ಪರೀಕ್ಷೆಯನ್ನು ಆಚರಿಸೋಣ……!

0

ಭಾರತದಂತಹ ವೈವಿಧ್ಯಮಯ ದೇಶದಲ್ಲಿ ವಾಸಿಸುವ ನಾವೆಲ್ಲರೂ ನಮ್ಮ ಸಂಸ್ಕೃತಿ ಸಂಪ್ರದಾಯಗಳು ಮತ್ತು ಆಚರಣೆಗಳ ಬಗ್ಗೆ ಹೆಮ್ಮೆ ಪಡುತ್ತೇವೆ. ಹಬ್ಬಗಳನ್ನು ನಾವು ಅಪಾರ ಉತ್ಸಾಹ ಮತ್ತು ಸಂಭ್ರಮದಿಂದ ಆಚರಿಸುತ್ತೇವೆ. ಇಂತಹ ಸಾಂಸ್ಕೃತಿಕ ಹಬ್ಬಗಳ ಜೊತೆಗೆ , ಇಂದಿನ ದಿನಗಳಲ್ಲಿ ವಿದ್ಯಾರ್ಥಿಗಳು , ಶಿಕ್ಷಕರು ಮತ್ತು ಪೋಷಕರ ಜೀವನದಲ್ಲಿ ಮತ್ತೊಂದು ಪ್ರಮುಖ ಋತು ಅನಿವಾರ್ಯವಾಗಿ ಸೇರಿಕೊಂಡಿದೆ. ಅದೇ ಪರೀಕ್ಷೆ ಋತು. ಮಕ್ಕಳ ಶೈಕ್ಷಣೆಕ ಸಾಧನೆ, ಶಿಕ್ಷಕರು ಹಾಗೂ ಪೋಷಕರಿಗೆ ಅತ್ಯಂತ ಕಾಳಜಿಯ ವಿಷಯವಾಗಿರುವುದರಿಂದ ಪರೀಕ್ಷೆಗಳು ಅವರ ಜೀವನದ ಅವಿಭಾಜ್ಯ ಅಂಗವಾಗಿದೆ.


ಪರೀಕ್ಷೆ ಎಂಬ ಭಯ- ಮೂರು ಅಕ್ಷರಗಳ ಈ ಒಂದು ಸರಳ ಪದ -ಪರೀಕ್ಷೆ-ಮಕ್ಕಳಲ್ಲಿ ಭಯ ಹುಟ್ಟಿಸಲು ಸಾಕು. ಇದು ಕಣ್ಣೀರು, ನಿದ್ರೆ ಇಲ್ಲದ ರಾತ್ರಿಗಳು, ಆತಂಕ ಮತ್ತು ಕೆಲವೊಮ್ಮೆ ಮಾನಸಿಕ ಒತ್ತಡವನ್ನುಂಟುಮಾಡುತ್ತದೆ. ವರ್ಷಕ್ಕೆ ಎರಡು ಅಥವಾ ಮೂರು ಬಾರಿ ಬರುವ ಪರೀಕ್ಷೆಗಳು ,ಮಕ್ಕಳ ಮನಸ್ಸಿನಲ್ಲಿ ಭಾರೀ ಆತಂಕವನ್ನು ಸೃಷ್ಟಿಸುತ್ತದೆ. ಬಹುತೇಕ ಮಕ್ಕಳಿಗೆ ಪರೀಕ್ಷೆಗಳ ಬಗ್ಗೆ ತೀವ್ರವಾದ ಬೀಭಸ್ಯ ಭಾವನೆ ಇರುವುದು ಸಾಮಾನ್ಯ.


ಪರೀಕ್ಷೆಗಳ ಮಹತ್ವ- ಪರೀಕ್ಷೆಗಳನ್ನು ಕೇವಲ ಭಾರವೆಂದು ನೋಡುವ ಬದಲು ಅವುಗಳನ್ನು ಸ್ವಯಂ ಮೌಲ್ಯಮಾಪನ ಸಾಧನವೆಂದು ಪರಿಗಣಿಸುವುದು ಅಗತ್ಯ. ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಉತ್ತಮ ಶೈಕ್ಷಣಿಕ ಸಂಸ್ಥೆಗಳಿಗೆ ಪ್ರವೇಶ ಸುಲಭವಲ್ಲ. ಅದಕ್ಕಾಗಿ ಕಠಿಣ ಪರಿಶ್ರಮ, ಸಮರ್ಪಣೆ ಮತ್ತು ನಿರಂತರ ಪ್ರಯತ್ನ ಅವಶ್ಯಕ. ಈ ಸಂದರ್ಭದಲ್ಲಿ ಪರೀಕ್ಷೆಗಳು ವಿದ್ಯಾರ್ಥಿಗಳು ತಮ್ಮ ಸಾಮರ್ಥ್ಯವನ್ನು ತೋರಿಸಿಕೊಳ್ಳುವ ಅವಕಾಶವನ್ನು ನೀಡುತ್ತವೆ.


ಆತಂಕವಲ್ಲ ಆತ್ಮವಿಶ್ವಾಸ- ಪರೀಕ್ಷೆಗಳು ಓಟದ ಸ್ಪರ್ಧೆಯಂತೆಯೇ ಕಾಣಿಸುತ್ತವೆ. ವಿದ್ಯಾರ್ಥಿಗಳು ಪರಸ್ಪರ ಸ್ಪರ್ಧಿಸುವುದನ್ನು ನಾವು ನೋಡುತ್ತೇವೆ. ಉತ್ತಮ ಅಂಕಗಳನ್ನು ಪಡೆಯಲು ಹಲವು ವಿಷಯಗಳು ಮತ್ತು ಪರಿಕಲ್ಪನೆಗಳನ್ನು ನೆನಪಿಡಬೇಕಾಗುತ್ತದೆ. ಆದರೆ ಪರೀಕ್ಷೆ ಸಮಯದಲ್ಲಿ ಪ್ಯಾನಿಕ್ ಆಗುವುದು ಅಥವಾ ಆತಂಕಕ್ಕೆ ಒಳಗಾಗುವುದು ಪರಿಹಾರವಲ್ಲ. ನೀವು ಈಗಾಗಲೇ ಶ್ರಮಪಟ್ಟಿದ್ದೀರಿ, ಕಲಿತಿದ್ದೀರಿ, ಹಾಗಿದ್ದರೆ ಚಿಂತೆ ಏಕೆ? ನೆನಪಿರಲಿ, ಶ್ರಮ ನಮ್ಮ ಕೈಯಲ್ಲಿ ಫಲ ದೇವರ ಕೈಯಲ್ಲಿ. ಆದ್ದರಿಂದ ಆತ್ಮವಿಶ್ವಾಸ ಮತ್ತು ನಂಬಿಕೆಯನ್ನು ಬೆಳೆಸಿಕೊಳ್ಳಬೇಕು. ಯೋಜನೆಯ ಅಗತ್ಯತೆ ಬಹಳ ಮುಖ್ಯ. ಹೆಸರಾಂತ ಶೈಕ್ಷಣಿಕ ತಜ್ಞ ಲೀ ಬೋಲ್ಮನ್ ಹೇಳಿದಂತೆ-ತಂತ್ರವಿಲ್ಲದ ದೃಷ್ಟಿಕೋನ ಭಮೆಯಾಗಿ ಉಳಿಯುತ್ತದೆ. ಅಂತಿಮ ಕ್ಷಣದಲ್ಲಿ ಪರೀಕ್ಷೆಗೆ ತಯಾರಾಗುವುದು ಜಾಣ್ಮೆಯಲ್ಲ. ಶೈಕ್ಷಣಿಕ ಜಗತ್ತಿನಲ್ಲಿ ಪರೀಕ್ಷೆಗಳನ್ನು ಅನಿವಾರ್ಯ ಒತ್ತಡದ ಕ್ರಿಯೆಯಾಗಿ ಕಾಣಲಾಗುತ್ತದೆ. ಯೋಜನಾಬದ್ದವಾಗಿ ಕಾಲಕಾಲಕ್ಕೆ ತಯಾರಿ ನಡೆಸಿದರೆ ಪರೀಕ್ಷೆ ಎಂಬ ಬೆದರು ಗುಮ್ಮನನ್ನು ಹೊಡೆದೋಡಿಸಿ ಯಶಸ್ಸನ್ನು ಪಡೆಯುವುದು ಕಷ್ಟಕರವಲ್ಲ.


ಪರೀಕ್ಷೆಗಳು ಮತ್ತು ಹಬ್ಬಗಳು- ಅನೇಕ ವಿದ್ಯಾರ್ಥಿಗಳು ತಡರಾತ್ರಿ ಓದುವುದು ,ನಿರಂತರ ಅಧ್ಯಯನದ ಒತ್ತಡವನ್ನು ಭಯದಿಂದ ನೋಡುತ್ತಾರೆ. ಆದರೆ ನಿಜವಾಗಿ ನೋಡಿದರೆ ಪರೀಕ್ಷೆಗಳು ಸಂಭ್ರಮಕ್ಕೂ ಕಾರಣವಾಗಬಹುದು. ವಾಸ್ತವವಾಗಿ ಪರೀಕ್ಷೆಗಳು ಹಬ್ಬಗಳಂತೆಯೇ. ಎರಡಕ್ಕೂ ಸಿದ್ದತೆ ಮತ್ತು ನಿರೀಕ್ಷೆಗಳಿರುತ್ತವೆ. ಹಬ್ಬಗಳಂತೆ ಪರೀಕ್ಷೆಗೂ ನಾವು ಯೋಜನೆಗಳನ್ನು ರೂಪಿಸುತ್ತೇವೆ. ಹಬ್ಬವು ಸಾಂಸ್ಕೃತಿಕ ಅಥವಾ ಐತಿಹಾಸಿಕ ಘಟನೆ ಸೂಚಿಸಿದರೆ, ಪರೀಕ್ಷೆ ವಿದ್ಯಾರ್ಥಿಯ ಕಲಿಕೆಯ ಪರಾಕಾಷ್ಠೆಯನ್ನು ಸೂಚಿಸುತ್ತದೆ. ಹಬ್ಬದಲ್ಲಿ ಕುಟುಂಬ ಮತ್ತು ಸ್ನೇಹಿತರು ಒಟ್ಟಾಗುವಂತೆ, ಪರೀಕ್ಷೆಯ ಸಮಯದಲ್ಲಿ ಸಹಪಾಠಿಗಳು ಪರಸ್ಪರ ಬೆಂಬಲಿಸುತ್ತಾರೆ. ಪರೀಕ್ಷೆಯನ್ನು ಆಚರಿಸುವ ದೃಷ್ಟಿಕೋನವು ಒತ್ತಡ ಮತ್ತು ಆತಂಕವನ್ನು ಕಡಿಮೆ ಮಾಡುತ್ತದೆ. ಮುಂಬರುವ ಪರೀಕ್ಷೆಯನ್ನು ಭಯದ ಕಾರಣವನ್ನಾಗಿಸುವ ಬದಲು ಅದನ್ನು ಸಂಭ್ರಮದ ಸಂದರ್ಭವೆಂದು ಪರಿಗಣಿಸಬಹುದು. ಇದರಿಂದ ವಿದ್ಯಾರ್ಥಿಗಳಿಗೆ ಧನಾತ್ಮಕ ಮತ್ತು ಬೆಂಬಲಾತ್ಮಕ ವಾತಾವರಣ ನಿರ್ಮಾಣವಾಗುತ್ತದೆ.


ಹಾಗಾಗಿ, ಪರೀಕ್ಷೆಗಳು ಹಬ್ಬಗಳಂತೆಯೇ. ಅವುಗಳು ಜೀವನದ ಪ್ರಮುಖ ಮೈಲಿಗಲ್ಲುಗಳನ್ನು ಸೂಚಿಸುತ್ತವೆ. ಪರೀಕ್ಷೆಗಳನ್ನು ಆಚರಿಸುವ ಮೂಲಕ ನಾವು ಆತಂಕವನ್ನು ಕಡಿಮೆಮಾಡಿ, ಕಲಿಕೆಯ ಮೇಲಿನ ಆಸಕ್ತಿಯನ್ನು ಹೆಚ್ಚಿಸಬಹುದು. ಅಧ್ಯಯನ ಗುಂಪುಗಳನ್ನು ರಚಿಸುವುದು, ಸಣ್ಣ ಗುರಿಗಳನ್ನು ನಿಗದಿಪಡಿಸುವುದು, ವಿರಾಮ ತೆಗೆದುಕೊಳ್ಳುವುದು ಮತ್ತು ಕೃತಜ್ಞತೆಯನ್ನು ವ್ಯಕ್ತಪಡಿಸುವುದು- ಇವೆಲ್ಲವೂ ಪರೀಕ್ಷೆಯನ್ನು ಆಚರಿಸುವ ಮಾರ್ಗಗಳಾಗಿವೆ. ಆದ್ದರಿಂದ ,ಪರೀಕ್ಷೆಗಳನ್ನು ಭಯಪಡುವುದಕ್ಕಿಂತ ಅವುಗಳನ್ನು ಸಂಭ್ರಮದ ಅವಕಾಶವಾಗಿ ಸ್ವೀಕರಿಸೋಣ ಮತ್ತು ನಮ್ಮ ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಯಾಣದಲ್ಲಿ ಪರಸ್ಪರ ಬೆಂಬಲಿಸೋಣ.

ಲೇಖಕರು- ಯತೀಶ್ ರಾವ್ ಸುರತ್ಕಲ್, ಉಪನ್ಯಾಸಕರು, ಸರ್ಕಾರಿ ಉಪಕರಣಗಾರ ಮತ್ತು ತರಬೇತಿ ಕೇಂದ್ರ, ಮಂಗಳೂರು.


LEAVE A REPLY

Please enter your comment!
Please enter your name here