ಮಕರ ಸಂಕ್ರಾಂತಿ ಸಂಭ್ರಮ : ಸರಕಾರದ ಸುತ್ತೋಲೆಯಂತೆ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಭಕ್ತರಿಗೆ ಎಳ್ಳು, ಬೆಲ್ಲ ವಿತರಣೆ

0

ಪುತ್ತೂರು: ಕರ್ನಾಟಕ ಸರ್ಕಾರವು ಮಕರ ಸಂಕ್ರಾಂತಿ ಹಬ್ಬದಂದು ಧಾರ್ಮಿಕ ದತ್ತಿ ಇಲಾಖೆಗೆ ಸಂಬಂಧಿಸಿದಂತೆ ಎಲ್ಲಾ ದೇವಾಲಯಗಳಲ್ಲಿ ದೇವರ ದರ್ಶನಕ್ಕೆ ಬರುವ ಎಲ್ಲಾ ಭಕ್ತಾದಿಗಳಿಗೆ ಎಳ್ಳು-ಬೆಲ್ಲ ವಿತರಿಸಲು ಸುತ್ತೋಲೆ ಹೊರಡಿಸಿದಂತೆ ಇತಿಹಾಸ ಪ್ರಸಿದ್ಧ ಪುತ್ತೂರು ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲೂ ಜ.15ರಂದು ಮಧ್ಯಾಹ್ನ ಭಕ್ತರಿಗೆ ಎಳ್ಳುಬೆಲ್ಲ ವಿತರಣೆ ಮಾಡಲಾಯಿತು.


ಮಕರ ಸಂಕ್ರಾಂತಿ ಹಬ್ಬದ ಪ್ರಯುಕ್ತ ಜನವರಿ 15ರಂದು ರಾಜ್ಯದ ಮುಜರಾಯಿ ಇಲಾಖೆಯ ಎಲ್ಲಾ ದೇವಾಲಯಗಳಿಗೆ ಭೇಟಿ ನೀಡುವ ಭಕ್ತಾದಿಗಳಿಗೆ ಎಳ್ಳು-ಬೆಲ್ಲ ವಿತರಿಸಲು ಅಧಿಕಾರಿಗಳಿಗೆ ಸೂಚಿಸಿದ್ದು, ಈ ಸಂಬಂಧ ಈಗಾಗಲೇ ಸುತ್ತೋಲೆ ಹೊರಡಿಸಿತ್ತು. ಅದೇ ರೀತಿ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಮಧ್ಯಾಹ್ನ ಮಹಾಪೂಜೆಯ ಬಳಿಕ ಭಕ್ತರಿಗೆ ಎಳ್ಳು ಬೆಲ್ಲ, ಕಡ್ಲೆ ವಿತರಿಸಲಾಯಿತು.

ದೇವಳದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಈಶ್ವರ ಭಟ್ ಪಂಜಿಗುಡ್ಡೆ, ಸದಸ್ಯರಾದ ದಿನೇಶ್ ಪಿ.ವಿ, ಮಹಾಬಲ ರೈ ವಳತ್ತಡ್ಕ, ಈಶ್ವರ ಬೆಡೇಕರ್, ಸುಭಾಶ್ ರೈ ಬೆಳ್ಳಿಪ್ಪಾಡಿ, ವಿನಯ ಸುವರ್ಣ, ಕೃಷ್ಣವೇಣಿ, ನಳಿನಿ ಪಿ ಶೆಟ್ಟಿ, ಕಾರ್ಯನಿರ್ವಹಣಾಧಿಕಾರಿ ಕೆ.ವಿ.ಶ್ರೀನಿವಾಸ್, ಕಚೇರಿ ವ್ಯವಸ್ಥಾಪಕ ಹರೀಶ್ ಶೆಟ್ಟಿ ಸಹಿತ ಹಲವಾರು ಮಂದಿ ಉಪಸ್ಥಿತರಿದ್ದರು.

ಸರಕಾರದ ಸುತ್ತೋಲೆಯಂತೆ ಎಳ್ಳು ಬೆಲ್ಲ, ಕೊಬ್ಬರಿ, ಕಡ್ಲೆಯನ್ನು ಸಂಕ್ರಾಂತಿಯ ಹಬ್ಬದ ಅಂಗವಾಗಿ ದೇವರ ಮುಂದಿಟ್ಟು ಪ್ರಾರ್ಥನೆ ಮಾಡಿ ಪ್ರಸಾದ ರೂಪದಲ್ಲಿ ಭಕ್ತರಿಗೆ ವಿತರಿಸಲಾಗಿದೆ.
ಈಶ್ವರ ಭಟ್ ಪಂಜಿಗುಡ್ಡೆ, ಅಧ್ಯಕ್ಷರು, ವ್ಯವಸ್ಥಾಪನಾ ಸಮಿತಿ ಮಹಾಲಿಂಗೇಶ್ವರ ದೇವಸ್ಥಾನ ಪುತ್ತೂರು

LEAVE A REPLY

Please enter your comment!
Please enter your name here