






ನೆಲ್ಯಾಡಿ: ಬೆಳ್ತಂಗಡಿ ಧರ್ಮಪ್ರಾಂತ್ಯದ ನೂತನ ವಿಕಾರ್ ಜೆನರಲ್ ಆಗಿ ಅಧಿಕಾರ ಸ್ವೀಕರಿಸಿದ ರೆ. ಫಾ. ಡಾ. ಮಾಣಿ ವೆಳುತ್ತೇಡತ್ತ್ ಪರಂಭಿಲ್ ಅವರಿಗೆ ನೆಲ್ಯಾಡಿಯ ಸಂತ ಅಲ್ಫೋನ್ಸ ಪುಣ್ಯಕ್ಷೇತ್ರದ ವತಿಯಿಂದ ಸನ್ಮಾನ ಹಾಗೂ ಗೌರವ ಸಮರ್ಪಣೆ ನಡೆಯಿತು.


ಮೂಲತಃ ಉದನೆ ಗ್ರಾಮದವರಾದ ಫಾ. ಮಾಣಿ ಅವರು ರೋಮ್‌ನ ಪ್ರಸಿದ್ಧ ಡೆಮಿಷಿಯಾನೋ ವಿಶ್ವವಿದ್ಯಾಲಯದಿಂದ ಡಾಕ್ಟರೇಟ್ ಪದವಿ ಪಡೆದಿದ್ದಾರೆ. ಈ ಹಿಂದೆ ಅವರು ಜಡ್ಕಲ್, ಮುದೂರು, ಬೆಳ್ತಂಗಡಿ, ಬಂಗಾಡಿ, ಉಜಿರೆ, ಧರ್ಮಸ್ಥಳ, ಕುಟ್ರಪಾಡಿ, ಕಂಕನಾಡಿ ಹಾಗೂ ಕೊಡಗಿನ ಹೊಸಕೋಟೆ ಸೇರಿದಂತೆ ವಿವಿಧ ಚರ್ಚುಗಳಲ್ಲಿ ಸೇವೆ ಸಲ್ಲಿಸಿದ್ದಾರೆ.



ಸನ್ಮಾನ ನೆರವೇರಿಸಿ ಮಾತನಾಡಿದ ಸಂತ ಅಲ್ಫೋನ್ಸ ಪುಣ್ಯಕ್ಷೇತ್ರದ ಧರ್ಮಗುರುಗಳಾದ ವಂದನೀಯ ಫಾ. ಶಾಜಿ ಮಾತ್ಯು ಅವರು, “ಪೂಜ್ಯ ಫಾ. ಮಾಣಿ ವೆಳುತ್ತೇಡತ್ತ್ ಅವರು ತಮ್ಮ ಅಪ್ರತಿಮ ಸೇವಾಭಾವ ಮತ್ತು ಆಡಳಿತಾತ್ಮಕ ದಕ್ಷತೆಯಿಂದ ಗುರುತಿಸಿಕೊಂಡವರು. ಅವರ ಈ ಹೊಸ ಜವಾಬ್ದಾರಿಯು ಬೆಳ್ತಂಗಡಿ ಧರ್ಮಪ್ರಾಂತ್ಯದ ಸರ್ವತೋಮುಖ ಅಭಿವೃದ್ಧಿಗೆ ದೊಡ್ಡ ಬಲ ನೀಡಲಿದೆ” ಎಂದು ಹಾರೈಸಿದರು.
ಕಾರ್ಯಕ್ರಮದಲ್ಲಿ ಪಾಲನಾ ಸಮಿತಿಯ ಪ್ರಮುಖರಾದ ಜೋನ್ಸನ್, ರಾಜೇಶ್, ರೆಜಿ ಜೋಯ್ ಮತ್ತು ಸಿಸ್ಟರ್ ಲಿಸ್ ಮಾತ್ಯು ಉಪಸ್ಥಿತರಿದ್ದು ಸನ್ಮಾನ ಕಾರ್ಯಕ್ರಮ ನಡೆಸಿಕೊಟ್ಟರು. ಸುರೇಶ್ ಕಾರ್ಯಕ್ರಮ ನಿರೂಪಿಸಿದರು. ಕ್ಷೇತ್ರದ ನಾಗರಿಕರು ಹಾಗೂ ಭಕ್ತಾದಿಗಳು ನೂತನ ವಿಕಾರ್ ಜೆನರಲ್ ಅವರಿಗೆ ಶುಭಕೋರಿ ಆಶೀರ್ವಾದ ಪಡೆದರು.










