






ಆರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿ ಇರಲಿ: ಶಾಸಕ ಅಶೋಕ್ ರೈ


ಪುತ್ತೂರು: ನಾವು ಪ್ರತಿಯೊಬ್ಬರೂ ಆರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿ ವಹಿಸಬೇಕು, ಆಗಾಗ ನಮ್ಮ ಆರೋಗ್ಯ ತಪಾಸಣೆ ಮಾಡಿಕೊಳ್ಳುವ ಪ್ರವೃತ್ತಿ ರೂಡಿಸಿಕೊಳ್ಳಿ ಎಂದು ಶಾಸಕ ಅಶೋಕ್ ಕುಮಾರ್ ರೈ ಹೇಳಿದರು.



ಅವರು ಶ್ರೀ ಮಹಿಷಮರ್ದಿನಿ ದೇವಸ್ಥಾನ ಮಠಂತಬೆಟ್ಟು, ಕೋಡಿಂಬಾಡಿ ಹಾಲು ಉತ್ಪಾದಕರ ಸಹಕಾರ ಸಂಘ,ಯುವಶಕ್ತಿ ಗೆಳೆಯರ ಬಳಗ ವಿನಾಯಕನಗರ ಹಾಗೂ ವನಿತಾ ಸಮಾಜ ಕೋಡಿಂಬಾಡಿ ಇವುಗಳ ವತಿಯಿಂದ ಮಂಗಳೂರು ಎ ಜೆ ಆಸ್ಪತ್ರೆ ಸಹಯೋಗದಲ್ಲಿ ಮಠಂತಬೆಟ್ಟು ಶ್ರೀ ಮಹಿಷಮರ್ದಿನಿ ದೇವಸ್ಥಾನದ ಚಿನ್ಮಯೀ ಸಭಾಂಗಣದಲ್ಲಿ ನಡೆದ ಉಚಿತ ಆರೋಗ್ಯ ತಪಾಸಣಾ ಮತ್ತು ದಂತ ಚಿಕಿತ್ಸಾ ಶಿಬಿರ ಉದ್ಘಾಟಿಸಿ ಮಾತನಾಡಿದರು.
ಆರೋಗ್ಯ ಚೆನ್ನಾಗಿದ್ದರೆ ಅದುವೇ ದೊಡ್ಡ ಸಂಪತ್ತು. ಏನೇ ಆದರೂ ನಾವು ಟೆನ್ಸ್ಯನ್ ತೆಗೆದುಕೊಳ್ಳಬಾರದು. ಟೆನ್ಸ್ಯನ್ ಅನೇಕ ರೋಗಗಳಿಗೆ ಅಡಿಪಾಯ ಹಾಕುತ್ತದೆ. ಸಣ್ಣ ಪ್ರಾಯದಲ್ಲಿಯೇ ಕಾಳಜಿ ವಹಿಸಿಕೊಂಡಲ್ಲಿ ವೃದ್ಧಾಪ್ಯದಲ್ಲಿ ನೆಮ್ಮದಿ ಕಾಣಲು ಸಾಧ್ಯ ಎಂದು ಅಶೋಕ್ ರೈ ಹೇಳಿದರು.
ಬೇರೆ ದೇಶಗಳಿಗೆ ಹೋಲಿಕೆ ಮಾಡಿದರೆ ನಮ್ಮಲ್ಲಿ ಆರೋಗ್ಯದ ಬಗ್ಗೆ ಕಾಳಜಿ ಕಡಿಮೆ ಇದೆ ಎಂದು ಹೇಳಿದ ಶಾಸಕರು ಆರೋಗ್ಯದ ಬಗ್ಗೆ ನಮ್ಮ ಕಾಳಜಿ ಕಡಿಮೆಯಾಗಿರುವುದೇ ನಮ್ಮಲ್ಲಿ ಅನೇಕ ಸಾವು ನೋವುಗಳಿಗೆ ಕಾರಣವಾಗುತ್ತಿದೆ.ನೀವು ಆರೋಗ್ಯವಂತರಾಗಿಯೇ ಇದ್ದರೂ ದೇಹವನ್ನು ಕಡ್ಡಾಯವಾಗಿ ತಪಾಸಣೆಗೊಳಪಡಿಸಿ ಎಂದು ಸಲಹೆ ನೀಡಿದರು.

ಆಹಾರ ಪದ್ಧತಿಯೇ ರೋಗಕ್ಕೆ ಕಾರಣ
ನಾವು ನಿತ್ಯ ಸೇವಿಸುವ ಆಹಾರವೇ ನಮ್ಮ ಆರೋಗ್ಯ ಕೆಡಲು ಕಾರಣವಾಗುತ್ತಿದೆ. ದೇಹಕ್ಕೆ ಸಮತೋಲನ ಆಹಾರ ನೀಡದೆ ಸಿಕ್ಕಿ ಸಿಕ್ಕಿದ್ದನ್ನೆಲ್ಲಾ ನಾವು ತಿನ್ನುತ್ತಾ ಹೊಟ್ಟೆ ತುಂಬಿಸಿಕೊಂಡಲ್ಲಿ ಅದನ್ನು ನಮ್ಮ ದೇಹ ಸ್ವೀಕರಿಸುವುದಿಲ್ಲ. ವೈದ್ಯರ ಸಲಹೆ ಪಡೆದು ನಾವು ದೇಹವನ್ನು ಸುರಕ್ಷಿತವಾಗಿಡಲು ಪ್ರಯತ್ನಿಸಬೇಕು. ಹೆಚ್ಚು ತರಕಾರಿ ಜೊತೆಗೆ ಮಾಂಸಾಹಾರವನ್ನು ತಿನ್ನಿ. ಆದರೆ ಆಹಾರದಲ್ಲಿ ನಿಯಂತ್ರಣ ಇರಲಿ ಎಂದು ಅವರು ಸಲಹೆ ನೀಡಿದರು.
ಕೋಡಿಂಬಾಡಿ ಹಾಲು ಉತ್ಪಾದಕರ ಸಹಕಾರಿ ಸಂಘದ ಅಧ್ಯಕ್ಷ ಜಗನ್ನಾಥ ಶೆಟ್ಟಿ ನಡುಮನೆ, ಯುವಶಕ್ತಿ ಗೆಳೆಯರ ಬಳಗದ ಅಧ್ಯಕ್ಷ ಪ್ರಭಾಕರ ಸಾಮಾನಿ, ವನಿತಾ ಸಮಾಜದ ಅಧ್ಯಕ್ಷೆ ರಶ್ಮಿ ನಿರಂಜನ ರೈ, ಕೋಡಿಂಬಾಡಿ ಗ್ರಾ.ಪಂ. ಅಧ್ಯಕ್ಷೆ ಮಲ್ಲಿಕಾ ಅಶೋಕ್, ಉಪಾಧ್ಯಕ್ಷ ಜಯಪ್ರಕಾಶ್ ಬದಿನಾರು, ಯಾಕೂಬ್ ಮುಲಾರ್, ಮುರಳೀಧರ್ ರೈ ಮಠಂತಬೆಟ್ಟು, ಕೇಶವ ಭಂಡಾರಿ ಕೈಪ, ಸೀತಾರಾಮ ಶೆಟ್ಟಿ ಹೆಗ್ಡೆಹಿತ್ಲು, ಡಾ. ಶಿವಪ್ರಕಾಶ್, ಕುಮಾರನಾಥ ಎಸ್, ವಿಜಯ ನಾಯ್ಕ, ರೇಣುಕಾ ಮುರಳೀಧರ್ ರೈ, ಸತೀಶ್ ನಾಯಕ್, ಯಮುನಾ ಡೆಕ್ಕಾಜೆ, ಮಹಾಬಲ ಶೆಟ್ಟಿ ಒಳತ್ತಡ್ಕ, ನಳಿನಿ ಪಿ. ಶೆಟ್ಟಿ, ದೇವಳದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ಎಂ. ನಿರಂಜನ್ ರೈ ಮಠಂತಬೆಟ್ಟು, ದೇವಿದಾಸ್ ಗೌಡ, ಯೋಗೀಶ್ ಸಾಮಾನಿ ಸಂಪಿಗೆದಡಿ, ಸಂತೋಷ್ ಕುಮಾರ್ ರೈ ಕೆದಿಕಂಡೆಗುತ್ತು ಮತ್ತಿತರರು ಉಪಸ್ಥಿತರಿದ್ದರು. ಕವಿತಾ ಕೈಪ ಕಾರ್ಯಕ್ರಮ ನಿರೂಪಿಸಿದರು.










