







ಪುತ್ತೂರು:ಅಡಿಕೆಯಲ್ಲಿ ಅಪಾಯಕರ ಅಂಶ ಇಲ್ಲ ಎನ್ನುವುದು ಸಂಶೋಧನೆಯ ಮಧ್ಯಂತರ ವರದಿಯಲ್ಲಿ ತಿಳಿದು ಬಂದಿದೆ ಎಂದು ಕೃಷಿ ಸಚಿವ ಚಲುವರಾಯ ಸ್ವಾಮಿ ವಿಧಾನಪರಿಷತ್ತಿನಲ್ಲಿ ಮಾಹಿತಿ ನೀಡಿದ್ದಾರೆ.ಇದು ಅಡಿಕೆ ಬೆಳೆಗಾರರು ಹಾಗೂ ಬಳಕೆದಾರರಿಗೆ ಕೊಂಚ ಸಮಾಧಾನವನ್ನು ತಂದಿದೆ.


ವಿಧಾನಪರಿಷತ್ತಿನಲ್ಲಿ ಬಿಜೆಪಿಯ ಶಾಸಕ ಪ್ರತಾಪ್ ಸಿಂಹ ನಾಯಕ್‌ರವರ ಪ್ರಶ್ನೆಗೆ ಕೃಷಿ ಸಚಿವರು ಉತ್ತರಿಸಿ ಮಾಹಿತಿ ನೀಡಿದರು.ಅಡಿಕೆ ಹಾನಿಕಾರಕವಲ್ಲ ಮತ್ತು ಕ್ಯಾನ್ಸರ್‌ಕಾರಕವಲ್ಲ ಎಂಬ ಬಗ್ಗೆ ಈಗಾಗಲೇ ಸಂಶೋಧನೆ ನಡೆಯುತ್ತಿದೆ.ಅಂತಿಮ ವರದಿ ಬಂದ ಅನಂತರ ಕೃಷಿಕರಿಗೆ ಸಂದೇಶ ನೀಡಲಾಗುತ್ತದೆ.ಕೃಷಿಕರ ಆತಂಕ ಹೋಗಲಾಡಿಸುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಲಾಗುತ್ತದೆ ಎಂದು ತಿಳಿಸಿದ್ದಾರೆ.



ಅಡಿಕೆಗೆ ಅಂಟಿದ ಕಳಂಕವನ್ನು ತೊಡೆದು ಹಾಕುವ ಹಾಗೂ ಈ ಬಗ್ಗೆ ಸಂಶೋಧನೆ ನಡೆಸುವ ಹೊಣೆಯನ್ನು ಎಂ.ಎಸ್.ರಾಮಯ್ಯ ಸಂಸ್ಥೆಗೆ ತೋಟಗಾರಿಕೆ ಇಲಾಖೆ ವಹಿಸಿದೆ.ಈಗಾಗಲೇ 31.80 ಲಕ್ಷ ರೂ. ವೆಚ್ಚದಲ್ಲಿ ಸಂಶೋಧನೆ ಕೈಗೊಂಡಿದೆ.ಪಾನ್ ಅಥವಾ ಪಾನ್ ಮಸಾಲದಂತಹ ಪದಾರ್ಥಗಳಲ್ಲಿ ಅಡಿಕೆಯನ್ನು ಒಂದು ಅಂಶವಾಗಿ ಬಳಸಿದರೂ ಅಲ್ಪ ಪ್ರಮಾಣದಲ್ಲಿ ಸೇವಿಸಿದರೆ ಹಾಗೂ ತಂಬಾಕು ಸೇರಿಸದೆ ಇದ್ದರೆ ಹಾನಿಕಾರಕವಲ್ಲ ಎಂದು ಈ ಸಂಸ್ಥೆ ವರದಿ ನೀಡಿದೆ ಎಂದು ಸಚಿವರು ತಿಳಿಸಿದರು.
ಅಡಿಕೆ ಹಾಳೆ ತಟ್ಟೆಗಳಲ್ಲಿ ಅಲ್ಕಲಾಯ್ಡ್ ಮಟ್ಟವು ಅತ್ಯಂತ ಕಡಿಮೆ ಇರುವುದು ಈ ಕುರಿತಾದ ಅಧ್ಯಯನಗಳಲ್ಲಿ ಕಂಡುಬಂದಿದೆ.ಆಹಾರಕ್ಕೆ ಈ ರಾಸಾಯನಿಕಗಳ ಸೇರ್ಪಡೆಯಾಗುವ ಸಾಧ್ಯತೆ ಕಡಿಮೆ ಇರುವುದರಿಂದ ಅವುಗಳನ್ನು ಜೈವಿಕವಾಗಿ ವಿಘಟನೆಗೊಳ್ಳುವ ಆಹಾರ ಪಾತ್ರೆಗಳಾಗಿ ಬಳಸಿದಲ್ಲಿ ಮನುಷ್ಯನ ಆರೋಗ್ಯಕ್ಕೆ ಅಪಾಯವಿಲ್ಲ ಎಂದು ತಿಳಿದು ಬಂದಿದೆ ಎಂದರು.










