






ಸಾಂಪ್ರದಾಯಿಕ ಆಚರಣೆಗಳ ಹಿತರಕ್ಷಣಾ ಸಮಿತಿ ಸಮಾಲೋಚನಾ ಸಭೆಯಲ್ಲಿ ಶಾಸಕ ಅಶೋಕ್ಕುಮಾರ್ ರೈ


ಪುತ್ತೂರು; ಕಂಬಳವನ್ನು ನಿಷೇಧ ಮಾಡಬೇಕೆಂದು ಅನೇಕ ಪ್ರಯತ್ನಗಳು ನಡೆದಾಗ ಅದರ ಹಿಂದೆ ಬಿದ್ದು ನಿರಂತರ ಹೋರಾಟ ನಡೆಸಿ, ವಿಚಾರವನ್ನು ಸುಪ್ರಿಂಕೋರ್ಟು ತನಕ ಕೊಂಡೊಯ್ದು ಕಂಬಳದ ಪರವಾಗಿ ಸುಗ್ರಿವಾಜ್ಞೆ ತರುವ ತನಕ ಹೋರಾಟ ಮಾಡಿ ಗೆದ್ದಿದ್ದೇವೆ, ಅದೇ ರೀತಿ ಮುಂದೆ ಜೂಜು ರಹಿತ ಸಾಂಪ್ರದಾಯಿಕ ಕೋಳಿ ಅಂಕಕ್ಕಾಗಿ ಹೋರಾಟ ನಡೆಸಬೇಕಾದ ಅನಿವಾರ್ಯತೆ ಇದ್ದು, ರಾಜಕೀಯ ರಹಿತವಾಗಿ ನಾವೆಲ್ಲರೂ ಒಗ್ಗಟ್ಟಾಗಿ ರಾಜಕೀಯ ಮತ್ತು ಕಾನೂನಾತ್ಮಕ ಹೋರಾಟವನ್ನು ನಡೆಸಬೇಕಿದೆ ಎಂದು ಪುತ್ತೂರು ಶಾಸಕ ಅಶೋಕ್ ರೈ ಹೇಳಿದ್ದಾರೆ.



ಸಾಂಪ್ರದಾಯಿಕ ಆಚರಣಾ ಹಿತರಕ್ಷಣಾ ವೇದಿಕೆ ವತಿಯಿಂದ ನಮ್ಮ ತುಳುನಾಡ ಸಂಸ್ಕೃತಿ, ಕ್ರೀಡೆ ಆಚರಣೆಗಳ ಉಳಿವಿಗಾಗಿ ಸಾಲ್ಮರ ಕೊಟೇಚಾ ಸಭಾಂಗಣದಲ್ಲಿ ಫೆ.1 ರಂದು ನಡೆದ ಜಿಲ್ಲಾ ಮಟ್ಟದ ಸಮಾಲೋಚನಾ ಸಭೆಯಲ್ಲಿ ಶಾಸಕರು ಮಾತನಾಡಿದರು. ಜಿಲ್ಲೆಯ ಜಾನಪದ ವೀರ ಕ್ರೀಡೆಯಾಗಿರುವ ಕಂಬಳದಂತೆ ಜಾನಪದ ಶೈಲಿಯಲ್ಲಿಯೇ ನಡೆಯುತ್ತಿರುವ ಕೋಳಿ ಅಂಕಕ್ಕೂ ಸಾಮಾಜಿಕವಾದ ಮನ್ನಣೆ ಸಿಗಬೇಕು. ಧಾರ್ಮಿಕ ಕೇಂದ್ರಗಳಲ್ಲಿ ಮತ್ತು ಧಾರ್ಮಿಕ ಉತ್ಸವಗಳಲ್ಲಿ ನಡೆಯುವ ಜೂಜು ರಹಿತ ಕೋಳಿ ಅಂಕಕ್ಕೆ ಅನುಮತಿ ಕೊಡಿಸಬೇಕಿದೆ. ಜೂಜು ಇರುವ ಅಂಕಕ್ಕೆ ನನ್ನ ಯಾವುದೇ ಬೆಂಬಲವಿಲ್ಲ. ಜೂಜು ಸಹಿತ ನಡೆಯುವ ಕೋಳಿ ಅಂಕಕ್ಕೆ ನನ್ನ ಬದ್ದ ವಿರೋಧವಿದೆ. ಜೂಜು ಕೋಳಿ ಅಂಕಕ್ಕೆ ಯಾವುದೇ ಕಾರಣಕ್ಕೂ ಬೆಂಬಲ ಕೊಡಬಾರದು ಎಂದು ಈಗಾಗಲೇ ನೂರಾರು ತಾಯಂದಿರು ನನಗೆ ಕರೆ ಮಾಡಿ ತಿಳಿಸಿದ್ದಾರೆ. ಜೂಜು ರಹಿತ ಕೋಳಿ ಅಂಕ ನಡೆಸಲು ರಾಜಕೀಯ ಬಿಟ್ಟು ಸಂಘಟಿತರಾಗಿ ಬರುವುದಾದರೆ ನಿಮ್ಮ ಜೊತೆ ನಾನೂ ಇದ್ದೇನೆ ಎಂದು ಹೇಳಿದರು.

ಕೋಳಿ ಅಂಕಕ್ಕೆ ಹೋಗುವವರು ಚಳ್ಳ್ಗಳಲ್ಲ:
ಕೋಳಿ ಅಂಕಕ್ಕೆ ಹೋಗುವವರನ್ನು ಕೆಟ್ಟ ದೃಷ್ಟಿಯಿಂದ ನೋಡುವವರು ಇದ್ದಾರೆ. ಅವರನ್ನು ಚಳ್ಳ್ ಎಂದು ಕರೆಯುವವರಿದ್ದಾರೆ. ಕೋಳಿ ಅಂಕ ಮಾಡುವವರು, ಮಾಡಿಸುವವರು ಚಳ್ಳ್ಗಳಲ್ಲ ಅವರು ರೈತರು. ತಾವು ಸಾಕಿದ ಕೋಳಿಯನ್ನು ದೇವರ ಮುಂದೆ ಅಂಕದ ರೂಪದಲ್ಲಿ ಸಂಭ್ರಮಿಸುವ ಕಾರ್ಯವಾಗಿದೆ, ಕೋಳಿ ಅಂಕ ಮಾಡುವವರು ಎದೆ ತಟ್ಟಿ ನಾನು ರೈತ ಎಂದು ಹೇಳಬೇಕು ಎಂದು ಶಾಸಕರು ಹೇಳಿದರು.
ಸರಕಾರದ ಜೊತೆ ಚರ್ಚೆ ನಡೆಸುವೆ;
ಸಾಂಪ್ರದಾಯಿಕ ಕೋಳಿ ಅಂಕ ನಡೆಸುವ ಬಗ್ಗೆ ನಾನು ಮುಖ್ಯಮಂತ್ರಿ, ಗೃಹ ಸಚಿವ ಹಾಗೂ ಉಪಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಜೊತೆ ಚರ್ಚೆ ನಡೆಸುವೆ. ಯಾವ ರೀತಿಯಲ್ಲಿ ಕೋಳಿ ಅಂಕ ನಡೆಸಬಹುದು ಎಂಬುದರ ಬಗ್ಗೆ ಕಾನೂನಾತ್ಮಕ ವಿಚಾರಗಳನ್ನು ಅರಿತುಕೊಳ್ಳಬೇಕಾಗುತ್ತದೆ ಎಂದು ಶಾಸಕರು ಹೇಳಿದರು.
ಸಮಾಲೋಚನಾ ಸಭೆಯ ವೇದಿಕೆಯಲ್ಲಿ ಹಿರಿಯರಾದ ಬಟ್ಯಪ್ಪ ಪೂಜಾರಿ, ನೆಲ್ಲಿಕಟ್ಟೆ ಜಗದೀಶ್ ಶೆಟ್ಟಿ, ಹಿತರಕ್ಷಣಾ ಸಮಿತಿ ಸಂಚಾಲಕ ಬೆಳಿಯಪ್ಪ ಗೌಡ, ಜಿ.ಪಂ.ಮಾಜಿ ಸದಸ್ಯ ಶಿವಣ್ಣ ಗೌಡ ಇಡ್ಯಾಡಿ ಮತ್ತಿತರರು ಭಾಗವಹಿಸಿದ್ದರು. ಕೋಳಿ ಅಂಕದ ಪರ ಹಲವಾರು ಮಂದಿ ಸಭೆಯಲ್ಲಿ ಭಾಗವಹಿಸಿದ್ದರು.
ಹಿಂದುತ್ವದ ಬಗ್ಗೆ ಮಾತನಾಡುವವರು ಎಲ್ಲಿದ್ದಾರೆ ?
ಅವಕಾಶ ಸಿಕ್ಕಾಗಲೆಲ್ಲಾ ಹಿಂದುತ್ವದ ಬಗ್ಗೆ ಭಾಷಣ ಮಾಡುವವರು ಎಲ್ಲಿದ್ದಾರೆ ?. ಸಾಂಪ್ರದಾಯಿಕ ಕೋಳಿ ಅಂಕವನ್ನು ನಡೆಸುವಲ್ಲಿ ಇವರೆಲ್ಲಾ ಹೋರಾಟಕ್ಕೆ ಧುಮುಕಬೇಕಿತ್ತು, ಯಾಕೆ ಮೌನವಾಗಿದ್ದಾರೆ ಎಂದು ಪ್ರಶ್ನಿಸಿದ ಶಾಸಕರು ಕೆಲವರು ವೋಟಿಗಾಗಿ ಮಾಡುವ ಡುಪ್ಲಿಕೆಟ್ ಹಿಂದುತ್ವ ಎಂಬುದು ಎಲ್ಲರಿಗೂ ಗೊತ್ತಾಗತೊಡಗಿದೆ ಎಂದು ಕುಟುಕಿದರು. ನಾನು ನಿಮ್ಮ ಜೊತೆ ಇದ್ದು ಹೋರಾಟ ಮಾಡಲು ಸಿದ್ದನಾಗಿದ್ದೇನೆ ಎಂದು ಶಾಸಕರು ಹೇಳಿದರು.
12 ಶಾಸಕರ ಮನೆಯ ಬಾಗಿಲು ಬಡಿಯಿರಿ
ಉಭಯ ಜಿಲ್ಲೆಯ 12 ಮಂದಿ ಶಾಸಕರು ಸರಕಾರಕ್ಕೆ ಒತ್ತಡ ತಂದಲ್ಲಿ ಕೋಳಿ ಅಂಕಕ್ಕೆ ಕಾನೂನು ಅಥವಾ ಅನುಮತಿ ಕೊಡಿಸಲು ಕಷ್ಟವೇನಿಲ್ಲ. ಆದರೆ ಅವರು ಬರುತ್ತಾರಾ ಎಂದು ಪ್ರಶ್ನಿಸಿದ ಅಶೋಕ್ ಕುಮಾರ್ ರೈ, ಮತ ಹಾಕಿದ್ದೀರಲ್ಲ, ಅವರ ಮನೆಯ ಬಾಗಿಲು ಬಡಿಯಿರಿ, ಹೋರಾಟಕ್ಕೆ ಕರೆದುಕೊಂಡು ಬನ್ನಿ ಅಥವಾ ಅಧಿವೇಶನದಲ್ಲಿ ಪ್ರಶ್ನೆ ಕೇಳಲು ಹೇಳಿ. ನಾನೂ ಅವರ ಜೊತೆಗೆ ನಿಲ್ಲುತ್ತೇನೆ ಎಂದು ಹೇಳಿದರು. ಜಿಲ್ಲೆಯ ಜನ ಸಂಕಷ್ಟದಲ್ಲಿದ್ದಾಗ ರಾಜಕೀಯ ಬದಿಗಿಟ್ಟು ಜನರ ಜೊತೆ ಸೇರಿಕೊಳ್ಳಬೇಕು. ವಿಧಾನಸಭಾ ಅಧ್ಯಕ್ಷ ಯು.ಟಿ.ಖಾದರ್ ರವರು ಜೂಜು ರಹಿತ ಕೋಳಿ ಅಂಕಕ್ಕೆ ನನ್ನ ಬೆಂಬಲ ಇದೆ ಎಂದು ತಿಳಿಸಿದ್ದಾರೆ ಎಂದು ಶಾಸಕರು ತಿಳಿಸಿದರು.
10 ಗಂಟೆಗೆ ಮೈಕ್ ಆಫ್ ಮಾಡುತ್ತಿರುವುದು ಬಿಜೆಪಿ ಸರಕಾರದ ಕಾನೂನು
ಜಿಲ್ಲೆಯಲ್ಲಿ ಕೆಲ ತಿಂಗಳಿನಿಂದ ರಾತ್ರಿ 10 ಗಂಟೆಯ ನಂತರ ಸಾರ್ವಜನಿಕ ಕಾರ್ಯಕ್ರಮಕ್ಕೆ ಅನುಮತಿ ನೀಡುತ್ತಿಲ್ಲ. ಈ ಕಾನೂನು ಜಾರಿಗೆ ತಂದಿದ್ದು ಕಾಂಗ್ರೆಸ್ ಸರಕಾರವಲ್ಲ, ಮೂರು ವರ್ಷಗಳ ಹಿಂದೆ ರಾಜ್ಯದಲ್ಲಿ ಅಧಿಕಾರದಲ್ಲಿದ್ದ ಬಸವರಾಜ ಬೊಮ್ಮಾಯಿ ನೇತೃತ್ವದ ಬಿಜೆಪಿ ಸರಕಾರ. ಈ ಕಾನೂನು ಕಾರ್ಯರೂಪಕ್ಕೆ ಬರುವಾಗ ಮೂರು ವರ್ಷ ಕಳೆದಿದೆ. ಈಗ ಅದನ್ನು ಕಾಂಗ್ರೆಸ್ ಸರಕಾರ ಮಾಡಿದ್ದು ಎಂದು ಜನರ ದಿಕ್ಕು ತಪ್ಪಿಸಿ ರಾಜಕೀಯ ಮಾಡುತ್ತಿದ್ದಾರೆ. ಸತ್ಯವನ್ನು ಒಪ್ಪಿಕೊಳ್ಳಬೇಕು. ಅದರಲ್ಲಿ ರಾಜಕೀಯ ಮಾಡಬಾರದು. ರಾಜಕೀಯ ಏನಿದ್ದರೂ ಚುನಾವಣೆಯ ಸಮಯದಲ್ಲಿ ಮಾತ್ರ ಇರಬೇಕು ಎಂದ ಶಾಸಕರು ಹೇಳಿದರು.










