






ಪೆರಾಬೆ: ಕಳೆದ 44 ವರ್ಷಗಳಿಂದ ಅಂಚೆ ಇಲಾಖೆಯಲ್ಲಿ ಗ್ರಾಮೀಣ ಅಂಚೆ ನೌಕರರಾಗಿ ಸೇವೆ ಸಲ್ಲಿಸುತ್ತಿರುವ ಪೆರಾಬೆ ಗ್ರಾಮದ ನಿವಾಸಿ ಬಾಲಕೃಷ್ಣ ಪೂಜಾರಿ ಅವರು ಜ.14ರಂದು ಸೇವೆಯಿಂದ ನಿವೃತ್ತಿಯಾಗಲಿದ್ದಾರೆ. ಇವರು ಪ್ರಸ್ತುತ ಕಡಬ ಅಂಚೆ ಕಚೇರಿಯಲ್ಲಿ ಅಂಚೆ ಸಹಾಯಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ.


ಬಾಲಕೃಷ್ಣ ಪೂಜಾರಿ ಅವರು 4-1-1982ರಂದು ಕು೦ತೂರು ಹಾಗೂ ಪೆರಾಬೆ ಗ್ರಾಮದ ಅಂಚೆ ವಿತರಕರಾಗಿ ಕುಂತೂರು ಅಂಚೆ ಕಚೇರಿಯಲ್ಲಿ ಸೇವೆ ಆರಂಭಿಸಿದ್ದರು. 18-6-2019ರಂದು ಮೈಲ್ ಪ್ಯಾಕರ್ ಆಗಿ ಭಡ್ತಿಗೊಂಡು ನೆಲ್ಯಾಡಿ ಸಬ್ ಪೋಸ್ಟ್ ಆಫೀಸ್ಗೆ ವರ್ಗಾವಣೆಗೊಂಡು ಅಲ್ಲಿ 2 ವರ್ಷ 5 ತಿಂಗಳು ಸೇವೆ ಸಲ್ಲಿಸಿ 24-5-2021ರಂದು ಕಡಬ ಸಬ್ ಪೋಸ್ಟ್ ಆಫೀಸ್ಗೆ ಅಂಚೆ ಸಹಾಯಕರಾಗಿ ನೇಮಕಗೊಂಡು ವರ್ಗಾವಣೆಗೊಂಡಿದ್ದರು. ಇವರು ಅಂಚೆ ಇಲಾಖೆಯಲ್ಲಿ ಸುದೀರ್ಘ 44 ವರ್ಷ ಸೇವೆ ಸಲ್ಲಿಸಿದ್ದು ಸೇವಾವಧಿಯಲ್ಲಿ ಯಾವುದೇ ಚ್ಯುತಿಯಾಗದಂತೆ ದಕ್ಷ ಹಾಗೂ ಪ್ರಾಮಾಣಿಕತೆಯಿಂದ ಕೆಲಸ ನಿರ್ವಹಿಸಿ, ಜನರಿಗೆ ಸಕಾಲದಲ್ಲಿ ಇಲಾಖಾ ಸೌಲಭ್ಯಗಳನ್ನು ಒದಗಿಸುವ ಮೂಲಕ ಇಲಾಖೆ ಹಾಗೂ ಜನರ ಮೆಚ್ಚುಗೆ ಪಡೆದುಕೊಂಡಿದ್ದಾರೆ.



ಬಾಲಕೃಷ್ಣ ಪೂಜಾರಿ ಅವರು ಪೆರಾಬೆ ಹಾಗೂ ಕುಂತೂರು ಶಾಲೆಯಲ್ಲಿ ವಿದ್ಯಾಭ್ಯಾಸ ಮಾಡಿದ್ದಾರೆ. ವೃತ್ತಿಯ ಜೊತೆಗೆ ಹಲವಾರು ನಾಟಕಗಳಲ್ಲಿ ಪಾತ್ರ ಮಾಡಿ ಮಿಂಚಿದ್ದಾರೆ. ಬ್ರಹ್ಮಶ್ರೀ ನಾರಾಯಣ ಗುರುಸ್ವಾಮಿ ಬಿಲ್ಲವ ಸಂಘ ಪೆರಾಬೆ ಗ್ರಾಮ ಸಮಿತಿ ಅಧ್ಯಕ್ಷರಾಗಿ, ಕುಂತೂರು ಶ್ರೀ ಶಾರದಾ ಭಜನಾ ಮಂದಿರದ ಅಧ್ಯಕ್ಷರಾಗಿ, ಕಾರ್ಯದರ್ಶಿಯಾಗಿ ಹಲವಾರು ಭಜನಾ ಸಂಕೀರ್ತನೆಯಲ್ಲೂ ಭಾಗವಹಿಸಿದ್ದಾರೆ. ಪ್ರಸ್ತುತ ಶ್ರೀ ಶಾರದಾ ಭಜನಾ ಮಂದಿರ ಕುಂತೂರು ಇದರ ಟ್ರಸ್ಟ್ನ ಸದಸ್ಯನಾಗಿ ಹಾಗು ಶ್ರೀ ಆದಿಶಕ್ತಿ ಭಜನಾ ಮಂಡಳಿ ಶ್ರೀ ಕ್ಷೇತ್ರ ಶರವೂರು ಇದರ ಗೌರವ ಸದಸ್ಯನಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಬಾಲಕೃಷ್ಣ ಪೂಜಾರಿಯವರ ಸೇವೆಯನ್ನು ಗುರುತಿಸಿ ಬ್ರಹ್ಮಶ್ರೀ ನಾರಾಯಣ ಗುರುಸ್ವಾಮಿ ಬಿಲ್ಲವ ಸಂಘ ಪುತ್ತೂರು, ಬ್ರಹ್ಮಶ್ರೀ ನಾರಾಯಣ ಗುರುಸ್ವಾಮಿ ಬಿಲ್ಲವ ಗ್ರಾಮ ಸಮಿತಿ ಪೆರಾಬೆ-ಕುಂತೂರು, ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಕುಂತೂರು, ಶ್ರೀ ಶಾರದಾ ಭಜನಾ ಮಂಡಳಿ ಕುಂತೂರು, ಹಿಂದೂ ಜಾಗರಣಾ ವೇದಿಕೆ ಕುಂತೂರು ಸಹಿತ ವಿವಿಧ ಸಂಘಟನೆಯವರು ಸನ್ಮಾನಿಸಿ ಗೌರವಿಸಿದ್ದಾರೆ. ಜೆಸಿಐ ಆಲಂಕಾರು ಇವರು ‘ ಸೈಲೆಂಟ್ ವರ್ಕರ್ ‘ ಪ್ರಶಸ್ತಿ ನೀಡಿ ಗೌರವಿಸಿದ್ದಾರೆ. ಇವರು ಹಲವಾರು ವರ್ಷಗಳಿಂದ ಸುದ್ದಿ ಬಿಡುಗಡೆ ದಿನಪತ್ರಿಕೆಯಲ್ಲಿ ವರದಿಗಾರರಾಗಿ, ಜಾಹೀರಾತು ಸಂಗ್ರಾಹಕರಾಗಿ, ಏಜೆಂಟರಾಗಿ ಕೆಲಸ ಮಾಡುತ್ತಿದ್ದಾರೆ.
ಇವರು ತಾಯಿ ಅಪ್ಪಿ, ಪತ್ನಿ ಮೀರಾಬಾಲಕೃಷ್ಣ ಅವರ ಜೊತೆ ಪೆರಾಬೆ ಗ್ರಾಮದ ಪೆರಾಬೆ ಸಾರಕರೆಯಲ್ಲಿ ವಾಸ್ತವ್ಯವಿದ್ದಾರೆ. ಇವರ ಪುತ್ರ ಚೇತನ್ಕುಮಾರ್ ಪಿ.ಬಿ., ಓಡಿಸ್ಸಾದಲ್ಲಿ ಉದ್ಯೋಗದಲ್ಲಿದ್ದು ಸೊಸೆ ಪೂರ್ಣಿಮ, ಮೊಮ್ಮಗಳು ವಿಯಾನ ಸಹ ಅಲ್ಲೇ ವಾಸ್ತವ್ಯವಿದ್ದಾರೆ. ಹಿರಿಯ ಪುತ್ರಿ ಚೈತ್ರ ಹಾಗೂ ಅಳಿಯ ರಾಕೇಶ್ ಬೆಂಗಳೂರಿನಲ್ಲಿ ಹಾಗೂ ಕಿರಿಯ ಪುತ್ರಿ ಚೈತ್ರನ್ಯ ಹಾಗೂ ಅಳಿಯ ಸಂತೋಷ್ ದುಬೈಯಲ್ಲಿ ಉದ್ಯೋಗದಲ್ಲಿದ್ದಾರೆ.










