ಆನೆಮಜಲಿನಲ್ಲಿ ಜಿಲ್ಲಾ ನ್ಯಾಯಾಲಯ ಸಂಕೀರ್ಣ ಪೂರ್ಣಗೊಂಡ ಕಾಮಗಾರಿ | ಜ.31ರಂದು ಲೋಕಾರ್ಪಣೆ

0

ಪುತ್ತೂರು:ಬನ್ನೂರಿನ ಆನೆಮಜಲಿನಲ್ಲಿ ಜಿಲ್ಲಾ ನ್ಯಾಯಾಲಯ ಸಂಕೀರ್ಣದ ನಿರ್ಮಾಣ ಕಾಮಗಾರಿ ಪೂರ್ಣಗೊಂಡು ಜ.31ರಂದು ಲೋಕಾರ್ಪಣೆಗೊಳ್ಳಲಿದೆ.ಒಟ್ಟು 6 ವರ್ಷದಲ್ಲಿ ಎರಡು ಹಂತದಲ್ಲಿ ಕಾಮಗಾರಿ ನಡೆದಿದ್ದು ಉದ್ಘಾಟನೆಗೆ ಸಜ್ಜುಗೊಂಡಿದೆ.ಉದ್ಘಾಟನಾ ಕಾರ್ಯಕ್ರಮದಲ್ಲಿ ಸುಪ್ರೀಂ ಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿಗಳಾಗಿರುವ ಆಂಧ್ರಪ್ರದೇಶದ ರಾಜ್ಯಪಾಲ ಎಸ್. ಅಬ್ದುಲ್ ನಜೀರ್, ಕರ್ನಾಟಕ ಹೈಕೋರ್ಟ್‌ನ ಮುಖ್ಯನ್ಯಾಯಮೂರ್ತಿ ವಿಭು ಬಖ್ರು ಸಹಿತ ಗಣ್ಯಾತಿಗಣ್ಯರು ಪಾಲ್ಗೊಳ್ಳಲಿದ್ದಾರೆ.


ಪುತ್ತೂರು ನಗರದಿಂದ ನಾಲ್ಕು ಕಿ.ಮೀ.ದೂರದಲ್ಲಿರುವ ಬನ್ನೂರು ಗ್ರಾಮದ ಆನೆಮಜಲು ಪ್ರದೇಶದ ವಿಶಾಲ ಜಾಗದಲ್ಲಿ ನೂತನ ಸುಸಜ್ಜಿತ ಜಿಲ್ಲಾ ನ್ಯಾಯಾಲಯ ಸಂಕೀರ್ಣ ನಿರ್ಮಾಣಗೊಂಡಿದೆ.ಸುಮಾರು 51.9 ಕೋಟಿ ರೂ.ವೆಚ್ಚದಲ್ಲಿ ನಾಲ್ಕು ಅಂತಸ್ತಿನ ನ್ಯಾಯಾಲಯದ ಕಟ್ಟಡ, ಅಭಿಲೇಖಾಲಯದ ಕಟ್ಟಡ ನಿಮಾಣವಾಗಿದೆ.3 ಕೋಟಿ ರೂ. ವೆಚ್ಚದಲ್ಲಿ ವಕೀಲರ ಭವನ ಕಟ್ಟಡ ನಿರ್ಮಾಣಗೊಂಡು ಈಗಾಗಲೇ ಉದ್ಘಾಟನೆಗೊಂಡಿದೆ.ಜ.26ರಂದು ವಕೀಲರ ಸಂಘದಿಂದ ಇಲ್ಲಿ ಗಣರಾಜ್ಯೋತ್ಸವದ ಪ್ರಥಮ ಧ್ವಜಾರೋಹಣವೂ ನಡೆದಿದೆ.


2019ರಲ್ಲಿ ಮೊದಲ ಹಂತದ ಕಾಮಗಾರಿ ಆರಂಭ:
ಕಳೆದ ಸರಕಾರದ ಅವಽಯಲ್ಲಿ ನ್ಯಾಯಾಲಯ ಸಂಕೀರ್ಣಕ್ಕೆ ಅನುದಾನ ಮಂಜೂರಾಗಿತ್ತು.ಮಂಜೂರುಗೊಂಡ ಅನುದಾನದಲ್ಲಿ 51.9 ಕೋಟಿ ರೂ. ವೆಚ್ಚದ ಕಾಮಗಾರಿಯನ್ನು ಎರಡು ಹಂತದಲ್ಲಿ ನಡೆಸಲಾಗಿದೆ.ಮೊದಲ ಹಂತದ 25 ಕೋಟಿ ರೂ. ವೆಚ್ಚದ ಕಾಮಗಾರಿಗೆ 2018ರ ನ.10ರಂದು ಶಿಲಾನ್ಯಾಸ ನೆರವೇರಿಸಲಾಗಿತ್ತು.ಈ ಕಾಮಗಾರಿಯ ಟೆಂಡರ್ ವಿಳಂಬವಾದ ಕಾರಣ ಕಾಮಗಾರಿ ಪ್ರಕ್ರಿಯೆ 2019 ಮೇ 11ರಂದು ಪ್ರಾರಂಭಗೊಂಡಿತ್ತು.


ಎರಡು ಹಂತದಲ್ಲಿ ಕಾಮಗಾರಿ:
2019ರಲ್ಲಿ ಆರಂಭಗೊಂಡ 25 ಕೋಟಿ ರೂ. ವೆಚ್ಚದ ಮೊದಲ ಹಂತದ ಕಾಮಗಾರಿ ಎರಡು ವರ್ಷ ನಡೆದು 2021ರಲ್ಲಿ ಪೂರ್ಣಗೊಂಡಿತ್ತು.ಈ ಕಾಮಗಾರಿಯಲ್ಲಿ ನ್ಯಾಯಾಲಯ ಕಟ್ಟಡದ ಮೊದಲ ಎರಡು ಅಂತಸ್ತು, ಜಿಲ್ಲಾ ನ್ಯಾಯಾಂಗ ಇಲಾಖೆಯ ಸಹಭಾಗಿತ್ವದಲ್ಲಿ 3 ಕೋಟಿ ರೂ. ವೆಚ್ಚದಲ್ಲಿ ನ್ಯಾಯಾಲಯ ಕಟ್ಟಡದ ಪಕ್ಕದಲ್ಲೇ ನಾಲ್ಕು ಅಂತಸ್ತಿನ ವಕೀಲರ ಸಂಘದ ಕಚೇರಿ ಕಟ್ಟಡ ನಿರ್ಮಿಸಲಾಯಿತು.ಬಳಿಕ 2021ರ ಡಿಸೆಂಬರ್‌ನಲ್ಲಿ ಸುಪ್ರೀಂ ಕೋರ್ಟ್ನ ನ್ಯಾಯಮೂರ್ತಿ ಎಸ್.ಅಬ್ದುಲ್ ನಜೀರ್‌ರವರು ಪ್ರಥಮ ಹಂತದ ಕಾಮಗಾರಿ ಹಾಗೂ ವಕೀಲರ ಭವನ ಉದ್ಘಾಟನೆಗೊಳಿಸಿ 2ನೇ ಹಂತದ ಕಾಮಗಾರಿಗಳಿಗೆ ಶಿಲಾನ್ಯಾಸ ನೆರವೇರಿಸಿದ್ದರು.ಎರಡನೇ ಹಂತದಲ್ಲಿ 26.9 ಕೋಟಿ ರೂ.ವೆಚ್ಚದ ಕಾಮಗಾರಿಗೆ 2021ರಲ್ಲಿ ಚಾಲನೆ ನೀಡಲಾಯಿತು. ನ್ಯಾಯಾಲಯ ಸಂಕೀರ್ಣದ ಉಳಿದ ಎರಡು ಅಂತಸ್ತು ನಿರ್ಮಾಣ, ಸಂಕೀರ್ಣದ ಸಮೀಪದಲ್ಲಿ ಅಭಿಲೇಖಾಲಯ ಕಟ್ಟಡ ನಿರ್ಮಾಣ ಹಾಗೂ ನ್ಯಾಯಾಲಯ ಸಂಕೀರ್ಣದ ಸಂಪರ್ಕ ರಸ್ತೆ ನಿರ್ಮಾಣ, ಕೋರ್ಟ್ ಕಲಾಪದ ಹಾಲ್‌ನ ಪೀಠೋಪಕರಣಗಳ ಅಳವಡಿಕೆ, ಚರಂಡಿ ವ್ಯವಸ್ಥೆ, ಇಲೆಕ್ಟ್ರಿಕಲ್ಸ್, ಸಿಸಿಟಿವಿ ಕ್ಯಾಮೆರಾ ಅಳವಡಿಕೆ, ಪ್ರವೇಶದ್ವಾರದ ಕಾಮಗಾರಿ ಮುಂತಾದ ಕಾಮಗಾರಿಗಳು ಇದರಲ್ಲಿ ನಡೆಸಲಾಗಿದೆ.ಒಟ್ಟು 5 ವರ್ಷ ನಡೆದ ಕಾಮಗಾರಿ ಇದೀಗ ಅಂತಿಮಗೊಂಡು ಒಂದು ವಾರದಲ್ಲಿ ಲೋಕಾರ್ಪಣೆಗೊಳ್ಳುತ್ತಿದೆ.


ಲೋಕೋಪಯೋಗಿ ಇಲಾಖೆ ನಿರ್ಮಾಣ, ನಿರ್ವಹಣೆ:
ಒಟ್ಟು 51.9 ಕೋಟಿ ರೂ.ವೆಚ್ಚದ ಕಾಮಗಾರಿಯನ್ನು ಲೋಕೋಪಯೋಗಿ ಇಲಾಖೆ ನಿರ್ವಹಿಸಿದೆ.ಮಂಗಳೂರಿನ ಸೀದಿ ಕನ್‌ಸ್ಟ್ರಕ್ಷನ್ ಕಂಪೆನಿ ಕಾಮಗಾರಿ ಗುತ್ತಿಗೆ ವಹಿಸಿಕೊಂಡಿತ್ತು.ಲೋಕೋಪಯೋಗಿ ಇಲಾಖೆ ನಿರ್ಮಾಣದ ಉಸ್ತುವಾರಿ ನೋಡಿಕೊಂಡಿದೆ.ಮುಂದಿನ 2 ವರ್ಷ ಲೋಕೋಪಯೋಗಿ ಇಲಾಖೆಯೇ ಇದರ ನಿರ್ವಹಣೆ ಮಾಡಲಿದೆ.


ಪುತ್ತೂರು ನ್ಯಾಯಾಲಯದ ಇತಿಹಾಸ:
ಪುತ್ತೂರಿನಲ್ಲಿ ಕೋರ್ಟ್ ಇದ್ದ ಬಗ್ಗೆ 1860ರಲ್ಲಿ ನೋಂದಾವಣೆಗೊಂಡ ದಸ್ತಾವೇಜಿನಲ್ಲಿ ಉಲ್ಲೇಖಗೊಂಡಿದೆ.ಈ ಆಧಾರದಲ್ಲಿ ಪುತ್ತೂರು ನ್ಯಾಯಾಲಯಕ್ಕೆ ಸುಮಾರು 150 ವರ್ಷಗಳಿಗಿಂತಲೂ ಹೆಚ್ಚಿನ ಇತಿಹಾಸವಿರುವುದು ಖಚಿತವಾಗಿದೆ.1880ರಲ್ಲಿ ಗೋಪುರ ಇರುವ ಕೋರ್ಟ್ ಕಟ್ಟಡ ನಿರ್ಮಾಣವಾಗಿದ್ದು ಅದರಲ್ಲಿ ಪುತ್ತೂರು ಡಿಸ್ಟ್ರಿಕ್ಟ್ ಕೋರ್ಟ್ ಕಾರ್ಯ ಆರಂಭಿಸಿತ್ತು.ಪ್ರಸ್ತುತ ಮಿನಿವಿಧಾನ ಸೌಧದ ಸಮೀಪ ಇರುವ ಕೋರ್ಟ್ನಲ್ಲಿ ಕಲಾಪಗಳು ನಡೆಯುತ್ತಿವೆ.ಕೋರ್ಟ್ ಸಂಪರ್ಕಿಸುವ ರಸ್ತೆಗೆ ಕೋರ್ಟ್ ರಸ್ತೆಯೆಂದೇ ಹೆಸರಿದೆ.ಹಿಂದೆ ಇದ್ದ ನಗರಸಭೆ ಕಚೇರಿ ಕಟ್ಟಡಕ್ಕೆ ತಾಗಿಕೊಂಡು ಇನ್ನೊಂದು ನ್ಯಾಯಾಲಯದ ಕಟ್ಟಡವಿದೆ.ಇದು ಬ್ರಿಟೀಷ್ ಕಾಲದ ನಂತರ ನಿರ್ಮಾಣ ಆಗಿದೆ.ಇಲ್ಲಿಯೂ ಕಲಾಪಗಳು ನಡೆಯುತ್ತಿದೆ.ಆನೆಮಜಲಿನಲ್ಲಿ ನೂತನ ಕಟ್ಟಡ ಲೋಕಾರ್ಪಣೆ ಆದ ಬಳಿಕ ಈ ಎರಡು ಕಟ್ಟಡದ ನ್ಯಾಯಾಲಯಗಳಲ್ಲಿ ನಡೆಯುವ ಕಲಾಪಗಳು ನೂತನ ನ್ಯಾಯಾಲಯ ಸಂಕೀರ್ಣಕ್ಕೆ ಸ್ಥಳಾಂತರಗೊಳ್ಳಲಿದೆ.


ಜ.31ರಂದು ಉದ್ಘಾಟನೆ:
ನೂತನವಾಗಿ ನಿರ್ಮಿಸಲಾಗಿರುವ ನ್ಯಾಯಾಲಯ ಕಟ್ಟಡದ ಉದ್ಘಾಟನಾ ಸಮಾರಂಭ ಜ.31ರಂದು ಕರ್ನಾಟಕ ಹೈಕೋರ್ಟ್ನ ಮುಖ್ಯ ನ್ಯಾಯಮೂರ್ತಿ ವಿಭು ಬಖ್ರು ಅವರ ಅಧ್ಯಕ್ಷತೆಯಲ್ಲಿ ನಡೆಯಲಿದೆ.ಆಂಧ್ರಪ್ರದೇಶದ ರಾಜ್ಯಪಾಲರಾಗಿರುವ ಸುಪ್ರೀಂ ಕೋರ್ಟ್ನ ವಿಶ್ರಾಂತ ನ್ಯಾಯಮೂರ್ತಿ ಎಸ್.ಅಬ್ದುಲ್ ನಜೀರ್ ಅವರು ಉದ್ಘಾಟಿಸಲಿದ್ದಾರೆ.ಕರ್ನಾಟಕ ಉಚ್ಚನ್ಯಾಯಾಲಯದ ನ್ಯಾಯಮೂರ್ತಿ, ದ.ಕ.ದ ಆಡಳಿತಾತ್ಮಕ ನ್ಯಾಯಮೂರ್ತಿಗಳೂ ಆಗಿರುವ ಹೆಚ್.ಟಿ.ನರಂದ್ರಪ್ರಸಾದ್‌ರವರು ಮುಖ್ಯ ಅತಿಥಿಯಾಗಿ ಪಾಲ್ಗೊಳ್ಳಲಿದ್ದಾರೆ.ಕರ್ನಾಟಕ ಉಚ್ಚನ್ಯಾಯಾಲಯದ ನ್ಯಾಯಮೂರ್ತಿಗಳಾಗಿರುವ ಮೊಹಮ್ಮದ್ ನವಾಜ್, ಅಶೋಕ್ ಎಸ್.ಕಿಣಗಿ, ಎಸ್.ವಿಶ್ವಜೀತ್ ಶೆಟ್ಟಿ, ರಾಜೇಶ್ ರೈ ಕೆ.,ತ್ಯಾಗರಾಜ್ ಎನ್.ಇನವಳ್ಳಿ,ಕರ್ನಾಟಕ ವಿಧಾನಸಭಾಧ್ಯಕ್ಷ ಯು.ಟಿ.ಖಾದರ್ ಫರೀದ್,ರಾಜ್ಯ ಕಾನೂನು ಸಚಿವ ಎಚ್.ಕೆ.ಪಾಟೀಲ್,ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ, ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಗೌರವಾನ್ವಿತ ಅತಿಥಿಗಳಾಗಿರುತ್ತಾರೆ.ಕರ್ನಾಟಕ ಉಚ್ಚನ್ಯಾಯಾಲಯದ ವಿಶ್ರಾಂತ ನ್ಯಾಯಮೂರ್ತಿ ಟಿ.ಜಿ.ಶಿವಶಂಕರೇ ಗೌಡ, ದ.ಕ.ಸಂಸದ ಕ್ಯಾ|ಬ್ರಿಜೇಶ್ ಚೌಟ, ಶಾಸಕ ಅಶೋಕ್ ಕುಮಾರ್ ರೈ,ಸರ್ವೋಚ್ಚ ನ್ಯಾಯಾಲಯದ ಹೆಚ್ಚುವರಿ ಸಾಲಿಸಿಟರ್ ಜನರಲ್ ಕೆ.ಎಂ.ನಟರಾಜ್,ಕರ್ನಾಟಕ ಉಚ್ಚನ್ಯಾಯಾಲಯದ ಮಹಾವಿಲೇಖನಾಧಿಕಾರಿ ಕೆ.ಎಸ್.ಭರತ್ ಕುಮಾರ್,ಕರ್ನಾಟಕ ಸರ್ಕಾರದ ಅಡ್ವೊಕೇಟ್ ಜನರಲ್ ಕೆ.ಶಶಿಕಿರಣ್ ಶೆಟ್ಟಿ,ದ.ಕ.ಜಿಲ್ಲಾಧಿಕಾರಿ ದರ್ಶನ್ ಹೆಚ್.ವಿ.,ಕರ್ನಾಟಕ ರಾಜ್ಯ ವಕೀಲರ ಪರಿಷತ್ತು ಸದಸ್ಯ ಪಿ.ಪಿ.ಹೆಗ್ಡೆ ಅವರು ವಿಶೇಷ ಆಹ್ವಾನಿತರಾಗಿರುತ್ತಾರೆ.


ನ್ಯಾಯಾಲಯದ ಎಲ್ಲಾ ಕಾಮಗಾರಿಗಳು ಪೂರ್ಣಗೊಂಡಿದೆ.ಜನವರಿ 31ಕ್ಕೆ ಸಂಕೀರ್ಣ ಉದ್ಘಾಟನೆಗೊಳ್ಳಲಿದೆ.ಮುಂದಿನ 2 ವರ್ಷ ಲೋಕೋಪಯೋಗಿ ಇಲಾಖೆ ಸಂಕೀರ್ಣದ ನಿರ್ವಹಣೆ ಮಾಡಲಿದೆ.
ಎ. ರಾಜೇಶ್ ರೈ
ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್
ಲೋಕೋಪಯೋಗಿ ಇಲಾಖೆ ಪುತ್ತೂರು

12 ಕೋರ್ಟ್ಗಳು ಕಾರ್ಯನಿರ್ವಹಿಸಲಿದೆ
ನೂತನ ನ್ಯಾಯಾಲಯದ ಸಂಕೀರ್ಣದಲ್ಲಿ 12 ಕೋರ್ಟ್ ಹಾಲ್ ಇರಲಿದೆ.ನಾಲ್ಕು ಅಂತಸ್ತಿನ ಕಟ್ಟಡದಲ್ಲಿ ಮೇಲಿನ ಮೂರು ಅಂತಸ್ತಿನಲ್ಲಿ ತಲಾ 4 ಕೋರ್ಟ್ಗಳು ಕಾರ್ಯನಿರ್ವಹಿಸಲಿವೆ. ಪ್ರಸ್ತುತ ಇರುವ ಪುತ್ತೂರಿನ ನ್ಯಾಯಾಲಯದಲ್ಲಿ ನಡೆಯುತ್ತಿರುವ 6 ಕೋರ್ಟ್ಗಳು ನೂತನ ನ್ಯಾಯಾಲಯ ಸಂಕೀರ್ಣಕ್ಕೆ ಸ್ಥಳಾಂತರಗೊಳ್ಳಲಿದೆ.ಜೊತೆಗೆ ಹೆಚ್ಚುವರಿಯಾಗಿ 1 ಪೋಕ್ಸೋ ವಿಶೇಷ ನ್ಯಾಯಾಲಯ ಮತ್ತು ಜಿಲ್ಲಾ ವಿಭಾಗದ ಹೆಚ್ಚುವರಿ 5 ಕೋರ್ಟ್ಗಳು ಮಂಜೂರುಗೊಂಡು ನ್ಯಾಯಾಲಯ ಸಂಕೀರ್ಣದಲ್ಲಿ ಕಾರ್ಯನಿರ್ವಹಿಸಲಿವೆ.

LEAVE A REPLY

Please enter your comment!
Please enter your name here