







ಆಲಂಕಾರು: ಸುನಾದ ಸಂಗೀತ ಕಲಾ ಶಾಲೆ ಕೊಯಿಲ ಇದರ ಆಶ್ರಯದಲ್ಲಿ ಜ.18ರಂದು ಕೊಯಿಲ ಗ್ರಾಮ ಪಂಚಾಯತ್ ಸಭಾಭವನ ಕೊಯಿಲ-ಗೋಕುಲನಗರದಲ್ಲಿ ಸುನಾದ ಸಂಗೀತೋತ್ಸವ 2026 ನಡೆಯಿತು.



ಸುನಾದ ಸಂಸ್ಥೆಯ ನಿರ್ದೇಶಕರಾದ ವಿದ್ವಾನ್ ಕಾಂಚನ ಎ. ಈಶ್ವರ ಭಟ್ ದೀಪ ಬೆಳಗಿಸಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ ಸುನಾದ ಸಂಗೀತ ಕಲಾ ಶಾಲೆಯು ಗ್ರಾಮೀಣ ಪ್ರದೇಶದಲ್ಲಿ ಅಂತರಾಷ್ಟ್ರೀಯ ಕಲಾವಿದರನ್ನು ಕರೆಸಿ ಕಾರ್ಯಕ್ರಮ ಮಾಡುವುದರ ಜೊತೆಗೆ ಶುದ್ಧ ಶಾಸ್ತ್ರೀಯ ಪರಂಪರೆಯನ್ನು ಬೆಳೆಸುವ ಕೈಂಕರ್ಯ ಸುನಾದ ಸಂಗೀತ ಕಲಾ ಶಾಲೆ ಮಾಡುತ್ತಿದೆ ಎಂದು ತಿಳಿಸಿ ಕಾರ್ಯಕ್ರಮಕ್ಕೆ ಶುಭಹಾರೈಸಿದರು.



ಸಂಸ್ಥೆಯ ಹಿರಿಯ ವಿದ್ಯಾರ್ಥಿಗಳಾದ ವಿಜಯಶ್ರೀ, ವಿದ್ಯಾಸರಸ್ವತಿ ಕೇವಳ, ಶ್ರೀಪತಿರಾವ್ ಎಚ್, ರಂಜಿನಿ, ಶಿಲ್ಪಾ ಸಿ.ಎಚ್ ರವರು ವೇದಿಕೆಯಲ್ಲಿ ಉಪಸ್ಥಿತರಿದ್ದರು. ನಂತರ ಸುನಾದ ಸಂಗೀತ ಕಲಾ ಶಾಲೆಯ ವಿದ್ಯಾರ್ಥಿಗಳು ಗುರುವಂದನಾ ಕಾರ್ಯಕ್ರಮ ನಡೆಸಿ, ಕರ್ನಾಟಕ ಶಾಸ್ತ್ರೀಯ ಗಾಯನ ಕಾರ್ಯಕ್ರಮ ನಡೆಸಿಕೊಟ್ಟರು. ವಯಲಿನ್ ನಲ್ಲಿ ಶ್ರೀರಾಮ ಕಾಂಚನ, ವಿಜೇತ ಸುಬ್ರಹ್ಮಣ್ಯ, ಮೃದಂಗದಲ್ಲಿ ವೆಂಕಟ ಯಶಸ್ವಿ, ಶ್ರೀಚರಣ ಕಟ್ಟೆ, ಅಂಕಿತ್ ರಾವ್, ಶ್ರೀಲಕ್ಷ್ಮೀ ದೇವಮಣಿರವರು ಸಹಕರಿಸಿದರು. ರಚನಾ ಕಾರ್ಯಕ್ರಮ ನಿರೂಪಿಸಿದರು.
ಸಂಜೆ ಚೆನ್ನೈಯ ವಿದ್ವಾನ್ ವಿವೇಕ್ ಸದಾಶಿವಂ ರವರಿಂದ ಕರ್ನಾಟಕ ಶಾಸ್ತ್ರೀಯ ಸಂಗೀತ ಕಛೇರಿ ನಡೆಯಿತು. ವಯಲಿನ್ ನಲ್ಲಿ ವಿದ್ವಾನ್ ಆರ್. ಅಚ್ಯುತ ರಾವ್ ಬೆಂಗಳೂರು, ಮೃದಂಗದಲ್ಲಿ
ವಿದ್ವಾನ್ ಕಾಂಚನ ಎ ಈಶ್ವರ ಭಟ್, ಮೋರ್ಸಿಂಗ್ ನಲ್ಲಿ ವಿದ್ವಾನ್ ಬಿ. ರಾಜಶೇಖರ್ ರವರು ಸಹಕರಿಸಿದರು. ಸಂಜೆಯ ಕಾರ್ಯಕ್ರಮದಲ್ಲಿ ಪುಣ್ಯಶ್ರೀ ಸ್ವಾಗತಿಸಿ, ವಿದ್ಯಾಮಂಜುಳ ವಂದನಾರ್ಪಣೆ ಸಲ್ಲಿಸಿದರು. ಕಾರ್ಯಕ್ರಮದಲ್ಲಿ ಊರ ಪರವೂರ ಸಂಗೀತ ಪ್ರಿಯರು ಉಪಸ್ಥಿತರಿದ್ದರು.










