







ಪುತ್ತೂರು: ಸರಕಾರಿ ನೌಕರರು ನಿವೃತ್ತಿ ಅವಧಿಯಲ್ಲಿ ಪಡೆಯುವ ಹಣಕ್ಕಿಂತ ಕಮ್ಯುಟೇಷನ್ ಹಣ ದುಪ್ಪಾಟಾಗಿರುವ ವಿಚಾರದಲ್ಲಿ ಮಾಸಿಕ ಕಂತನ್ನು ಸೀಮಿತಗೊಳಿಸುವಂತೆ ಹರಿಯಾಣ, ತೆಲಂಗಾಣದಲ್ಲಿ ಬಂದ ತೀರ್ಪಿನಂತೆ ನಮ್ಮಲ್ಲೂ ದಾವೆ ಹೂಡುವ ಕುರಿತು ಚರ್ಚಿಸಲು ಫೆ. 21ರಂದು ಸದಸ್ಯರ ಸಭೆಯನ್ನು ಕರೆಯುವ ಕುರಿತು ಕರ್ನಾಟಕ ರಾಜ್ಯ ನಿವೃತ್ತ ನೌಕರರ ಸಂಘದ ಕಾರ್ಯಕಾರಿಣಿ ಸಭೆಯಲ್ಲಿ ನಿರ್ಣಯಿಸಲಾಗಿದೆ.


ಇತ್ತೀಚೆಗೆ ಪುತ್ತೂರು ಕರ್ನಾಟಕ ರಾಜ್ಯ ನಿವೃತ್ತ ನೌಕರರ ಸಂಘದ ಸಭೆಯಲ್ಲಿ ಸಂಘದ ಅಧ್ಯಕ್ಷ ಬಿ.ಐತ್ತಪ್ಪ ನಾಯ್ಕ್ ಅವರ ಅದ್ಯಕ್ಷತೆಯಲ್ಲಿ ನಡೆದ ಕಾರ್ಯಕಾರಿ ಸಮಿತಿಯಲ್ಲಿ ಈ ಕುರಿತು ನಿರ್ಣಯಿಸಲಾಗಿದೆ. ರಾಜ್ಯ ಸರ್ಕಾರಿ ನೌಕರರು ಸೇವಾ ನಿವೃತ್ತಿ ಹೊಂದುವ ಸಂದರ್ಭ ಪಡೆದುಕೊಳ್ಳುವ ಕಮ್ಯುಟೇಷನ್ ಹಣವನ್ನು ಪ್ರತಿ ತಿಂಗಳ ನಿವೃತ್ತಿ ವೇತನದಿಂದ 15 ವರ್ಷಗಳವರೆಗೆ ಸಮಾನ ಕಂತುಗಳಲ್ಲಿ ಮರು ಪಾವತಿಸಬೇಕಾಗಿರುತ್ತದೆ. 15ವರ್ಷಗಳಲ್ಲಿ ಕಟಾವು ಗೊಳ್ಳುವ ಮೊತ್ತವು ನಿವೃತ್ತಿ ಅವಧಿಯಲ್ಲಿ ಪಡೆದ ಹಣಕ್ಕಿಂತ ದುಪ್ಪಟ್ಟಾಗಿರುತ್ತದೆ. ಈ ಬಗ್ಗೆ ಹರಿಯಾಣ, ತೆಲಂಗಾಣ ರಾಜ್ಯದ ನೌಕರರು ನ್ಯಾಯಾಲಯದಲ್ಲಿ ದಾವೆ ಹೂಡಿ ಮಾಸಿಕ ಕಂತನ್ನು 12ವರ್ಷಗಳಿಗೆ ಸೀಮಿತಗೊಳಿಸಿ ನಿಲ್ಲಿಸುವಂತೆ ತೀರ್ಪು ಬಂದಿರುತ್ತದೆ.ನಮ್ಮ ರಾಜ್ಯದಲ್ಲಿಯೂ ಕೆಲವು ನಿವ್ರತ್ತರು ನ್ಯಾಯಾಲಯದಲ್ಲಿ ದಾವೆ ಹೂಡಿರುವುದು ತಮ್ಮ ಗಮನಕ್ಕೆ ಬಂದಿರುತ್ತದೆ. ಈ ಬಗ್ಗೆ ಚರ್ಚಿಸಲಾಗಿ ನಿವೃತ್ತಿಗೊಂಡು 15 ವರ್ಷ ಪೂರೈಸದ ಸದಸ್ಯರ ಸಭೆಯನ್ನು ಕರೆದು ಚರ್ಚಿಸಿ ತೀರ್ಮಾನಕ್ಕೆ ಬರುವುದೆಂದು ನಿರ್ಣಯಿಸಲಾಗಿದೆ. ಈ ವಿಷಯವನ್ನು ಸದಸ್ಯರ ಗಮನಕ್ಕೆ ತರಲು ಫೆ.21ರಂದು ಸಭೆ ಕರೆಯಲು ತೀರ್ಮಾನಿಸಲಾಯಿತು.












