






ಪುತ್ತೂರು:ರೋಟರಿ ಕ್ಲಬ್ ಪುತ್ತೂರು ಈಸ್ಟ್, ಪುತ್ತೂರು ಸಿಟಿ ಆಸ್ಪತ್ರೆ, ದ್ವಾರಕಾ ಕಾರ್ಪೊರೇಷನ್ ಪ್ರೈವೇಟ್ ಲಿಮಿಟೆಡ್ ಇವುಗಳ ಸಹಯೋಗದಲ್ಲಿ ಮಾ.1 ರಂದು ಹಿರಿಯ ನಾಗರಿಕರ ಆರೋಗ್ಯದ ಬಗ್ಗೆ ಉಚಿತ ಮಾಹಿತಿ ಕಾರ್ಯಾಗಾರವು ಮನೀಷಾ ಸಭಾಂಗಣದಲ್ಲಿ ಬೆಳಿಗ್ಗೆಯಿಂದ ಮಧ್ಯಾಹ್ನದವರೆಗೆ ಜರಗಿತು.


ಮಕ್ಕಳ ತಜ್ಞ ಡಾ.ಎಂ.ಎಸ್ ಶೆಣೈ ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿ, ಹಿರಿಯ ನಾಗರಿಕರು ತಮ್ಮ ಇಳಿ ವಯಸ್ಸಿನಲ್ಲಿ ಆರೋಗ್ಯ ಕಾಪಾಡುವ ನಿಟ್ಟಿನಲ್ಲಿ ಬಹಳ ಗಮನ ಹರಿಸಬೇಕು ಎಂದರು.




ರೋಟರಿ ಕ್ಲಬ್ ಪುತ್ತೂರು ಈಸ್ಟ್ ಅಧ್ಯಕ್ಷ ಶಶಿಧರ್ ಕಿನ್ನಿಮಜಲು ಮಾತನಾಡಿ, ರೋಗ ರುಜಿನ ಅಂದರೆ ಏನು?, ಅದಕ್ಕೆ ಪರಿಹಾರ ಏನು? ಇವುಗಳ ತಿಳಿ ಹೇಳುವ ನಿಟ್ಟಿನಲ್ಲಿ ಈ ಆರೋಗ್ಯ ಶಿಬಿರವನ್ನು ಏರ್ಪಡಿಸಲಾಗಿದೆ. ಸಮಾಜದಲ್ಲಿ ಹತ್ತಾರು ಸಮಾಜಮುಖಿ ಕಾರ್ಯಗಳನ್ನು ಮಾಡುತ್ತಿರುವ ರೋಟರಿ ಈಸ್ಟ್ ಕ್ಲಬ್ ಈ ಆರೋಗ್ಯ ಶಿಬಿರದೊಂದಿಗೆ ಕೈಜೋಡಿಸಿದ್ದೇವೆ. ಹಿರಿಯ ನಾಗರಿಕರು ಈ ಆರೋಗ್ಯ ಶಿಬಿರದ ಸಂಪೂರ್ಣ ಸದುಪಯೋಗ ಪಡೆದುಕೊಂಡು ಆರೋಗ್ಯವನ್ನು ಕಾಪಾಡಿಕೊಳ್ಳುವಂತಾಗಲಿ ಎಂದರು.
ವೈದ್ಯಕೀಯ ತಜ್ಞ ಪುತ್ತೂರು ಸಿಟಿ ಆಸ್ಪತ್ರೆಯ ಡಾ.ಎ.ಪಿ ಭಟ್ ಮಾತನಾಡಿ, ಹಿಂದಿನ ಕೂಡು ಕುಟುಂಬ ಪದ್ಧತಿಯಲ್ಲಿ ಮನೆಯಲ್ಲಿ ಹಿರಿಯರು ಇರುವುದು ಮಾತ್ರವಲ್ಲ ಕುಟುಂಬಕ್ಕೆ ರಕ್ಷಣೆ ಇತ್ತು ಜೊತೆಗೆ ಆರೋಗ್ಯವಂತ ವಾತಾವರಣವೂ ಇತ್ತು. ಹಿರಿಯ ನಾಗರಿಕರು ಉತ್ತಮ ವ್ಯವಸ್ಥೆ, ಉತ್ತಮ ಪರಿಸರದೊಂದಿಗೆ ಜೀವಿಸಿದಾಗ ಉತ್ತಮ ಆರೋಗ್ಯವನ್ನು ಹೊಂದಲು ಸಾಧ್ಯವಾಗುತ್ತದೆ ಎಂದರು.
ಪುತ್ತೂರು ಸಿಟಿ ಆಸ್ಪತ್ರೆಯ ಅರ್ಥೋಪೆಡಿಕ್ ಸರ್ಜನ್ ಡಾ.ಭಾಸ್ಕರ್ ಎಸ್ ಮಾತನಾಡಿ, ಹಿರಿಯ ನಾಗರಿಕರಲ್ಲಿ ಇರುವ ದೊಡ್ಡ ಸಮಸ್ಯೆ ಎಂದರೆ ಗೊತ್ತಿಲ್ಲದೆ ಬೀಳುವುದು. ಬೀಳುವಾಗ ಆಗುವ ಮೂಳೆ ಮುರಿತ ಇದು ಹಿರಿಯರಲ್ಲಿ ಜಾಸ್ತಿ ಕಾಣ ಸಿಗುತ್ತದೆ ಎಂದು ಹೇಳಿ ಹಿರಿಯರಲ್ಲಿ ಮೂಳೆ ಸಂಬಂಧ ಸಮಸ್ಯೆಗಳ ಬಗ್ಗೆ ವಿವರಿಸಿದರು.
ಪುತ್ತೂರು ಸಿಟಿ ಆಸ್ಪತ್ರೆಯ ಜನರಲ್ ಸರ್ಜನ್ ಡಾ.ಗೋಪಿನಾಥ್ ಪೈರವರು ಹಿರಿಯರಲ್ಲಿ ಉಂಟಾಗುವ ಮೂತ್ರಸಂಬಂಧಿ ಸಮಸ್ಯೆಗಳ ಬಗ್ಗೆ ಹಾಗೂ ಪುತ್ತೂರು ಸಿಟಿ ಆಸ್ಪತ್ರೆಯ ಫಿಸಿಯೋಥೆರಪಿಸ್ಟ್ ಡಾ.ವಿನಯಪ್ರಕಾಶ್ ರವರು, ಮಾಂಸಖಂಡಗಳನ್ನು ಮತ್ತು ಗಂಟುಗಳ ಆರೋಗ್ಯ ಸುಧಾರಿಸುವ ವ್ಯಾಯಾಮಗಳನ್ನು ಪ್ರಾತ್ಯಕ್ಷಿಕೆ ಮೂಲಕ ವಿವರಿಸಿದರು.
ವಿವೇಕಾನಂದ ಕಾಲೇಜಿನ ವಿಶ್ರಾಂತ ಪ್ರಾಂಶುಪಾಲ ಡಾ.ಮಾಧವ ಭಟ್, ಪುತ್ತೂರು ಸರಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜಿನ ವಿಶ್ರಾಂತ ಪ್ರಾಂಶುಪಾಲ ಪ್ರೊ.ಝೇವಿಯರ್ ಡಿ’ಸೋಜ, ದ್ವಾರಕಾ ಕಾರ್ಪ್ ಪ್ರೈ.ಲಿಮಿಟೆಡ್ ನ ಮಾರ್ಕೆಟಿಂಗ್ ಹೆಡ್ ದುರ್ಗಾಗಣೇಶ್, ಪುತ್ತೂರು ಸಿಟಿ ಆಸ್ಪತ್ರೆಯ ಸಾರ್ವಜನಿಕ ಸಂಪರ್ಕಾಧಿಕಾರಿ ವಿಷ್ಣುಕಿರಣ್ ಸಹಿತ ಹಲವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು. ಕಾರ್ಯಾಗಾರದ ಬಳಿಕ ಭೋಜನ ಏರ್ಪಟ್ಟಿತ್ತು.
ಹಿರಿಯರು ಎದುರಿಸುವ ಸಮಸ್ಯೆಗಳು..
ಖಿನ್ನತೆ, ಆತಂಕ, ನಿದ್ರಾಹೀನತೆ, ಒಂಟಿತನ, ಆರ್ಥಿಕ ಸಮಸ್ಯೆಗಳು, ಬಹು ಔಷಧ ಸೇವನೆ, ನರ ದೌರ್ಬಲ್ಯ, ಬೀಳುವಾಗ ಮೂಳೆ ಮುರಿತ, ಮೂತ್ರ ಸಮಸ್ಯೆಗಳು, ಋತುಬಂಧ ಸಮಸ್ಯೆ, ಕಣ್ಣು ಹಾಗೂ ಶ್ರವಣ ದೋಷ, ಹಾರ್ಮೋನ್ ಸಮಸ್ಯೆ ಇತ್ಯಾದಿ..

ಪರಿಹಾರ..
ಆರೋಗ್ಯ ವರ್ಧನೆ ಔಷಧಿಗಳ ಸೇವನೆ, ಸಮತೋಲನದ ಆಹಾರ ಸೇವನೆ, ಆಗಾಗ್ಗೆ ಉಪವಾಸ ಮಾಡುವುದು, ಮಾನಸಿಕವಾಗಿ ಬದಲಾವಣೆಗೆ ಸಿದ್ಧಗೊಳಿಸುವುದು, ಔಷಧಿಗಳನ್ನು ಕಡಿಮೆಗೊಳಿಸುವುದು, ಸಂತೋಷದಿಂದ ಕಾಲ ಕಳೆಯುವುದು ಇತ್ಯಾದಿ…










