ವಿವೇಕಾನಂದ ಕಾನೂನು ಮಹಾವಿದ್ಯಾಲಯದಲ್ಲಿ ನ್ಯಾಯಾಧೀಶರಾಗಿ ಆಯ್ಕೆಯಾದ ಹಿರಿಯ ವಿದ್ಯಾರ್ಥಿಗಳಿಗೆ ಅಭಿನಂದನಾ ಕಾರ್ಯಕ್ರಮ

0

ವಿದ್ಯಾರ್ಥಿಗಳು ದೇಶದ ಭವಿಷ್ಯ: ಡಾ. ಕೆ. ಎಂ. ಕೃಷ್ಣ ಭಟ್

ಪುತ್ತೂರು: ನೆಹರೂನಗರದಲ್ಲಿರುವ ವಿವೇಕಾನಂದ ಕಾನೂನು ಮಹಾವಿದ್ಯಾಲಯದಲ್ಲಿ ಹಿರಿಯ ವಿದ್ಯಾರ್ಥಿ ಸಂಘದ ಸಹಯೋಗದೊಂದಿಗೆ ಕರ್ನಾಟಕ ರಾಜ್ಯ ನ್ಯಾಯಾಂಗ ಇಲಾಖೆ ಮತ್ತು ಕರ್ನಾಟಕ ಉಚ್ಚ ನ್ಯಾಯಾಲಯದ 2025ನೇ ಸಾಲಿನ ಸಿವಿಲ್ ನ್ಯಾಯಾಧೀಶರ ಹುದ್ದೆಗೆ ಆಯ್ಕೆಯಾದ ನಾಲ್ವರು ಹಿರಿಯ ವಿದ್ಯಾರ್ಥಿಗಳಿಗೆ ಅಭಿನಂದನಾ ಕಾರ್ಯಕ್ರಮ ನಡೆಯಿತು. ವಿವೇಕಾನಂದ ಕಾನೂನು ಮಹಾವಿದ್ಯಾಲಯದ 2013- 16 ಬ್ಯಾಚ್ ನ 3 ವರ್ಷದ ಎಲ್. ಎಲ್. ಬಿ. ಪದವಿ ಪಡೆದ ದೀಪಿಕಾ ಎಸ್., 2013 – 18 ಬ್ಯಾಚ್ ನಲ್ಲಿ 5 ವರ್ಷದ ಬಿ.ಎ.ಎಲ್. ಎಲ್. ಬಿ. ಪಡೆದ ಮನೋಜ್ ಕುಮಾರ್ ಯು., 2016 – 19 ಬ್ಯಾಚ್ ನಲ್ಲಿ 3 ವರ್ಷದ ಎಲ್. ಎಲ್. ಬಿ. ಪದವಿ ಪಡೆದಿದ್ದ ಧನ್ಯ ಎಂ. ಕೆ. ಹಾಗೂ 2019-24 ಬ್ಯಾಚ್ ನಲ್ಲಿ 5 ವರ್ಷದ ಬಿ.ಎ. ಎಲ್. ಎಲ್. ಬಿ. ವ್ಯಾಸಂಗ ಮಾಡಿದ ಮಂಜುನಾಥ್ ಶಿವಲಿಂಗಪ್ಪ ಜಿ. ಅವರನ್ನು ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ವಿವೇಕಾನಂದ ವಿದ್ಯಾವರ್ಧಕ ಸಂಘದ ಕಾರ್ಯದರ್ಶಿಗಳಾದ ಡಾ. ಕೆ. ಎಂ. ಕೃಷ್ಣ ಭಟ್ ಸಾಧಕರನ್ನು ಸನ್ಮಾನಿಸಿದರು. ನಂತರ ಮಾತನಾಡಿದ ಅವರು, ನ್ಯಾಯಾಮೂರ್ತಿ ಹುದ್ದೆಯೆಂದರೆ ಈ ದೇಶದಲ್ಲಿ ವಿಶಿಷ್ಟ ಗೌರವ ಹಾಗೂ ಅತ್ಯಂತ ಜವಾಬ್ದಾರಿಯುತ ಸ್ಥಾನವನ್ನು ಅಲಂಕರಿಸುವ ಒಂದು ವಿಶೇಷ ಹುದ್ದೆಯಾಗಿದೆ. ನಮ್ಮ ವಿವೇಕಾನಂದ ಕಾನೂನು ಮಹಾವಿದ್ಯಾಲಯದ ನಾಲ್ವರು ಹಿರಿಯ ವಿದ್ಯಾರ್ಥಿಗಳು ಅಂತಹ ಗೌರವಯುತ ಸ್ಥಾನಕ್ಕೆ ಆಯ್ಕೆಯಾಗಿರುವುದು ಅತ್ಯಂತ ವಿಶೇಷವಾಗಿದೆ. ವಿದ್ಯಾರ್ಥಿಗಳು ದೇಶದ ಭವಿಷ್ಯ. ಅದರಲ್ಲಿಯೂ ಕಾನೂನು ಕಲಿಯುವ ಪ್ರತಿಯೊಬ್ಬ ವಿದ್ಯಾರ್ಥಿಯು ದೇಶದ ಭವಿಷ್ಯ ಬದಲಿಸುವಷ್ಟು ಸಾಧನೆ ಮಾಡಲು ಸಾಧ್ಯವಿದೆ ಎಂದರು. ವಿದ್ಯಾರ್ಥಿಗಳು ಜೀವನದಲ್ಲಿ ನಿರ್ದಿಷ್ಟ ಗುರಿಯನ್ನು ಇಟ್ಟುಕೊಂಡು ಅದನ್ನು ಸಾಧಿಸಲು ಸತತ ಪ್ರಯತ್ನಿಸಬೇಕು. ಕಾನೂನು ವಿದ್ಯಾರ್ಥಿಗಳಿಗೆ ಆಧುನಿಕ ಕಾಲಘಟ್ಟದಲ್ಲಿ ಹಲವಾರು ಅವಕಾಶಗಳಿದ್ದು, ಅದರ ಸದುಪಯೋಗ ಪಡಿಸಿಕೊಂಡು ಸಾಧನೆ ಮಾಡಬೇಕು ಎಂದರು.

ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದ ಪುತ್ತೂರಿನ ಜಿಡೆಕಲ್ಲಿನ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲರಾದ ಸುಬ್ಬಪ್ಪ ಕೈಕಂಬ ಮಾತನಾಡಿ, ನ್ಯಾಯಾಂಗ ಕ್ಷೇತ್ರ ಎನ್ನುವುದು ದೇವಸ್ಥಾನಕ್ಕೆ ಸಮಾನವಾದ ಸ್ಥಾನವನ್ನು ಹೊಂದಿದೆ. ಅಂತಹ ನ್ಯಾಯಾಂಗ ಕ್ಷೇತ್ರದಲ್ಲಿ ನ್ಯಾಯಾಧೀಶರಾಗಿ ಆಯ್ಕೆಯಾಗುವುದೆಂದರೆ ಅತ್ಯಂತ ವಿಶೇಷವಾದ ಸಾಧನೆಯಾಗಿದೆ. ಅಂತಹ ನಾಲ್ವರು ಸಾಧಕರನ್ನು ಸಮಾಜಕ್ಕೆ ನೀಡಿರುವ ವಿವೇಕಾನಂದ ಕಾನೂನು ಮಹಾವಿದ್ಯಾಲಯ ಅಭಿನಂದನಾರ್ಹ. ಇಲ್ಲಿರುವ ಎಲ್ಲಾ ವಿದ್ಯಾರ್ಥಿಗಳು ಶಿಕ್ಷಣವಂತರಾಗಿ, ಅಧ್ಯಯನ ಮಾಡಿದ ಕಾಲೇಜಿಗೆ, ಶಿಕ್ಷಕರಿಗೆ ಕೀರ್ತಿ ತರುವ ಕೆಲಸ ಮಾಡಬೇಕು. ಅದೇ ರೀತಿ ತಂದೆ ತಾಯಂದಿರು ಮಕ್ಕಳಿಗಾಗಿ ತಮ್ಮ ಸರ್ವಸ್ವವನ್ನೇ ತ್ಯಾಗ ಮಾಡಿ ಶಿಕ್ಷಣ ನೀಡುತ್ತಿರುತ್ತಾರೆ. ಅದನ್ನು ಅರಿತುಕೊಂಡು ವಿದ್ಯಾರ್ಥಿಗಳು ಕಠಿಣ ಪರಿಶ್ರಮ ಹಾಗೂ ನಿರಂತರವಾದ ಓದುವ ಹವ್ಯಾಸವನ್ನು ಬೆಳೆಸಿಕೊಂಡು ಸಮಾಜವೇ ತಿರುಗಿನೋಡುವಂತಹ ಸಾಧನೆ ಮಾಡಿ ಎಂದು ಶುಭಹಾರೈಸಿದರು.

ವಿವೇಕಾನಂದ ಕಾನೂನು ಮಹಾವಿದ್ಯಾಲಯದ ಸಂಚಾಲಕರಾದ ವಿಜಯನಾರಾಯಣ ಕೆ.ಎಂ. ಪ್ರಾಸ್ತವಿಕವಾಗಿ ಮಾತನಾಡಿ, ವಿವೇಕಾನಂದ ಕಾನೂನು ಮಹಾವಿದ್ಯಾಲಯದ ಹಿರಿಯ ವಿದ್ಯಾರ್ಥಿಗಳು ಈ ರೀತಿಯ ಸಾಧನೆ ಮಾಡಿರುವುದು ಅತ್ಯಂತ ಹೆಮ್ಮೆಯ ವಿಷಯವಾಗಿದೆ ಎಂದ ಅವರು ನಮ್ಮ ಸಂಸ್ಥೆಯ ಪ್ರತಿಯೊಬ್ಬ ಕಾನೂನು ವಿದ್ಯಾರ್ಥಿಯು ಈ ರೀತಿಯ ಸಾಧನೆ ಮಾಡಬೇಕು ಎಂದರು.

ಸನ್ಮಾನಿತರಾದ ದೀಪಿಕಾ ಎಸ್., ಮನೋಜ್ ಕುಮಾರ್ ಯು., ಧನ್ಯ ಎಂ. ಕೆ. ಹಾಗೂ ಮಂಜುನಾಥ್ ಶಿವಲಿಂಗಪ್ಪ ಜಿ. ಮಾತನಾಡಿ, ಕಾಲೇಜಿನ ಜೊತೆಗಿನ ಒಡನಾಟವನ್ನು ಹಂಚಿಕೊಂಡರು. ಅದೇ ರೀತಿ ಹಿರಿಯ ವಿದ್ಯಾರ್ಥಿ ಸಂಘದ ಪ್ರದಾನ ಕಾರ್ಯದರ್ಶಿ ದೀಪಕ್ ಬೊಳ್ವಾರ್ ಮಾತನಾಡಿ ಶುಭಹಾರೈಸಿದರು.

ವೇದಿಕೆಯಲ್ಲಿ ವಿವೇಕಾನಂದ ಕಾನೂನು ಮಹಾವಿದ್ಯಾಲಯದ ಕಾನೂನು ವಿಭಾಗದ ನಿರ್ದೇಶಕರಾದ ಡಾ. ಬಿ.ಕೆ. ರವೀಂದ್ರ ಉಪಸ್ಥಿತರಿದ್ದರು. ವಿವೇಕಾನಂದ ಕಾನೂನು ಮಹಾವಿದ್ಯಾಲಯದ ಪ್ರಾಂಶುಪಾಲರಾದ ಶ್ರೀಮತಿ ಅಕ್ಷತಾ ಎ. ಪಿ. ಸ್ವಾಗತಿಸಿ, ಕಾನೂನು ವಿಭಾಗದ ಸಹಾಯಕ ಪ್ರಾಧ್ಯಾಪಕಿರಾದ ಶ್ರೀಮತಿ ಸುಭಾಷಿಣಿ ಜೆ. ವಂದಿಸಿದರು. ಆಂಗ್ಲ ಭಾಷಾ ಸಹಾಯಕ ಪ್ರಾಧ್ಯಾಪಕಿ ಶ್ರೀಮತಿ ಸಂಧ್ಯಾ ಪಿ.ಎಂ. ಕಾರ್ಯಕ್ರಮ ನಿರೂಪಿಸಿದರು.

ಸಾಧಕ ವಿದ್ಯಾರ್ಥಿಗಳ ಪೋಷಕರು, ವಿವೇಕಾನಂದ ಕಾನೂನು ಮಹಾವಿದ್ಯಾಲಯದ ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here