







ಸಾರ್ವಜನಿಕ ಶ್ರೀ ಸತ್ಯನಾರಾಯಣ ಪೂಜೆ, ಚೌಕಿ ಪೂಜೆ, ಶ್ರೀ ದೇವಿ ಮಹಾತ್ಮೆ ಯಕ್ಷಗಾನ ಬಯಲಾಟ


ಪುತ್ತೂರು: ಕೆದಂಬಾಡಿ ಗ್ರಾಮದ ತಿಂಗಳಾಡಿ ಶ್ರೀಕ್ಷೇತ್ರ ದೇವಗಿರಿಯಲ್ಲಿರುವ ಶ್ರೀ ದೇವತಾ ಭಜನಾ ಮಂದಿರದ 31 ನೇ ವಾರ್ಷಿಕ ಮಂಗಳೋತ್ಸವವು ಮಾ.17 ರಂದು ಜರಗಿತು. ವಿಶೇಷವಾಗಿ ಬೆಳಿಗ್ಗೆ ಸಾರ್ವಜನಿಕ ಶ್ರೀ ಸತ್ಯನಾರಾಯಣ ಪೂಜೆ,ಸಂಜೆ ಕಟೀಲು ಶ್ರೀ ದೇವಿಗೆ ಚೌಕಿ ಪೂಜೆ ನಡೆದು ಸಂಪೂರ್ಣ ಶ್ರೀ ದೇವಿ ಮಹಾತ್ಮೆ ಯಕ್ಷಗಾನ ಬಯಲಾಟ ನಡೆಯಿತು. ಮಧ್ಯಾಹ್ನ ಹಾಗೂ ರಾತ್ರಿ ಭಕ್ತಾಧಿಗಳಿಗೆ ಅನ್ನ ಸಂತರ್ಪಣೆ ನಡೆಯಿತು. ಊರ ಪರವೂರ ಸಾವಿರಕ್ಕೂ ಅಧಿಕ ಮಂದಿ ಆಗಮಿಸಿ ಶ್ರೀ ದೇವರ ಪ್ರಸಾದದೊಂದಿಗೆ ಅನ್ನ ಪ್ರಸಾದ ಸ್ವೀಕರಿಸಿದರು.




ಬೆಳಿಗ್ಗೆ ಕಟೀಲು ಮೇಳದ ದೇವರು ಮತ್ತು ಕಲಾವಿದರನ್ನು ಬಡಮಾಡಿಕೊಳ್ಳಲಾಯಿತು ಬಳಿಕ ಶ್ರೀ ಕಟೀಲು ದೇವಿಗೆ ಬೆಳಗ್ಗಿನ ಪೂಜೆ ನಡೆದು ಸ್ಥಳ ಸಾನಿಧ್ಯ ದೈವಗಳಿಗೆ ತಂಬಿಲ ಸೇವೆ ನಡೆಯಿತು.
ಅರ್ಚಕರಾದ ಕೃಷ್ಣ ಕುಮಾರ್ ಉಪಾಧ್ಯಾಯ ಪಟ್ಲಮೂಲೆ ಇವರ ನೇತೃತ್ವದಲ್ಲಿ ಸತ್ಯನಾರಾಯಣ ಪೂಜೆ ಆರಂಭಗೊಂಡಿತು ಈ ಸಂದರ್ಭದಲ್ಲಿ ಆಲಡ್ಕ ಶ್ರೀ ಸದಾಶಿವ ಭಜನಾ ಮಂಡಳಿಯವರಿಂದ ಭಜನಾ ಸೇವೆ ನಡೆಯಿತು. ಮಧ್ಯಾಹ್ನ ಸತ್ಯನಾರಾಯಣ ಪೂಜೆಯ ಮಹಾ ಮಂಗಳಾರತಿ ನಡೆದು ಮಹಾಪೂಜೆಯ ಬಳಿಕ ಪ್ರಸಾದ ವಿತರಣೆ, ಸಾರ್ವಜನಿಕ ಅನ್ನ ಸಂತರ್ಪಣೆ ನಡೆಯಿತು.ಸಂಜೆ ಕಟೀಲು ಶ್ರೀ ದೇವಿಗೆ ಚೌಕಿ ಪೂಜೆ ನಡೆದು ಪ್ರಸಾದ ವಿತರಣೆ ಬಳಿಕ ಕಟೀಲು ಶ್ರೀ ದುರ್ಗಾಪರಮೇಶ್ವರಿ ಯಕ್ಷಗಾನ ಬಯಲಾಟ ಸೇವಾ ಸಮಿತಿ ಇವರ ಪ್ರಾಯೋಜಕತ್ವದಲ್ಲಿ ಶ್ರೀ ದುರ್ಗಾಪರಮೇಶ್ವರಿ ದಶಾವತಾರ ಯಕ್ಷಗಾನ ಮಂಡಳಿ ಶ್ರೀ ಕ್ಷೇತ್ರ ಕಟೀಲು ಇವರಿಂದ ಸಂಪೂರ್ಣ ಶ್ರೀ ದೇವಿ ಮಹಾತ್ಮೆ ಯಕ್ಷಗಾನ ಬಯಲಾಟ ನಡೆಯಿತು. ಇದೇ ಸಂದರ್ಭದಲ್ಲಿ ಸಾರ್ವಜನಿಕ ಅನ್ನ ಸಂತರ್ಪಣೆ ನಡೆಯಿತು. ಸಾವಿರಾರು ಮಂದಿ ಯಕ್ಷಗಾನ ವೀಕ್ಷಿಸಿದರು.

ಶ್ರೀ ದೇವತಾ ಸಮಿತಿ ಮತ್ತು ಶ್ರೀ ದೇವತಾ ಭಜನಾ ಮಂಡಳಿಯ ಅಧ್ಯಕ್ಷರುಗಳು, ಪದಾಧಿಕಾರಿಗಳು ಹಾಗೂ ಸದಸ್ಯರುಗಳು ಹಾಗೇ ಕಟೀಲು ಶ್ರೀ ದುರ್ಗಾಪರಮೇಶ್ವರಿ ಯಕ್ಷಗಾನ ಬಯಲಾಟ ಸಮಿತಿಯ ಸಂಚಾಲಕರು ಮತ್ತು ಸೇವಾರ್ಥಿಗಳು, ಭಕ್ತಾಧಿಗಳು ಉಪಸ್ಥಿತರಿದ್ದರು.

ಸಾವಿರಕ್ಕೂ ಮಿಕ್ಕಿ ಭಕ್ತಾಧಿಗಳಿಗೆ ಅನ್ನಸಂತರ್ಪಣೆ
ಶ್ರೀಕ್ಷೇತ್ರ ದೇವಗಿರಿ ಶ್ರೀ ದೇವತಾ ಭಜನಾ ಮಂದಿರದ 31 ನೇ ವಾರ್ಷಿಕ ಮಂಗಳೋತ್ಸವದ ಪ್ರಯುಕ್ತ ಮಧ್ಯಾಹ್ನ ಮತ್ತು ರಾತ್ರಿ ಸಾರ್ವಜನಿಕ ಅನ್ನಸಂತರ್ಪಣೆ ನಡೆಯಿತು. ಊರ ಪರವೂರ ಸಾವಿರಕ್ಕೂ ಅಧಿಕ ಮಂದಿ ಭಕ್ತಾಧಿಗಳು ಆಗಮಿಸಿ ಅನ್ನ ಪ್ರಸಾದ ಸ್ವೀಕರಿಸಿದರು.










