







ಪುಣಚ: ಹನುಮಗಿರಿ ಶ್ರೀ ಕೋದಂಡರಾಮ ಪಂಚಮುಖಿ ಆಂಜನೇಯ ಕ್ಷೇತ್ರದ ಬ್ರಹ್ಮಕಲಶೋತ್ಸವದ ಅಂಗವಾಗಿ ಅಯೋಧ್ಯೆ ಹಾಗೂ ಅಂಜನಾದ್ರಿಯಿಂದ ಹೊರಟ ಶ್ರೀ ರಾಮ ಹನುಮ ಜ್ಯೋತಿ ರಥಯಾತ್ರೆಯು ಎ.4ರಂದು ಅಪರಾಹ್ನ ಪುಣಚ ಮಹಿಷಮರ್ದಿನಿ ದೇವಸ್ಥಾನಕ್ಕೆ ಪ್ರವೇಶ ಮಾಡಿತು.



ಆರಂಭದಲ್ಲಿ ದೇವಸ್ಥಾನದ ಪ್ರವೇಶ ದ್ವಾರದ ಗರಡಿ ಬಳಿ ರಥಯಾತ್ರೆಗೆ ಭವ್ಯ ಪುಷ್ಪಾರ್ಚನೆಯೊಂದಿಗೆ ಸ್ವಾಗತ ಕೋರಲಾಯಿತು. ಅಲ್ಲಿಂದ ಪೂರ್ಣಕುಂಭ ಸ್ವಾಗತದೊಂದಿಗೆ ಪುರುಷರು, ಮಹಿಳೆಯರು, ಮಕ್ಕಳು, ಜೊತೆಗೆ ಭಜನಾ ತಂಡದ ಕುಣಿತ ಭಜನೆಯೊಂದಿಗೆ ಭವ್ಯ ರಥಯಾತ್ರೆಯು ದೇವಸ್ಥಾನಕ್ಕೆ ಸಾಗಿ ಬಂತು. ಕ್ಷೇತ್ರದ ಪ್ರಧಾನ ಅರ್ಚಕ ಕೃಷ್ಣ ಬನ್ನಿಂತಾಯರು ಆರತಿ ಬೆಳಗಿಸಿದರು. ಆಡಳಿತ ಸಮಿತಿ ಅಧ್ಯಕ್ಷ ಮಾರಪ್ಪ ಶೆಟ್ಟಿ ಬೈಲುಗುತ್ತು ತೆಂಗಿನಕಾಯಿ ಒಡೆದರು. ಬಳಿಕ ರಥದಿಂದ ಬೆಳಗಿಸಿದ ಜ್ಯೋತಿಯನ್ನು ಶ್ರೀದೇವಿಯ ಕ್ಷೇತ್ರದಲ್ಲಿ ಬೆಳಗಿಸಲಾಯಿತು. ದೇವಸ್ಥಾನದ ಆಡಳಿತ ಸಮಿತಿ, ಬ್ರಹ್ಮಕಲಶೋತ್ಸವ ಸಮಿತಿ, ಪುಣಚ ಗ್ರಾಮ ಸಮಿತಿ ಹಾಗೂ ಭಕ್ತರು ಉಪಸ್ಥಿತರಿದ್ದರು.













