






ಸಂಗೀತ ಅಂದರೆ ಯಾರಿಗೆ ಇಷ್ಟ ಇಲ್ಲ ಹೇಳಿ, ಅದ್ರಲ್ಲೂ ವಾದ್ಯ ಸಂಗೀತ ಎಲ್ಲರ ಕಿವಿಗೂ ಇಂಪನ್ನು ನೀಡುತ್ತದೆ. ಅದ್ರಲ್ಲೂ ಸ್ಯಾಕ್ಸೋಫೋನ್ನ ಸುಮಧುರ ಸದ್ದಿಗೆ ತಲೆದೂಗದವರಿಲ್ಲ. ಅದರಲ್ಲೂ ಸ್ಯಾಕ್ಸೋಫೋನ್ ಅಂದ ಕೂಡಲೇ ವಿಶ್ವಪ್ರಸಿದ್ಧಿ ಪಡೆದ ಭಾರತದ ಪ್ರಸಿದ್ಧ ವಾದಕರಾದ ಕದ್ರಿ ಗೋಪಾಲನಾಥ್ ಅವರು ನೆನಪಾಗುತ್ತಾರೆ. ಸ್ಯಾಕ್ಸೋಫೋನ್ ವಾದ್ಯಕೇವಲ ಪುರುಷರಿಗೆ ಮಾತ್ರ ಸೀಮಿತವಲ್ಲ ಶ್ರಮ ಮತ್ತು ಆಸಕ್ತಿ ಇದ್ದರೆ ಮಹಿಳೆಯರಿಗೂ ಸಾಧ್ಯ ಎಂದು ನಿರೂಪಿಸಿದ್ದಾರೆ ಮೂಲತಃ ಸುಬ್ರಹ್ಮಣ್ಯ ನಿವಾಸಿ ಲಿಖಿತಾ ಗೌಡ ಸುಬ್ರಹ್ಮಣ್ಯ.


ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಬೆರಳೆಣಿಕೆ ಮಹಿಳಾ ಸ್ಯಾಕ್ಸೋಫೋನ್ ವಾದಕರಲ್ಲಿ ಇವರೂ ಒಬ್ಬರು. ಲಿಖಿತಾ ಅವರಿಗೆ ಸ್ಯಾಕ್ಸೋಫೋನ್ ವಾದನದ ಆಸಕ್ತಿ ಮೂಡಿಸಿದವರು ಹಾಗೂ ಕಲಿಕೆಗೆ ಪ್ರೇರಣೆ ನೀಡಿದವರು ಅವರ ತಂದೆ ದೇವಣ್ಣ ಗೌಡ. ಪುತ್ರಿಯ ಸಂಗೀತ ಸಾಧನೆಗೆ ಪ್ರೋತ್ಸಾಹ ನೀಡಿದವರು ತಾಯಿ ಹೇಮಾವತಿ ಎಂ. ಅದೇ ರೀತಿ ಬಾಲ್ಯದಿಂದಲೇ ಅಣ್ಣ ದಿಲೀಶ್ ಎನ್.ಡಿ. ಅವರ ಜೊತೆ ನಾಲ್ಕನೇ ತರಗತಿಯಿಂದ ಸ್ಯಾಕ್ಸೋಫೋನ್ ವಿದ್ಯೆ ಕಲಿಯಲು ಮುನ್ನುಡಿ ಬರೆಯುತ್ತಾರೆ. ಗುರುಗಳಾದ ಸುಬ್ರಹ್ಮಣ್ಯದ ಎಸ್.ಕೆ. ದೇವದಾಸ್ ಇವರ ಮಾರ್ಗದರ್ಶನದಲ್ಲಿ ನಿರಂತರ ಅಭ್ಯಾಸ ನಡೆಸುತ್ತಾರೆ.



ಕೋಳಲಿನಲ್ಲೂ ಆಸಕ್ತಿ
ಲಿಖಿತಾ ಅವರು ಸ್ಯಾಕ್ಸೋಫೋನ್ ಮಾತ್ರವಲ್ಲದೆ ಕೊಳಲನ್ನೂ ಸುಮಧುರವಾಗಿ ನುಡಿಸುತ್ತಾರೆ. ಗುರುಗಳಾದ ಬಂಟ್ವಾಳ ದೇವದಾಸ ಪ್ರಭು ಅವರ ಬಳಿ ಅಭ್ಯಾಸ ನಡೆಸಿ, ನುಡಿಸುತ್ತಾರೆ. ಹಲವು ಹಾಡುಗಳನ್ನು ಕೊಳಲಿನ ಮೂಲಕ ನುಡಿಸಿ ಜನಮನ್ನಣೆ ಗಳಿಸಿದ್ದಾರೆ.
ಬಹುಮುಖ ಪ್ರತಿಭೆ
ಬಹುಮುಖ ಪ್ರತಿಭೆ ಲಿಖಿತಾ ಗೌಡ ಇವರು ಭರತನಾಟ್ಯ ಪ್ರದರ್ಶನ, ಸಂಗೀತ ಹೇಳುವುದು, ಹಾರ್ಮೋನಿಯಂ ನುಡಿಸುವುದನ್ನು ಹವ್ಯಾಸವಾಗಿ ರೂಪಿಸಿಕೊಂಡಿದ್ದಾರೆ.
ರಾಜ್ಯದ ವಿವಿಧೆಡೆ ಕಾರ್ಯಕ್ರಮ
ಪ್ರೌಢಶಾಲೆಯಲ್ಲಿ ಕಲಿಯುವ ಹಂತದಿದಲೇ ವೇದಿಕೆ ಕಾರ್ಯಕ್ರಮಗಳನ್ನು ನೀಡುತ್ತಾ ಬಂದಿದ್ದಾರೆ. ಈಗಾಗಲೇ ಬೆಂಗಳೂರು, ಮಂಗಳೂರು, ಹಾಸನ, ಕಾಸರಗೋಡು ಮೊದಲಾದ ಹಲವಾರು ಸ್ಥಳಗಳಲ್ಲಿ 100ಕ್ಕೂ ಹೆಚ್ಚು ಪ್ರದರ್ಶನಗಳನ್ನು ನೀಡಿದ್ದಾರೆ. ವಿವಿಧೆಡೆ ನಡೆಯುವ ಜಾತ್ರಾ ಮಹೋತ್ಸವ, ವಿವಾಹ, ಸಭೆ ಸಮಾರಂಭ ಹಾಗೂ ಶುಭ ಸಂದರ್ಭಗಳಲ್ಲಿ ತಮ್ಮ ತಂಡದೊಂದಿಗೆ ತೆರಳಿ ಕಲಾ ಸೇವೆ ನಡೆಸುತ್ತಿದ್ದಾರೆ. ವಿಶೇಷವಾಗಿ ಕುಕ್ಕೆ ಸುಬ್ರಹ್ಮಣ್ಯ ಜಾತ್ರಾ ಮಹೋತ್ಸವ ಸಂದರ್ಭದಲ್ಲಿ ಸೇವಾ ರೂಪದಲ್ಲಿ ಸ್ಯಾಕ್ಸೋಫೋನ್ ವಾದನವನ್ನು ಮಾಡುತ್ತಾರೆ.
ಪ್ರಶಸ್ತಿ, ಪುರಸ್ಕಾರ
ವಿದ್ಯಾಭ್ಯಾಸದಲ್ಲಿ ಬಿಕಾಂ ಪದವಿಧರೆಯಾಗಿದ್ದು, ಸಂಗೀತದಲ್ಲಿ ಇನ್ನಷ್ಟು ಸಾಧನೆಯನ್ನು ಮಾಡುವ ಅಭಿಲಾಷೆ ಹೊಂದಿದ್ದಾರೆ. ಬೆಳ್ತಂಗಡಿ ತಾಲೂಕು ಮಚ್ಚಿನ ಗ್ರಾಮದ ಬದನೋಡಿಯ ನಿತೇಶ್ ಗೌಡ ಅವರ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಇವರ ಸಾಧನೆಗೆ ಪತಿ, ಮತ್ತು ಅತ್ತೆ – ಮಾವ ಬಿ ಮೋನಪ್ಪ ಗೌಡ ಮತ್ತು ಕುಸುಮವತಿ ಹಾಗೂ ಮೈದುನ ರಿತೇಶ್ ಗೌಡ ಪ್ರೋತ್ಸಾಹವೂ ಇದ್ದು ಮತ್ತಷ್ಟು ಸಾಧನೆ ಮಾಡುವ ಉತ್ಸಾಹ ಮೂಡಿದೆ ಎನ್ನುತ್ತಾರೆ ಲಿಖಿತಾ ಗೌಡ. ಇವರ ಈ ಪ್ರತಿಭೆ ಹಾಗೂ ಸಾಧನೆ ಗುರುತಿಸಿ ಹಲವಾರು ಕಲಾಪ್ರದರ್ಶನ ಪ್ರಶಸ್ತಿಗಳನ್ನು ನೀಡಿ ಗೌರವಿಸಲಾಗಿದೆ. ಇವರಿಗೆ ಯುವಸಾಧಕ ಪ್ರಶಸ್ತಿ ಒಲಿದಿದೆ. ಸಮರ್ಪಣಾ ಸಮಾವೇಶ, ಯುವ ಅರೆಭಾಷೆ ಸಾಹಿತ್ಯ ಸಮಾವೇಶ ಮೊದಲಾದ ವೇದಿಕೆಗಳಲ್ಲಿ ಗೌರವಿಸುವ ಮೂಲಕ ಊರಿನ ಹಾಗೂ ಪರವೂರಿನ ಜನತೆ ಪ್ರೋತ್ಸಾಹವನ್ನು ನೀಡಿದ್ದಾರೆ.
ಪ್ರತಿಯೊಬ್ಬ ವ್ಯಕ್ತಿಯಲ್ಲೂ ಹಲವಾರು ಪ್ರತಿಭೆಗಳು ಸುಪ್ತವಾಗಿರುತ್ತದೆ. ಪೋಷಕರು ತಮ್ಮ ಮಕ್ಕಳ ಆಸಕ್ತಿಯನ್ನು ಗುರುತಿಸಿ ಹೆಚ್ಚಿನ ಪ್ರೋತ್ಸಾಹ ನೀಡಿದರೆ ಅವರಲ್ಲಿರುವ ಪ್ರತಿಭೆ ಜಗತ್ತಿನಾದ್ಯಂತ ಬೆಳಗಲು ಸಾಧ್ಯ ಎಂಬುದನ್ನು ಲಿಖಿತಾ ಗೌಡ ನಿರೂಪಿಸಿದ್ದಾರೆ. ಅವರ ಕಲಾ ಸೇವೆ ನಿರಂತರವಾಗಿ ಮುಂದುವರಿದು, ಇನ್ನಷ್ಟು ಉತ್ತಮ ಪ್ರದರ್ಶನಗಳನ್ನು ನೀಡುವಂತಾಗಲಿ.
✍🏻. ಅಕ್ಷಿತಾ ಕಲ್ಲಡ್ಕ
ತೃತೀಯ ಬಿ.ಎ, ಅಂಬಿಕಾ ಮಹಾವಿದ್ಯಾಲಯ ಪುತ್ತೂರು










