ನಾರಾಯಣ ಬನ್ನಿಂತಾಯ ಹಾಗೂ ಕಂಪ್ಯೂಟರ್ ಶಿಕ್ಷಕಿ ಯಸ್ತಿತಾ ಸಹಕರಿಸಿದರು. ನಿವೃತ್ತ ದೈಹಿಕ ಶಿಕ್ಷಣ ಶಿಕ್ಷಕ ಸಂಜೀವ ರೈ ಎನ್, ನಿವೃತ್ತ ಚಿತ್ರಕಲಾ ಅಧ್ಯಾಪಕ ಐ. ಗೋಪಾಲಕೃಷ್ಣ, ನಿವೃತ್ತ ಮುಖ್ಯಗರು ಮಾಲತಿ ಬಿ. ನವೋದಯ ಎಜುಕೇಶನಲ್ ಸೊಸೈಟಿಯ ಕೋಶಾಧಿಕಾರಿ ಗಣೇಶ್ ಭಟ್ ಸುದೆನಡ್ಕ, ಆಡಳಿತ ಮಂಡಳಿಯ ಸದಸ್ಯರಾದ ದೈಯಾರಡ್ಕ ಮುರಳಿ ಕೃಷ್ಣ , ಶ್ರೀಕೃಷ್ಣ ಭಟ್ ಬಟ್ಯಮೂಲೆ ಉಪಸ್ಥಿತರಿದ್ದರು. ರಾಧಾಕೃಷ್ಣ ಬೊರ್ಕರ್, ಶ್ರೀಧರ್ ಮಣಿಯಾಣಿ, ರಂಗನಾಥ ರೈ ಗುತ್ತು, ಡಾ|| ಸತೀಶ್ ರಾವ್ ,ಮೋನಪ್ಪ ಕಜೆ ಸೇರಿದಂತೆ ಹಲವು ಗಣ್ಯರು, ವಿದ್ಯಾ ಅಭಿಮಾನಿಗಳು ಸಮಾರಂಭದಲ್ಲಿ ಭಾಗಿಗಳಾದರು. ಶಾಲಾ ಹಿರಿಯ ವಿದ್ಯಾರ್ಥಿಗಳು ಪೋಷಕರು, ಶಿಕ್ಷಕ-ರಕ್ಷಕ ಸಂಘ ಅಧ್ಯಕ್ಷರು, ಪದಾಧಿಕಾರಿಗಳು ಹಾಗೂ ವಿದ್ಯಾಭಿಮಾನಿಗಳು ಸಹಕರಿಸಿದರು.


ಅಪರಾಹ್ನ ಶಾಲಾ ವಿದ್ಯಾರ್ಥಿಗಳಿಂದ ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮಗಳು ಮೂಡಿಬಂತು. ಬಳಿಕ ಶಾಲಾ ವಿದ್ಯಾರ್ಥಿಗಳಿಂದ ತಾರಕಾಸುರ ವಧೆ ಯಕ್ಷಗಾನ ಪ್ರದರ್ಶನಗೊಂಡಿತು.

LEAVE A REPLY

Please enter your comment!
Please enter your name here