ಮುಖ್ಯ ಶಿಕ್ಷಕಿ, ಶಿಕ್ಷಕ ವಿರುದ್ದ ಕ್ರಮಕ್ಕೆ ಸೂಚಿಸಿದ್ದ ಶಾಸಕರಿಂದ ‘ಈ ಬಾರಿ ಕ್ಷಮಿಸಿದ್ದೇನೆಂದು’ ಶಿಕ್ಷಣಾಧಿಕಾರಿಗೆ ಕರೆ

0

ಪುತ್ತೂರು:ಬಡಗನ್ನೂರು ಕೊಲ ಶಾಲಾ ವಾರ್ಷಿಕೋತ್ಸವ ಸಮಾರಂಭದ ವೇದಿಕೆಯಲ್ಲಿದ್ದ ವ್ಯಕ್ತಿಯೋರ್ವರು ಶಾಸಕರ ಬಗ್ಗೆ ಅವಹೇಳನಕಾರಿಯಾಗಿ ಭಾಷಣ ಮಾಡಿದ್ದಾರೆಂದು ಶಾಸಕರಿಗೆ ದೂರು ನೀಡಲಾದ ಹಿನ್ನೆಲೆಯಲ್ಲಿ ಶಾಲೆಯ ಮುಖ್ಯ ಶಿಕ್ಷಕಿ ಮತ್ತು ಶಿಕ್ಷಕರೋರ್ವರ ವಿರುದ್ದ ಕ್ರಮಕೈಗೊಳ್ಳುವಂತೆ ಶಾಸಕರು ಪತ್ತೂರು ಕ್ಷೇತ್ರ ಶಿಕ್ಷಣಾಧಿಕಾರಿ ವಿಷ್ಣುಪ್ರಸಾದ್‌ ಅವರಿಗೆ ಸೂಚನೆ ನೀಡಿದ್ದರಾದರೂ ಬಳಿಕದ ಬೆಳವಣಿಗೆಯಲ್ಲಿ ಶಿಕ್ಷಣಾಧಿಕಾರಿಗೆ ಕರೆ ಮಾಡಿ , ಈ ಬಾರಿ ಕ್ಷಮಿಸಿದ್ದೇನೆ ಎಂದು ಹೇಳಿ, ಶಿಕ್ಷಕರ ವಿರುದ್ಧ ಕ್ರಮಕೈಗೊಳ್ಳದಂತೆ ನಿರ್ದೇಶನ ನೀಡಿದ ಘಟನೆ ತಡವಾಗಿ ವರದಿಯಾಗಿದೆ.


ಜ.2ರಂದು ಶಾಲೆಯಲ್ಲಿ ವಾರ್ಷಿಕೋತ್ಸವ ಕಾರ್ಯಕ್ರಮ ನಡೆದಿತ್ತು.ಕಾರ್ಯಕ್ರಮದಲ್ಲಿ ಭಾಷಣ ಮಾಡಿದ್ದ ಸುಬ್ಬಯ್ಯ ರೈ ಎಂಬವರು, ಶಾಸಕರು ಮಾಡಿರುವ ಅಭಿವೃದ್ದಿ ಕಾರ್ಯಗಳ ಕುರಿತು ಅವಹೇಳನ ಮಾಡುವ ರೀತಿಯಲ್ಲಿ ಭಾಷಣ ಮಾಡಿದ್ದರು.ಅವರ ಭಾಷಣದ ವೇಳೆ ಮುಖ್ಯ ಶಿಕ್ಷಕಿ ಪುಷ್ಪಾವತಿ ಮತ್ತು ಶಿಕ್ಷಕ ಗಿರೀಶ್‌ರವರು ಚಪ್ಪಾಳೆ ತಟ್ಟುವುದು ಕಂಡು ಬಂದಿದ್ದಾಗಿ ಆರೋಪಿಸಿ ಶಾಲೆಯ ಕೆಲವು ಪೋಷಕರು ಶಾಸಕರಲ್ಲಿ ದೂರು ನೀಡಿದ್ದರು.ಶಿಷ್ಟಾಚಾರದಂತೆ ಶಾಸಕರನ್ನು ಕಾರ್ಯಕ್ರಮಕ್ಕೆ ಕರೆಯಬೇಕಾಗಿತ್ತು.ಆದರೆ,ಶಾಲೆಗೆ ಸಂಬಂಧಪಡದವರನ್ನು ವೇದಿಕೆಯಲ್ಲಿ ಕೂರಿಸಲಾಗಿತ್ತು.ಡಿಸೆಂಬರ್ 31ರ ಬಳಿಕ ಶಾಲೆಯಲ್ಲಿ ಯಾವುದೇ ವಾರ್ಷಿಕೋತ್ಸವ ಅಥವಾ ಕ್ರೀಡಾ ಚಟುವಟಿಕೆ ಮಾಡದಂತೆ ಶಿಕ್ಷಣ ಇಲಾಖೆಯಿಂದ ಆದೇಶವಿದ್ದರೂ ಅದನ್ನು ಇಲ್ಲಿ ಉಲ್ಲಂಸಲಾಗಿದೆ ಎಂದೂ ಪೋಷಕರು ಶಾಸಕರಿಗೆ ದೂರು ನೀಡಿದ್ದರು.


ಕ್ರಮಕ್ಕೆ ಶಾಸಕರ ಸೂಚನೆ:
ಬಳಿಕದ ಬೆಳವಣಿಗೆಯಲ್ಲಿ ಶಾಲಾ ಮುಖ್ಯ ಶಿಕ್ಷಕಿ ಪುಷ್ಪಾವತಿ ಹಾಗೂ ಶಿಕ್ಷಕ ಗಿರೀಶ್ ಅವರನ್ನು ಕಚೇರಿಗೆ ಕರೆಸಿದ ಶಾಸಕರು, ಪೋಷಕರು ನೀಡಿದ್ದ ದೂರಿನ ಕುರಿತು ವಿಚಾರಿಸಿದ್ದರು.ಈ ಸಂದರ್ಭ ಕಾಂಗ್ರೆಸ್ ಮುಖಂಡ ಕಾವು ಹೇಮನಾಥ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು.ಶಾಸಕರನ್ನು ಕಾರ್ಯಕ್ರಮಕ್ಕೆ ಕರೆಸದೆ ಶಿಷ್ಟಾಚಾರ ಉಲ್ಲಂಘನೆ ಮಾಡಿರುವುದು,ಸರಕಾರದ ನಿಯಮ ಉಲ್ಲಂಘನೆ ಮತ್ತು ಶಾಸಕರನ್ನು ಅವಮಾನಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಮುಖ್ಯ ಶಿಕ್ಷಕಿ ಪುಷ್ಪಾವತಿ ಮತ್ತು ಶಿಕ್ಷಕ ಗಿರೀಶ್ ಅವರ ವಿರುದ್ದ ಶಿಸ್ತುಕ್ರಮ ಕೈಗೊಳ್ಳುವಂತೆ ಇಲಾಖಾ ಅಧಿಕಾರಿಗೆ ಸೂಚಿಸಿದ ಶಾಸಕರು,ಪ್ರಕರಣವನ್ನು ಇಲಾಖಾ ಮಟ್ಟದ ತನಿಖೆ ನಡೆಸಿ ತಪ್ಪತಸ್ಥರಾಗಿದ್ದಲ್ಲಿ ಇಬ್ಬರನ್ನೂ ಅಮಾನತು ಮಾಡುವಂತೆಯೂ ಸೂಚನೆ ನೀಡಿದ್ದರು.

ಈ ಬಾರಿ ಕ್ಷಮಿಸಿದ್ದೇನೆ:ಬಿಇಒಗೆ ಶಾಸಕರ ಕರೆ
ಶಿಕ್ಷಕರ ವಿರುದ್ಧ ಕ್ರಮಕೈಗೊಳ್ಳದಂತೆ ಸೂಚನೆಶಿಕ್ಷಕರ ತಪ್ಪನ್ನು ಈ ಬಾರಿ ಕ್ಷಮಿಸಿದ್ದೇನೆ.ಆದ್ದರಿಂದ ಈ ವಿಚಾರದಲ್ಲಿ ಅವರಿಗೆ ನೋಟಿಸ್ ನೀಡಬೇಡಿ,ಅವರ ವಿರುದ್ಧ ಯಾವುದೇ ಕ್ರಮಕೈಗೊಳ್ಳಬೇಡಿ ಎಂದು ಶಾಸಕ ಅಶೋಕ್ ಕುಮಾರ್ ರೈಯವರು ಬಳಿಕ ಕ್ಷೇತ್ರ ಶಿಕ್ಷಣಾಧಿಕಾರಿಯವರಿಗೆ ದೂರವಾಣಿ ಕರೆ ಮಾಡಿ ತಿಳಿಸಿದ್ದಾರೆ.
ಆರಂಭದಲ್ಲಿ ಮುಖ್ಯಶಿಕ್ಷಕಿ ಪುಷ್ಪಾವತಿ ಮತ್ತು ಶಿಕ್ಷಕ ಗಿರೀಶ್ ವಿರುದ್ಧ ಕ್ರಮಕ್ಕೆ ಸೂಚಿಸಿದ್ದ ಶಾಸಕರು ಬಳಿಕದ ಬೆಳವಣಿಗೆಯಲ್ಲಿ ಬಿಇಒ ಅವರಿಗೆ ಕರೆ ಮಾಡಿ, ಈ ಬಾರಿ ಅವರನ್ನು ಕ್ಷಮಿಸಿದ್ದೇನೆ.ಮುಂದಿನ ದಿನಗಳಲ್ಲಿ ಈ ರೀತಿಯ ಘಟನೆಗಳಿಗೆ ಅವಕಾಶ ನೀಡಬಾರದು.ಶಾಲೆಯಲ್ಲಿ ಯಾವುದೇ ಕಾರಣಕ್ಕೂ ರಾಜಕೀಯ ನಡೆಯಬಾರದು.ಅಲ್ಲಿ ಶಿಕ್ಷಣಕ್ಕೆ ಮಾತ್ರ ಅವಕಾಶ.ಮಕ್ಕಳೆದುರು ಜನಪ್ರತಿನಿಽಗಳಿಗೆ ಅಪಮಾನವಾಗುವ ರೀತಿಯಲ್ಲಿ ಭಾಷಣ ಮಾಡುವುದು ಸರಿಯಲ್ಲ.ಯಾರೇ ಈ ರೀತಿ ಮಾಡಿದರೂ ತಪ್ಪೆ.ಮುಂದಿನ ದಿನಗಳಲ್ಲಿ ಇಂತಹ ಘಟನೆಗಳಿಗೆ ಆಸ್ಪದ ನೀಡಬಾರದು ಎಂದು ಹೇಳಿ,ಇಬ್ಬರು ಶಿಕ್ಷಕರ ವಿರುದ್ಧವೂ ಸದ್ಯ ಯಾವುದೇ ಕ್ರಮಕೈಗೊಳ್ಳುವುದು ಬೇಡ ಎಂದು ಹೇಳಿದ್ದಾರೆ ಎಂದು ತಿಳಿದು ಬಂದಿದೆ.

LEAVE A REPLY

Please enter your comment!
Please enter your name here