






ಪುತ್ತೂರು: ಮೊಟ್ಟೆತಡ್ಕದಲ್ಲಿರುವ ಐಸಿಎಆರ್ – ಗೇರು ಸಂಶೋಧನಾ ನಿರ್ದೇಶನಲಯದಲ್ಲಿ ಗೇರು ದಿನಾಚರಣೆ ಮತ್ತು ಜಿಲ್ಲಾ ಮಟ್ಟದ ವಿಚಾರ ಸಂಕಿರಣ 2026 ಕಾರ್ಯಕ್ರಮ ನಡೆಯಿತು.






ಅತಿಥಿಯಾಗಿದ್ದ ಪುತ್ತೂರು ಅಡಿಕೆ ಪತ್ರಿಕೆಯ ಕಾರ್ಯನಿರ್ವಾಹಕ ನಿರ್ದೇಶಕರಾದ ಶ್ರೀಪಡ್ರೆ ರವರು ದೀಪ ಬೆಳಗಿಸಿ ಕಾರ್ಯಕ್ರಮ ಉದ್ಘಾಟನೆ ಮಾಡಿದರು. ಬಳಿಕ ಮಾತನಾಡಿದ ಅವರು ಗೇರು ಹಣ್ಣಿನ ಮೌಲ್ಯವರ್ಧಿತ ಉತ್ಪನ್ನಗಳ ಬಗ್ಗೆ ಒಲವಿಲ್ಲ ಎಂಬುದು ಸುಳ್ಳು. ಇದು ಏಕಪಕ್ಷೀಯ ನಿರ್ಧಾರ. ಗೇರುಹಣ್ಣಿನ ಮೌಲ್ಯವರ್ಧನೆ ಮಾಡಬೇಕು ಎಂದ ಅವರು ಉದ್ಯಮ ಪ್ರತಿನಿಧಿಗಳನ್ನು ಗೇರುಹಣ್ಣಿನ ಉತ್ಪನ್ನಗಳ ಮೌಲ್ಯಮಾಪನದಲ್ಲಿ ಸಕ್ರಿಯವಾಗಿ ಭಾಗವಹಿಸಲು ಮತ್ತು ತಂತ್ರಜ್ಞಾನ ಪರಿಷ್ಕರಣೆ ಮತ್ತು ಸುಧಾರಿತ ಗ್ರಾಹಕ ಸ್ವೀಕಾರಕ್ಕಾಗಿ ಸಂಸ್ಕರಣೆಗಾರರಿಗೆ ರಚನಾತ್ಮಕ ಪ್ರತಿಕ್ರಿಯೆ ನೀಡುವಂತೆ ತಿಳಿಸಿದರು.
ಮುಖ್ಯ ಅತಿಥಿ ತಮಿಳುನಾಡಿನ ತಿರುಚಿರಾಪಳ್ಳಿಯಲ್ಲಿರುವ ಐಸಿಎಆರ್-ರಾಷ್ಟ್ರೀಯ ಬಾಳೆಹಣ್ಣಿನ ಸಂಶೋಧನಾ ಕೇಂದ್ರದ ನಿರ್ದೇಶಕ ಡಾ.ಆರ್. ಸೆಲ್ವರಾಜನ್ ಮಾತನಾಡಿ ಗೇರು ಹಣ್ಣು ತ್ಯಾಜ್ಯವಾಗಿ ಬಿಸಾಡುವಂತಾಗಿದೆ. ಅದರಿಂದ ಉತ್ಪನ್ನಗಳನ್ನು ಮಾಡಿ ಮಾರ್ಕೆಟ್ ಮಾಡಿ ಎಂದ ಅವರು ಹಣ್ಣಿನ ಬಳಕೆಯನ್ನು ಉತ್ತೇಜಿಸುವಲ್ಲಿ ನಿರ್ದೇಶನಾಲಯದ ಪ್ರಯತ್ನಗಳನ್ನು ಶ್ಲಾಘಿಸಿದರು.
ಕೇರಳದ ಕೊಚ್ಚಿಯಲ್ಲಿರುವ ಗೇರು ಮತ್ತು ಕೋಕೋ ಅಭಿವೃದ್ಧಿ ನಿರ್ದೇಶನಾಲಯದ ನಿರ್ದೇಶಕಿ ಡಾ.ಫೆಮಿನಾ ಆನ್ಲೈನ್ ಮುಲಕ ಮಾತನಾಡಿ ಗೇರು ಹಣ್ಣಿನ ಸಂಸ್ಕರಣೆ ನಡೆಸಿ ಮೌಲ್ಯವರ್ಧಿತ ಉತ್ಪನ್ನ ಮಾಡಿದಲ್ಲಿ ಉತ್ತಮ ಆದಾಯ ಗಳಿಸಲು ಸಾಧ್ಯ. ಗೇರು ಹಣ್ಣಿನ ಉತ್ಪನ್ನಗಳ ಬಗ್ಗೆ ಜಾಗೃತಿ ಮೂಡಬೇಕು. ಉತ್ಪನ್ನಗಳು ಗ್ರಾಹಕರಿಗೆ ತಲುಪುವಂತೆ ಮಾಡಬೇಕು. ಇದಕ್ಕೆ ಸರಕಾರದಿಂದ ಸಿಗುವ ಸ್ಕೀಂಗಳ ಸದುಪಯೋಗಪಡಿಸಿಕೊಳ್ಳಬೇಕು ಎಂದರು. ಅಧ್ಯಕ್ಷತೆ ವಹಿಸಿದ್ದ ಐಸಿಎಆರ್ ಡಿಸಿಆರ್ ನಿರ್ದೇಶಕರಾದ ಡಾ. ದಿನಕರ ಅಡಿಗ ಮಾತನಾಡಿ ಹವಾಮಾನ ವೈಪರೀತ್ಯದಿಂದ ಗೇರು ಬೆಳೆಯಲ್ಲಿನ ಬದಲಾವಣೆಗೆ ಸಂಶೋಧನೆ ನಡೆಸಲಾಗುತ್ತದೆ ಎಂದರು.
ವಿಚಾರ ಸಂಕಿರಣ:
ವಿಚಾರ ಸಂಕಿರಣದಲ್ಲಿ ಡಾ. ಜ್ಯೋತಿ ನಿಶಾದ್ರವರು ಗೇರುಹಣ್ಣಿನ ಬಳಕೆ ಮತ್ತು ಮೌಲ್ಯವರ್ಧನೆಯ ಕುರಿತು ತಾಂತ್ರಿಕ ಮಾಹಿತಿ ನೀಡಿದರು. ಐಸಿಎಆರ್-ಡಿಸಿಆರ್ನ ಇನ್ಸ್ಟಿಟ್ಯೂಟ್ ಟೆಕ್ನಾಲಜಿ ಮ್ಯಾನೇಜ್ಮೆಂಟ್ ಯೂನಿಟ್ (ಐಟಿಎಂಯು)ನ ವಿಜ್ಞಾನಿ-ಪ್ರಭಾರಿ ಡಾ. ವಿ. ಥೊಂಡೈಮನ್ ತಂತ್ರಜ್ಞಾನ ವಾಣಿಜ್ಯೀಕರಣದ ಕಾರ್ಯವಿಧಾನದ ಕುರಿತು ಉಪನ್ಯಾಸ ನೀಡಿದರು. ಉತ್ಪನ್ನಗಳ ಜೀವಿತಾವಧಿಯನ್ನು ಹೆಚ್ಚಿಸುವುದು, ಉತ್ಪಾದನೆ ಮತ್ತು ಮಾರುಕಟ್ಟೆಗಾಗಿ ಆರ್ಥಿಕ ಬೆಂಬಲ ಕಾರ್ಯವಿಧಾನಗಳು ಮತ್ತು ಉದ್ಯಮಿಗಳು ಮತ್ತು ಉದ್ಯಮ ಪಾಲುದಾರರಿಗೆ ತರಬೇತಿ ಕಾರ್ಯಕ್ರಮಗಳ ಅಗತ್ಯತೆಯ ಕುರಿತು ಬಾಗವಹಿಸಿದವರು ತಿಳಿಸಿದರು.
ನರಿಮೊಗರು ನಿತ್ಯ ಚಪಾತಿಯ ಮಾಲಕರಾದ ರಾಧಾಕೃಷ್ಣ ಇಟ್ಟಿಗುಂಡಿ ಹಾಗೂ ಕೃಷಿಕರಾದ ನಾಗರಾಜುರವರನ್ನು ಸನ್ಮಾನಿಸಲಾಯಿತು. ಗೇರು ಹಣ್ಣನ್ನು ಬೇರ್ಪಡಿಸುವ ವಿವಿಧ ಯಂತ್ರಗಳ ಪರವಾನಿಗೆಯನ್ನು ಉದ್ಯಮದಾರರಿಗೆ ನೀಡಲಾಯಿತು. ಗೇರಿನಲ್ಲಿ ಅಭಿವೃದ್ಧಿಪಡಿಸಿದ ವಿವಿಧ ತಂತ್ರಜ್ಞಾನಗಳು ಮತ್ತು ಗೇರು ಹಣ್ಣಿನ ವಿವಿಧ ಮೌಲ್ಯವರ್ಧಿತ ಉತ್ಪನ್ನಗಳ ಪ್ರದರ್ಶನ ನಡೆಯಿತು.
ಐಸಿಎಆರ್ ಡಿಸಿಆರ್ ವಿಜ್ಞಾನಿ ಡಾ. ರಾಜಶೇಖರ್ ಸ್ವಾಗತಿಸಿ ವಿಜ್ಞಾನಿ ರಾಜಶೇಖರ್ ಪ್ರಾಸ್ತಾವಿಕವಾಗಿ ಮಾತನಾಡಿದರು. ವಿಜ್ಞಾನಿ ಡಾ. ಅಶ್ವತಿ ವಂದಿಸಿದರು. ಕರ್ನಾಟಕ, ತಮಿಳುನಾಡು ಮತ್ತು ಕೇರಳದ 32 ಉದ್ಯಮ ತಜ್ಞರು ಮತ್ತು ಉದ್ಯಮಿಗಳು ಪಾಲ್ಗೊಂಡರು. 22 ಜನರು ಆನ್ಲೈನ್ನಲ್ಲಿ ಕಾರ್ಯಕ್ರಮದಲ್ಲಿ ಸೇರಿಕೊಂಡರು.
ಅಭಿವೃದ್ಧಿಪಡಿಸಿದ ಉತ್ಪನ್ನಗಳ ಬಿಡುಗಡೆ
ಹಣ್ಣಿನ ಸಾಮರ್ಥ್ಯವನ್ನು ಗುರುತಿಸಿ, ಪುತ್ತೂರಿನ ಐಸಿಎಆರ್ ಗೇರು ಸಂಶೋಧನಾ ನಿರ್ದೇಶನಾಲಯ (ಐಸಿಎಆರ್-ಡಿಸಿಆರ್) ಗೇರು ಹಣ್ಣಿನ ಹಲವಾರು ಮೌಲ್ಯವರ್ಧಿತ ತಂತ್ರಜ್ಞಾನಗಳು ಮತ್ತು ಉತ್ಪನ್ನಗಳನ್ನು ಅಭಿವೃದ್ಧಿಪಡಿಸಿದೆ. ಐಸಿಎಆರ್-ಡಿಸಿಆರ್ನ ವಿಜ್ಞಾನಿ (ಆಹಾರ ತಂತ್ರಜ್ಞಾನ) ಡಾ. ಜ್ಯೋತಿ ನಿಶಾದ್ ಅವರ ತಂಡ ಅಭಿವೃದ್ಧಿಪಡಿಸಿದ ಐದು ಉತ್ಪನ್ನಗಳನ್ನು ಬಿಡುಗಡೆಗೊಳಿಸಸಲಾಯಿತು. ಗಂಟಲು ಕೆರೆಸುವ ಅಂಶವನ್ನು ತೆಗೆದ ತಾಜಾ ಗೇರುಹಣ್ಣಿನ ರಸ, ಪ್ಯಾಶ್ಚರೀಕರಿಸಿದ ಗೇರುಹಣ್ಣಿನ ರಸ, ಕ್ಯಾಶ್ಲೈಮ್ ಆರ್ಟಿಎಸ್, ಕ್ಯಾಶ್ಲೈಮ್ ಫಿಜ್ ಮತ್ತು ಗೇರುಹಣ್ಣಿನಿಂದ ಮಾಡಿದ ಜೋನಿ ಬೆಲ್ಲದಂತಹ ಉತ್ಪನ್ನಗಳನ್ನು ಅತಿಥಿಗಳು ಬಿಡುಗಡೆಗೊಳಿಸಿದರು. ಗೇರುಹಣ್ಣು ಆಧಾರಿತ ಉತ್ಪನ್ನಗಳ ಮೌಲ್ಯಮಾಪನವನ್ನು ನಡೆಸಲಾಯಿತು. ಎಲ್ಲಾ ಉತ್ಪನ್ನಗಳು ಭಾಗವಹಿಸುವವರಿಂದ ಸಕಾರಾತ್ಮಕ ಪ್ರತಿಕ್ರಿಯೆ ಪಡೆದವು, ಗೇರುಹಣ್ಣಿನ ಬೆಲ್ಲ ಮತ್ತು ಕ್ಯಾಶ್ಲೈಮ್ ಆರ್ಟಿಎಸ್ ಅತ್ಯುನ್ನತ ಆದ್ಯತೆ ಪಡೆಯಿತು.










