ಅರುಣ್ ಪುತ್ತಿಲರಿಂದ ಮಾಡ್ನೂರಿನಲ್ಲಿ ಮನೆಭೇಟಿ : 4 ಅಶಕ್ತ ಕುಟುಂಬಗಳಿಗೆ ಸಹಾಯಧನ ವಿತರಣೆ

0

ಕಾವು: ಪುತ್ತಿಲ ಪರಿವಾರ ಸೇವಾ ಟ್ರಸ್ಟ್‌ನ ಸ್ಥಾಪಕ, ಹಿಂದೂ ಮುಖಂಡರೂ ಆಗಿರುವ ಅರುಣ್ ಕುಮಾರ್ ಪುತ್ತಿಲರವರು ಮಾಡ್ನೂರು ಗ್ರಾಮಕ್ಕೆ ಭೇಟಿ ನೀಡಿ ಸಂಘಟನೆಯ ಕಾರ್ಯಕರ್ತರ ಜತೆಗೂಡಿ ಮನೆ ಭೇಟಿ ನಡೆಸಿ ಗ್ರಾಮದ 4 ಅಶಕ್ತ ಕುಟುಂಬಗಳಿಗೆ ಸಹಾಯಧನ ವಿತರಣಾ ಕಾರ್ಯಕ್ರಮವು ಜ.27ರಂದು ನಡೆಯಿತು.


ಪುತ್ತಿಲ ಪರಿವಾರ ಸೇವಾ ಟ್ರಸ್ಟ್‌ನ ಸ್ಥಾಪಕ ಅರುಣ್ ಕುಮಾರ್ ಪುತ್ತಿಲರವರ ಮಾರ್ಗದರ್ಶನದಲ್ಲಿ ಪುತ್ತಿಲ ಪರಿವಾರ ಸೇವಾ ಟ್ರಸ್ಟ್‌ನ ಕಾವು ಘಟಕದ ನೇತೃತ್ವದಲ್ಲಿ ಗ್ರಾಮದ ಅಶಕ್ತ ಕುಟುಂಬಗಳಿಗೆ ನೆರವಾಗುವ ನಿಟ್ಟಿನಲ್ಲಿ ಸಹಾಯಹಸ್ತ ಯೋಜನೆಯಡಿ ಕಾರ್ಯಕರ್ತರ ಮತ್ತು ದಾನಿಗಳ ಮೂಲಕ ಧನಸಂಗ್ರಹವನ್ನು ನಡೆಸಿತ್ತು. ಸಹಾಯಹಸ್ತ ಯೋಜನೆಗೆ ಮಾಡ್ನೂರು ಗ್ರಾಮದಲ್ಲಿ ಉತ್ತಮ ಸ್ಪಂದನೆ ವ್ಯಕ್ತವಾಗಿ 10 ದಿನದಲ್ಲಿ ಒಳ್ಳೆಯ ಮೊತ್ತ ಸಂಗ್ರಹವಾಗಿತ್ತು. ಪುತ್ತಿಲ ಪರಿವಾರದ ಕಾವು ಘಟಕದ ಮೂಲಕ ಸಂಗ್ರಹವಾದ ಹಣಕ್ಕೆ ಪುತ್ತಿಲ ಪರಿವಾರ ಸೇವಾ ಟ್ರಸ್ಟ್‌ನಿಂದಲೂ ಸಹಾಯಧನವನ್ನು ಸೇರಿಸಿ ಅರುಣ್ ಕುಮಾರ್ ಪುತ್ತಿಲರವರ ಗ್ರಾಮಭೇಟಿಯ ಸಂದರ್ಭದಲ್ಲಿ 4 ಕುಟುಂಬಗಳಿಗೆ ಸಹಾಯಧನ ವಿತರಣೆ ಮಾಡಲಾಯಿತು.


ಮನೆ ಭೇಟಿ ನಡೆಸಿ ಸಹಾಯಧನ ವಿತರಣೆ:
ಅರುಣ್ ಕುಮಾರ್ ಪುತ್ತಿಲರವರು ಮಾಡ್ನೂರು ಗ್ರಾಮಕ್ಕೆ ಭೇಟಿ ನೀಡಿ ಕಾವು ಹರೀಶ್ ಕುಂಜತ್ತಾಯರವರ ಮನೆಯಲ್ಲಿ ಕಾರ್ಯಕರ್ತರ ಸಭೆ ನಡೆಸಿ ಮಾತನಾಡಿ ಪುತ್ತಿಲ ಪರಿವಾರ ಕಾವು ಘಟಕದ ಕಾರ್ಯಕರ್ತರು ಈಗಾಗಲೇ ಗ್ರಾಮದಲ್ಲಿ ಹಲವಾರು ಧಾರ್ಮಿಕ ಮತ್ತು ಸಾಮಾಜಿಕ ಕಾರ್ಯದ ಮೂಲಕ ಒಳ್ಳೆಯ ಕೆಲಸಗಳನ್ನು ಮಾಡಿದ್ದಿರಿ, ಇದೀಗ ಅಶಕ್ತ ಕುಟುಂಬಕ್ಕೆ ನೆರವಾಗುವ ನಿಟ್ಟಿನಲ್ಲಿ ದಾನಿಗಳ ಮೂಲಕ ಧನಸಂಗ್ರಹವನ್ನು ಮಾಡಿ ಸಮಾಜಕ್ಕೆ ಬೆಳಕು ನೀಡುವ ಕಾರ್ಯ ಶ್ಲಾಘನೀಯವಾಗಿದೆ, ಹಿಂದೂ ಸಮಾಜಕ್ಕೆ ಮತ್ತು ರಾಷ್ಟ್ರೀಯತೆಗೆ ಇನ್ನಷ್ಟು ಶಕ್ತಿಯನ್ನು ನೀಡುವ ನಿಟ್ಟಿನಲ್ಲಿ ನಾವೆಲ್ಲರೂ ಒಟ್ಟಾಗಿ ಒಗ್ಗಟ್ಟಾಗಿ ಕೆಲಸ ಮಾಡುವ ಎಂದು ಹೇಳಿದರು.


ಕಾರ್ಯಕರ್ತರ ಸಭೆಯ ಬಳಿಕ ಅರುಣ್ ಪುತ್ತಿಲರವರು ಕಾರ್ಯಕರ್ತರ ಜತೆಗೂಡಿ ಮನೆ ಭೇಟಿ ನಡೆಸಿ ಸಹಾಯಧನ ವಿತರಣೆ ಮಾಡಿದರು. ಅನಾರೋಗ್ಯದಿಂದ ಬಳಲುತ್ತಿರುವ ಕಾವು ಮಾಣಿಯಡ್ಕ ನಿವಾಸಿ ದಿ. ಬಾಬು ನಾಯ್ಕರವರ ಪತ್ನಿ ಶಾರದಾರವರಿಗೆ, ಪಲಾಶತ್ತಡ್ಕ ಕೃಷ್ಣ ಮುಖಾರಿಯವರ ಮಗ ಸತೀಶರವರಿಗೆ, ಪಳನೀರು ಅಣ್ಣು ಪೂಜಾರಿಯವರ ಮಗ ನವೀನರವರಿಗೆ ಹಾಗೂ ಮನೆ ರಿಪೇರಿಗಾಗಿ ಕಾವು ಪೂವಂದೂರು ನಿವಾಸಿ ವಿಮಲರವರಿಗೆ ತಲಾ ರೂ.10 ಸಾವಿರ ಮೊತ್ತದ ಚೆಕ್ ವಿತರಣೆ ಮಾಡಲಾಯಿತು.


ಈ ಸಂದರ್ಭದಲ್ಲಿ ಪುತ್ತಿಲ ಪರಿವಾರದ ರವಿಕುಮಾರ್ ಕೆದಂಬಾಡಿ, ಕಾವು ಘಟಕದ ಪದಾಧಿಕಾರಿಗಳಾದ ಹರೀಶ್ ಕುಂಜತ್ತಾಯ, ರವಿಪ್ರಸಾದ್ ರೈ, ಯೋಗೀಶ್ ಕಾವು, ಅನಂತಕೃಷ್ಣ ಕುಂಜತ್ತಾಯ, ನಿರಂಜನ ಕಮಲಡ್ಕ, ಬಾಲಮುರಳಿ ಸಸ್ಪೆಟ್ಟಿ, ಅಮೃತಲಿಂಗಂ ಕಾವು, ಚಿದಾನಂದ ಆಚಾರ್ಯ ಸಸ್ಪೆಟ್ಟಿ, ರಾಜೇಶ್ ಪೂಜಾರಿ ಸೀಮುಂಜ, ಯೋಗೀಶ್ ಸುರೋಳ್ತಡಿ, ರವಿಕಿರಣ ಕಾವು, ಕಮಲಾಕ್ಷ ಕಾವು, ಪ್ರದೀಪ್ ಪೂಜಾರಿ ಸೇರಿದಂತೆ ಅನೇಕ ಕಾರ್ಯಕರ್ತರು ಪಾಲ್ಗೊಂಡಿದ್ದರು.

LEAVE A REPLY

Please enter your comment!
Please enter your name here