






ಸಹಕರಿಸಿದ ಸರ್ವರಿಗೂ ಹೃದಯಾಂತರಾಳದ ಧನ್ಯವಾದಗಳು: ಶರತ್ ಕುಮಾರ್ ಮಾಡಾವು


ಪುತ್ತೂರು: ಗ್ರಾಮದ ಅಭಿವೃದ್ಧಿಯಲ್ಲಿ ರಾಜಕೀಯ ರಹಿತವಾಗಿ ಸೇವೆ ಮಾಡಿದ ಧನ್ಯತಾಭಾವ ಇದೆ. ಕೆಯ್ಯೂರು ಗ್ರಾಪಂಗೆ ಗಾಂಧಿ ಗ್ರಾಮ ಪುರಸ್ಕಾರ ಲಭಿಸಬೇಕಾದರೆ ಅದರ ಹಿಂದೆ ಪ್ರತಿಯೊಬ್ಬರ ಶ್ರಮ ಇದೆ. ಅಧಿಕಾರಿ ವರ್ಗದವರಿಂದ ಹಿಡಿದು ಗ್ರಾಮಸ್ಥರ ತನಕದ ಸಹಕಾರದಿಂದಲೇ ಇದು ಸಾಧ್ಯವಾಗಿದೆ. ಅಭಿವೃದ್ಧಿ ವಿಚಾರದಲ್ಲಿ ಮಾಜಿ, ಹಾಲಿ ಶಾಸಕರು, ಸಂಸದರು ಸೇರಿದಂತೆ ತಾಪಂ,ಜಿಪಂ ಅಧಿಕಾರಿ ವರ್ಗದವರು ಗ್ರಾಮಕ್ಕೆ ಒಳ್ಳೆಯ ರೀತಿಯಲ್ಲಿ ಸಹಕಾರ ನೀಡಿದ್ದಾರೆ. ಸಹಕರಿಸಿದ ಪ್ರತಿಯೊಬ್ಬರಿಗೂ ಹೃದಯಾಂತರಾಳದ ಧನ್ಯವಾದಗಳನ್ನು ಅರ್ಪಿಸುತ್ತಿದ್ದೇವೆ, ಮುಂದೆಯೂ ತಮ್ಮೆಲ್ಲರ ಸಹಕಾರವನ್ನು ಬಯಸುತ್ತೇವೆ ಎಂದು ಕೆಯ್ಯೂರು ಗ್ರಾಪಂ ಅಧ್ಯಕ್ಷ ಶರತ್ ಕುಮಾರ್ ಮಾಡಾವು ಹೇಳಿದರು.




ಅವರು ಗ್ರಾಮದ ಅಭಿವೃದ್ಧಿಯಲ್ಲಿ ಕೈ ಜೋಡಿಸಿದವರಿಗೆ ಫೆ.13 ರಂದು ಕೆಯ್ಯೂರು ಗ್ರಾಪಂ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಕೃತಜ್ಞತಾ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಗ್ರಾಮ ಅಭಿವೃದ್ಧಿಯಾಗಬೇಕಾದರೆ ಕೇವಲ ಅದು ಗ್ರಾಪಂ ಆಡಳಿತದಿಂದ ಮಾತ್ರ ಸಾಧ್ಯವಿಲ್ಲ, ಮುಖ್ಯವಾಗಿ ಗ್ರಾಮಸ್ಥರ ಸಹಕಾರವಿದ್ದಾಗ ಎಲ್ಲವೂ ಸಾಧ್ಯವಾಗುತ್ತದೆ ಎಂದ ಶರತ್ ಕುಮಾರ್ ರವರು, ಸ್ವಚ್ಛತೆಯ ವಿಷಯದಲ್ಲಿ ಬಹಳಷ್ಟು ಮಂದಿ ಸಹಕಾರ ನೀಡಿದ್ದಾರೆ ಆದ್ದರಿಂದಲೇ ಕೆಯ್ಯೂರು ಪೊರ್ಲುದ ಕೆಯ್ಯೂರು ಆಗಲು ಸಾಧ್ಯವಾಗಿದೆ ಎಂದರು. ನಮ್ಮ ಆಡಳಿತದಲ್ಲಿ ಎಲ್ಲವನ್ನು ಕೊಡಲು ಸಾಧ್ಯವಾಗಿಲ್ಲ ಎಂಬುದು ತಿಳಿದಿದೆ ಆದರೂ ಸಾಧ್ಯವಾದ ರೀತಿಯಲ್ಲಿ ಅಭಿವೃದ್ಧಿ ಮಾಡಲು ಪ್ರಯತ್ನ ಪಟ್ಟಿದ್ದೇವೆ ನಮ್ಮಿಂದ ಯಾರಿಗಾದರೂ ಬೇಸರವಾಗಿದ್ದಲ್ಲಿ ಕ್ಷಮೆಯನ್ನು ಕೇಳಲು ಕೂಡ ನಾವು ತಯಾರಿದ್ದೇವೆ ಎಂದ ಶರತ್ ಕುಮಾರ್ರವರು ಮುಂದಿನ ದಿನಗಳಲ್ಲೂ ಉತ್ತಮ ಸಹಕಾರ ನೀಡುವಂತೆ ಕೇಳಿಕೊಂಡು ಸರ್ವರಿಗೂ ಕೃತಜ್ಞತೆ ಸಲ್ಲಿಸಿದರು. ಗ್ರಾಪಂ ಉಪಾಧ್ಯಕ್ಷೆ ಸುಮಿತ್ರಾ ಪಲ್ಲತ್ತಡ್ಕರವರು ಮಾತನಾಡಿ, ನಮ್ಮ ಅವಧಿಯಲ್ಲಿ ಪ್ರತಿಯೊಬ್ಬರು ಉತ್ತಮ ರೀತಿಯಲ್ಲಿ ಸಹಕಾರ ನೀಡಿದ್ದೀರಿ, ಗ್ರಾಮಸ್ಥರ, ಅಧಿಕಾರಿ ವರ್ಗ, ಸಿಬ್ಬಂದಿಗಳ ಸಹಕಾರದಿಂದಲೇ ಎಲ್ಲವೂ ಸಾಧ್ಯವಾಗಿದೆ ಎಂದು ಹೇಳಿ ಕೃತಜ್ಞತೆ ಸಲ್ಲಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಗ್ರಾಮ ಆಡಳಿತ ಅಧಿಕಾರಿ ಉಮೇಶ್ ಕಾವಡಿಯವರು, ನಾನು ಕಂಡಂತೆ ಕೆಯ್ಯೂರು ಗ್ರಾಪಂ ಶರತ್ ಕುಮಾರ್ರವರ ಆಡಳಿತದಲ್ಲಿ ತುಂಬಾ ಒಳ್ಳೆಯ ಕೆಲಸಗಳನ್ನು ಮಾಡಿದೆ ಪ್ರತಿಯೊಬ್ಬ ಸದಸ್ಯ ಕೂಡ ಬಡವರ ಪರ ಕೆಲಸ ಮಾಡಿದ್ದಾರೆ ಇದು ನನಗೆ ಬಹಳಷ್ಟು ಖುಷಿ ಕೊಟ್ಟಿದೆ ಎಂದರು. ಕೆಯ್ಯೂರು ವರ್ತಕರ ಸಂಘದ ಅಧ್ಯಕ್ಷ ವಿಶ್ವನಾಥ ಪೂಜಾರಿ ಕೆಂಗುಡೇಲುರವರು ಪಂಚಾಯತ್ ನಡೆದುಬಂದ ಹಾದಿಯನ್ನು ನೆನಪಿಸಿಕೊಂಡು ಅಂದಿನಿಂದ ಇಂದಿನವರೇಗೂ ಉತ್ತಮ ಆಡಳಿತವನ್ನು ನೀಡಿದೆ ಎಂದರು. ಗ್ರಾಪಂ ಸದಸ್ಯ ಅಬ್ದುಲ್ ಖಾದರ್ ಮೇರ್ಲರವರು ಮಾತನಾಡಿ, ರಾಜಕೀಯ ರಹಿತವಾಗಿ ನಾವೆಲ್ಲರೂ ಗ್ರಾಮದ ಅಭಿವೃದ್ಧಿಗೆ ಶ್ರಮ ಪಟ್ಟಿದ್ದೇವೆ. ಆದರೂ ನಮಗೆ ಎಲ್ಲವನ್ನು ಮಾಡಲು ಸಾಧ್ಯವಾಗಿಲ್ಲ ಎಂಬ ನೋವು ಇದೆ. ನಮ್ಮ ಸದಸ್ಯತ್ವ ಮುಗಿದರೂ ಮುಂದೆಯೂ ನಾವು ನಿಮ್ಮೊಂದಿಗೆ ಇದ್ದೇವೆ. ಜನರ ಸೇವೆಯೇ ನಮ್ಮ ಧ್ಯೇಯ ಎಂದು ಹೇಳಿ ಕೃತಜ್ಞತೆ ಸಲ್ಲಿಸಿದರು. ಸದಸ್ಯ ಜಯಂತ ಪೂಜಾರಿ ಕೆಂಗುಡೇಲು ಮಾತನಾಡಿ, ಒಬ್ಬ ಕ್ರಿಯಾಶೀಲ ಅಧ್ಯಕ್ಷ ಶರತ್ ಕುಮಾರ್ರವರ ಆಡಳಿತದಲ್ಲಿ ಎಲ್ಲರನ್ನು ಒಮ್ಮತಕ್ಕೆ ಪಡೆದುಕೊಂಡು ಗ್ರಾಮದಲ್ಲಿ ಒಳ್ಳೆಯ ಅಭಿವೃದ್ಧಿ ಕೆಲಸ ನಡೆದಿದೆ ಎಂದು ಹೇಳಲು ಸಂತೋಷವಾಗುತ್ತಿದೆ ಎಂದು ಹೇಳಿದರು. ವರ್ತಕರ ಸಂಘದ ಸ್ಥಾಪಕ ಅಧ್ಯಕ್ಷ ಆನಂದ ರೈ ದೇನಿನಗರ ಮಾತನಾಡಿ, ಗ್ರಾಮದಲ್ಲಿ ಬಹಳಷ್ಟು ಅಭಿವೃದ್ದಿ ಕಾರ್ಯಗಳು ನಡೆದಿರುವುದು ತೃಪ್ತಿ ತಂದಿದೆ ಎಂದರು. ಸದಸ್ಯೆ ಮೀನಾಕ್ಷಿ ವಿ.ರೈಯವರು ಮಾತನಾಡಿ, ಗ್ರಾಮದ ದಾನಿಗಳ ನೆರವನ್ನು ಪಡೆದುಕೊಂಡು ಕೂಡ ನಾನು ಜನರಿಗೆ ಸಹಾಯವಾಗುವ ಕೆಲಸವನ್ನು ಮಾಡಿದ್ದೇನೆ. ಪಂಚಾಯತ್ನಿಂದ ತುಂಬಾ ಒಳ್ಳೆಯ ಕಾರ್ಯಗಳು ನಡೆದಿರುವುದು ನಮಗೆ ಹೆಮ್ಮೆ ತಂದಿದೆ ಎಂದರು.
ಆಶಾ ಕಾರ್ಯಕರ್ತೆ ಭವಾನಿ ಚಿದಾನಂದ್, ಅಂಗನವಾಡಿ ಕಾರ್ಯಕರ್ತೆ ಪದ್ಮಾಕ್ಷಿ, ಹಿರಿಯ ವಿದ್ಯಾರ್ಥಿ ಸಂಘದ ಕಾರ್ಯದರ್ಶಿ ಪ್ರಮೀತ್ರಾಜ್ ಕಟ್ಟತ್ತಾರುರವರುಗಳು ತಮ್ಮ ಅನಿಸಿಕೆ ವ್ಯಕ್ತಪಡಿಸಿದರು.
ಸ್ಮರಣಿಕೆಯೊಂದಿಗೆ ಗೌರವಾರ್ಪಣೆ
ಗ್ರಾಮ ಪಂಚಾಯತ್ನ ಅಭಿವೃದ್ಧಿ ಕೆಲಸಗಳೊಂದಿಗೆ ಕೈ ಜೋಡಿಸಿದವರನ್ನು ಈ ಸಂದರ್ಭದಲ್ಲಿ ಸ್ಮರಣಿಕೆಯೊಂದಿಗೆ ಗೌರವಿಸಲಾಯಿತು. ವಿಶೇಷವಾಗಿ ಗ್ರಾಮದ ಎಲ್ಲಾ ಅಂಗನವಾಡಿ ಕಾರ್ಯಕರ್ತೆಯರಿಗೆ, ಎಲ್ಲಾ ಆಶಾ ಕಾರ್ಯಕರ್ತೆಯರಿಗೆ, ಗ್ರಾಮ ವ್ಯಾಪ್ತಿಯ ಎಲ್ಲಾ ಶಿಕ್ಷಣ ಸಂಸ್ಥೆಗಳಿಗೆ, ಗ್ರಾಮದ ಸ್ವಚ್ಛತಾ ಕಾರ್ಯದಲ್ಲಿ ಭಾಗವಹಿಸಿದ ಎಲ್ಲಾ ಸಂಘ ಸಂಸ್ಥೆಗಳಿಗೆ ಅದರಲ್ಲಿ ಅಭಿನವ ಕೇಸರಿ, ವಿಶ್ವಹಿಂದೂ ಪರಿಷತ್ತು, ದೇವಿನಗರ ಮತ್ತು ಮಾಡಾವು ರಿಕ್ಷಾ ಚಾಲಕ ಮಾಲಕರ ಸಂಘ, ಪೊರ್ಲುದ ಕೆಯ್ಯೂರು ಹಾಗೇ ಸಂಜೀವಿನಿ ಒಕ್ಕೂಟದ ಸದಸ್ಯರಿಗೆ, ಸ್ವಚ್ಛತಾ ಸೇನಾನಿಗಳಿಗೆ, ಗ್ರಾಪಂ ಸಿಬ್ಬಂದಿಗಳಿಗೆ, ಗ್ರಾಪಂ ಅಧಿಕಾರಿಗಳಿಗೆ, ಸದಸ್ಯರಿಗೆ, ಗ್ರಾಮ ಆಡಳಿತ ಅಧಿಕಾರಿಗಳಿಗೆ, ಮಾಜಿ ಸೈನಿಕರಿಗೆ, ಮೆಸ್ಕಾಂ ಸಿಬ್ಬಂದಿಗಳಿಗೆ, ಮಾಧ್ಯಮದವರಿಗೆ ಈ ಸಂದರ್ಭದಲ್ಲಿ ಶಾಲು ಹಾಕಿ ಸ್ಮರಣಿಕೆ ನೀಡಿ ಗೌರವಿಸುವ ಮೂಲಕ ಕೃತಜ್ಞತೆ ಸಲ್ಲಿಸಲಾಯಿತು. ಗ್ರಾಮ ಪಂಚಾಯತ್ ಕಾರ್ಯದರ್ಶಿ ಸುರೇಂದ್ರ ರೈ ಇಳಂತಾಜೆ ಸ್ವಾಗತಿಸಿದರು. ಪಂಚಾಯತ್ ಅಭಿವೃದ್ಧಿ ಅಧಿಕಾರಿ ನಮಿತಾ ಎ.ಕೆ ವಂದಿಸಿದರು. ಗ್ರಂಥಾಲಯ ಮೇಲ್ವಿಚಾರಕಿ ಅನೂಷಾ ಕಾರ್ಯಕ್ರಮ ನಿರೂಪಿಸಿದರು. ಸಿಬ್ಬಂದಿಗಳಾದ ಶಿವಪ್ರಸಾದ್, ರಾಕೇಶ್, ಮಾಲತಿ, ಜ್ಯೋತಿ, ಧರ್ಮಣ್ಣ, ರಫೀಕ್ ತಿಂಗಳಾಡಿ ಸಹಕರಿಸಿದ್ದರು. ಕಾರ್ಯಕ್ರಮದ ಬಳಿಕ ವಿಶೇಷ ಭೋಜನದ ವ್ಯವಸ್ಥೆಯನ್ನು ಏರ್ಪಡಿಸಲಾಗಿತ್ತು.
ರಾಜಕೀಯ ರಹಿತ ಆಡಳಿತ ನಡೆಸಿದ ಏಕೈಕ ಪಂಚಾಯತ್…!
ಕೆಯ್ಯೂರು ಗ್ರಾಮ ಪಂಚಾಯತ್ ಆರಂಭವಾಗಿ 10 ವರ್ಷ ಕಳೆದಿದ್ದು ಆರಂಭದಿಂದಲೇ ಇದು ರಾಜಕೀಯ ರಹಿತ ಆಡಳಿತ ನಡೆಸಿದ ಹೆಗ್ಗಳಿಕೆಗೆ ಪಾತ್ರವಾಗಿದೆ. ಪಂಚಾಯತ್ನೊಳಗೆ ಒಂದೇ ಮನೆಯ ಸದಸ್ಯರಂತೆ ಗ್ರಾಮದ ಅಭಿವೃದ್ಧಿ ಪರ ಚಿಂತನೆ ನಡೆಸುವ ಸದಸ್ಯರುಗಳು ಎಂದಿಗೂ ರಾಜಕೀಯ ಕಚ್ಚಾಟ ನಡೆಸಿದವರಲ್ಲ, ವಿಶೇಷವಾಗಿ ಪ್ರತಿ ಸಾಮಾನ್ಯ ಸಭೆಯಲ್ಲೂ ಒಬ್ಬೊಬ್ಬರು ಸದಸ್ಯರು ತಮ್ಮ ಸ್ವಂತ ಹಣದಿಂದಲೇ ವಿಶೇಷ ಭೋಜನವನ್ನು ನೀಡುತ್ತಾ ಬಂದಿರುವುದು ಇಲ್ಲಿನ ಮತ್ತೊಂದು ವಿಶೇಷ. ಇದಲ್ಲದೆ ಪ್ರತಿ ಗ್ರಾಮಸಭೆಗೂ ಜನರಿಗೆ ಊಟೋಪಚಾರ ನೀಡುವ ಮೂಲಕ ಗ್ರಾಮಸ್ಥರಿಂದ ವಿಶೇಷ ಮೆಚ್ಚುಗೆ ಪಡೆದುಕೊಂಡಿದೆ.










