







ಪುತ್ತೂರು: ಪುತ್ತೂರು ಸರಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನ ದೈಹಿಕ ಶಿಕ್ಷಣ ನಿರ್ದೇಶಕರಾದ ಎವರೆಸ್ಟ್ ರೊಡ್ರಿಗಸ್ರವರು ರಾಜಸ್ಥಾನದ ಶ್ರೀ ಜೆ.ಜೆ.ಟಿ ವಿಶ್ವವಿದ್ಯಾನಿಲಯಕ್ಕೆ ಡಾ|ಬಾಪು ನರಸಿಂಗ ಚೌಗುಲೆರವರ ಮಾರ್ಗದರ್ಶನದಲ್ಲಿ ಸಲ್ಲಿಸಿದ “ಎ ಸ್ಟಡಿ ಆಫ್ ಸೊಶಿಯೋ ಇಕನಾಮಿಕ್ ಫ್ಯಾಕ್ಟರ್ಸ್ ಕಾಂಟ್ರಿಬ್ಯೂಟಿಂಗ್ ಟು ದ ಡೆವೆಲಪ್ಮೆಂಟ್ ಆಫ್ ವೆಯ್ಟ್ಲಿಫ್ಟಿಂಗ್ ಪಾರ್ಟಿಸಿಪೇಶನ್ ಎಮಂಗ್ ಯೂತ್ ಇನ್ ದಕ್ಷಿಣ ಕನ್ನಡ ಆಂಡ್ ಉಡುಪಿ ಡಿಸ್ಟ್ರಿಕ್ಟ್ಸ್” ಎಂಬ ಮಹಾಪ್ರಬಂಧಕ್ಕೆ ಪಿಹೆಚ್ಡಿ ಪದವಿ ನೀಡಿ ಗೌರವಿಸಿದೆ.


ಎವರೆಸ್ಟ್ ರೋಡ್ರಿಗಸ್ರವರು ಕಾಸರಗೋಡು ಜಿಲ್ಲೆಯ ಬೇಳ ಗ್ರಾಮದ ಸಂತ ಬಾರ್ಥಲೋಮಿಯಾ ಪ್ರಾಥಮಿಕ ಶಾಲೆಯಲ್ಲಿ ಪ್ರಾಥಮಿಕ ಶಿಕ್ಷಣ, ಮಂಗಳೂರಿನ ಪದುವಾ ಹೈಸ್ಕೂಲ್ನಲ್ಲಿ ಪ್ರೌಢಶಿಕ್ಷಣ, ಪುತ್ತೂರು ಸಂತ ಫಿಲೋಮಿನಾ ಕಾಲೇಜಿನಲ್ಲಿ ಪಿಯುಸಿ ಮತ್ತು ಪದವಿ ಶಿಕ್ಷಣ, ಮೈಸೂರು ದೈಹಿಕ ಶಿಕ್ಷಣ ಕಾಲೇಜಿನಲ್ಲಿ ಬಿಪಿಎಡ್ ಪದವಿಯನ್ನು ದ್ವಿತೀಯ ರ್ಯಾಂಕ್ನೊಂದಿಗೆ ಮತ್ತು ಎಂಪಿಎಡ್ ಪದವಿಯನ್ನು ಪ್ರಥಮ ರ್ಯಾಂಕ್ನೊಂದಿಗೆ ಪಡೆದರು. ಮೈಸೂರಿನ ಮುಕ್ತ ವಿಶ್ವವಿದ್ಯಾನಿಲಯದಿಂದ ಸಮಾಜಶಾಸ್ತ್ರದಲ್ಲಿ ಎಂ.ಎ ಪದವಿ, ತಮಿಳುನಾಡಿನ ಅಣ್ಣಾಮಲೈ ವಿಶ್ವವಿದ್ಯಾನಿಲಯದಿಂದ ಎಂ.ಫಿಲ್ ಪದವಿ, ಬೆಂಗಳೂರಿನ ಸ್ವಾಮಿ ವಿವೇಕಾನಂದ ಯೋಗ ವಿಶ್ವವಿದ್ಯಾನಿಲಯದಿಂದ ಯೋಗ ಶಿಕ್ಷಕ ಪದವಿ ಹಾಗೂ ಮಂಗಳೂರಿನ ಸಂತ ಎಲೋಶಿಯಸ್ ಕಾಲೇಜಿನಿಂದ ಕೊಂಕಣಿ ಭಾಷೆಯಲ್ಲಿ ಪಿ.ಜಿ. ಡಿಪ್ಲೋಮಾ ಪದವಿ ಪಡೆದಿದ್ದಾರೆ.



ಪ್ರಾಥಮಿಕ ಶಾಲೆಯಿಂದಲೇ ಕ್ರೀಡೆಯಲ್ಲಿ ತೊಡಗಿಸಿಕೊಂಡಿದ್ದ ಇವರು ವಿದ್ಯಾರ್ಥಿ ದೆಸೆಯಲ್ಲಿ ಮಂಗಳೂರು ವಿಶ್ವವಿದ್ಯಾನಿಲಯದ ಅಥ್ಲೆಟಿಕ್ಸ್ ಹಾಗೂ ವೆಯ್ಟ್ಲಿಪ್ಟಿಂಗ್ ಕ್ರೀಡಾಪಟುವಾಗಿದ್ದರು. ಅಥ್ಲೆಟಿಕ್ಸ್ನಲ್ಲಿ ಮಂಗಳೂರು ಮತ್ತು ಮೈಸೂರು ವಿಶ್ವವಿದ್ಯಾನಿಲಯವನ್ನು ತಲಾ ಒಂದು ಬಾರಿ ಅಂತರ್ ವಿಶ್ವವಿದ್ಯಾನಿಲಯ ಮಟ್ಟದಲ್ಲಿ ಪ್ರತಿನಿಧಿಸಿರುತ್ತಾರೆ. ವೆಯ್ಟ್ಲಿಪ್ಟಿಂಗ್ನಲ್ಲಿ ಜಿಲ್ಲೆ, ವಿಶ್ವವಿದ್ಯಾನಿಲಯ ಮತ್ತು ರಾಜ್ಯಮಟ್ಟದಲ್ಲಿ ಹಲವಾರು ಬಹುಮಾನಗಳನ್ನು ಪಡೆದಿದ್ದಾರೆ. ಸಂತ ಫಿಲೋಮಿನಾ ಕಾಲೇಜಿನ ಮಾಜಿ ದೈಹಿಕ ಶಿಕ್ಷಣ ನಿರ್ದೇಶಕರಾದ ದಿ|ಮೇಜರ್ ವೆಂಕಟ್ರಾಮಯ್ಯನವರ ಶಿಷ್ಯರಾದ ಇವರು ಅವರ ಸೇವಾ ನಿವೃತ್ತಿಯ ನಂತರ 1993ರಲ್ಲಿ ಸಂತ ಫಿಲೋಮಿನಾ ಕಾಲೇಜಿನ ದೈಹಿಕ ಶಿಕ್ಷಣ ನಿರ್ದೇಶಕರಾಗಿ ಸೇವೆ ಪ್ರಾರಂಭಿಸಿದರು. 1999ರಲ್ಲಿ ಕೆಪಿಎಸ್ಸಿ ಮೂಲಕ ಸರಕಾರಿ ಸೇವೆಗೆ ಆಯ್ಕೆಗೊಂಡ ಇವರು ಬೈಂದೂರು, ಬೆಟ್ಟಂಪಾಡಿ, ಮಡಿಕೇರಿ, ಬೆಳ್ಳಾರೆ, ಬೆಳಂದೂರು, ಉಪ್ಪಿನಂಗಡಿ ಸರಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ ಸೇವೆ ಸಲ್ಲಿಸಿ ಪ್ರಸ್ತುತ ಪುತ್ತೂರು ಸರಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.
ಅಥ್ಲೆಟಿಕ್ಸ್, ವೆಯ್ಟ್ಲಿಪ್ಟಿಂಗ್, ಪವರ್ಲಿಪ್ಟಿಂಗ್, ದೇಹದಾರ್ಡ್ಯ, ಗುಡ್ಡಗಾಡು ಓಟ, ಈಜು, ಕುಸ್ತಿ, ಸ್ಪರ್ಧೆಗಳಲ್ಲಿ ಮಂಗಳೂರು ವಿಶ್ವವಿದ್ಯಾನಿಲಯದ ತಂಡಗಳ ಮ್ಯಾನೇಜರ್ ಆಗಿ ಅಖಿಲ ಭಾರತ ಅಂತರ್ ವಿಶ್ವವಿದ್ಯಾನಿಲಯ ಮಟ್ಟದ ಸ್ಪರ್ಧೆಗಳಲ್ಲಿ ಭಾಗವಹಿಸಿರುತ್ತಾರೆ. ಜಿಲ್ಲಾ, ರಾಜ್ಯ, ವಿಶ್ವವಿದ್ಯಾನಿಲಯ ಮತ್ತು ಅಂತರ್ ವಿಶ್ವವಿದ್ಯಾನಿಲಯ ಮಟ್ಟದ ವಿವಿಧ ಕ್ರೀಡಾಕೂಟಗಳಲ್ಲಿ ತಾಂತ್ರಿಕ ಅಧಿಕಾರಿಯಾಗಿಯೂ ಭಾಗವಹಿಸಿದ್ದಾರೆ. 33 ವರ್ಷಗಳ ಸೇವಾ ಅವಧಿಯಲ್ಲಿ 5 ಅಂತರಾಷ್ಟ್ರೀಯ, 11 ರಾಷ್ಟ್ರೀಯ ಮಟ್ಟದ ಸೆಮಿನಾರ್/ಕಾನ್ಫರೆನ್ಸ್ಗಳನ್ನು ಒಳಗೊಂಡು ಸುಮಾರು 37 ಸೆಮಿನಾರ್/ಕಾನ್ಫರೆನ್ಸ್ಗಳಲ್ಲಿ ಭಾಗವಹಿಸಿದ್ದು ರಾಷ್ಟ್ರೀಯ ಮಟ್ಟದಲ್ಲಿ 9 ಪ್ರಬಂಧಗಳನ್ನು ಮಂಡಿಸಿದ್ದಾರೆ.










