






ರಾಮಕುಂಜ: ಡಿ.5ರಿಂದ 7ರ ತನಕ ನಡೆದ ಕಡಬ ತಾಲೂಕು ಹಳೆನೇರಂಕಿ ಸರಕಾರಿ ಉನ್ನತ ಹಿ.ಪ್ರಾ.ಶಾಲೆಯ ’ಶತಮಾನೋತ್ಸವ ಸಂಭ್ರಮ-2025’ರ ಅಭಿನಂದನಾ ಸಭೆ ಜ.11ರಂದು ಬೆಳಿಗ್ಗೆ ಶಾಲಾ ಶತಮಾನೋತ್ಸವ ಸಭಾಂಗಣದಲ್ಲಿ ನಡೆಯಿತು.



ಅಭಿನಂದನಾ ಭಾಷಣ ಮಾಡಿದ ಕೊಂಬೆಟ್ಟು ಸರಕಾರಿ ಪ್ರೌಢಶಾಲಾ ಆಂಗ್ಲಭಾಷಾ ಶಿಕ್ಷಕ ಪ್ರಶಾಂತ್ ಅನಂತಾಡಿ ಅವರು, ಶತಮಾನೋತ್ಸವದ ನೆಪದಲ್ಲಿ ಹಳೆನೇರಂಕಿ ಸರಕಾರಿ ಶಾಲೆಯಲ್ಲಿ ರೂ.1 ಕೋಟಿಗೂ ಹೆಚ್ಚು ವೆಚ್ಚದಲ್ಲಿ ವಿವಿಧ ಅಭಿವೃದ್ಧಿ ಕೆಲಸಗಳು ನಡೆದಿರುವುದರಿಂದ ಶಾಲೆ ಈಗ ಸಮೃದ್ಧಗೊಂಡಿದೆ. ಕಾಲಕ್ಕೆ ಸರಿಯಾಗಿ ಬೆಳೆಯುವ ಮನೋಭಾವ ಬೆಳೆಸಿಕೊಳ್ಳಬೇಕು. ಇದರಿಂದ ನಮ್ಮ ಬೆಳವಣಿಗೆಯೂ ಆಗಲಿದೆ. ಹಳೆನೇರೆಂಕಿ ಶಾಲೆ ಕಾಲಕ್ಕೆ ಸರಿಯಾಗಿ ಬೆಳೆಯುತ್ತಿದೆ. ಎಲ್ಲರೂ ಏಕಭಾವದಿಂದ ಅಹರ್ನಿಶಿಯಾಗಿ ದುಡಿದಿರುವುದರಿಂದಲೇ ಶತಮಾನೋತ್ಸವ ಸಂಭ್ರಮ ಯಶಸ್ವಿಯಾಗಿದೆ. ಹತ್ತೂರಿಗೂ ಮಾದರಿಯಾಗಿದೆ ಎಂದರು. ಶಾಲೆಗೆ 100ವರ್ಷ ಇತಿಹಾಸ, ಭವ್ಯವಾದ ಪರಂಪರೆ ಇದೆ. ಆದ್ದರಿಂದ ಮುಂದಿನ ದಿನಗಳು ಚರಿತ್ರಾರ್ಹವಾಗಿರಬೇಕು. ಶಾಲೆಯ ಬಗ್ಗೆ ಹೆಮ್ಮೆಯ ಭಾವ ಬರುವಂತೆ ಬೆಳೆಯಬೇಕು. ಮಕ್ಕಳಿಗೆ ಅನ್ನದ ದಾರಿ ತೋರಿಸುವಂತಾಗಬೇಕೆಂದು ಹೇಳಿದರು.



ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಕಾರ್ಕಳ ತಾಲೂಕು ಯೋಜನಾಧಿಕಾರಿ ಬಾಲಕೃಷ್ಣ ಗೌಡ ಮಾತನಾಡಿ, ಶಾಲೆಯ ಶತಮಾನೋತ್ಸವ ಸಂಭ್ರಮ ಹಳೆನೇರೆಂಕಿಯ ಜನತೆಯ ಸಂಗಮದೊಂದಿಗೆ ರಾಷ್ಟ್ರೀಯ ಭಾವೈಕ್ಯತೆಯನ್ನು ಸಾರಿದೆ. ಹಣದೊಂದಿಗೆ ಇಲ್ಲಿ ಊರಿನ ಜನರ ಶ್ರಮವೂ ಕೆಲಸ ಮಾಡಿದೆ. ಹಿಂದಿನಿಂದಲೂ ಹಳೆನೇರಂಕಿ ಶಾಲೆಗೆ ಬರುವ ಶಿಕ್ಷಕರ ತಂಡ ಶಾಲೆಗಾಗಿ ಒಗ್ಗಟ್ಟಿನಿಂದ ಕೆಲಸ ಮಾಡುತ್ತಿದೆ ಎಂದರು.
ಅಧ್ಯಕ್ಷತೆ ವಹಿಸಿದ್ದ ಶತಮಾನೋತ್ಸವ ಸಮಿತಿ ಅಧ್ಯಕ್ಷ ರಮೇಶ್ ರೈ ರಾಮಜಾಲು ಮಾತನಾಡಿ, ಎಲ್ಲರ ಸಹಕಾರದಿಂದ ಶತಮಾನೋತ್ಸವ ಯಶಸ್ವಿಯಾಗಿ ನಡೆದಿದೆ. ಇನ್ನು ಮುಂದೆ ಶಾಲೆಯನ್ನು ಬೆಳೆಸುವ ಜವಾಬ್ದಾರಿ ಎಲ್ಲರ ಮೇಲಿದೆ. ಶಾಲೆಯಲ್ಲಿ ಈಗ ಕಂಪ್ಯೂಟರ್ ಲ್ಯಾಬ್, ಸುಸಜ್ಜಿತ ಗ್ರಂಥಾಲಯ, ಉತ್ತಮ ಸಭಾಂಗಣ, ಸುಸಜ್ಜಿತ ಕ್ರೀಡಾಂಗಣವಿದೆ. ಇಂತಹ ಸೌಲಭ್ಯ ಸಮೀಪದ ಬೇರೆ ಸರಕಾರಿ ಶಾಲೆಗಳಲ್ಲಿ ಇಲ್ಲ. ಆದ್ದರಿಂದ ಊರಿನ ಪೋಷಕರು ತಮ್ಮ ಮಕ್ಕಳನ್ನು ಈ ಶಾಲೆಗೆ ಕಳಿಸುವ ಮೂಲಕ ಮಕ್ಕಳ ಸಂಖ್ಯೆ ಹೆಚ್ಚಿಸಬೇಕಾಗಿದೆ ಎಂದರು. ಶತಮಾನೋತ್ಸವದಲ್ಲಿ ಉಳಿಕೆಯಾದ ಮೊತ್ತದಲ್ಲಿ ಶತಮಾನೋತ್ಸವ ಸಭಾಂಗಣದ ನವೀಕರಣ ಹಾಗೂ ಇನ್ನಿತರ ಸಣ್ಣಪುಟ್ಟ ಕೆಲಸಗಳಿಗೆ ಸ್ವಲ್ಪ ಹಣ ವಿನಿಯೋಗಿಸಲಾಗುವುದು. ಉಳಿಕೆ ಮೊತ್ತವನ್ನು ಠೇವಣಿಯಿಟ್ಟು ಅದರಿಂದ ಬರುವ ಬಡ್ಡಿಯಲ್ಲಿ ಎಲ್ಕೆಜಿ, ಯುಕೆಜಿಗೆ ನೇಮಕ ಆಗುವ ಶಿಕ್ಷಕಿ ಹಾಗೂ ಆಯಾ ಅವರಿಗೆ ಸಂಭಾವನೆ ಪಾವತಿಗೆ ಹಾಗೂ ಇನ್ನಿತರ ಕೆಲಸಗಳಿಗೆ ಬಳಕೆ ಮಾಡಿಕೊಳ್ಳಲು ಚಿಂತನೆ ನಡೆಸಿದ್ದೇವೆ ಎಂದರು.
ಎಸ್ಡಿಎಂಸಿ ಅಧ್ಯಕ್ಷ ವೀರೇಂದ್ರ ಪಾಲೆತ್ತಡ್ಡ ಪ್ರಾಸ್ತಾವಿಕವಾಗಿ ಮಾತನಾಡಿ, ಮುಂದಿನ ಶೈಕ್ಷಣಿಕ ವರ್ಷದಿಂದ ಆಂಗ್ಲಮಾಧ್ಯಮದಲ್ಲಿ 1ನೇ ತರಗತಿ ಆರಂಭಕ್ಕೆ ಸರಕಾರದಿಂದ ಅನುಮತಿ ದೊರೆತಿದೆ. ಎಸ್ಡಿಎಂಸಿ ವತಿಯಿಂದ ಎಲ್ಕೆಜಿ, ಯುಕೆಜಿ ತರಗತಿ ಆರಂಭಿಸಲಾಗುವುದು. ಶಾಲೆಯ ಅಭಿವೃದ್ಧಿಗೆ ಎಲ್ಲರೂ ಸಹಕರಿಸಬೇಕೆಂದು ಹೇಳಿದರು. ನಿವೃತ್ತ ಉಪನ್ಯಾಸಕ ಹರಿನಾರಾಯಣ ಆಚಾರ್, ರಾಮಕುಂಜ ಗ್ರಾ.ಪಂ.ಅಧ್ಯಕ್ಷೆ ಸುಚೇತ ಸಂದರ್ಭೋಚಿತವಾಗಿ ಮಾತನಾಡಿದರು.
ಹಳೆವಿದ್ಯಾರ್ಥಿ ಸಂಘದ ಅಧ್ಯಕ್ಷ ಜನಾರ್ದನ ಪೂಜಾರಿ ಕದ್ರ, ಶತಮಾನೋತ್ಸವ ಸಮಿತಿ ಉಪಾಧ್ಯಕ್ಷರಾದ ತೇಜಸ್ವಿನಿ ಕಟ್ಟಪುಣಿ, ವಸಂತಿ ಕನೆಮಾರು, ಧರ್ಣಪ್ಪ ಗೌಡ ಅಲೆಪ್ಪಾಡಿ, ಎಸ್ಡಿಎಂಸಿ ಉಪಾಧ್ಯಕ್ಷೆ ಸುಲೋಚನಾ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಮುಖ್ಯಶಿಕ್ಷಕ ಸಾಂತಪ್ಪ ವೈ ಲೆಕ್ಕಪತ್ರ ಮಂಡಿಸಿದರು. ದೈಹಿಕ ಶಿಕ್ಷಣ ಶಿಕ್ಷಕ ರಾಮಣ್ಣ ಗೌಡ ಸ್ವಾಗತಿಸಿದರು. ಸಹಶಿಕ್ಷಕ ನವೀನ ಎ.ವಂದಿಸಿದರು. ಸಹಶಿಕ್ಷಕಿ ಶಶಿಕಲಾ ನಿರೂಪಿಸಿದರು. ಸಹಶಿಕ್ಷಕರಾದ ದಯಾನಂದ ಓಡ್ಲ, ಗೀತಾಕುಮಾರಿ ವಿವಿಧ ಕಾರ್ಯಕ್ರಮ ನಿರ್ವಹಿಸಿದರು.
ಸನ್ಮಾನ;
ಶತಮಾನೋತ್ಸವ ಸಂಭ್ರಮದ ಪ್ರಚಾರದಲ್ಲಿ ಸಹಕಾರ ನೀಡಿದ ಗಣೇಶ್ ಕಟ್ಟಪುಣಿ, ಹರೀಶ್ಬಾರಿಂಜ, ದೇಣಿಗೆ ಹಾಗೂ ವಸ್ತುರೂಪದಲ್ಲಿ ಸಹಕಾರ ನೀಡಿದ ಅನಿಲ್ ಪಾತೃಮಾಡಿ, ಶಾಲಾ ನಾಯಕ ಚೇತನ್, 7ನೇ ತರಗತಿಯ ವಿದ್ಯಾರ್ಥಿ ಪುಷ್ಪೇಂದ್ರ, ಅಡುಗೆ ಸಿಬ್ಬಂದಿಗಳಾದ ಗಿರಿಜಾ, ಮಮತಾ ಅವರಿಗೆ ಸ್ಮರಣಿಕೆ, ಶಾಲು ಹಾಕಿ ಗೌರವಿಸಲಾಯಿತು. ಶತಮಾನೋತ್ಸವಕ್ಕೆ ದೇಣಿಗೆ ನೀಡಿದವರಿಗೆ ನೀಡುವ ಅಭಿನಂದನಾ ಪತ್ರವನ್ನು ಸಾಂಕೇತವಾಗಿ ವಿತರಿಸಲಾಯಿತು.









