ಭಗವಾನ್ ಮಹಾವೀರರ ಉಪದೇಶ ಇಂದಿಗೂ ಪ್ರಸ್ತುತ : ಭಗವಾನ್ ಮಹಾವೀರ ಜಯಂತಿಯಲ್ಲಿ ತಹಶೀಲ್ದಾರ್ ಎಸ್.ಬಿ ಕೂಡಲಗಿ

0

ಪುತ್ತೂರು: ತಾಲೂಕು ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ಹಾಗೂ ಜೈನ್ ಮಿಲನ್ ಸಮಿತಿ ಜಂಟೀ ಆಶ್ರಯದಲ್ಲಿ ಭಗವಾನ್ ಮಹಾವೀರ ಜಯಂತಿ ಆಚರಣೆಯು ಮಾ.30ರಂದು ತಾಲೂಕು ಆಡಳಿತ ಸೌಧದ ತಹಶೀಲ್ದಾರ್ ಸಭಾಂಗಣದಲ್ಲಿ ನಡೆಯಿತು.


ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ತಾಲೂಕು ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ಅಧ್ಯಕ್ಷರಾಗಿರುವ ತಹಶೀಲ್ದಾರ್ ಎಸ್.ಬಿ ಕೂಡಲಗಿ ಮಾತನಾಡಿ, ಭಗವಾನ್ ಮಹಾವೀರರ ಉಪದೇಶಗಳು ಎರಡು ಸಾವಿರ ವರ್ಷ ಕಳೆದರೂ ಜೀವಂತಿಕೆಯನ್ನು ಕಳೆದುಕೊಳ್ಳದೆ ಇಂದಿಗೂ ಪ್ರಸ್ತುತವಾಗಿವೆ. ಅವರ ಉಪದೇಶ-ಚಿಂತನೆಗಳನ್ನು ನಮ್ಮ ಬದುಕಿನಲ್ಲಿ ಅಳವಡಿಸಿಕೊಂಡಾಗ ಅವರ ಸತ್ಯದ ಅನ್ವೇಷಣೆಗೆ ಪೂರಕವಾದ ವಾತಾವರಣ ನಿರ್ಮಾಣವಾಗುತ್ತದೆ. ಯಾರಿಗೂ ನೋವುಕೊಡದ, ಸಮಸ್ಯೆಗಳ ಸೃಷ್ಟಿಗೆ ಕಾರಣವಾಗದ ಸಮಾಜ ಅಂದರೆ ಅದು ಜೈನಸಮಾಜ ಎಂದು ಅವರು ಹೇಳಿದರು.


ಸಂಸ್ಮರಣಾ ಭಾಷಣ ಮಾಡಿದ ಗ್ರಾಮ ಆಡಳಿತಾಧಿಕಾರಿ ಶ್ರೀಕಲಾ ಮಾತನಾಡಿ, ವರ್ಣ ವ್ಯವಸ್ಥೆಯ ವಿರುದ್ಧದ ಭಗವಾನ್ ಮಹಾವೀರ ಅವರ ಚಿಂತನೆಗಳು ಸಾರ್ವಕಾಲಿಕ ಮೌಲ್ಯಗಳಾಗಿ ಉಳಿದುಕೊಂಡಿವೆ. ಸಾಹಿತ್ಯ, ಸಂಸ್ಕೃತಿ ಹಾಗೂ ವಾಸ್ತುಶಿಲ್ಪಕ್ಕೆ ಜೈನಧರ್ಮದ ಕೊಡುಗೆ ಅಪಾರವಾಗಿದೆ. ಸಮಾಜಕ್ಕೆ ಮಾರ್ಗದರ್ಶಕ ಧರ್ಮವಾಗಿರುವ ಜೈನಧರ್ಮ ಉನ್ನತವಾದ ಮೌಲ್ಯವನ್ನು ಕಾಪಾಡಿಕೊಂಡು ಬಂದಿದೆ. ಜೈನಸಮಾಜ ಇಂದಿಗೂ ಸಹಬಾಳ್ವೆಯ ಮಿತಿಯನ್ನು ಮೀರಿ ಬದುಕುವುದನ್ನು ಇಚ್ಛಿಸುವುದಿಲ್ಲ ಎಂದರು.


ಪುತ್ತೂರು ಜೈನ್ ಮಿಲನ್ ಅಧ್ಯಕ್ಷ ಸತೀಶ್ ಪಡಿವಾಳ್ ಅವರು ಮಾತನಾಡಿ, ನೀನು ಬದುಕು. ಇತರರನ್ನು ಬದುಕಲು ಬಿಡು ಎಂಬ ಚಿಂತನೆಯ ಜೈನಧರ್ಮದ ತತ್ವ ಜೈನಸಮಾಜದಲ್ಲಿ ಇಂದಿಗೂ ಹಾಸುಹೊಕ್ಕಾಗಿದೆ. ದೇಶದಲ್ಲಿ ಕೇವಲ ಶೇ.0.09ರಷ್ಟಿರುವ ಜೈನರು ಅತ್ಯಂತ ಹೆಚ್ಚು ತೆರಿಗೆ ಪಾವತಿಸುವ ಸಮಾಜವಾಗಿದೆ. ಮಹಾವೀರ ದೇವರ ಜನ್ಮದಿನ ಎಂದು ನಾವು ಆಚರಿಸುತ್ತಿರುವ ಈ ಜಯಂತಿ ಕಾರ್ಯಕ್ರಮ 2024ನೇ ವರ್ಷದ್ದಾಗಿದೆ. ಅಂದಿನಿಂದ ಇಂದಿಗೂ ಅವರ ಉಪದೇಶಗಳನ್ನು ಪಾಲಿಸುತ್ತಾ ಬಂದಿರುವ ಜೈನಸಮಾಜದ ಯೋಚನೆಗಳು ಹಾಗೂ ಚಿಂತನೆಗಳು ಧಾರ್ಮಿಕತೆಯಡಿಯಲ್ಲಿ ಬೆಳದುಕೊಂಡು ಬಂದಿದೆ ಎಂದರು.
ಡಿವೈಎಸ್ಪಿ ಪ್ರಮೋದ್ ಕುಮಾರ್, ನಗರಸಭಾ ಪೌರಾಯುಕ್ತೆ ವಿದ್ಯಾ ಎಸ್ ಕಾಳೆ, ಕ್ಷೇತ್ರ ಶಿಕ್ಷಣಾಧಿಕಾರಿ ವಿಷ್ಣುಪ್ರಸಾದ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.


ಕಾರ್ಯಕ್ರಮದಲ್ಲಿ ಜೈನ್ ಮಿಲನ್ ಪುತ್ತೂರು ಇದರ ಪದಾಧಿಕಾರಿಗಳಾದ ಯಶೋಧರ್ ಜೈನ್, ರಾಜಶೇಖರ್ ಜೈನ್, ವಿ.ಕೆ.ಜೈನ್, ಅಶೋಕ್ ಜೈನ್, ಅಕ್ರಮಸಕ್ರಮ ಸಮಿತಿ ಸದಸ್ಯ ರಾಮಣ್ಣ ಪಿಲಿಂಜ, ತಾಲೂಕು ಆರೋಗ್ಯಾಧಿಕಾರಿ ಡಾ.ದೀಪಕ್ ರೈ ಹಾಗೂ ವಿವಿಧ ಇಲಾಖಾಧಿಕಾರಿಗಳು ಹಾಗೂ ಸಿಬಂದಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ನವೀನ್ ಪಡಿವಾಳ್ ಪ್ರಾರ್ಥಿಸಿದರು. ಕಂದಾಯ ಇಲಾಖೆಯ ದಯಾನಂದ ಡಿ.ಟಿ ಕಾರ್ಯಕ್ರಮ ನಿರೂಪಿಸಿದರು. ಉಪತಹಶೀಲ್ದಾರ್ ರವಿಕುಮಾರ್, ಸಮಾಜಕಲ್ಯಾಣ ಇಲಾಖೆಯ ಅಧಿಕಾರಿ ಕೃಷ್ಣ, ಭೂ ಮಾಪನಾ ಇಲಾಖೆಯ ಪ್ರಮೋದ್ ಕುಮಾರ್, ಕಂದಾಯ ನಿರೀಕ್ಷಕ ಕೆ.ಟಿ ಗೋಪಾಲ್ ಅತಿಥಿಳಿಗೆ ಹೂ ನೀಡಿ ಸ್ವಾಗತಿಸಿದರು.

LEAVE A REPLY

Please enter your comment!
Please enter your name here