







ಇಂಗ್ಲಿಷ್ ಕಲಿಕೆ ಅತ್ಯಂತ ಅವಶ್ಯಕ-ಶ್ರೀನಿವಾಸ್ ಎಚ್.ಬಿ


ಪುತ್ತೂರು: ಮನೆಯಲ್ಲಿ ಮಾತನಾಡಲು ಮಾತೃಭಾಷೆ, ವ್ಯವಹಾರಕ್ಕಾಗಿ ಕನ್ನಡ ಹಾಗೂ ಜೀವನೋಪಾಯಕ್ಕಾಗಿ ಇಂಗ್ಲಿಷ್ ಕಲಿಯುವುದು ಇಂದಿನ ಕಾಲಘಟ್ಟದಲ್ಲಿ ಅತ್ಯಂತ ಅವಶ್ಯಕ. ಇಂಗ್ಲಿಷ್ ಜಾಗತಿಕ ಭಾಷೆಯಾಗಿದ್ದು, ಪ್ರತಿಯೊಬ್ಬ ವಿದ್ಯಾರ್ಥಿಯೂ ಇದನ್ನು ಅಭ್ಯಾಸ ಮಾಡಬೇಕು ಎಂದು ಸರ್ವೆ ಎಸ್.ಜಿ.ಎಂ ಪ್ರೌಢಶಾಲೆಯ ನಿವೃತ್ತ ಮುಖ್ಯಗುರು ಶ್ರೀನಿವಾಸ್ ಎಚ್.ಬಿ ಹೇಳಿದರು.




ಮುಂಡೂರು ಸ.ಉ.ಹಿ.ಪ್ರಾಥಮಿಕ ಶಾಲೆಯಲ್ಲಿ ಆಯೋಜಿಸಲಾಗಿದ್ದ `ಇಂಗ್ಲಿಷ್ ಟ್ಯಾಲೆಂಟ್ ಡೇ’ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಇಂಗ್ಲಿಷ್ ಕಲಿಕೆಯ ವಿವಿಧ ಆಯಾಮಗಳನ್ನು ವಿದ್ಯಾರ್ಥಿಗಳಿಗೆ ವಿವರಿಸಿದ ಅವರು ಶಾಲೆಗೆ ಆಕರ್ಷಕ ಗೋಡೆ ಗಡಿಯಾರವೊಂದನ್ನು ಕೊಡುಗೆಯಾಗಿ ನೀಡಿದರು.
`ರೈನ್ಬೋ’ ಪುಸ್ತಕ ಬಿಡುಗಡೆ
ಕಾರ್ಯಕ್ರಮದ ವಿಶೇಷ ಆಕರ್ಷಣೆಯಾಗಿ ಶಾಲಾ ವಿದ್ಯಾರ್ಥಿಗಳೇ ರಚಿಸಿದ ವಿವಿಧ ಲೇಖನಗಳು, ಕೃತಿಗಳು ಹಾಗೂ ಚಿತ್ರಗಳನ್ನೊಳಗೊಂಡ `ರೈನ್ಬೋ’ ಎಂಬ ವಿಶೇಷ ಇಂಗ್ಲಿಷ್ ಪುಸ್ತಕವನ್ನು ಅನಾವರಣಗೊಳಿಸಲಾಯಿತು. ಶಾಲಾ ಎಸ್.ಡಿ.ಎಂ.ಸಿ ಅಧ್ಯಕ್ಷ ಅಶೋಕ ಅಂಬಟ ಅಧ್ಯಕ್ಷತೆ ವಹಿಸಿ ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಇಂಗ್ಲಿಷ್ ಭಾಷೆಯ ಅಗತ್ಯತೆಯ ಬಗ್ಗೆ ಮಕ್ಕಳಿಗೆ ಮಾರ್ಗದರ್ಶನ ನೀಡಿದರು. ಇನ್ನೋರ್ವ ಅತಿಥಿ, ಶಾಲೆಯ ಹಿರಿಯ ವಿದ್ಯಾರ್ಥಿ ಪ್ರಕಾಶ್ ಡಿಸೋಜಾ ಶುಭ ಹಾರೈಸಿದರು.
ಕಾರ್ಯಕ್ರಮದ ಅಂಗವಾಗಿ ಹಮ್ಮಿಕೊಳ್ಳಲಾಗಿದ್ದ ವಿವಿಧ ಸ್ಪರ್ಧೆಗಳ ವಿಜೇತರಿಗೆ ಬಹುಮಾನ ವಿತರಿಸಲಾಯಿತು. ಸಭೆಯ ನಂತರ ನಡೆದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಪ್ರತಿ ತರಗತಿಯ ವಿದ್ಯಾರ್ಥಿಗಳು ಇಂಗ್ಲಿಷ್ ಭಾಷೆಯಲ್ಲಿ ಭಾಷಣ, ನಾಟಕ ಹಾಗೂ ನೃತ್ಯಗಳನ್ನು ಪ್ರದರ್ಶಿಸುವ ಮೂಲಕ ತಮ್ಮ ಪ್ರತಿಭೆಯನ್ನು ಮೆರೆದರು. ಶಾಲಾ ಮುಖ್ಯ ಶಿಕ್ಷಕಿ ವಿಜಯ ಪಿ. ಸ್ವಾಗತಿಸಿದರು. ಶಿಕ್ಷಕಿ ಅನ್ನಪೂರ್ಣ ವಂದಿಸಿದರು. ಇಂಗ್ಲಿಷ್ ಶಿಕ್ಷಕ ಅಬ್ದುಲ್ ಬಶೀರ್ ಕಾರ್ಯಕ್ರಮ ನಿರೂಪಿಸಿದರು. ಶಿಕ್ಷಕ ವೃಂದದವರು ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದರು.










