ಯೌವನಕ್ಕೆ ದಿಕ್ಕು ತೋರಿದ ಮಹಾನ್ ವ್ಯಕ್ತಿ ಯುವ ಜನತೆಗೆ ಪ್ರೇರಣೆಯಾದ ಧ್ವನಿ ಅವರೇ ಸ್ವಾಮಿ ವಿವೇಕಾನಂದರು

0

ಇವರು 1863 ಜನವರಿ 12ರಂದು ಕೊಲ್ಕತ್ತಾದಲ್ಲಿ ಜನಿಸಿದರು.ಇವರ ತಂದೆ ವಿಶ್ವನಾಥ ದತ್ತ ಮತ್ತು ತಾಯಿ ಭುವನೇಶ್ವರಿ ದೇವಿ. ಇವರ ಬಾಲ್ಯ ದ ಹೆಸರು ನರೇಂದ್ರನಾಥ ದತ್ತ. ಅಪಾರ ಬುದ್ಧಿಮತ್ತೆ, ತೀಕ್ಷ್ಣ ಪ್ರಶ್ನಾತ್ಮಕ ಮನಸ್ಸು ಮತ್ತು ಆತ್ಮಸತ್ಯದ ಹುಡುಕಾಟ ಅವರನ್ನು ಬಾಲ್ಯದಿಂದಲೇ ವಿಭಿನ್ನನಾಗಿಸಿತು. ರಾಮಕೃಷ್ಣ ಪರಮಹಂಸರ ಶಿಷ್ಯತ್ವ ಪಡೆದ ಬಳಿಕ, ಅವರು ಭಾರತೀಯ ಅಧ್ಯಾತ್ಮ, ವೇದಾಂತ ಮತ್ತು ಮಾನವೀಯತೆಯನ್ನು ಸಮಾಜಮುಖಿ ಚಿಂತನೆಯೊಂದಿಗೆ ಜೋಡಿಸಿದರು. ವಿವೇಕಾನಂದರ ತತ್ವಶಾಸ್ತ್ರ ಸಂನ್ಯಾಸಕ್ಕೆ ಸೀಮಿತವಾಗಿರಲಿಲ್ಲ ಅದು ಸಮಾಜದ ಹೃದಯವನ್ನು ಸ್ಪರ್ಶಿಸುವ ಕ್ರಿಯಾಶೀಲ ತತ್ತ್ವವಾಗಿತ್ತು.

ಭಾರತೀಯ ಚರಿತ್ರೆಯಲ್ಲಿ ಇವರ ಜನ್ಮ ದಿನ ಕೇವಲ ಒಂದು ಜನ್ಮದಿನವಲ್ಲ, ಅದು ಯೌವನದ ಆತ್ಮಬಲ, ಚಿಂತನೆಯ ಸ್ಪಷ್ಟತೆ ಮತ್ತು ರಾಷ್ಟ್ರ ಪುನರ್ ನಿರ್ಮಾಣದ ಸಂಕಲ್ಪವನ್ನು ನೆನಪಿಸುವ ಮಹತ್ವದ ದಿನವಾಗಿದೆ. ಇದು ಇವರ ಜೀವನದ ಚಿಂತನೆ ಮತ್ತು ಸಂದೇಶಗಳು ಇಂದಿಗೂ ಭಾರತದ ಯುವಕರಿಗೆ ದಾರಿದೀಪವಾಗಿವೆ. ಆದ್ದರಿಂದಲೇ ಸ್ವಾಮಿ ವಿವೇಕಾನಂದ ಜಯಂತಿಯನ್ನು ದೇಶವ್ಯಾಪಿ ರಾಷ್ಟ್ರೀಯ ಯುವ ದಿನವಾಗಿ ಆಚರಿಸಲಾಗುತ್ತಿದೆ.

1893ರ ಶಿಕಾಗೋ ವಿಶ್ವಧರ್ಮ ಸಂಸತ್ತಿನಲ್ಲಿ ಸ್ವಾಮಿ ವಿವೇಕಾನಂದರು ನೀಡಿದ ಭಾಷಣ ಭಾರತಕ್ಕೆ ಜಾಗತಿಕ ಗೌರವ ತಂದುಕೊಟ್ಟ ಮಹತ್ವದ ಘಟ್ಟ. “ಸಿಸ್ಟರ್ಸ್ ಅಂಡ್ ಬ್ರದರ್ಸ್ ಆಫ್ ಅಮೆರಿಕಾ” ಎಂಬ ಅವರ ಪ್ರಾರಂಭಿಕ ವಾಕ್ಯವೇ ವಿಶ್ವದ ಗಮನ ಸೆಳೆಯಿತು. ಆ ವೇದಿಕೆಯಲ್ಲಿ ಅವರು ಹೇಳಿದ ಮಾತುಗಳು ಭಾರತ ದುರ್ಬಲ ರಾಷ್ಟ್ರವಲ್ಲ, ಆಧ್ಯಾತ್ಮಿಕವಾಗಿ ಬಲಿಷ್ಠವಾದ ದೇಶ ಎಂಬುದನ್ನು ಜಗತ್ತಿಗೆ ಸಾರಿದವು. ಈ ಘಟನೆಯ ಬಳಿಕ ವಿವೇಕಾನಂದರು ಕೇವಲ ಒಬ್ಬ ಸಂನ್ಯಾಸಿಯಾಗಿರದೆ, ಜಾಗತಿಕ ಚಿಂತಕರಾಗಿ ಗುರುತಿಸಿಕೊಂಡರು.

ಇವರು ತಮ್ಮ ಜೀವನದಲ್ಲಿ ಹೆಚ್ಚು ಒತ್ತು ನೀಡಿದ್ದು ಯುವಕರ ಮೇಲೆಯೇ. “ಯುವಶಕ್ತಿ ಜಾಗೃತವಾದರೆ ದೇಶದ ಭವಿಷ್ಯವನ್ನು ಯಾರು ತಡೆಯಲು ಸಾಧ್ಯವಿಲ್ಲ ” ಎಂಬ ಅವರ ನಂಬಿಕೆ ಸ್ಪಷ್ಟವಾಗಿತ್ತು. ಹಾಗಾಗಿ ಯುವಕರನ್ನು ದೈಹಿಕವಾಗಿ, ಮಾನಸಿಕವಾಗಿ ಮತ್ತು ನೈತಿಕವಾಗಿ ಬಲಿಷ್ಠರಾಗಬೇಕೆಂದು ಕರೆ ನೀಡಿದರು. ಅವರ ಪ್ರಕಾರ ಶಿಕ್ಷಣ ಎಂದರೆ ಕೇವಲ ಉದ್ಯೋಗ ಪಡೆಯುವ ಸಾಧನವಲ್ಲ ಅದು ವ್ಯಕ್ತಿತ್ವ ನಿರ್ಮಾಣದ ಪ್ರಕ್ರಿಯೆ. ಆತ್ಮವಿಶ್ವಾಸ, ಶಿಸ್ತು, ಸೇವಾಭಾವ ಮತ್ತು ಧೈರ್ಯ ಇವು ಯುವ ಜೀವನದ ಮೂಲಮಂತ್ರಗಳಾಗಬೇಕು ಎಂದು ವಿವೇಕಾನಂದರು ಸಾರಿದರು.

ಈ ಮಹತ್ವದ ಚಿಂತನೆಗಳನ್ನು ಗುರುತಿಸಿ 1984ರಲ್ಲಿ ಭಾರತ ಸರ್ಕಾರ ಸ್ವಾಮಿ ವಿವೇಕಾನಂದರ ಜನ್ಮದಿನವನ್ನು ರಾಷ್ಟ್ರೀಯ ಯುವ ದಿನವೆಂದು ಘೋಷಿಸಿತು. ಈ ದಿನದ ಆಚರಣೆಯ ಉದ್ದೇಶ ಕೇವಲ ಕಾರ್ಯಕ್ರಮಗಳಿಗೆ ಸೀಮಿತವಾಗದೇ, ಯುವಜನಾಂಗದಲ್ಲಿ ರಾಷ್ಟ್ರಭಕ್ತಿ, ಸಾಮಾಜಿಕ ಜವಾಬ್ದಾರಿ ಮತ್ತು ನಾಯಕತ್ವ ಗುಣಗಳನ್ನು ಬೆಳೆಸುವುದಾಗಿದೆ. ಯುವ ದಿನವು ಪ್ರತಿಯೊಬ್ಬ ಯುವಕ-ಯುವತಿಗೆ ತನ್ನ ಶಕ್ತಿಯನ್ನು ಅರಿತು, ಅದನ್ನು ರಾಷ್ಟ್ರ ನಿರ್ಮಾಣಕ್ಕೆ ಬಳಸಿಕೊಳ್ಳುವಂತೆ ನೀಡುವ ಆಹ್ವಾನವಾಗಿದೆ.

ಇಂದಿನ ಕಾಲಘಟ್ಟದಲ್ಲಿ ಯುವಕರು ತೀವ್ರ ಸ್ಪರ್ಧೆ, ನಿರುದ್ಯೋಗ, ಮಾನಸಿಕ ಒತ್ತಡ ಮತ್ತು ದಿಕ್ಕುತಪ್ಪಿದ ಆಶಯಗಳ ಮಧ್ಯೆ ಬದುಕುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ಸ್ವಾಮಿ ವಿವೇಕಾನಂದರ ಸಂದೇಶಗಳು ಇನ್ನಷ್ಟು ಪ್ರಸ್ತುತವಾಗಿವೆ. “ಏಳಿ ಎದ್ದೇಳಿ ಗುರಿ ಮುಟ್ಟುವ ತನಕ ನಿಲ್ಲದಿರಿ ” ಎಂಬ ಅವರ ಘೋಷಣೆ ಇಂದು ಪ್ರತಿಯೊಬ್ಬ ಯುವಕನ ಆತ್ಮವಾಕ್ಯವಾಗಬೇಕಾಗಿದೆ. ವೈಯಕ್ತಿಕ ಯಶಸ್ಸಿಗಿಂತ ಸಮಾಜಕ್ಕೆ ಕೊಡುಗೆ ನೀಡುವ ಮನೋಭಾವವೇ ನಿಜವಾದ ಸಾಧನೆ ಎಂಬುದನ್ನು ವಿವೇಕಾನಂದರು ನಿರಂತರವಾಗಿ ನೆನಪಿಸುತ್ತಾರೆ.

ಸ್ವಾಮಿ ವಿವೇಕಾನಂದರು ಕಂಡ ಭಾರತ ಧೈರ್ಯವಂತ ಯುವಕರಿಂದ ನಿರ್ಮಿತವಾದ ರಾಷ್ಟ್ರ. ಅಲ್ಲಿ ಯೌವನವು ಸ್ವಾರ್ಥಕ್ಕೆ ಸೀಮಿತವಾಗದೇ ಸೇವೆ, ತ್ಯಾಗ ಮತ್ತು ಶ್ರೇಷ್ಠ ಚಿಂತನೆಯೊಂದಿಗೆ ಸಮಾಜವನ್ನು ಮುನ್ನಡೆಸುತ್ತದೆ. ಅವರ ಕನಸಿನ ಭಾರತದಲ್ಲಿ ಯುವಕರು ಕೇವಲ ಉದ್ಯೋಗ ಹುಡುಕುವವರಲ್ಲ, ಸಮಸ್ಯೆಗಳಿಗೆ ಪರಿಹಾರ ನೀಡುವ ನಾಯಕರು.

ಸ್ವಾಮಿ ವಿವೇಕಾನಂದ ಜಯಂತಿ ಮತ್ತು ರಾಷ್ಟ್ರೀಯ ಯುವ ದಿನ ನಮಗೆ ನೀಡುವ ಸಂದೇಶ ಒಂದೇ—ಯೌವನ ಕ್ಷಣಿಕವಾದರೂ ಅದರ ಶಕ್ತಿ ಶಾಶ್ವತ. ಆ ಶಕ್ತಿಯನ್ನು ಸರಿಯಾದ ದಿಕ್ಕಿನಲ್ಲಿ ಬಳಸಿದರೆ, ರಾಷ್ಟ್ರದ ಭವಿಷ್ಯವನ್ನು ಹೊಸದಾಗಿ ಬರೆಯಬಹುದು. ವಿವೇಕಾನಂದರ ಚಿಂತನೆಗಳು ಕೇವಲ ಓದಲು ಅಲ್ಲ; ಅವು ಬದುಕಿನಲ್ಲಿ ಅಳವಡಿಸಿಕೊಳ್ಳಲು. ಯೌವನ ಜಾಗೃತವಾದಾಗಲೇ ಭಾರತ ಜಾಗೃತವಾಗುತ್ತದೆ.

 --ಅಕ್ಷಿತಾ ಕಲ್ಲಡ್ಕ

LEAVE A REPLY

Please enter your comment!
Please enter your name here