ರಾಜ್ಯ ಸರಕಾರದ ವಿವಿಧ ವೃಂದದ ಅಧಿಕಾರಿಗಳಿಗೆ ಇಲಾಖಾ ಪರೀಕ್ಷಾ ಪೂರ್ವ ಸಿದ್ಧತೆಗೆ ಜೇಸಿಐ ಪುತ್ತೂರು ಘಟಕದಿಂದ ಉಚಿತ ತರಬೇತಿ

0

ಪುತ್ತೂರು: ರಾಜ್ಯ ಸರಕಾರದ ವಿವಿಧ ವೃಂದದ ಸರಕಾರಿ ಅಧಿಕಾರಿಗಳಿಗೆ ಕಡ್ಡಾಯಗೊಳಿಸಲಾದ ಇಲಾಖಾ ಪರೀಕ್ಷಾ ಪೂರ್ವ ಸಿದ್ದತೆಗೆ ಪುತ್ತೂರು ಘಟಕದ ಜೆಸಿಐ ವತಿಯಿಂದ ಉಚಿತವಾಗಿ ಏರ್ಪಡಿಸಿದ 2026ನೇ ಸಾಲಿನ ಒಂದನೇ ಅಧಿವೇಶನದ ಇಲಾಖಾ ಪರೀಕ್ಷೆಯ ತರಬೇತಿ ಶಿಬಿರದ ಉದ್ಘಾಟನೆಯು ಎ.5ರಂದು ನಡೆಯಿತು.

ಬೆಟ್ಟಂಪಾಡಿ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರೊ| ಡಾ. ಕೆ. ಸುಬ್ರಹ್ಮಣ್ಯ ಭಟ್ ರವರು ದೀಪ ಪ್ರಜ್ವಲಿಸಿ ಉದ್ಘಾಟಿಸಿ ಮಾತನಾಡಿ, ಸರಕಾರಿ ನೌಕರಿಯ ಲಕ್ಷಣಗಳು ಕಾರ್ಪೊರೇಟ್ ಸಂಸ್ಕೃತಿಯ ಮಾದರಿಗೆ ಬದಲಾಗುತ್ತಿದ್ದು ಅದಕ್ಕೆ ತಕ್ಕಂತೆ ನೌಕರರು ಬದಲಾಗಬೇಕಾಗಿದೆ. ಜನಸೇವೆಯೇ ಜನಾರ್ದನನ ಸೇವೆ ಎಂಬಂತೆ ಕಾರ್ಯಾಂಗದ ಭಾಗವಾದ ನಾವು ದಕ್ಷ, ನಿಷ್ಟ, ಪ್ರಾಮಾಣಿಕ ಸೇವೆಯನ್ನು ನೀಡಬೇಕಾಗಿದೆ. ಅದಕ್ಕಾಗಿ ಇಲಾಖೆಯ ನಿಯಮಗಳನ್ನು ಅರಿತುಕೊಳ್ಳಲು ಇದೊಂದು ಸುವರ್ಣವಕಾಶವಾಗಿದ್ದು ಇದನ್ನು ಬಳಸಿಕೊಳ್ಳಲು ಕರೆ ನೀಡಿದರು.  ಸರಕಾರಗಳು ಬದಲಾಗಬಹುದು ಆದರೆ ನೌಕರರು ನಿವೃತ್ತಿ ತನಕವೂ ಬದಲಾಗುವುದಿಲ್ಲ ಆದ್ದರಿಂದ ಪಕ್ಷಾತೀತ ಜಾತಿ ಮತಗಳನ್ನು ಹೊರತುಪಡಿಸಿ ನಾವು ವೃತ್ತಿಗೆ ಗೌರವ ತರಬೇಕು ಎಂದರು.

ಮುಖ್ಯ ಅತಿಥಿಗಳಾಗಿ ಭಾಗವಹಿಸಿದ ಪುತ್ತೂರು ಪೊಲೀಸು ಉಪವಿಭಾಗದ ಡಿ.ವೈ.ಎಸ್.ಪಿ ಪ್ರಮೋದ್ ಕುಮಾರ್ ರವರು ಮಾತನಾಡಿ, ಸರಕಾರಿ ಸೇವೆ ಎಂಬುದು ನಮಗೆ ದೊರೆತ ಭಾಗ್ಯ ನಮ್ಮ ಬಳಿಗೆ ಬರುವ ಎಲ್ಲಾ ನಾಗರಿಕರು ನಮ್ಮನ್ನು ಭೇಟಿಯಾಗಿ ತೆರಳುವ ಸಂದರ್ಭದಲ್ಲಿ ತೃಪ್ತರಾಗಿ ತೆರಳುವಂತೆ ವಿನಯ, ಸೌಜನ್ಯದಿಂದ ನಾವು ನಡೆದುಕೊಳ್ಳಬೇಕು. ವೃತ್ತಿ ಧರ್ಮಕ್ಕೆ ಚ್ಯುತಿಯಾಗದಂತೆ ನಡೆದುಕೊಳ್ಳಲು ನಾವೆಲ್ಲರೂ ಬದ್ದರಾಗಬೇಕು ಎಂದರು.

ಸುಳ್ಯ ತಾಲೂಕು ಆರೋಗ್ಯಾಧಿಕಾರಿ  ಅಭಿಕಾರ್ ಮಾತನಾಡಿ, ಸಾಮಾಜಿಕ, ಆರೋಗ್ಯ, ಕಾಪಾಡಿಕೊಳ್ಳಬೇಕಾದರೆ ನೌಕರರ ಮಾನಸಿಕ ಆರೋಗ್ಯ ಸದೃಡವಾಗಿರಬೇಕು. ಮೇಲಾಧಿಕಾರಿಗಳೊಂದಿಗೆ ಹೊಂದಾಣಿಕೆಯನ್ನು ಮಾಡಿಕೊಳ್ಳುತ್ತಾ, ನಮ್ಮ ಅನ್ನದಾತರಾದ ನಾಗರಿಕರಿಗೆ ಗೌರವ ನೀಡುತ್ತಾ ಪ್ರೀತಿಯಿಂದ ಕೆಲಸ ನಿರ್ವಹಿಸಬೇಕು ವೃತ್ತಿಯಲ್ಲಿ ಬರುವ ಸವಾಲುಗಳಿಗೆ ಇಲಾಖಾ ನಿಯಮಗಳು ಪರಿಹಾರವನ್ನು ನೀಡುತ್ತದೆ. ನಿಯಮಗಳು ಜನರಿಗಾಗಿಯೇ ಹೊರತು ಜನರು ನಿಯಮಗಳಿಗಾಗಿ ಅಲ್ಲ. ಇದನ್ನು ಅರಿತು ನಾವು ಸೇವೆ ಮಾಡಬೇಕು ಎಂದರು.

ಜೆಸಿಐ ಪುತ್ತೂರು ಘಟಕದ ಅಧ್ಯಕ್ಷ ಜೀತೆಶ್ ರೈ ಸಿ ಎಚ್ ಪ್ರಾಸ್ತಾವಿಕ ಮಾತುಗಳನ್ನಾಡಿ ಸ್ವಾಗತಿಸಿದರು. ಕು|ವೈಷ್ಣವಿ ಪ್ರಾರ್ಥಿಸಿದರು. ಮಂಗಳೂರು ಜಿಲ್ಲಾಧಿಕಾರಿಗಳ ಕಛೇರಿಯ ಉಪ ತಹಶಿಲ್ದಾರ್ ಕವಿತರವರು ಪ್ರಸ್ತಾವನೆಗೈದರು. ಮಂಗಳೂರು ಪಶುಪಾಲನಾ ಮತ್ತು ಪಶು ವೈದ್ಯಕೀಯ ಸೇವಾ ಇಲಾಖೆಯ ಸಹಾಯಕ ಸಾಂಖ್ಯಿಕ ಅಧಿಕಾರಿ ರತ್ನಾಕರ್ ವಂದಿಸಿದರು. ಮಂಗಳೂರು ಲೋಕೋಪಯೋಗಿ ಇಲಾಖೆ ಅಧೀಕ್ಷಕ ಸುರೇಶ್ ಪಿ ಮತ್ತು ಶೇಖರ ಪೂಜಾರಿ ಮಂಗಳೂರುರವರು ಉದ್ಘಾಟಕರ ಮತ್ತು ಅತಿಥಿಗಳ ಕಿರುಪರಿಚಯ ಮಾಡಿದರು. ನಾಗರಿಕ ಸೇವಾ ಪ್ರಶಸ್ತಿ ಪುರಸ್ಕೃತ ತರಬೇತುದಾರ ಗಂಗಾಧರ್ ಮಂಗಲ್ಪಾಡಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here