ಪುತ್ತೂರು ತಾಲ್ಲೂಕು ಪಂಚಾಯತ್‌ನಲ್ಲಿ ವಿಕಲಚೇತನರ ಇಲಾಖೆಯ ಪ್ರಗತಿ ಪರಿಶೀಲನಾ ಸಭೆ- ವೈದ್ಯರಿಗೆ ಸನ್ಮಾನ

0

ಪುತ್ತೂರು: ಪುತ್ತೂರು ತಾಲ್ಲೂಕು ಪಂಚಾಯತ್ ಮಿನಿ ಸಭಾಂಗಣದಲ್ಲಿ ಮಾ.5ರಂದು ಬೆಳಿಗ್ಗೆ 10.30ಕ್ಕೆ ಪುತ್ತೂರು ಹಾಗೂ ಕಡಬ ತಾಲ್ಲೂಕಿನ ವಿಕಲಚೇತನರ ಇಲಾಖೆಯಡಿ ಕಾರ್ಯನಿರ್ವಹಿಸುತ್ತಿರುವ ವಿವಿಧೋದ್ದೇಶ ಮತ್ತು ಗ್ರಾಮೀಣ/ನಗರ ಪುನರ್ವಸತಿ ಕಾರ್ಯಕರ್ತರ ಪ್ರಗತಿ ಪರಿಶೀಲನಾ ಸಭೆ ನಡೆಯಿತು. ಸಭೆಗೆ ಪುತ್ತೂರು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಸಹಾಯಕ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಹಾಗೂ ವಿಕಲಚೇತನರ ನೋಡೆಲ್ ಅಧಿಕಾರಿ ಮಂಗಳ ಕಾಳೆ ಅಧ್ಯಕ್ಷತೆ ವಹಿಸಿದ್ದರು.


ಈ ಸಂದರ್ಭದಲ್ಲಿ ಪುತ್ತೂರು ತಾಲ್ಲೂಕು ಪಂಚಾಯತ್‌ನಲ್ಲಿರುವ ವಿಕಲಚೇತನರ ಸೇವಾ ಕೇಂದ್ರ ಕಚೇರಿ 15 ವರ್ಷಗಳನ್ನು ಪೂರೈಸಿದ ಸವಿ ನೆನಪಿನ ಪ್ರಯುಕ್ತ, ಪುತ್ತೂರು ಹಾಗೂ ಕಡಬ ತಾಲ್ಲೂಕಿನ ವಿಶೇಷ ಚೇತನರ ವಿವಿಧೋದ್ದೇಶ ಪುನರ್ವಸತಿ ಕಾರ್ಯಕರ್ತರ ಒಕ್ಕೂಟದ ವತಿಯಿಂದ ಪುತ್ತೂರು ಸರಕಾರಿ ಆಸ್ಪತ್ರೆಯ ವೈದ್ಯರನ್ನು ಸನ್ಮಾನಿಸಲಾಯಿತು.


ಪುತ್ತೂರು ಹಾಗೂ ಕಡಬ ತಾಲ್ಲೂಕಿನ ವಿಶಿಷ್ಟ ಗುರುತಿನ ಚೀಟಿ (UDID) ಕಾರ್ಡ್ ಕಾರ್ಯ ಹಾಗೂ ಪುತ್ತೂರು ತಾಲ್ಲೂಕು ಆಸ್ಪತ್ರೆಯಲ್ಲಿ ಪ್ರತಿ ತಿಂಗಳು 2ನೇ ಹಾಗೂ 4ನೇ ಶುಕ್ರವಾರ ಮತ್ತು 2ನೇ ಮಂಗಳವಾರ ನಡೆಯುವ ಬೌದ್ಧಿಕ ಮತ್ತು ಮಾನಸಿಕ ವಿಶೇಷ ಚೇತನರ ಪ್ರಮಾಣಪತ್ರ ಶಿಬಿರಗಳಿಗೆ ಉತ್ತಮ ಸಹಕಾರ ನೀಡುತ್ತಿರುವ ಹಿನ್ನೆಲೆಯಲ್ಲಿ ಪುತ್ತೂರು ಸರಕಾರಿ ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿ ಡಾ. ಯದುರಾಜ್ ಡಿ.ಕೆ., ಕಿವಿ–ಮೂಗು–ಗಂಟಲು ತಜ್ಞೆ ಡಾ. ಜೈನಾಬ ಸುನು ಆಲಿ ಹಾಗೂ ಎಲುಬು–ಕೀಲು ತಜ್ಞ ಡಾ. ಅಜಯ್ ಎಂ.ಬಿ. ಅವರನ್ನು ಸ್ಮರಣಿಕೆ ನೀಡಿ ಗೌರವಿಸಲಾಯಿತು.


ಕಾರ್ಯಕ್ರಮದಲ್ಲಿ ಪುತ್ತೂರು ಕ್ಷೇತ್ರ ಶಿಕ್ಷಣಾಧಿಕಾರಿ ವಿಷ್ಣು ಪ್ರಸಾದ್, ಪುತ್ತೂರು ತಾಲ್ಲೂಕು ಪಂಚಾಯತ್ ವ್ಯವಸ್ಥಾಪಕಿ ತುಳಸಿ ಹಾಗೂ ವಿಶೇಷ ಚೇತನರ ವಿವಿಧೋದ್ದೇಶ ಪುನರ್ವಸತಿ ಕಾರ್ಯಕರ್ತ ನವೀನ್ ಕುಮಾರ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.


ಪುತ್ತೂರು ಮತ್ತು ಕಡಬ ತಾಲ್ಲೂಕಿನ ಎಲ್ಲಾ ಗ್ರಾಮೀಣ ಹಾಗೂ ನಗರ ಪುನರ್ವಸತಿ ಕಾರ್ಯಕರ್ತರು ಸಭೆಯಲ್ಲಿ ಭಾಗವಹಿಸಿದ್ದರು. ನವೀನ್ ಕುಮಾರ್ ಸ್ವಾಗತಿಸಿದರು. 34ನೇ ನೆಕ್ಕಿಲಾಡಿ ಗ್ರಾಮ ಪಂಚಾಯತ್‌ನ ಗ್ರಾಮೀಣ ಪುನರ್ವಸತಿ ಕಾರ್ಯಕರ್ತ ಸೇಸಪ್ಪ ಕಾರ್ಯಕ್ರಮ ನಿರೂಪಿಸಿ ಧನ್ಯವಾದ ಸಮರ್ಪಿಸಿದರು.

LEAVE A REPLY

Please enter your comment!
Please enter your name here