






ವಿಟ್ಲ: ಬೈಕ್ ಒಂದು ಮಹಿಳೆಯೊಬ್ಬರಿಗೆ ಡಿಕ್ಕಿ ಹೊಡೆದ ಪರಿಣಾಮ ಮಹಿಳೆ ಸ್ಥಳದಲ್ಲೇ ಮೃತಪಟ್ಟಿದ್ದು, ಬೈಕ್ ಸವಾರ ಗಂಭೀರವಾಗಿ ಗಾಯಗೊಂಡಿರುವ ಘಟನೆ ವಿಟ್ಲ ಬಸ್ ನಿಲ್ದಾಣದ ಬಳಿ ನಡೆದಿದೆ.


ಅಪಘಾತದಿಂದಾಗಿ ವಿಟ್ಲ ಮುಡ್ನೂರು ಗ್ರಾಮದ ಮರುವಾಳ ನಿವಾಸಿ ಸೀತಾ ಶೆಟ್ಟಿ (68 ವ) ಮೃತ ದುರ್ದೈವಿ ಮಹಿಳೆ. ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡ ಬೈಕ್ ಸವಾರನನ್ನು ಸ್ಥಳೀಯರು ಖಾಸಗಿ ಆಸ್ಪತ್ರೆಗೆ ರವಾನಿಸಿದ್ದಾರೆ. ಬೈಕ್ ಸವಾರ ಪುತ್ತೂರು ಮೂಲದವರು ಎಂದು ತಿಳಿದು ಬಂದಿದೆ.



ಅಪಘಾತದ ನಂತರ ಬೈಕ್ ಸುಮಾರು 50 ಮೀಟರ್ ದೂರ ರಸ್ತೆಯಲ್ಲಿ ಎಳೆಯುತ್ತ ಹೋಗಿ ಬಿದ್ದಿದೆ ಎಂದು ಸ್ಥಳೀಯರು ಮಾಹಿತಿ ನೀಡಿದ್ದಾರೆ. ಗಾಯಗೊಂಡು ಬಿದ್ದಿದ್ದ ಬೈಕ್ ಸವಾರನನ್ನು ಯಾರೂ ಮುಟ್ಟದೆ ಇದ್ದ ಸಂದರ್ಭ ಕಾಶಿಮಠ ನಿವಾಸಿ ಪ್ರತಾಪ್ ಅವರು ಮಾನವೀಯತೆ ಮೆರೆದಿದ್ದು, ತಮ್ಮ ದ್ವಿಚಕ್ರ ವಾಹನದಲ್ಲಿ ಗಾಯಾಳುವನ್ನು ತಕ್ಷಣ ಆಸ್ಪತ್ರೆಗೆ ಸೇರಿಸಿದ್ದಾರೆ.
ಮೃತ ಸೀತಾ ಶೆಟ್ಟಿ ಅವರು ಓರ್ವ ಪುತ್ರ ರೂಪೇಶ್ ಹಾಗೂ ಪುತ್ರಿ ರೂಪಿತ ರವನ್ನು ಅಗಲಿದ್ದಾರೆ. ಘಟನಾ ಸ್ಥಳಕ್ಕೆ ವಿಟ್ಲ ಠಾಣಾ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.










