ದ್ವಿತೀಯ ಪಿಯುಸಿ ಫಲಿತಾಂಶ: ವಿಜ್ಞಾನ ವಿಭಾಗದಲ್ಲಿ ಇಂದ್ರಪ್ರಸ್ಥದ ಅನಘಾ ಕೆ. ರಾಜ್ಯಕ್ಕೆ ತೃತೀಯ

0

ಉಪ್ಪಿನಂಗಡಿ: 2025-26ನೇ ಶೈಕ್ಷಣಿಕ ಸಾಲಿನ ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟಗೊಂಡಿದ್ದು, ಉಪ್ಪಿನಂಗಡಿಯ ಇಂದ್ರಪ್ರಸ್ಥ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿನಿ ಅನಘಾ ಕೆ. ಅವರು ವಿಜ್ಞಾನ ವಿಭಾಗದಲ್ಲಿ 600ರಲ್ಲಿ 597 ಅಂಕ ಗಳಿಸಿ ರಾಜ್ಯಕ್ಕೆ ತೃತೀಯ ಸ್ಥಾನಿಯಾಗಿ ಹೊರಹೊಮ್ಮಿದ್ದಾರೆ.


ಅನಘಾ ಕೆ. ಅವರು ಕೊಕ್ಕಡದ ಹರಿಪ್ರಸಾದ್ ಕೆದಿಲಾಯ ಮತ್ತು ಶ್ವೇತಾ ಎಚ್.ಕೆ. ದಂಪತಿಯ ಪುತ್ರಿಯಾಗಿದ್ದು, ತನ್ನ ಪ್ರಾಥಮಿಕ ಶಿಕ್ಷಣವನ್ನು ನೆಲ್ಯಾಡಿಯ ಜ್ಞಾನೋದಯ ಬೆಥನಿ ಶಾಲೆಯಲ್ಲಿ ಪೂರೈಸಿದ್ದರು. ಪ್ರೌಢಶಿಕ್ಷಣವನ್ನು ಸೈಂಟ್ ಜಾರ್ಜ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಪೂರೈಸಿದ್ದರು. ಬಳಿಕ ಪಿಯುಸಿ ಶಿಕ್ಷಣವನ್ನು ಇಂದ್ರಪ್ರಸ್ಥ ಪದವಿ ಪೂರ್ವ ಕಾಲೇಜಿನಲ್ಲಿ ಪೂರೈಸಿ, ಇದೀಗ ರಾಜ್ಯಕ್ಕೆ ತೃತೀಯ ಸ್ಥಾನ ಪಡೆದಿದ್ದಾರೆ.


ಐಟಿ ಎಂಜಿನಿಯರ್ ಆಗುವ ಕನಸು:
ಅನಘಾ ಕೆ. ಅವರನ್ನು ಪತ್ರಿಕೆಯು ಮಾತನಾಡಿಸಿದಾಗ, ರಾಜ್ಯಕ್ಕೆ ತೃತೀಯ ಸ್ಥಾನಿಯಾಗುತ್ತೇನೆಂದು ನಿರೀಕ್ಷಿಸಿರಲಿಲ್ಲ. ಆದರೆ 95 ಶೇ. ಕ್ಕಿಂತ ಹೆಚ್ಚು ಅಂಕಗಳಿಸುವ ನಿರೀಕ್ಷೆ ಇತ್ತು. ನನ್ನ ಶಿಕ್ಷಣಕ್ಕೆ ಇಂದ್ರಪ್ರಸ್ಥ ಕಾಲೇಜಿನಲ್ಲಿಯೂ ಉತ್ತಮ ಪ್ರೋತ್ಸಾಹ ದೊರೆತಿದೆ. ತನ್ನ ಅಕ್ಕ ಸಮನ್ವಿತಾ ಕೆ. ಕೂಡಾ ಮಂಗಳೂರಿನ ಶಾರದಾ ವಿದ್ಯಾಲಯದಲ್ಲಿ ದ್ವಿತೀಯ ಪಿಯುಸಿ ವ್ಯಾಸಂಗ ಪೂರೈಸಿದ್ದು, ಅಲ್ಲಿ ವಿಜ್ಞಾನ ವಿಭಾಗದಲ್ಲಿ 600ರಲ್ಲಿ 600 ಅಂಕ ಪಡೆದು ರಾಜ್ಯಕ್ಕೆ ಪ್ರಥಮ ರ‍್ಯಾಂಕ್ ಬಂದಿದ್ದಳು. ಅವಳ ಮಾರ್ಗದರ್ಶನ ಹಾಗೂ ನನ್ನ ತಂದೆ ನೆಲ್ಯಾಡಿಯ ಸೈಂಟ್ ಜಾರ್ಜ್ ಪ್ರೌಢಶಾಲೆಯಲ್ಲಿ ಮುಖ್ಯೋಪಾಧ್ಯಾಯರಾಗಿದ್ದು ಅವರ ಹಾಗೂ ತಾಯಿಯ ಸಹಕಾರ ನನ್ನ ಕಲಿಕೆಗೆ ಅನುದಿನ ಲಭಿಸಿತ್ತು. ಅವರೆಲ್ಲರ ಪ್ರೋತ್ಸಾಹ, ಸಹಕಾರ ಪಡೆದ ನಾನು ಅಂದಿನ ಪಾಠವನ್ನು ಅಂದೇ ಮನನ ಮಾಡಿಕೊಂಡು ನಿರಂತರ ಶ್ರಮ ಪಟ್ಟ ಕಾರಣ ರಾಜ್ಯಕ್ಕೆ ಎರಡನೇ ರ‍್ಯಾಂಕ್ ನನಗೆ ಬರುವಂತಾಗಿದೆ. ನನಗೂ ಕೂಡಾ ಅಕ್ಕನಾಗೇ ಐಟಿ ಕಂಪೆನಿಯಲ್ಲಿ ಎಂಜಿನಿಯರ್ ಆಗುವ ಕನಸಿದೆ. ಎಲ್ಲರ ಸಹಕಾರಕ್ಕೆ ಧನ್ಯವಾದಗಳು ಎಂದು ಕೃತಜ್ಞತೆ ಸಲ್ಲಿಸಿದರು.

LEAVE A REPLY

Please enter your comment!
Please enter your name here